ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನೂಟ ಇಲ್ಲದ ‘ಮತ್ಸ್ಯಾ’

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಮತ್ಸ್ಯಾ’ ಎಂಬ ಫಲಕ ನೋಡಿ ಅಲ್ಲಿ ಮೀನಿನೂಟ ಸಿಗಬಹುದು ಎಂದುಕೊಂಡು ರೆಸ್ಟೋರಾ ಒಳಗೆ ಕಾಲಿಟ್ಟರೆ ಲಾಂಜ್‌ನಲ್ಲಿರುವ ದೊಡ್ಡ ಹಲಗೆಯ ಮೇಲಿನ ‘ಪ್ಯೂರ್‌ ವೆಜ್‌’ ಅನ್ನುವ ಬರಹ ಒಂದು ಕ್ಷಣ ಗೊಂದಲ ಮೂಡಿಸಿತು.

ಮತ್ಸ್ಯಾ ಎನ್ನುವ ಹೆಸರಿದೆ. ಮತ್ತೆ, ಇಲ್ಲಿ ಮೀನೂಟ ಸಿಗುವುದಿಲ್ಲವಾ? ಎನ್ನುವ ಪ್ರಶ್ನೆಗೆ ರೆಸ್ಟೋರೆಂಟ್‌ನ ಸ್ವಾಗತಕಾರಿಣಿ ಉತ್ತರಿಸಿದ್ದು ಹೀಗೆ: ‘‘ಮತ್ಸ್ಯಾ’ ಎನ್ನುವ ಪದಕ್ಕೆ ಎರಡು ಅರ್ಥವಿದೆ. ಒಂದು ಮೀನು ಮತ್ತೊಂದು ಮತ್ಸ್ಯಾವತಾರಿ ವಿಷ್ಣು. ಈ ರೆಸ್ಟೋರೆಂಟ್‌ಗೆ ‘ಮತ್ಸ್ಯಾ’ ಎನ್ನುವ ಹೆಸರಿಟ್ಟಿರುವುದು ವಿಷ್ಣು ಎಂಬರ್ಥದಲ್ಲಿ’ ಎಂದೆನ್ನುತ್ತಾ ನಮ್ಮ ಗೊಂದಲಕ್ಕೆ ತೆರೆ ಎಳೆದರು. 

ಚೆನ್ನೈ ಮತ್ತು ದೆಹಲಿ ಜನರಿಗೆ ಅಪ್ಪಟ ಉಡುಪಿ ಖಾದ್ಯಗಳ ಸವಿರುಚಿ ಉಣಬಡಿಸುತ್ತಿರುವ ಉಡುಪಿ ಹೋಂ ಗ್ರೂಪ್‌ನ ‘ಮತ್ಸ್ಯಾ’ ರೆಸ್ಟೋರೆಂಟ್‌ ಈಗ ನಗರಕ್ಕೂ ಕಾಲಿರಿಸಿದೆ. ಉಡುಪಿ ಜನರು ದಿನನಿತ್ಯ ಬಳಸುವ ತಿಂಡಿ-ಊಟವೇ ಈ ರೆಸ್ಟೋರೆಂಟ್‌ನ ವಿಶೇಷ ಖಾದ್ಯಗಳು. ಇವುಗಳ ಜತೆಗೆ ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್‌, ಮೊಘಲ್‌, ಕಾಂಟಿನೆಂಟಲ್‌ ತಿನಿಸುಗಳೂ ಇಲ್ಲಿ ಲಭ್ಯವಿದೆ. ಅಂದಹಾಗೆ, ‘ಮತ್ಸ್ಯಾ’ ಸಂಪೂರ್ಣ ಸಸ್ಯಾಹಾರಿ ರೆಸ್ಟೋರೆಂಟ್‌.

‘ಈ ರೆಸ್ಟೋರೆಂಟ್ ಆರಂಭಗೊಂಡು ಒಂದು ತಿಂಗಳು ಕಳೆದಿದೆ ಅಷ್ಟೇ. ಶುಚಿ ರುಚಿಗೆ ನಮ್ಮ ಮೊದಲ ಆದ್ಯತೆ. ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದು ನಮ್ಮ ರೆಸ್ಟೋರಾದ ಅಗ್ಗಳಿಕೆ. ಉಡುಪಿಯ ಜನಪ್ರಿಯ ಖಾದ್ಯಗಳಾದ ಗುಳಿಯಪ್ಪ, ನೀರ್‌ದೋಸೆ, ಕಡುಬು ಇಡ್ಲಿ, ಮಂಗಳೂರು ಬೋಂಡಾ, ಮಂಗಳೂರು ಗಾರ್ಲಿಕ್‌ ರೈಸ್‌ ಇಲ್ಲಿನ ಸಿಗ್ನೇಚರ್‌ ತಿನಿಸುಗಳು.

ಉಡುಪಿ ಖಾದ್ಯಗಳ ಜತೆಗೆ ನಮ್ಮಲ್ಲಿ ಎಲ್ಲ ಭಾಗದ ತಿನಿಸುಗಳು ದೊರೆಯುತ್ತವೆ’ ಎಂದು ವಿವರಣೆಗೆ ಕುಳಿತರು ಹೋಟೆಲ್‌ನ ವ್ಯವಸ್ಥಾಪಕ ಆದಿತ್ಯ ಮೆನನ್‌. ‘ನಮ್ಮಲ್ಲಿ ಸಿಗುವ ಎಲ್ಲ ಬಗೆಯ ದೋಸೆಗಳು, ಸಾಂಬಾರ್‌, ರಸಂ ಮತ್ತು ಮೊಸರನ್ನವನ್ನು ಚೆನ್ನೈ ಶೈಲಿಯಲ್ಲಿ ಸಿದ್ಧಪಡಿಸಿ ಬಡಿಸುವುದು ಮತ್ತೊಂದು ವಿಶೇಷ. ಅದಕ್ಕಾಗಿ ಚೆನ್ನೈನಿಂದಲೇ ಬಾಣಸಿಗರು ಆಗಮಿಸಿದ್ದಾರೆ. ನಾವು ಸಿದ್ಧಪಡಿಸುವ ರಸಂಗೆ ಚಿಲ್ಲಿ ಪೌಡರ್‌ ಬಳಸುವುದಿಲ್ಲ’ ಎಂದರು ಅವರು.

ಅಂದಹಾಗೆ, ‘ಮತ್ಸ್ಯಾ’ದಲ್ಲಿ ಪ್ರತಿದಿನ ಮಧ್ಯಾಹ್ನದ ಊಟಕ್ಕೆ ಬಫೆ ಲಭ್ಯ. ಒಂದು ಸೂಪ್‌, ನಾಲ್ಕೈದು ಬಗೆಯ ಸಲಾಡ್‌, ಮೂರು ಸ್ಟಾರ್ಟರ್ಸ್‌ ಜತೆಗೆ ಮುಖ್ಯ ಮೆನುವಿನಲ್ಲಿ ನೂಡಲ್ಸ್‌, ರೈಸ್ ಮತ್ತು ಗ್ರೇವಿ, ಪನ್ನೀರ್‌ ಕರ್ರಿ, ವೆಜ್‌ ಕರ್ರಿ, ರೈಸ್‌ ದಾಲ್‌, ಬಿಸಿಬೇಳೆ ಬಾತ್‌, ಸ್ಪೆಷಲ್‌ ರೈಸ್‌, ಸಾಂಬಾರ್‌, ರಸಂ, ಮೊಸರು, ಡೆಸರ್ಟ್‌ನಲ್ಲಿ ಐದಾರು ಬಗೆಯ ಸಿಹಿತಿನಿಸುಗಳಿರುತ್ತವಂತೆ. ‘ವೀಕೆಂಡ್‌ನಲ್ಲಿ ಲಂಚ್‌ ಬಫೆ ಜತೆಗೆ ಡಿನ್ನರ್‌ ಬಫೆ ಸಹ ಸಿಗುತ್ತದೆ. ವಾರಾಂತ್ಯದ ಊಟಕ್ಕೆ ಚಾಟ್ಸ್‌ ಮತ್ತು ಸಲಾಡ್‌ಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ’ ಎನ್ನುತ್ತಾರೆ ಆದಿತ್ಯ.

ಮತ್ಸ್ಯಾ ರೆಸ್ಟೋರೆಂಟ್‌ನ ದೋಸೆಯ ರುಚಿಯನ್ನು ಸವಿದೇ ತಿಳಿಯಬೇಕು. ಇಪ್ಪತ್ತಕ್ಕೂ ಅಧಿಕ ಬಗೆಯ ದೋಸಾಗಳು ಇಲ್ಲಿ ಲಭ್ಯವಿದ್ದು, ಅವುಗಳಲ್ಲಿ ಸೂರತ್ಕಲ್‌ ದೋಸಾ, ಸಪ್ತಸ್ವರ ದೋಸಾ, ರಾಜ ರಾಜ ಚೋಳನ್‌ ದೋಸಾ, ಗೂಳಿಪಣಿಹಾರ ದೋಸಾ ಇಲ್ಲಿನ ಸಿಗ್ನೇಚರ್‌ ದೋಸಾಗಳು. ‘ರಾಜ ರಾಜ ಚೋಳನ್‌ ದೋಸಾ ಅಂತ ಹೆಸರಿಟ್ಟೀದ್ದೀರಲ್ಲಾ ಯಾಕೆ’ ಎಂದರೆ, ಹೋಟೆಲ್‌ನ ಸಿಬ್ಬಂದಿ ಶ್ರೀಪಾದ ಅವರು ಉತ್ತರಿಸಿದ್ದು ಹೀಗೆ: ‘ಈ ದೋಸೆಗೂ ಚೋಳ ರಾಜನಿಗೂ ಸಂಬಂಧವಿಲ್ಲ. ಆದರೆ, ಅವನ ನೆನಪಿಸಿಕೊಳ್ಳಲು ದೋಸೆಗೆ ಆ ಹೆಸರು ಇರಿಸಿದ್ದೇವೆ’.

ರಾಜ ರಾಜ ಚೋಳನ್‌ ದೋಸೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಶ್ರೀಪಾದ ಅವರು ‘ಅದರ ಗುಟ್ಟು ಮಾತ್ರ ಹೇಳುವುದಿಲ್ಲ. ಆ ದೋಸೆ ಸವಿದು ನೋಡಿ’ ಅಂತಂದು ದೋಸೆಗೆ ಆರ್ಡರ್‌ ಮಾಡಿದರು. ಐದು ನಿಮಿಷದಲ್ಲಿ ರಾಜ ರಾಜ ಚೋಳನ್‌ ದೋಸೆ ಟೇಬಲ್‌ ಮೇಲಿತ್ತು. ತುಪ್ಪ ಮತ್ತು ಬೆಣ್ಣೆಯ ಘಮವನ್ನು ಆಘ್ರಾಣಿಸುತ್ತಲೇ ದೋಸೆಯನ್ನು ಮುರಿದು ಬಾಯಿಗಿಟ್ಟುಕೊಂಡಾಗ ರುಚಿಯ ಮೊಗ್ಗುಗಳು ಅರಳಿಕೊಂಡವು.

ಯಮ್ಮಿ, ಕ್ರಿಸ್ಪಿಯಾಗಿದ್ದ ದೋಸೆಯ ಮಧ್ಯಭಾಗದಲ್ಲಿ ಟೊಮೊಟೊ, ಕ್ಯಾಪ್ಸಿಕಂ, ಗೋಡಂಬಿ ಇತ್ತು. ದೋಸೆ ಜತೆಗೆ ಈ ಮಸಾಲೆ ಕಾಂಬಿನೇಷನ್‌ ಸಖತ್‌ ಆಗಿ ಸಿಂಕ್‌ ಆಗಿದ್ದರಿಂದ ರುಚಿ ತುಂಬ ಚೆನ್ನಾಗಿತ್ತು. ದೋಸೆಯ ರುಚಿ ಇಷ್ಟವಾಗಿದ್ದರಿಂದ ಮತ್ತೊಂದು ದೋಸೆಗೆ ಆರ್ಡರ್‌ ಮಾಡಿ ತಿಂದದ್ದಾಯಿತು.

‘ಇನ್ನು ಸಪ್ತಸ್ವರ ದೋಸಾದಲ್ಲಿ ಏಳು ಬಗೆಯ ಉತ್ತಪ್ಪ- ಈರುಳ್ಳಿ, ಟೊಮೊಟೊ, ಕ್ಯಾರೆಟ್‌, ಕ್ಯಾಪ್ಸಿಕಂ, ಗ್ರೀನ್‌ಪೀಸ್‌, ಗೋಡಂಬಿ ಮತ್ತು ಪ್ಲೇನ್‌ ಉತ್ತಪ್ಪ- ಕೊಡುತ್ತೇವೆ’ ಎಂದು ಸಪ್ತಸ್ವರ ದೋಸೆಯ ವಿವರಣೆ ನೀಡಿದರು ಅವರು. ಇಲ್ಲಿ ಬಫೆ ಜತೆಗೆ ಥಾಲಿ ಕೂಡ ಲಭ್ಯವಿದೆ. ಮದ್ರಾಸ್‌ ಥಾಲಿ ಮತ್ತು ಮತ್ಸ್ಯಾ ಸ್ಪೆಷಲ್‌ ಥಾಲಿ ಲಭ್ಯ.

ಜತೆಗೆ ನಾರ್ಥ್‌ ಇಂಡಿಯನ್‌ ಎಕ್ಸಿಕ್ಯುಟಿವ್‌ ಲಂಚ್‌, ಸೌಥ್‌ ಇಂಡಿಯನ್‌ ಎಕ್ಸಿಕ್ಯುಟಿವ್‌ ಲಂಚ್‌ ಕೂಡ ಸವಿಯುವ ಅವಕಾಶ ಇಲ್ಲಿದೆ. ಅಪ್ಪಟ ಸಸ್ಯಾಹಾರಿ ಖಾದ್ಯಗಳನ್ನು ಸವಿಯ ಬಯಸುವವರು ಇಲ್ಲಿಗೆ ಭೇಟಿ ನೀಡಬಹುದು. ಸ್ಥಳ: ಮತ್ಸ್ಯಾ, ಟ್ರಿಂಪ್ ಟವರ್, 48, ಪರಿಸರ ಭವನದ ಪಕ್ಕ, ಚರ್ಚ್‌ ಸ್ಟ್ರೀಟ್‌. ಟೇಬಲ್‌ ಕಾಯ್ದಿರಿಸಲು: 4160 0222, 4167 7222.
-ಕೆ.ಎಂ. ಸತೀಶ್‌ ಬೆಳ್ಳಕ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT