ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೂಳೆ' ಮಾತು

ವಾರದ ವೈದ್ಯ
Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಂಧಿವಾತ ಮತ್ತು ಅದರ ಸಾಮಾನ್ಯ ಪ್ರಕಾರಗಳ ಬಗ್ಗೆ ತಿಳಿಸಿ.
ಸಂಧಿವಾತ  ಎಂದರೆ ಕೀಲುಗಳ  ಉರಿಯೂತ. ಉರಿಯೂತ ಎನ್ನುವುದು  ರೋಗ ಅಥವಾ ಗಾಯಕ್ಕೆ ದೇಹ ನೀಡುವ ಒಂದು ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಬಹಳ ಸಮಯ ಉಳಿಯುವ ಅಥವಾ ಮತ್ತೆ ಮರುಕಳಿಸುವ ಉರಿಯೂತ ಅಂಗಾಂಶ ಹಾನಿಗೂ ಕಾರಣವಾಗಬಹುದು. ಕ್ರೀಡಾಪಟುಗಳು, ನೃತ್ಯಪಟುಗಳು, ಸೈನಿಕರು ಇದಕ್ಕೆ ಹೆಚ್ಚಾಗಿ ಗುರಿಯಾಗುತ್ತಾರೆ. ಮಾನಸಿಕ ಒತ್ತಡದಿಂದ ಬಳಲುವವರನ್ನೂ ಈ ರೋಗ ಬಹಳ ಬೇಗ ಆಕ್ರಮಿಸಿಕೊಳ್ಳಬಹುದು.

ಸಂಧಿವಾತದಲ್ಲಿ ಹಲವಾರು ರೂಪಗಳಿವೆ ಅವುಗಳೆಂದರೆ-
* ಒಸ್ಟಿಯೊ ಸಂಧಿವಾತ ಅಥವಾ ಅಸ್ಥಿ ಸಂಧಿವಾತ: ಮುಖ್ಯವಾಗಿ ಸ್ಥೂಲಕಾಯತೆ, ಸಂಧಿವಾತ ಸಮಸ್ಯೆ ಹೊಂದಿರುವ ಕುಟುಂಬ ಇತಿಹಾಸ ಹಾಗೂ ವಯಸ್ಸಾಗುವಿಕೆ ಇದಕ್ಕೆ ಕಾರಣ. ಹೆಚ್ಚು ಭಾರ ಹೊರುವ ಕೀಲುಗಳು ಸಾಮಾನ್ಯವಾಗಿ ಈ ತೊಂದರೆಗೆ ಒಳಗಾಗುತ್ತವೆ.

* ಕೀಲುಗಳ ಸಂಧಿವಾತ (Rheumatoid Arthritis) ಇದೊಂದು ಸ್ವರಕ್ಷಿತ ದೀರ್ಘಕಾಲೀನ ಕಾಯಿಲೆಯಾಗಿದೆ. ಸಾಮಾನ್ಯವಾಗಿ 30ರಿಂದ 50 ವರ್ಷದ ಒಳಗಿನವರನ್ನು ಇದು ಕಾಡುತ್ತದೆ. ಹೆಚ್ಚಾಗಿ ಮಹಿಳೆಯರನ್ನು ಬಾಧಿಸುವ ಈ ಕಾಯಿಲೆ, ಕೆಲವೊಮ್ಮೆ ಮಕ್ಕಳನ್ನೂ ಕಾಡಬಹುದು.

ಇದೊಂದು ವ್ಯವಸ್ಥಿತ ರೋಗವಾಗಿದ್ದು, ಮೊದಲು ಕೀಲುಗಳ ಒಳಗಿನ ಪದರದಲ್ಲಿ ಊತ ಉಂಟಾಗುತ್ತದೆ. ಇದರಿಂದ ಬಾವು, ನೋವು ಉಂಟಾಗುತ್ತದೆ. ಕಡೆಗಣಿಸಿದಲ್ಲಿ ಗಂಭೀರ ಕೀಲು ಹಾನಿ ಉಂಟಾಗಬಹುದು. ಸಾಮಾನ್ಯವಾಗಿ ಇದು ಮಣಿಕಟ್ಟು, ಬೆರಳು ಮುಂತಾದ ಸಣ್ಣ ಕೀಲುಗಳಲ್ಲಿ ಕಾಣಿಸಿಕೊಳ್ಳುತ್ತದೆ.

* ಕೀಲುಗಳ ಊತ (Gout): ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಮಣಿಕಟ್ಟು, ಮೊಣಕಾಲಿನಂತಹ ಪ್ರಮುಖ ಕೀಲುಗಳನ್ನು ಇದು ಬಾಧಿಸುತ್ತದೆ.

ಕಾರಣ ಮತ್ತು ಲಕ್ಷಣಗಳನ್ನು ತಿಳಿಸಿ.
ಯಾವ ಪ್ರಕಾರದ ಸಂಧಿವಾತಕ್ಕೆ ಏನು ಕಾರಣ ಎಂದು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟ. ಆದಾಗ್ಯೂ ಕೀಲಿನ ಸಂರಕ್ಷಕವಾಗಿ ಕೆಲಸ ಮಾಡುವ `ಕಾರ್ಟಿಲೆಜ್' ಎನ್ನುವ ಮೃದು ಎಲುಬಿನ ಸ್ಥಗಿತಗೊಳ್ಳುವಿಕೆ ಸಂಧಿವಾತಕ್ಕೆ ಕಾರಣವಾಗಬಹುದು. ಈ ಕಾರ್ಟಿಲೆಜ್ ಮುರಿದಾಗ ಅಥವಾ ನಷ್ಟವಾದಾಗ ಮೂಳೆಗಳು ಪರಸ್ಪರ ಉಜ್ಜಿಕೊಳ್ಳುತ್ತವೆ. ಹೀಗಾಗಿ ಕೀಲುಗಳಲ್ಲಿ ನೋವು ಹಾಗೂ ಬಾವು ಕಾಣಿಸಿಕೊಳ್ಳುತ್ತದೆ.

ಸಂಧಿವಾತದ ಪ್ರಮುಖ ಲಕ್ಷಣಗಳು:
* ಕೀಲುಗಳಲ್ಲಿ ನೋವು, ಬಾವು  ಹಾಗೂ ಬಿಗಿತ
* ಮುಟ್ಟಿದರೆ ನೋವಾಗುವುದು
* ಸುಲಭವಾಗಿ ನಡೆದಾಡಲು ಅಥವಾ ಚಲಿಸಲು ಸಾಧ್ಯವಾಗದೇ ಇರುವುದು
* ಕೀಲಿನ ಚರ್ಮದ ಮೇಲಿನ ಬಣ್ಣ ಕೆಂಪಾಗುವುದು
* ಸುಖೋಷ್ಣತೆ

ಅಪಾಯದ ಅಂಶಗಳು ಯಾವವು?
* ಅತಿ ತೂಕ ಅಥವಾ ಸ್ಥೂಲಕಾಯತೆ ಹೊಂದಿರುವ ಜನರು.
* ಹಿಂದೆ ಕೀಲುಗಳಿಗೆ ಗಾಯ ಉಂಟಾದ (ಕ್ರೀಡೆ, ಅಪಘಾತದಂತಹ ಕಾರಣಗಳಿಂದ)ಜನರು.
* ಮೊಣಕಾಲಿನ ಬೆಳವಣಿಗೆಯ ಬಾಗುವಿಕೆ
* ಋತುಬಂಧ ಮಹಿಳೆಯರಲ್ಲಿ ಸಂಧಿವಾತಕ್ಕೆ ಕಾರಣವಾಗಬಹುದು
* ವಯಸ್ಸಾಗುವಿಕೆ
* ನಿರಂತರವಾಗಿ ನಿಂತು ಮಾಡುವ ಕೆಲವು ಪ್ರಕಾರದ ಕೆಲಸಗಳಲ್ಲಿ ತೊಡಗಿಕೊಂಡವರು

ಸಂಧಿವಾತವನ್ನು ತಡೆಯುವುದು ಹೇಗೆ?
ಆರೋಗ್ಯವಾಗಿರುವ ಮೂಲಕ ಸಂಧಿವಾತವನ್ನು ತಡೆಗಟ್ಟಬಹುದಾದ ಕೆಲವು ಮಾರ್ಗಗಳೆಂದರೆ-
* ಸಾಮಾನ್ಯ ತೂಕ ಕಾಯ್ದುಕೊಳ್ಳುವುದು
* ಸ್ನಾಯುಗಳು ಮತ್ತು ಕೀಲುಗಳ ಮೇಲಿನ ಪುನರಾವರ್ತಿತ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು
* ಯಾವುದೇ ದೀರ್ಘಕಾಲಿನ ನೋವನ್ನು ಕಡೆಗಣಿಸದೆ ಇರುವುದು
* ಕ್ರಿಯಾಶೀಲ ಚಟುವಟಿಕೆ ಹಾಗೂ ದೈಹಿಕ ವ್ಯಾಯಾಮ. ವ್ಯಾಯಾಮ ಸ್ನಾಯುಗಳ ಹಾನಿಯನ್ನು ತಡೆದು, ಮೂಳೆಗಳನ್ನು ಬಲಗೊಳಿಸುತ್ತದೆ.

ಶೀಘ್ರ ರೋಗ ಪತ್ತೆ ಹಾಗೂ ಸೂಕ್ತ ಚಿಕಿತ್ಸೆ ಬಗ್ಗೆ ತಿಳಿಸಿ
ಚಿಕಿತ್ಸೆಯು ಸಂಧಿವಾತದ ಪ್ರಕಾರ, ರೋಗಿಯ ವಯಸ್ಸು ಹಾಗೂ ಇತರ ಅಂಶಗಳ ಮೇಲೆ ನಿರ್ಧಾರವಾಗುತ್ತದೆ.

ನಿರಂತರವಾದ ಅಸಾಧಾರಣ ನೋವನ್ನು ಕಡೆಗಣಿಸದೆ ಕೂಡಲೇ ಪರೀಕ್ಷೆಗೆ ಒಳಗಾಗುವುದು ಉತ್ತಮ.

ನೋವು ಶಾಮಕಗಳು ಕೇವಲ ನೋವನ್ನು ಕಡಿಮೆ ಮಾಡಬಹುದೇ ಹೊರತು ಸಮಸ್ಯೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸ್ಟಿರಾಯ್ಡ ಅಲ್ಲದ (Nonsteroidal) ಉರಿಯೂತ ವಿರೋಧಿ ಔಷಧಿಗಳು (NSAIDs)ನೋವು ಹಾಗೂ ಊತ ಎರಡನ್ನೂ ಕಡಿಮೆ ಮಾಡುತ್ತವೆ. ಇಂತಹ ಕೆಲವು ಔಷಧಗಳು ಮುಲಾಮು ಹಾಗೂ ಜಲ್ ರೂಪಗಳಲ್ಲಿಯೂ ಲಭ್ಯ ಇವೆ.

ಶಸ್ತ್ರಚಿಕಿತ್ಸೆ: ಮೇಲೆ ತಿಳಿಸಲಾಗಿರುವ ಸಂರಕ್ಷಕಗಳು ಕೆಲಸ ಮಾಡದೇ ಹೋದಾಗ ಶಸ್ತ್ರಚಿಕಿತ್ಸೆ ಅನಿವಾರ್ಯ. ಸಾಮಾನ್ಯವಾಗಿ ಕಾರ್ಟಿಲೆಜ್ ಸಂರಕ್ಷಣಾ ಶಸ್ತ್ರಚಿಕಿತ್ಸೆ ಹಾಗೂ ಕೀಲುಗಳ ಮರುಜೋಡಣೆ ಎಂಬ ಎರಡು ರೀತಿಯ ಶಸ್ತ್ರಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ.

ಸಂಧಿವಾತ ನೋವನ್ನು ನಿರ್ವಹಿಸುವುದು ಹೇಗೆ?
ನೋವು ಶಮನಕ್ಕೆ ವ್ಯಾಯಾಮ ಅತ್ಯುತ್ತಮ ಮಾರ್ಗ. ಆದರೆ ಸಂಧಿವಾತ ಇರುವವರಿಗಾಗಿಯೇ ನಿರ್ದಿಷ್ಟ ವ್ಯಾಯಾಮಗಳಿರುತ್ತವೆ. ಕೆಲವು ಪ್ರಕಾರದ ವ್ಯಾಯಾಮಗಳು ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಸೂಕ್ತ ವ್ಯಾಯಾಮಗಳ ಬಗ್ಗೆ ವೈದ್ಯರು ಅಥವಾ ಫಿಸಿಯೋಥೆರಪಿ ತಜ್ಞರಿಂದ ತಿಳಿದುಕೊಳ್ಳುವುದು ಬಹಳ ಮುಖ್ಯ.

ಗರ್ಭಾವಸ್ಥೆಯ ಸಂಧಿವಾತ ಚಿಕಿತ್ಸೆ ಮತ್ತು ನಿರ್ವಹಣೆಯ ಬಗ್ಗೆ ತಿಳಿಸಿ
ಗರ್ಭಾವಸ್ಥೆಯಲ್ಲಿ ಮೊಣಕಾಲು ನೋವು ಹಾಗೂ ಸಂಧಿನೋವು ಸಾಮಾನ್ಯ. ಆದರೆ ಸಂಧಿವಾತ ಅಪರೂಪ. ಒಂದು ವೇಳೆ ಬಂದರೆ ಅದನ್ನು ನಿರ್ವಹಿಸುವುದು ಕಠಿಣ. ಏಕೆಂದರೆ ಅವರು ಸಂಧಿವಾತ ಔಷಧಿಗಳನ್ನು ಸಾಮಾನ್ಯರಂತೆ ತೆಗೆದುಕೊಳ್ಳಲು ಆಗುವುದಿಲ್ಲ. ಇಂತಹ ಪ್ರಕರಣಗಳನ್ನು ವೈದ್ಯರು ಅವರವರ ವೈಯಕ್ತಿಕ ವೈದ್ಯಕೀಯ ಇತಿಹಾಸ ಮತ್ತು ಕುಟುಂಬ ಇತಿಹಾಸದ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಾರೆ.

ಸಂಧಿವಾತಕ್ಕೆ ಆಹಾರ ಪಥ್ಯೆ?
ಕ್ಯಾಲ್ಸಿಯಂ ಹಾಗೂ ವಿಟಾಮಿನ್ ಬಿ12, ವಿಟಮಿನ್ ಡಿ ಅಧಿಕ ಇರುವ ಆಹಾರ ಹಾಗೂ ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳುವುದು ಮೂಳೆ ಆರೋಗ್ಯಕ್ಕೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT