ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಮಲ್ಲಿಯ ಮುಂಜಾನೆ ರಾಗ

ಮಾತ್‌ಮಾತಲ್ಲಿ
Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬಾಲ್ಯದಿಂದಲೂ ನನಗೆ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಪ್ರೀತಿ. ಸಂಗೀತ, ನೃತ್ಯ, ನಾಟಕ, ಚರ್ಚಾ ಸ್ಪರ್ಧೆ... ಹೀಗೆ ವಿಭಿನ್ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಈ ಸಾಂಸ್ಕೃತಿಕ ಪ್ರೀತಿ ಯಾವ ಮಟ್ಟದ್ದೆಂದರೆ ಶಾಲಾ ಪಠ್ಯಕ್ಕೆ ಕೆಲಕಾಲ ವಿರಾಮ ನೀಡುತ್ತಿದ್ದೆನೇ ಹೊರತು ಈ ಪಠ್ಯೇತರ ಚಟುವಟಿಕೆಗಲ್ಲ.
ಅಪ್ಪನಿಗೆ ನಾನು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಗಿಟ್ಟಿಸಬೇಕೆಂಬ ಹಂಬಲ. ನನ್ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಿಕ್ಕ ಅವರ ಪ್ರೋತ್ಸಾಹ ಅಷ್ಟಕಷ್ಟೇ. ಆದರೆ ಅಮ್ಮ ನನ್ನ ಪ್ರತಿ ಆಸೆಗೂ ನೀರೆರೆದು, ಪೋಷಿಸಿದಳು.

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯು ಮತ್ತು ಮೈಕ್ರೋಬಯಾಲಜಿ ವಿಷಯದಲ್ಲಿ ಪದವಿ ಅಧ್ಯಯನ ಮಾಡಿದೆ. ಎತ್ತಣಿಂದೆತ್ತ ಸಂಬಂಧವಯ್ಯ ಎನ್ನುವಂತೆ ಓದಿರುವುದಕ್ಕೂ ನಾನು ಆಯ್ದುಕೊಂಡಿರುವ ಉದ್ಯೋಗಕ್ಕೂ ಯಾವುದೇ ಸಂಬಂಧವಿಲ್ಲ.

ಮೊದಲಿನಿಂದಲೂ ನಾನು ಮಾತಿನ ಮಲ್ಲಿ! ಬಾಯಿ ಕಟ್ಟದೆ ಹರಟುತ್ತಿದ್ದೆ. ನನಗದೇ ಇಷ್ಟ. ಅಪ್ಪ ತುಂಬಾ ಕಟ್ಟುನಿಟ್ಟು. ಹಾಗಾಗಿ ಮನೆಯಲ್ಲಿ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಶಾಲೆಯಲ್ಲಿ ನನ್ನ ಅಕ್ಕಪಕ್ಕ ಕೂರುತ್ತಿದ್ದ ಸಹಪಾಠಿಗಳು ಮಿತಭಾಷಿಗಳಾಗಿದ್ದರೂ ಅವರು ಮಾತನಾಡುವಂತೆ ಮಾಡುತ್ತಿದ್ದೆ. ‘ಚೆನ್ನಾಗಿ ಓದುತ್ತಾಳೆ, ಆದರೆ ಅತಿಯಾಗಿ ಮಾತನಾಡುತ್ತಾಳೆ’ ನನ್ನ ಪೋಷಕರ ಬಳಿ ಶಿಕ್ಷಕರು ದೂರುತ್ತಿದ್ದರು. ಆದರೂ ನಾನೆಂದೂ ಮಾತಿಗೆ ವಿರಾಮ ನೀಡಲಿಲ್ಲ.

ಪದವಿ ಮುಗಿದ ಬಳಿಕ ಹೆಲ್ತ್ ಕೇರ್ ಬಿಪಿಒದಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡಿದೆ. ಕೆಲವು ದಿನಗಳಲ್ಲಿಯೇ ನನ್ನ ಅರಿವಿಗೆ ಬಂದಿತ್ತು ಈ ಉದ್ಯೋಗ ನನ್ನ ಪಾಲಿನದ್ದಲ್ಲ, ನನ್ನ ಕ್ಷೇತ್ರವೇ ಬೇರೆ ಎಂದು. ಇದೇ ಸಮಯದಲ್ಲಿ ‘ಆಲ್ ಇಂಡಿಯಾ ರೇಡಿಯೊ’ದಲ್ಲಿ ಪ್ರಾಯೋಜಿತ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ಒದಗಿ ಬಂದಿತ್ತು. ಅಲ್ಲಿನ ಕೆಲವರು ನನ್ನ ಧ್ವನಿಯನ್ನು ಮೆಚ್ಚಿಕೊಂಡರು. ‘98.3 ರೇಡಿಯೊ ಮಿರ್ಚಿ’ಯಲ್ಲಿ ಆಡಿಷನ್‌ ಕರೆದಿದ್ದಾರೆ ಪ್ರಯತ್ನಿಸು’ ಎಂದು ಪ್ರೋತ್ಸಾಹಿಸಿದರು.

ಆಡಿಷನ್ ಎದುರಿಸಿದ ಮೊದಲ ಪ್ರಯತ್ನದಲ್ಲೇ ಅವಕಾಶ ದಕ್ಕಿಸಿಕೊಂಡೆ. ‘98.3 ರೇಡಿಯೊ ಮಿರ್ಚಿ’ಯಲ್ಲಿ ನಿತ್ಯ ‘ಮುಂಜಾನೆ ರಾಗ’ ಕಾರ್ಯಕ್ರಮ ನಡೆಸಿಕೊಡುವುದು ನನ್ನ ಜವಾಬ್ದಾರಿ. ಈ ಷೋ ಪೂರ್ಣವಾಗಿ ಪೌರಾಣಿಕ ಕಥೆಗಳ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಆದ್ದರಿಂದ ಸಹಜವಾಗಿ ಕನ್ನಡದ ಬಳಕೆ ಹೆಚ್ಚು. ಷೋ ನಡೆಸಲು ವಿಶೇಷ ತಯಾರಿಯನ್ನೇನೂ ನಡೆಸುವುದಿಲ್ಲ. ಅಂದಿನ ಷೋನಲ್ಲಿ ಮಾತನಾಡಬೇಕಾದ ಕಥೆಗಳ ನೆಲೆ ಹಿನ್ನೆಲೆಯನ್ನು ಗ್ರಹಿಸುತ್ತೇನೆ, ಮನನ ಮಾಡಿಕೊಳ್ಳುತ್ತೇನೆ.

ಪ್ರತಿಯೊಂದು ಸಂದರ್ಶನವನ್ನು ಸೂಕ್ಷ್ಮವಾಗಿ ಗ್ರಹಿಸುವುದು ನನ್ನ ಅಭ್ಯಾಸ. ದೂರದರ್ಶನದಲ್ಲಿ ಬರುವ ವಾರ್ತಾ ವಾಚಕರ ಉಚ್ಚಾರಣೆ, ಶೈಲಿಯನ್ನು ಅನುಕರಿಸುತ್ತಿದ್ದೆ. ಇದೆಲ್ಲಾ ಸರಾಗವಾಗಿ ಕನ್ನಡ ಮಾತನಾಡಲು ನೆರವಾಯಿತು.

ನಾನು ಹುಟ್ಟಿದ್ದು ಉತ್ತರ ಕನ್ನಡದ ಶಿರಸಿಯಲ್ಲಿ. ಆದರೆ ಬೆಳವಣಿಗೆ, ವ್ಯಾಸಂಗ ಎಲ್ಲವೂ ಬೆಂಗಳೂರೇ ಆದ್ದರಿಂದ ಅಚ್ಚ ಕನ್ನಡ ಮಾತನಾಡುವುದೇ ದೊಡ್ಡ ಸವಾಲಾಗಿತ್ತು. ಮೊದಲ ಷೋನಲ್ಲಿ ತುಂಬಾ ಭಯ, ಉದ್ವೇಗಕ್ಕೊಳಗಾಗಿದ್ದೆ. ಆದರೆ ಮನಸ್ಸಿನ ಮೂಲೆಯಲ್ಲಿ ಖಂಡಿತಾ ಈ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಡುತ್ತೇನೆ, ಪೂರ್ಣಗೊಳಿಸುತ್ತೇನೆ ಎನ್ನುವ ವಿಶ್ವಾಸವಿತ್ತು. 

ಸಂಬಂಧಿಕರು, ನೆರೆಹೊರೆಯವರು ಮತ್ತು ವಾಕಿಂಗ್ ಹೋದಾಗ ಸಿಗುವ ಜನರು ನನ್ನ ಧ್ವನಿಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ ಸಂತಸವಾಗುತ್ತದೆ. ಮಾತಿಗೆ ವಿಶೇಷ ಶಕ್ತಿಯಿದೆ. ಬರೆದ ಪದವನ್ನು ಅಳಿಸಬಹುದು. ಆದರೆ ಮಾತು ಹಾಗಲ್ಲ. ಒಮ್ಮೆ ಆಡಿದರೆ ಮುಗಿದೇ ಹೋಯಿತು. ಹಾಗಾಗಿ ಯಾವ ವಿಷಯವನ್ನು ಯಾವ ಸಮಯದಲ್ಲಿ ಮಾತನಾಡಬೇಕೆಂಬ ಸೂಕ್ಷ್ಮಗಳನ್ನು ಅರಿತಿರಬೇಕು. ಇದು ನನ್ನ ಅನುಭವ.

ಅರಳು ಹುರಿದಂತೆ ಮಾತನಾಡುತ್ತೇನೆ ನಿಜ. ಆದರೆ ಆರ್‌ಜೆ ಆಗಿ ನನ್ನ ಜವಾಬ್ದಾರಿ ಹೆಚ್ಚಿದೆ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದರೆ ನನ್ನ ಮಾತಿನ ಶೈಲಿಯಲ್ಲಿ ಹಿಡಿತ ಸಾಧಿಸುವುದು ಅವಶ್ಯ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಷೋ ನಡೆಸುತ್ತೇನೆ.

ಸಂಗೀತ ಆಲಿಸುವುದು, ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸ. ಫಿಕ್ಷನ್ ಕತೆ-ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತೇನೆ. ಹ್ಯಾರಿಪಾಟರ್ನ ಎಲ್ಲಾ ಅವತರಣಿಕೆಯನ್ನು ಓದಿದ್ದೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT