ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿ: ರಾಣಾ ಖುಲಾಸೆ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಷಿಕಾಗೊ (ಪಿಟಿಐ): ಮುಂಬೈ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಹೆಡ್ಲಿಯ ಸಹಚರನಾದ ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ತಹಾವುರ್ ರಾಣಾ, `ಈ ಪ್ರಕರಣದಲ್ಲಿ ನಿರ್ದೋಷಿ~ ಎಂದು ಅಮೆರಿಕದ ಷಿಕಾಗೊ ನ್ಯಾಯಾಲಯ ಬಹುಮತದ ತೀರ್ಪು ನೀಡಿದೆ.

ಆದರೆ ಲಷ್ಕರ್ ಉಗ್ರರಿಗೆ ನೀಡಿದ್ದ ಬೆಂಬಲ ಹಾಗೂ ಡೆನ್ಮಾರ್ಕ್‌ನ ದಿನಪತ್ರಿಕೆ ಮೇಲೆ ದಾಳಿ ಎಸಗಲು ಹೂಡಿದ್ದ ಸಂಚಿನಲ್ಲಿ ಆತ ತಪ್ಪಿತಸ್ಥ ಎಂದು 12 ನ್ಯಾಯಾಧೀಶರ ತಂಡ ತೀರ್ಪು ಪ್ರಕಟಿಸಿದ್ದು, ಇದಕ್ಕಾಗಿ ಆತನಿಗೆ ಗರಿಷ್ಠ 30 ವರ್ಷಗಳ ಸೆರೆವಾಸ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಇನ್ನೂ ಶಿಕ್ಷೆ ಪ್ರಮಾಣ ಪ್ರಕಟಿಸದ ನ್ಯಾಯಾಧೀಶರು, ಅದಕ್ಕಾಗಿ ಇನ್ನೂ ದಿನಾಂಕ ನಿಗದಿಪಡಿಸಿಲ್ಲ.

ಅಂತಿಮ ವಿಚಾರಣೆ ನಂತರ ಎರಡು ದಿನ ಚರ್ಚಿಸಿದ 12 ನ್ಯಾಯಾಧೀಶರ ತಂಡ, 50 ವರ್ಷದ ರಾಣಾ ಮುಂಬೈ ಮೇಲಿನ ದಾಳಿಕೋರರಿಗೆ ಸಾಮಗ್ರಿ- ಸಲಕರಣೆ ಪೂರೈಸಿಲ್ಲ ಎಂದು ಉಚ್ಚರಿಸಿತು. ತಂಡದಲ್ಲಿನ ಕೆಲವು ನ್ಯಾಯಾಧೀಶರ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿತ್ತಾದರೂ ಬಹುಮತದ ಆಧಾರದಲ್ಲಿ ಆತನನ್ನು ದೋಷಮುಕ್ತಗೊಳಿಸಲಾಯಿತು.

ಆದರೆ ರಾಣಾ ಎಲ್‌ಇಟಿ ಉಗ್ರರಿಗೆ ಪರಿಕರಗಳನ್ನು ಪೂರೈಸಿದ್ದ ಹಾಗೂ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ಡೆನ್ಮಾರ್ಕ್ ಪತ್ರಿಕೆಯ ಮೇಲೆ ಬಾಂಬ್ ದಾಳಿ ಸಂಚನ್ನು ರೂಪಿಸಿದ್ದ ಎಂದು ಜಿಲ್ಲಾ ನ್ಯಾಯಾಧೀಶ ಹ್ಯಾರಿ ಡಿ.ಲಿನೆನ್‌ವೆಬೆರ್ ತೀರ್ಪು ಪ್ರಕಟಿಸಿದರು.

ದೇಶಕ್ಕೆ ನಿರಾಸೆ- ತನಿಖೆಗೆ ಹಿನ್ನಡೆಯಿಲ್ಲ
ನವದೆಹಲಿ (ಐಎಎನ್‌ಎಸ್): ಶಂಕಿತ ಭಯೋತ್ಪಾದಕ ತಹಾವುರ್ ರಾಣಾನನ್ನು ಮುಂಬೈ ದಾಳಿ ಪ್ರಕರಣದಿಂದ ಆರೋಪ ಮುಕ್ತ ಮಾಡಿರುವ ಅವೆುರಿಕದ ಕೋರ್ಟ್‌ನ ತೀರ್ಪಿನಿಂದ ದೇಶಕ್ಕೆ ನಿರಾಸೆಯಾಗಿದೆ ಎಂದು ಗೃಹ ಸಚಿವಾಲಯದ ಆಂತರಿಕ ಭದ್ರತಾ ಕಾರ್ಯದರ್ಶಿ ಯು.ಕೆ.ಬನ್ಸಲ್ ಪ್ರತಿಕ್ರಿಯಿಸಿದ್ದಾರೆ.

ಆದರೆ ಇದರಿಂದ ರಾಣಾ ತನಿಖೆಗೆ ಯಾವುದೇ ಹಿನ್ನಡೆ ಉಂಟಾಗದು ಎಂದು ಅವರು ಶುಕ್ರವಾರ ಸ್ಪಷ್ಟ ಪಡಿಸಿದ್ದಾರೆ.

`ಭಾರತದಲ್ಲಿ ಮುಂಬೈ ದಾಳಿ ಪ್ರಕರಣದ ತನಿಖೆ ಇನ್ನೂ ಮುಂದುವರಿಯುತ್ತಿದೆ. ಭಯೋತ್ಪಾದನೆಯನ್ನು ನಿರ್ವಹಿಸುವಲ್ಲಿ ಭಾರತ ಮತ್ತೊಂದು ದೇಶದ ಸಾಕ್ಷ್ಯಾಧಾರ ಹಾಗೂ ತನಿಖೆಯನ್ನು ನಂಬುವುದಿಲ್ಲ~ ಎಂದು ಹೇಳಿದ್ದಾರೆ.

`ಅಮೆರಿಕ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕಾಗಿದೆ. ಎರಡೂ ದೇಶಗಳ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಈಗಲೇ ಈ ಬಗ್ಗೆ ಪ್ರತಿಕ್ರಿಯಿಸಲಾಗದು.  ನಮ್ಮಲ್ಲಿ ನಡೆಯುತ್ತಿರುವ ಸಮಗ್ರ ತನಿಖೆಯ ನಂತರ ವಿಚಾರಣಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಮುಂದೆ ನ್ಯಾಯಾಲಯ ಏನು ಹೇಳುತ್ತದೆ ಎಂಬುದನ್ನು ಕಾಯ್ದು ನೋಡಬೇಕು~ ಎಂದಿದ್ದಾರೆ.

ರಾಣಾಗೆ ಸಂಬಂಧಿಸಿದ ಅಮೆರಿಕ ನ್ಯಾಯಾಲಯದ ತೀರ್ಪು ವೈರುಧ್ಯಗಳಿಂದ ಕೂಡಿದೆ. ಆದರೆ ಇದರಿಂದ  ಕಸಾಬ್ ವಿರುದ್ಧದ ಕಾನೂನು ಕ್ರಮಕ್ಕೆ ಯಾವುದೇ ಧಕ್ಕೆ ಉಂಟಾಗದು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ಜಲ್ ನಿಕ್ಕಂ ಪ್ರತಿಕ್ರಿಯಿಸಿದ್ದಾರೆ.

ಮುಂಬೈ ದಾಳಿ ಅಪರಾಧಿ ಅಜ್ಮಲ್ ಕಸಾಬ್‌ಗೆ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸುವಲ್ಲಿ ನಿಕ್ಕಂ ಪ್ರಮುಖ ಪಾತ್ರ ವಹಿಸಿದ್ದರು.


ತೀರ್ಪು ಪ್ರಕಟವಾಗುತ್ತಿದ್ದಂತೆ ಬಿಳಿ ಅಂಗಿ ಹಾಗೂ ಆಲಿವ್ ಬಣ್ಣದ ಚೌಕುಳಿ ಬ್ಲೇಜರ್ ತೊಟ್ಟು ನ್ಯಾಯಾಲಯದಲ್ಲಿ ಹಾಜರಿದ್ದ ರಾಣಾ ದಿಗ್ಮೂಢನಾದ. ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಣಾ ವಕೀಲರು, ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ತೀರ್ಪಿನಲ್ಲಿ ಉಂಟಾದ ಭಿನ್ನಮತದ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನ್ಯಾಯಾಧೀಶರ ತಂಡ ನಿರಾಕರಿಸಿದೆ.

ಮುಂಬೈ ದಾಳಿಯಲ್ಲಿ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಭಾಗಿಯಾಗಿತ್ತು. ಡೆನ್ಮಾರ್ಕ್ ಸಂಚಿನಲ್ಲಿ ಅದರ ಪಾತ್ರ ಏನೂ ಇಲ್ಲ. ಆದರೆ ರಾಣಾನನ್ನು ಡೆನ್ಮಾರ್ಕ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ತೀರ್ಪು ನೀಡಿರುವುದು ಭಾರಿ ವಿರೋಧಾಭಾಸ ಎಂದು ಆತನ ವಕೀಲ ಬ್ಲೇಗನ್ ಅಸಮಾಧಾನ ವ್ಯಕ್ತಪಡಿಸಿದರು.

ಮುಂಬೈ ದಾಳಿ ಸಂಚಿನ ಆರೋಪದಿಂದ ಆತ ದೋಷಮುಕ್ತಗೊಂಡಿರುವುದು ತೀವ್ರ ನಿರಾಸೆ ತಂದಿದೆ. ಆದರೆ ಮತ್ತೆರಡು ಆರೋಪಗಳಲ್ಲಿ ಆತ ಅಪರಾಧಿ ಎಂದು ಸಾಬೀತಾಗಿರುವುದರಿಂದ ಸಮಾಧಾನವಾಗಿದೆ ಎಂದು ಅಮೆರಿಕದ ಅಟಾರ್ನಿ ಪ್ಯಾಟ್ರಿಕ್ ಜೆ.ಫಿಟ್ಜ್ ಗೆರಾಲ್ಡ್ ಪ್ರತಿಕ್ರಿಯಿಸಿದರು. ತಕರಾರು ಅರ್ಜಿ ಸಲ್ಲಿಸಲು  ಆಗಸ್ಟ್ 15ರವರೆಗೆ ಅವಕಾಶ ನೀಡಲಾಗಿದೆ.

ರಾಣಾ ಮತ್ತು ಹೆಡ್ಲಿ ಕಾರಿನಲ್ಲಿ ನಡೆಸಿದ್ದ ಸಂಭಾಷಣೆಯ ರಹಸ್ಯ ಧ್ವನಿಮುದ್ರಣವನ್ನು ಪ್ರಾಸಿಕ್ಯೂಟರ್‌ಗಳು ಪ್ರಮುಖ ಸಾಕ್ಷ್ಯವಾಗಿ ಎತ್ತಿ ತೋರಿಸಿದ್ದರು ಎನ್ನಲಾಗಿದೆ.

ರಾಣಾ ತಪ್ಪಿತಸ್ಥನಾಗಿರುವ ಎರಡೂ ಅಪರಾಧಗಳಿಗೆ ತಲಾ ಗರಿಷ್ಠ 15 ವರ್ಷಗಳ ಸೆರೆವಾಸ ವಿಧಿಸಲು ನಿಯಮದಲ್ಲಿ ಅವಕಾಶವಿದೆ. ಆದರೆ ರಾಣಾಗೆ ತಲಾ 15 ವರ್ಷಗಳ ಪ್ರತ್ಯೇಕ ಶಿಕ್ಷೆ ವಿಧಿಸಲಾಗುತ್ತದೋ  ಅಥವಾ ಒಟ್ಟಿಗೆ 15 ವರ್ಷಗಳ ಶಿಕ್ಷೆ  ವಿಧಿಸಲಾಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ.

ಸಹಾಯಕ ಅಟಾರ್ನಿಗಳಾದ ಡೇನಿಯಲ್ ಕಾಲಿನ್ಸ್, ವಿಕಿ ಪೀಟರ್ಸ್, ರಾಣಾ ಪರ ವಕೀಲ ಬ್ಲೆಗನ್, ರಾಣಾ ಪತ್ನಿ ಸಮ್ರಾಜ್, ದಂಪತಿಯ ಇಬ್ಬರು ಪುತ್ರಿಯರು ಹಾಗೂ ಸಮ್ರಾಜ್ ತಾಯಿ ಹಾಜರಿದ್ದರು. ರಾಣಾ ಕುಟುಂಬದ ಸದಸ್ಯರು ಉದ್ವಿಗ್ನರಾಗಿದ್ದುದು ಕಂಡುಬಂತು.

ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ತಕರಾರು ಅರ್ಜಿ ಸಲ್ಲಿಸಲು ಆ.15ರವರೆಗೆ ಕಾಲಾವಕಾಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT