ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ತುಪ್ಪದೂರು ಗ್ರಾಮ

Last Updated 16 ಏಪ್ರಿಲ್ 2011, 8:40 IST
ಅಕ್ಷರ ಗಾತ್ರ

ಮಾನ್ವಿ: ಮಾನ್ವಿ ತಾಲ್ಲೂಕಿನ ಗಣದಿನ್ನಿ ಗ್ರಾಮ ಪಂಚಾಯಿತಿಯ ಪುಟ್ಟ ಗ್ರಾಮ ತುಪ್ಪದೂರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿಲ್ಲ. ಇಂದಿಗೂ ತುಪ್ಪದೂರು ಹಾಗೂ ಪಕ್ಕದ ಬೇವಿನೂರು ಗ್ರಾಮದ ಜನತೆ ಸಂಚಾರಕ್ಕಾಗಿ ಟಂಟಂ ಗಾಡಿ, ಜೀಪುಗಳನ್ನು ಅವಲಂಬಿಸಿದ್ದಾರೆ.

ತುಪ್ಪದೂರು ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಯಂತೂ ಭೀಕರ. ಪ್ರತಿ ಬಾರಿ ಚುನಾವಣೆಗಳು ಬಂದಾಗಲೆಲ್ಲಾ ಗ್ರಾಮಕ್ಕೆ ಭೇಟಿ ನೀಡುವ ರಾಜಕಾರಿಣಿಗಳು ನೀಡುವ ಎಲ್ಲಾ ಭರವಸೆಗಳು ಹುಸಿಯಾಗಿವೆ. ಗ್ರಾಮದಲ್ಲಿನ ಕುಡಿಯುವ ನೀರಿನ ಬವಣೆ ಪರಿಹಾರ ಕಾಣುವ ವಿಶ್ವಾಸವನ್ನು ಇಲ್ಲಿನ ಗ್ರಾಮಸ್ಥರು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ. ಗ್ರಾಮಗಳ ಅಭ್ಯುದಯದ ಸದುದ್ದೇಶದಿಂದ ಪಂಚಾಯಿತಿಗಳಿಗೆ ಪ್ರತಿ ವರ್ಷ ಬಿಡುಗಡೆಯಾದ ಕೋಟ್ಯಾಂತರ ರೂಪಾಯಿ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂಬುದಕ್ಕೆ ತುಪ್ಪದೂರು ಗ್ರಾಮ ಸಾಕ್ಷಿಯಾಗಿದೆ. ಕನಿಷ್ಟ ಪ್ರಗತಿಯನ್ನೂ ಕಾಣದ ಈ ತುಪ್ಪದೂರು ರಾಜ್ಯದಲ್ಲಿಯೇ ಅತಿ ಹಿಂದುಳಿದ ಗ್ರಾಮಗಳಲ್ಲಿ ಒಂದು ಎಂಬುದು ಈ ಗ್ರಾಮದಲ್ಲಿ ಸಂಚರಿಸಿದಾಗ ತಿಳಿದು ಬರುತ್ತದೆ.

ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಹಲವು ದಶಕಗಳಿಂದ ಇದೆ. ಕುಡಿಯಲು ಹಳ್ಳದ ವರ್ತಿ ನೀರೇ ಗತಿ. ಸ್ವಲ್ಪ ಶುದ್ಧ ನೀರು ಬೇಕೆಂದರೆ ಪಕ್ಕದ ಬೇವಿನೂರು ಗ್ರಾಮದಿಂದ ಹೊತ್ತು ತರಬೇಕು. ಬೇಸಿಗೆ ಬಂದಿತೆಂದರೆ ಸಾಕು ಇಲ್ಲಿ ಕುಡಿವ ನೀರಿನ ಸಮಸ್ಯೆ ಮತ್ತಷ್ಟು ಭೀಕರ. ಹಳ್ಳದಲ್ಲಿನ ನೀರು ಕಡಿಮೆಯಾದರೆ ನಿಂತ ನೀರನ್ನೇ ಬಳಸಿಕೊಳ್ಳಲಾಗುತ್ತದೆ. ಕುಡಿಯಲು ವರ್ತಿಯಿಂದ ನೀರು ತುಂಬಿಕೊಳ್ಳುವುದು ಇಲ್ಲಿನ ಮಹಿಳೆಯರ ನಿತ್ಯದ ಕಾಯಕ. ಜಾನುವಾರುಗಳಿಗೂ ಕುಡಿಯುವ ನೀರು ಸಿಗದೆ ತೊಂದರೆ.

ಗ್ರಾಮದಲ್ಲಿ ಮಹಿಳಾ ಶೌಚಾಲಯ ಇಲ್ಲ. ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿಯೇ ಅಂಗನವಾಡಿ ಕೇಂದ್ರದ ನಿರ್ವಹಣೆ ಇದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಇಬ್ಬರು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ತುಪ್ಪದೂರು ಸೇರಿದಂತೆ ಸಮೀಪದ ಗ್ರಾಮಗಳಲ್ಲಿ ಹೆರಿಗೆ ಕೇಂದ್ರ, ಮಕ್ಕಳಿಗೆ, ವೃದ್ಧರಿಗೆ ತುರ್ತು ಚಿಕಿತ್ಸಾ ಸೌಲಭ್ಯ ಇಲ್ಲ. ಚಿಕಿತ್ಸೆಗಾಗಿ ಕಲ್ಲೂರು, ಕಪಗಲ್ ಹಾಗೂ ನೀರಮಾನ್ವಿ ಗ್ರಾಮಗಳಿಗೆ ಹೋಗಬೇಕು.
ಗ್ರಾಮದಿಂದ ಓರ್ವ ಸದಸ್ಯೆ ಗಣದಿನ್ನಿ ಗ್ರಾಮ ಪಂಚಾಯತಿಗೆ ಆಯ್ಕೆಯಾಗಿದ್ದಾಳೆ. ಗ್ರಾಮಕ್ಕೆ ಸೌಲಭ್ಯ, ಅನುದಾನ ಬಿಡುಗಡೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ತಾರಮತ್ಯ ನೀತಿ ಅನುಸರಿಸಲಾಗುತ್ತಿದೆ. ಕಳೆದ ವರ್ಷದ ನೆರೆಹಾವಳಿ ಸಂದರ್ಭದಲ್ಲಿ ಹಳ್ಳಕ್ಕೆ ಅಧಿಕ ಪ್ರಮಾಣದ ನೀರು ಬಂದು ಇಡೀ ಗ್ರಾಮ ಮುಳುಗಿತ್ತು. ಗ್ರಾಮದ ಸ್ಥಳಾಂತರಕ್ಕೆ ಜಮೀನು ಖರೀದಿ, ನಿವೇಶನಗಳ ಹಂಚಿಕೆಯಾಗಿದ್ದರೂ ‘ಆಸರೆ’ ಮನೆಗಳನ್ನು ನಿರ್ಮಿಸಿ ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಲ್ಲಿ ನಿರ್ಲಕ್ಷ್ಯವಹಿಸಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ತುಪ್ಪದೂರು ಗ್ರಾಮದ ಸುಮಾರು 400ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ 10ವರ್ಷಗಳ ಹಿಂದೆ ಆರಂಭವಾದ ಪಿಕಪ್ ಡ್ಯಾಮ್ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ರಾಜ್ಯ ಹೆದ್ದಾರಿಯ ನೀರಮಾನ್ವಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ತುಪ್ಪದೂರು ಗ್ರಾಮದಿಂದ  ಹೋಗುವ ರಸ್ತೆಯಲ್ಲಿನ ಹಳ್ಳಕ್ಕೆ ಸೇತುವೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಗ್ರಾಮಕ್ಕೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆದಷ್ಟು ಬೇಗನೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT