ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಲಕ್ಷ ಮನೆ ನಿರ್ಮಾಣ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ರಾಜೀವ್ ಆವಾಸ್ ಯೋಜನೆ ಬರುವ ಜೂನ್‌ನಲ್ಲಿ ಜಾರಿಯಾಗಲಿದ್ದು, ಒಟ್ಟು ಮೂರು ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಸೋಮವಾರ ಇಲ್ಲಿ ತಿಳಿಸಿದರು.

 ಈ ಯೋಜನೆಯಡಿ ನಗರ ಪ್ರದೇಶಗಳ ಕೊಳಚೆ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಲಾಗಿದ್ದು, ಮುಂದಿನ ಸಾಲಿನಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು.

ಪ್ರತಿಯೊಂದು ಮನೆಗೆ ಮೂರು ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇದಲ್ಲದೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಪ್ರತ್ಯೇಕವಾಗಿ ವೆಚ್ಚ ಮಾಡಲಾಗುತ್ತದೆ ಎಂದು ಸುದ್ದಿಗಾರರಿಗೆ ಹೇಳಿದರು.

ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳು ಸೇರಿದಂತೆ 24 ನಗರ-ಪಟ್ಟಣ ಪ್ರದೇಶಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ರಾಜಧಾನಿಯ 500 ಕೊಳೆಗೇರಿಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 2272 ಕೊಳೆಗೇರಿಗಳಿದ್ದು, 40 ಲಕ್ಷ ಜನ ವಾಸ ಮಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಶೇ 50ರಷ್ಟು ಕೊಳೆಗೇರಿಗಳಲ್ಲಿನ ನಿವಾಸಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.

ರಾಜೀವ್ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50ರಷ್ಟು ಹಣವನ್ನು ಭರಿಸಲಿವೆ. ಫಲಾನುಭವಿಗಳು ಹಣ ನೀಡುವ ಅಗತ್ಯವಿಲ್ಲ. ಬರುವ ದಿನಗಳಲ್ಲಿ 100 ತಾಲ್ಲೂಕುಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಮನೆಗಳನ್ನು ನಿರ್ಮಿಸುವ ಬದಲು ವಸತಿ ಸಂಕೀರ್ಣಗಳನ್ನು ಕಟ್ಟಲಾಗುವುದು. ನಗರ ಪ್ರದೇಶಗಳ ಕೊಳೆಗೇರಿಗಳಲ್ಲಿ ವಾಸ ಮಾಡುವ ಜನರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ ಎಂದು ಅವರು ಹೇಳಿದರು.

ಆಶ್ರಯ, ಇಂದಿರಾ-ಬಸವ ಯೋಜನೆಯಡಿ ಆರು ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದುವರೆಗೆ 69 ಸಾವಿರ ಮನೆಗಳು ಪೂರ್ಣಗೊಂಡಿವೆ. ಒಂದು ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ನಗರ ಪ್ರದೇಶದ ಬಡವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಯೋಜನೆಯಡಿ 7,500 ಮನೆಗಳನ್ನು ನಿರ್ಮಿಸಿದ್ದು, ಮಾರ್ಚ್ ವೇಳೆಗೆ ಇನ್ನೂ 10,600 ಮನೆಗಳನ್ನು ನಿರ್ಮಿಸಲಾಗುವುದು. ಇದಲ್ಲದೆ ಸಮಗ್ರ ವಸತಿ ಮತ್ತು ಕೊಳೆಗೇರಿ ಅಭಿವೃದ್ಧಿ ಯೋಜನೆಯಡಿ 42 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯದ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಪ್ರಶಸ್ತಿ ನೀಡಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.

ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇರಿದಂತೆ ಪ್ರಸ್ತುತ 4-5 ಇಲಾಖೆ, ಸಂಸ್ಥೆಗಳ ನಡುವೆ ವಸತಿ ಯೋಜನೆಗಳು ಹಂಚಿ ಹೋಗಿವೆ. ಇವೆಲ್ಲವನ್ನೂ ವಸತಿ ಇಲಾಖೆಯಡಿ ತರುವ ಸಂಬಂಧ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ವರದಿ ನೀಡಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂಬುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT