ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನಾಕ್ಷಿ ರಿಯಲ್ ಎಸ್ಟೇಟ್!

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಒಂದು ಗುಟ್ಟು ರಟ್ಟಾಯಿತು...`ಚಿತ್ರದಲ್ಲಿ ನನ್ನದು ನೆಗೆಟಿವ್ ಶೇಡ್ ಇರುವ ಪಾತ್ರ~ ಎಂದು ನಾಯಕ ರಘು ಮುಖರ್ಜಿ ಹೇಳುತ್ತಿದ್ದಂತೆಯೇ ನಿರ್ದೇಶಕ ಶ್ರೀಧರ್ ಹೆಗ್ಡೆ ಗುಟ್ಟು ರಟ್ಟಾದ ಮಾತನಾಡಿದರು. ಅವರ ಉದ್ಘಾರದಲ್ಲಿ, ಚಿತ್ರತಂಡಕ್ಕೊಂದು ಸೂಚನೆಯೂ ಇತ್ತು. ಆ ಸೂಚನೆಗೆ ಎಚ್ಚೆತ್ತವರಂತೆ ರಘು ಮಾತು ಬದಲಿಸಿದರು.
 
`ಎಲ್ಲಾ ಸಿನಿಮಾದಲ್ಲಿಯೂ ಒಳ್ಳೆಯ ಹುಡುಗನಾಗಿಯೇ ನಟಿಸಲು ಸಾಧ್ಯವಿಲ್ಲ. ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಎರಡು ಆಯಾಮಗಳು ಇರುವ ಪಾತ್ರ. ಕಥೆ ಸಾಗುತ್ತಾ ಹೋದಂತೆ ನನ್ನ ಪಾತ್ರವೂ ಬದಲಾಗುತ್ತದೆ~ ಎಂದರು.

ನಿರ್ದೇಶಕ ಶ್ರೀಧರ್ ಹೆಗ್ಡೆ ತಮ್ಮ ಚಿತ್ರಕ್ಕಾಗಿ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಕೆಲವು ಘಟನೆಗಳನ್ನು ಬಳಸಿಕೊಂಡು ಕಥೆ ಹೆಣೆದಿದ್ದಾರಂತೆ.  `ರಿಯಲ್ ಎಸ್ಟೇಟ್ ಉದ್ಯಮದೊಳಗೆ ನಡೆಯುವ ಪ್ರೇಮಕಥೆ ನನ್ನ ಚಿತ್ರದಲ್ಲಿದೆ. ರಘು ಮುಖರ್ಜಿ ನಾಯಕ.
 
ಶುಭಾ ಪೂಂಜಾ ನಾಯಕಿ. ಗುರುದೇಸಾಯಿ ಸಂಭಾಷಣೆ ಬರೆದಿದ್ದಾರೆ. ಮುಂಬೈ ಹುಡುಗಿ ಮಧುಮತಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಕಥೆ ನಗರದಲ್ಲಿ ನಡೆಯುವುದರಿಂದ ಬೆಂಗಳೂರು, ಮೈಸೂರಿನಲ್ಲಿ 35-40 ದಿನಗಳ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲಾಗುವುದು. ಆನಂತರ ಫೈಟ್ ಮತ್ತು ಹಾಡುಗಳನ್ನು ಪ್ಲಾನ್ ಮಾಡಲಾಗುವುದು~ ಎಂದರು.

ಗಾಢ ಗುಲಾಬಿ ಬಣ್ಣದ ಉಡುಪಿನಲ್ಲಿ ರಂಗಾಗಿ ಕಾಣುತ್ತಿದ್ದ ಶುಭಾ ಪೂಂಜಾಗೆ ಚಿತ್ರದಲ್ಲಿ `ಮೀನಾಕ್ಷಿ~ ಪಾತ್ರ. `ನಾಯಕಿಗೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರ ಸಿಕ್ಕಿದೆ. ಚಿತ್ರದಲ್ಲಿ ನನ್ನ ಪಾತ್ರಕ್ಕೂ ಎರಡು ಆಯಾಮಗಳಿವೆ. ಇದೊಂದು ಸವಾಲಿನ ಪಾತ್ರ~ ಎಂದು ಗುಲಾಬಿ ರಂಗನ್ನು ಗಲ್ಲದಲ್ಲೂ ತುಂಬಿಕೊಂಡರು.

ಮುಂಬೈದ ಮಧುಮತಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪೋಷಕರಿಬ್ಬರೂ ಪೊಲೀಸ್ ಅಧಿಕಾರಿಗಳಂತೆ.ಇವರು ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್! ಕೋಲಾರದ ರೇಷ್ಮೆ ಉದ್ಯಮಿ, ನಿರ್ಮಾಪಕ ವಿಶ್ವನಾಥ್ ಅವರ ಪರಿಚಯದಿಂದಾಗಿ ಕನ್ನಡ ಚಿತ್ರದ ಈ ಅವಕಾಶ ದೊರೆತಿದೆ.

ಅಂದಹಾಗೆ, ತೆಲುಗು, ಮರಾಠಿ ಚಿತ್ರಗಳಲ್ಲಿ ನಟಿಸಿರುವ ಅವರು ಬೆಳಗಾವಿ ಮೂಲದವರಂತೆ. ವಾಣಿ ಹರಿಕೃಷ್ಣ ಚಿತ್ರದ ಸಂಗೀತದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಎರಡೇ ಹಾಡುಗಳಿರುವುದು ಮತ್ತು ಚಿತ್ರದ ಸ್ಕ್ರಿಪ್ಟ್ ಆಸಕ್ತಿಕರವಾಗಿರುವುದು ತಮ್ಮನ್ನು ಸಂಗೀತ ನೀಡುವಂತೆ ಪ್ರೇರೇಪಿಸಿತು ಎಂದರು ವಾಣಿ. `ಲೂಸ್‌ಗಳು~ ನಂತರ ಅವರು ಸಂಗೀತ ನೀಡುತ್ತಿರುವ ಎರಡನೇ ಚಿತ್ರವಿದು.

ಚಿತ್ರಕ್ಕೆ ಸಂಭಾಷಣೆ ಬರೆದಿರುವ ಗುರು ದೇಸಾಯಿ ಅವರಿಗಿದು ಆರನೇ ಸಿನಿಮಾ. ತೆಲುಗಿನಲ್ಲಿ 22 ಸಿನಿಮಾಗಳಿಗೆ ಛಾಯಾಗ್ರಹಣ ನೀಡಿರುವ ಮಲಾರ ಭಟ್ ಜೋಶಿ ಕನ್ನಡದಲ್ಲಿ ಛಾಯಾಗ್ರಹಣ ಮಾಡುತ್ತಿರುವ ಐದನೇ ಸಿನಿಮಾ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT