ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ವೈಖರಿಯ ಪೇಟೆಂಟ್

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾತನಾಡುವ ಕಲೆಯ ಬಲ್ಲವಗೆ ಸೋಲಿಲ್ಲ/
ಜೀತದೊಳಗಿರಲೇನು-ಅವ ನಿತ್ಯಸುಖಿಯೊ//
ಔತಣದ ಕೂಟದಲಿ, ಸಭೆಯ ವೇದಿಕೆಯಲ್ಲಿ/
ಆತನದೆ ಮೇಲುಗೈ
 -ನವ್ಯಜೀವಿ

ಕೆಲವರಿರುತ್ತಾರೆ. ಅವರಿಗೆ ತಮ್ಮ ಮನಸ್ಸಿನಲ್ಲಿ ಮೂಡುವ ಪ್ರತಿಯೊಂದು ವಿಚಾರವನ್ನೂ ಹಾಗೂ ತಮ್ಮ ಹೃದಯದಲ್ಲೇಳುವ ಪ್ರತಿಯೊಂದು ಭಾವವನ್ನೂ ಇನ್ನಿತರರಿಗೆ ತಕ್ಷಣವೇ ತಿಳಿಸಬೇಕೆಂಬ ಅತೀವ ತುಡಿತವಿರುತ್ತದೆ. ಬೇರೆಯವರು ಏನು ಹೇಳುತ್ತಿದ್ದಾರೆಂಬುದು ಅವರಿಗೆ ಮುಖ್ಯವೆನಿಸಿದರೂ ಆ ಕ್ಷಣದಲ್ಲಿ ಅದು ಅವರಿಗೆ ಗೌಣ.

ಇನ್ನಿತರರ ಮಾತುಗಳನ್ನು ಅರ್ಧಕ್ಕೆ ತುಂಡರಿಸಿ ತಮ್ಮ ಮಾತುಗಳನ್ನೆಲ್ಲ ತೀವ್ರ ಮಳೆಗಾಲದ ಜೋಗದ ರಾಜನಂತೆ, ರಾಣಿಯಂತೆ, ರೋರರ್‌ನಂತೆ, ರಾಕೆಟ್ಟಿನಂತೆ ನಾಲ್ಕೂ ದಿಕ್ಕುಗಳಲ್ಲಿ ಹರಿಯಬಿಡುತ್ತಾರೆ. ತಮ್ಮ ಮಾತುಗಳು ಕೇಳುವವರ ಮೇಲೆ ಯಾವ ಪರಿಣಾಮ ಬೀರುತ್ತಿದೆ ಎಂಬುದು ಕೂಡ ಅವರಿಗೆ ಮುಖ್ಯವೆನಿಸಿದರೂ, ಆ ಕ್ಷಣಕ್ಕೂ ಅದು ಗೌಣ!

ಇನ್ನೂ ಕೆಲವರಿರುತ್ತಾರೆ. ಅವರಿಗೆ ಮಾತೆಂದರೆ ಸಾಗರದಡಿಯ ಮುತ್ತಿನಂತೆ. ಅಲ್ಲೊಂದು ಇಲ್ಲೊಂದು. ಆಡಿದರೂ ಆಡದಿದ್ದವರಂತಿದ್ದು ಬಿಡುತ್ತಾರೆ. ತಮ್ಮೆಲ್ಲ ಸಂವೇದನೆಗಳನ್ನು ಹೊರಗೆ ತೋರ್ಪಡಿಸುವುದೆಂದರೆ ಅವರಿಗೆ ಸ್ವಾಭಾವಿಕವಾಗಿ ಬರದ ಕಷ್ಟಕರವಾದ ಕಸರತ್ತು. ಅವರ ಮಾತುಗಳನ್ನು ಕೇಳಿ ಅವರ ಮನಸ್ಸಿನಲ್ಲೇನಿದೆ ಎಂದು ಊಹಿಸುವುದು ಕೇಳುವವನಿಗೂ ಸುಲಭದಲ್ಲೊದಗದ ಸ್ವತ್ತು. ಒಟ್ಟಿನಲ್ಲಿ ಅವರು ಜಗತ್ತಿಗೇ ಒಂದು ಬಿಡಿಸಲಾಗದ ಗಂಟು.

ಈ ಇಬ್ಬರ ಮಧ್ಯದಲ್ಲೇ ಮಾತನಾಡಬಲ್ಲವರ ಹಾಗೂ ಮಾತನಾಡಬಲ್ಲದವರ ಅದೆಷ್ಟೋ ವೈವಿಧ್ಯಮಯ ಜನಸಮೂಹಗಳುಂಟು. `ಒಂದು ಕೊರೀತಾನೆ ಮಾರಾಯ ಇವ. ಅವನಿಗೇನಾದರೂ ನೀನು ಕಿವಿ ಕೊಟ್ಟರೆ ನಿನ್ನ ಗತಿ ಮುಗೀತು~ ಎಂದು ಅತಿಯಾಗಿ ಅಸಂಬದ್ಧವನ್ನೇ ನುಡಿಯುವವರ ಬಗ್ಗೆ ಜನರಾಡಿಕೊಂಡರೆ, `ಇವನದು ಎಂಥಾ ಮಾತು ಕಣ್ಲಾ. ಬರೀ ಓಳು. ಇವನ ಮಾತನ್ನ ನಂಬಿದರೆ ಕಡೆಗೆ ಕೈಗೆ ಚೆಂಬೊಂದೇ ಗತಿ!~ ಎನ್ನುತ್ತ ಉತ್ಪ್ರೇಕ್ಷೆಗಳನ್ನೇ ಮಾತಿನಲ್ಲಿ ಜೀವಾಳವಾಗಿಸಿಕೊಳ್ಳುವ ಮಂದಿಯ ಬಗ್ಗೆ ಜನ ಕಿಡಿ ಕಾರುತ್ತಾರೆ ಕೂಡ.

`ರಾಜಕಾರಣಿಯ ಮಾತು~ ಎನ್ನುವುದು ಹುಸಿ ಹುಸಿ ಆಶಯಗಳನ್ನೆಲ್ಲ ದುಡ್ಡಿಗೆ ಮಾರಿಕೊಳ್ಳುವ ನಂಬಿಕೆ ದ್ರೋಹದ ಮಾತುಗಳಾದರೆ, `ಜ್ಯೋತಿಷಿಯ ಮಾತು~ ಎನ್ನುವುದು ಆಗಸದಲ್ಲಿ ಕಣ್ಣಿಗೆ ಕಾಣದ ಗ್ರಹಗಳ ಸುತ್ತ ತಿರುಗುವ ಬುರುಡೆಗಳಾಗಿರುತ್ತವಷ್ಟೆ.

`ನಿನಗೇನು ಆಗಿಲ್ಲ. ದೇವರಿದ್ದಾನೆ. ಎಲ್ಲ ಒಳ್ಳೆಯದಾಗುತ್ತೆ~ ಎಂಬ ಆಶೀರ್ವಾದವೇ ಗುರುಗಳ ಹಿತವಚನವಾದರೆ, `ನಿನಗೆ ಸಿಡಿಲು ಬಡಿದು ನಿನ್ನ ಮನೆಮಂದಿಯೆಲ್ಲ ಎಕ್ಕುಟ್ಕೊಂಡ್ ಹೋಗ್ಲಿ~ ಎಂಬ ಬೈಗುಳಗಳೇ ರಾಕ್ಷಸ ಸ್ವಭಾವದವನ ಒಳದನಿ.

ಮೈಸೂರಿನಲ್ಲಿ ನನ್ನ ಸೋದರ ಮಾವನಿದ್ದಾನೆ. ಹೆಸರು ಕೃಷ್ಣಮೂರ್ತಿ. ಹಾಸಿಗೆ ಹಿಡಿದು ಮಲಗಿರಲಿ, `ಹೇಗಿದ್ದಿ ಕಿಟ್ಟಣ್ಣ?~ ಅಂದ್ರೆ, `ನನಗೇನಾಗಿದೆ. ಐ ಆ್ಯಮ್ ಆನ್ ದಿ ಟಾಪ್ ಆಫ್ ದಿ ವರ್ಲ್ಡ್!~ ಎಂದು ಜೋರಾಗಿ ನಗುತ್ತ ತನ್ನೆಲ್ಲ ನೋವನ್ನೂ ತಾನೇ ನುಂಗಿಬಿಡುತ್ತಾನೆ.

ಇದಕ್ಕೆ ತದ್ವಿರುದ್ಧವಾಗಿ ಅನೇಕರನ್ನು ಕಂಡಿದ್ದೇನೆ. ಬದುಕಿನಲ್ಲಿ ಸುಖಕ್ಕೆ ಬೇಕಾದ ಎಲ್ಲ ಅನುಕೂಲತೆಗಳಿದ್ದರೂ, ಮನೆಯಲ್ಲಿನ ವಾತಾವರಣ ಹಿತಕರವಾಗಿ ಇದ್ದರೂ ಅವರನ್ನು `ಹೇಗಿದ್ದೀರಿ~ ಎಂದು ಕೇಳಿದರೆ, `ಅಯ್ಯೋ, ಸಾಕಾಗಿದೆ ಈ ದರಿದ್ರ ಜೀವನ. ಅವನು ನನ್ನ ಇಲ್ಲಿಂದ ಅದೆಷ್ಟು ಬೇಗ ಕರೆಸಿಕೊಳ್ಳುತ್ತಾನೋ ಅಂತ ದಿನ ಕಳೀತಿದೀನಿ~ ಎನ್ನುತ್ತ ತಮಗಿಲ್ಲದ ನೋವುಗಳನ್ನೆಲ್ಲ ಸೃಷ್ಟಿಸಿ ಕೇಳುಗನ ಚಿತ್ತದಲ್ಲಿ ಭಟ್ಟಿ ಇಳಿಸಿಬಿಡುತ್ತಾರೆ.

ಹೀಗೆಯೇ ಜಗದಲ್ಲಿ ಒಬ್ಬೊಬ್ಬರದೊಂದೊಂದು ಮಾತಿನ ವೈಖರಿ. ಅವರ ಮಾತಿನ ಶೈಲಿ, ಅವರ ಹಾವ-ಭಾವ, ಅವರ ದನಿಯಲ್ಲಿನ ಏರು-ತಗ್ಗು, ಅವರ ಮಾತುಗಳಲ್ಲಿ ಅಡಗಿ ಕುಳಿತಿರುವ ಅರ್ಥ-ಹೀಗೆ ಎಲ್ಲವೂ ಅವರವರದೇ ಪೇಟೆಂಟು ಎಂದರೆ ತಪ್ಪಾಗಲಾರದು.

ಇವೆಲ್ಲದರ ಹಿನ್ನೆಲೆಯಲ್ಲಿಯೇ ಒಂದು ಸಾರ್ವತ್ರಿಕ ಸತ್ಯ ಅಡಗಿದೆ. ಅದೆಂದರೆ, `ಎಲ್ಲರ ಮಾತುಗಳೂ ಅವರ ಒಳಮನಸ್ಸಿನ ಚಿಂತನೆಗಳ, ಆಕಾಂಕ್ಷೆಗಳ, ಉದ್ದೇಶಗಳ ಅಭಿವ್ಯಕ್ತ ರೂಪ~. `ನಿನೇನು ತಿನ್ನುತ್ತೀಯೋ, ನೀನದರಂತೆ ಬೆಳೆವೆ~ ಎಂಬ ತನುವಿನ ಗುಣದಂತೆ, `ನಿನ್ನ ಸ್ನೇಹಿತರಂತೆಯೇ ನಿನ್ನ ವ್ಯಕ್ತಿತ್ವ~ ಎಂಬ ಮನಸ್ಸಿನ ಸಿದ್ಧಾಂತದಂತೆಯೇ, `ನಿನ್ನ ಭಾವನೆಗಳಂತೆಯೇ ನಿನ್ನ ಮಾತು~ ಎಂಬ ಸೂತ್ರವೊಂದನ್ನು ನಾವಿಲ್ಲಿ ಘನೀಭವಿಸಿದರೆ, ಅದರಲ್ಲೇನೂ ತಪ್ಪಿಲ್ಲ!

ನೀವಂದುಕೊಂಡದ್ದೇ ನಿಮ್ಮ ಮಾತುಗಳಲ್ಲಿ ಹೊರಬರುವುದು ಸ್ವಾಭಾವಿಕ. ಇದಕ್ಕೆ ಹೊರತಾಗಿಯೂ ಕೆಲವರಿರುತ್ತಾರೆ. `ಮನಸ್ಸಿನಲ್ಲೊಂದು ಬಗೆ. ಮಾತಿನಲ್ಲೊಂದು ಬಗೆ~ ಎಂಬ ಕುಲದವರು. ಅವರ ಬಗ್ಗೆ ಏನು ಬರೆದರೂ ವ್ಯರ್ಥ.
 
ಏಕೆಂದರೆ ಅವರ ಮಾತುಗಳಿಂದ ಒದಗುವುದೆಲ್ಲ ಕ್ಷಣಿಕ ಗೆಲುವುಗಳಷ್ಟೆ. ನಶ್ವರದ ಗಳಿಕೆಗಳಷ್ಟೆ. ಬೋರ್ಡ್‌ರೂಮಿನ ಸುತ್ತಮುತ್ತಲಿನ ಮಂದಿಗೆ ಇದರ ಆವಶ್ಯಕತೆ ಇಲ್ಲ. ಯಶಸ್ವಿಯಾಗಬೇಕೆಂಬ ಬಯಕೆ ಇದ್ದಾಗ, `ರಹದಾರಿ ಬುಟ್ರೆ ಯಡವಟ್ಟೇ..~ ಎಂಬ ಚಿರಸತ್ಯದ ಅರಿವೂ ಇರಬೇಕಾಗುತ್ತದೆ.

ಇಷ್ಟೆಲ್ಲ ಪೀಠಿಕೆಯ ನಂತರ, ಮತ್ತೀಗ ಮಾತಿಗಿಳಿಯುತ್ತಿದ್ದೇನೆ. ಬೋರ್ಡ್‌ರೂಮಿನ ಸುತ್ತಮುತ್ತ ಮಾತು ಎಲ್ಲಿರಬೇಕು? ಎಷ್ಟಿರಬೇಕು? ಹೇಗಿರಬೇಕು? ಎಂಬುದೇ ಮೂಲ ಪ್ರಶ್ನೆಗಳು. ಡೆಲಿಗೇಶನ್ ಅಥವಾ ಅಧಿಕಾರ ನಿರ್ವಹಣೆಯ ಕಾರ್ಯ ಈ ಮಂದಿಗೆ ಅದೆಷ್ಟು ಮುಖ್ಯ ಎಂಬುದನ್ನು ನಾವೀಗಾಗಲೇ ಹಿಂದಿನ ಕೆಲ ಅಂಕಣಗಳಲ್ಲಿ ಓದಿದ್ದೇವೆ.
 
ಇದರ ಅನುಷ್ಠಾನ ಕ್ರಮದಲ್ಲಿ ಮಾತ್ರವಲ್ಲದೆ, ಒಟ್ಟಾರೆ ಕಂಪನಿಯೊಂದರ ಪ್ರತಿಯೊಬ್ಬ ನೌಕರ ಹಾಗೂ ಅಧಿಕಾರಿಗಳ ದಿನನಿತ್ಯದ ಕಾರ್ಯಕ್ಷೇತ್ರದಲ್ಲಿ ಮಾತಿನ ಪಾತ್ರ ಅತ್ಯಂತ ಹಿರಿದು. ಹೀಗಾಗಿ ಮುಂದಿನ ಕೆಲ ಅಂಕಣಗಳನ್ನು ಮಾತಿನ ಆಳದಾಳಕ್ಕೆ ಇಳಿಯುವ ಪ್ರಯತ್ನದೆಡೆಯೇ ಮುಡುಪಾಗಿಡುವ ನಿರ್ಧಾರ ನನ್ನದು. ಇದಕ್ಕೆ ತಮ್ಮ ಸಮ್ಮತಿ ಇದೆಯೆಂದು ಭಾವಿಸುತ್ತೇನೆ.

ಈ ದಿನ ಯಾರೊಬ್ಬನನ್ನೇ ತೆಗೆದುಕೊಳ್ಳಿ. ಆತನ ಮಾತುಗಳನ್ನೆಲ್ಲ ಪ್ರಮುಖವಾಗಿ ಮೂರು ಸನ್ನಿವೇಶಗಳಲ್ಲಿ ನಾನು ವಿಂಗಡಿಸ ಬಯಸುತ್ತೇನೆ:

1. ಅವನ ಖಾಸಗೀ ಬದುಕು. ಅಂದರೆ ಅವನ ಸಂಸಾರದೊಂದಿನ, ಅವನ ಆಪ್ತ ಬಂಧುಬಳಗದೊಂದಿಗಿನ ಒಡನಾಟದಲ್ಲಿ ಹಾಗೂ ಪ್ರಾಣ ಸ್ನೇಹಿತರ ಜತೆಗಿನ ಮಾತುಕತೆ.

2. ಕಚೇರಿಯಲ್ಲಿ ತನ್ನ ಸಹಪಾಠಿಗಳೊಂದಿಗೆ ಹಾಗೂ ಗ್ರಾಹಕರ ಜತೆ ನಡೆಯುವ ಆತನ ಮಾತಿನ ವಿನಿಮಯ ಹಾಗೂ

3. ಹೊರಜಗತ್ತಿನಲ್ಲಿ ಆಪ್ತರಲ್ಲದ ಪರಿಚಯಸ್ಥರೊಂದಿಗೆ ಹಾಗೂ ಸಂಪೂರ್ಣ ಅಪರಿಚಿತರಾದವರೊಂದಿಗಿನ ಅವನ ವ್ಯವಹಾರ.

ಮೊದಲನೆಯ ಸನ್ನಿವೇಶದಲ್ಲಿ ಅವನ ಮಾತಿಗೆ ಏನೊಂದೂ ಬೇಲಿ ಇಲ್ಲ. ಮನಸ್ಸಿಗೆ ಬಂದದ್ದನ್ನು ಆತ ತನಗೆ ತಿಳಿಸಿರುವ ಭಾಷೆಯಲ್ಲೇ, ತನಗೆ ರಕ್ತಗತವಾಗಿ ಬಂದಿರುವ ಪದಗಳನ್ನು ಬಳಸಿಯೇ ಹೇಳಿಬಿಡುತ್ತಾನೆ. ಮಾತಿಗೆ ಮೊದಲು ಆ ಮಾತುಗಳನ್ನೆಲ್ಲ ಮೂಸೆಯಲ್ಲಿ ಹಾಕಿ ತಿಕ್ಕಿತೀಡುವ ಅವಶ್ಯಕತೆ ಅವನಿಗಿರುವುದಿಲ್ಲ.

ಕಡೆಯ ಸನ್ನಿವೇಶದಲ್ಲಿ ಅವನ ಎಲ್ಲ ಮಾತುಗಳಿಗೆ ಒಂದು ನಿರ್ದಿಷ್ಟ ಮಿತಿಯುಂಟು. ಜಾಗರೂಕತೆಯ ಜರಡಿಯಲ್ಲಿ ಅವನ ಮಾತುಗಳು ಜಲ್ಲಿಸುತ್ತ ಹೊರಬಂದಾಗಲೇ ಅವನ ಮಾತಿಗೊಂದು ಬೆಲೆ ಸಮಾಜದಲ್ಲಿ ಅವನಿಗೊಂದು ಗೌರವದ ನೆಲೆ.

ಆದರೆ, ಇವೆರಡರ ನಡುವನ ಮಧ್ಯದ ಸನ್ನಿವೇಶವಿದೆಯಲ್ಲ, ಇದು ಎಲ್ಲಕ್ಕಿಂತ ವಿಭಿನ್ನ. ಇದು ಮೊದಲ ಹಾಗೂ ಮೂರನೆಯ ಅಂದರೆ, ಒಳ-ಹೊರ ಪ್ರಪಂಚಗಳೆರಡರ ಮಿಶ್ರಣವಾದ ಸಂಕೀರ್ಣಮಯ ನೆಲೆಗಟ್ಟು. ಇದಕ್ಕೆ ತನ್ನದೇ ಆದ ಒಂದು ಚೌಕಟ್ಟಿದೆ.

ತನ್ನದೇ ಆದ ಒಂದು ಆಯಾಮವಿದೆ. ಇತಿಮಿತಿಗಳಿವೆ. ಸಂದರ್ಭೋಚಿತವಾದ ತನ್ನದೇ ವೈಯಕ್ತಿಕ ಆಸೆ-ಆಕಾಂಕ್ಷೆಗಳಿವೆ. ಸಮಷ್ಟಿಯ ಒಂದು ನಿರ್ದಿಷ್ಟವಾದ ಗುರಿ ಇದೆ.

ಇಲ್ಲಿ ಎಲ್ಲರೂ ಆಪ್ತರಲ್ಲ. ಹಾಗೆಯೇ ಎಲ್ಲರೂ ಅಪರಿಚಿತರೂ ಅಲ್ಲ. ಇಲ್ಲಿ ನಿನ್ನದೆಂಬುದೇ ಎಲ್ಲರ ಮಂತ್ರವಲ್ಲ. ಅಂತೆಯೇ ಇಲ್ಲಿನ ಎಲ್ಲರ ಚಿಂತನೆಗಳೇ ನಿನ್ನ ಧ್ಯಾನವೂ ಅಲ್ಲ, ಆದ್ದರಿಂದ, ಈ ಸನ್ನಿವೇಶದಲ್ಲಿ ನಿನ್ನ ಮಾತುಗಳು ಜರಡಿಯಲ್ಲಿಯೇ ಜಳ್ಳುಗಳನ್ನು ಹಿಂದೆ ಬಿಟ್ಟು ಸ್ವಚ್ಛವಾಗಿ ಮೇಲೆ ಬರುವುದರ ಜತೆಜತೆಯಲ್ಲೇ ಅವು ನಿನ್ನೊಡಲಿನ ಸತ್ಯವನ್ನು ಒಮ್ಮೆ ಸವರಿ ಬರಬೇಕಾದೀತು. ಆಗಲೇ ಅದಕ್ಕೆ ತೂಕ. ಅದಕ್ಕೆ ಒಪ್ಪುವ ಬೆಲೆ.

ಎಲ್ಲಕ್ಕಿಂತ ಹೆಚ್ಚಾಗಿ, ಈ ಸನ್ನಿವೇಶದಲ್ಲಿ ನಮ್ಮೆಲ್ಲ ನಡೆನುಡಿಗಳು, ಚಿಂತನೆಗಳೂ ಕೂಡ ಒಂದಕ್ಕೊಂದು ಪೂರಕವಾಗಿ ಸಾಗುತ್ತ ಕಟ್ಟಕಡೆಯಲ್ಲಿ ಸಂಗಮಿಸಬೇಕಾಗಿರುವುದು `ಹಣ~ ಎಂಬ ಸಾಗರದಲ್ಲಿ. `ಸುಖಶಾಂತಿ~ ಎಂಬ ಸಮುದ್ರದಲ್ಲಿ ಅಲ್ಲ.
 
ಸುಖ ಶಾಂತಿಯೂ ಕೂಡಿಕೊಂಡರೆ ತಪ್ಪೇನು ಇಲ್ಲ. ಆದರೆ, ಅದು ಹಣ ಗಳಿಕೆಯ ಹಾದಿಯಲ್ಲಿ ಮುಳುವಾಗಬಾರದೆಂಬುದೇ ಇಲ್ಲಿನ ಒಂದು ವಿಪರ್ಯಾಸ. ಹಾಗಾಗಿ ಇಲ್ಲಿನ ನೆಲದಲ್ಲಿ ಮಾತುಗಳು ಇನ್ನಿತರ ಭಾವನೆಗಳಿಗೆ ಅದೆಷ್ಟು ಸ್ಪಂದಿಸಬೇಕೋ ಅಷ್ಟನ್ನು ಮಾತ್ರ ಪೂರೈಸಿಕೊಂಡು ಸಾಗರ ಸೇರುವ ಅಂತಿಮ ಗುರಿಯೆಡೆಗೇ ಭರದಿಂದ ಹರಿದುಬರಬೇಕು!

ಸನ್ನಿವೇಶವೇನೇ ಇರಲಿ, ನನ್ನ ಮಾತೆಂದಿಗೂ ಒಂದೇ ತರ. ಅದಕ್ಕಿರುವುದು ಒಂದೇ ಗತಿ, ಒಂದೇ ನೆಲೆ ಎಂಬ ಗಡುಸು ನಿಲುವು ನಿಮ್ಮದಾಗಿದ್ದರೆ, ಈ ನನ್ನ ಅಂಕಣಗಳು ನಿಮಗೆ ಯಾವುದೇ ರೀತಿಯಲ್ಲೂ ಸಹಾಯಕವಾಗುವುದಿಲ್ಲ.
 
ಬದಲಾಗಿ ಪ್ರತಿ ಸನ್ನಿವೇಶಕ್ಕೂ ಅನುಗುಣವಾಗಿ ಮಾತನಾಡುವ ಕಲೆಯೊಂದನ್ನು ಬೆಳೆಸಿಕೊಳ್ಳಬೇಕೆಂಬ ಸಕಾರಾತ್ಮಕ ನಿಲುವು ನಿಮ್ಮದಾಗಿದ್ದರೆ, ನನ್ನ ಮುಂಬರುವ ಬರಹಗಳು ನೀವು ಈಗಾಗಲೇ ಕಂಡುಕೊಂಡಿರುವ ಕೆಲ ಸತ್ಯಗಳನ್ನು ಬೆಳಕಿಗೆ ತರುವಲ್ಲಿ ಸಾಧನವಾದೀತು. ಸರ್ವಜ್ಞನ ತ್ರಿಪದಿಯೊಂದು ಇಲ್ಲಿ ನೆನಪಿಗೆ ಬರುತ್ತಿದೆ....

ಮಾತು ಬಲ್ಲಾತಂಗೆ/ ಯೇತವದು ಸುರಿದಂತೆ/
ಮಾತಾಡಲರಿಯದಾತಂಗೆ, ಬರಿಯೇತ/
ನೇತಾಡಿದಂತೆ ಸರ್ವಜ್ಞ//

ಬಾವಿಯಲ್ಲಿ ನೀರಿದೆ. ಏತವೂ ಚೆನ್ನಾಗಿಯೇ ತಿರುಗುತ್ತಿದೆ. ಅದರಿಂದ ನೀರನ್ನು ಹರಿಸಿ ನೆಲವನ್ನು ಫಲವತ್ತಾಗಿ ಮಾಡುವುದೆಷ್ಟು ಸುಲಭವೋ ಹಾಗೆಯೇ ನೀರನ್ನು ಹರಿಸದೆ ಏತವನ್ನು ಬರಿ ತಿರುಗಿಸುತ್ತ ಕಾಲಹರಣ ಮಾಡುವುದೂ ಅಷ್ಟೇ ಸುಲಭ.

ನೀರು ನಮ್ಮ ಜ್ಞಾನ ಅಥವಾ ತಿಳಿವಳಿಕೆಯಾದರೆ, ಫಲವತ್ತಾದ ನೆಲ ನಮ್ಮ ಯಶಸ್ಸಿನ ತಪೋಭೂಮಿ. ಇವೆರಡನ್ನೂ ಸಾಕ್ಷಾತ್ಕರಿಸಿಕೊಳ್ಳುವ ಏತ, ನಮ್ಮ ಮಾತು ಎಂಬ ಅರಿವಿನೊಂದಿಗೇ ಮುಂದೆ ಸಾಗೋಣ.... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT