ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ: ಡಿವಿಎಸ್ ಪ್ರತಿ ಪಕ್ಷ ನಾಯಕ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಕಟಿಸಿದರು.

ಕಳೆದ ತಿಂಗಳ 17ರಿಂದಲೇ ಜಾರಿಗೆ ಬರುವಂತೆ ಸದಾನಂದಗೌಡ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಕೆ.ಬಿ.ಶಾಣಪ್ಪ ಅವರು ಉಪ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಅವರನ್ನು ಮೇಲ್ಮನೆಯ ಸಭಾ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಡಾ.ಎ.ಎಚ್. ಶಿವಯೋಗಿಸ್ವಾಮಿ ಅವರನ್ನು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಮುಖ್ಯಸಚೇತಕರನ್ನಾಗಿ ನೇಮಿಸಲಾಗಿದೆ.

ಬದಲಿ ವ್ಯವಸ್ಥೆ: ಸಭಾಪತಿ, ಉಪ ಸಭಾಪತಿಗಳ ಅನುಪಸ್ಥಿತಿಯಲ್ಲಿ ಬಸವರಾಜ ಹೊರಟ್ಟಿ, ಕೆ.ಬಿ. ಶಾಣಪ್ಪ, ಕೆ. ಪ್ರತಾಪಚಂದ್ರ ಶೆಟ್ಟಿ ಹಾಗೂ ಡಿ.ಎಸ್. ವೀರಯ್ಯ ಅವರು ಸಭಾಪತಿಗಳ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಶಂಕರಮೂರ್ತಿ ಪ್ರಕಟಿಸಿದರು.

ಪುನರ್‌ರಚನೆ: ಸದನದ ಕಲಾಪ ಸಲಹಾ ಸಮಿತಿಯನ್ನು ಪುನರ್‌ರಚಿಸಲಾಗಿದೆ. ಶಂಕರಮೂರ್ತಿ ಅಧ್ಯಕ್ಷತೆಯ ಸಮಿತಿಯಲ್ಲಿ ಉಪ ಸಭಾಪತಿ ವಿಮಲಾಗೌಡ, ಎಸ್.ಆರ್.ಪಾಟೀಲ, ಡಿ.ವಿ.ಸದಾನಂದಗೌಡ, ಡಿ.ಎಸ್.ವೀರಯ್ಯ, ಎಂ.ಸಿ.ನಾಣಯ್ಯ, ಗಣೇಶ್ ಕಾರ್ಣಿಕ್, ಡಾ.ಎ.ಎಚ್. ಶಿವಯೋಗಿಸ್ವಾಮಿ, ಸರ್ಕಾರಿ ಮುಖ್ಯಸಚೇತಕರು ಇರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಜೆಡಿಎಸ್‌ನ ಬಸವರಾಜ ಹೊರಟ್ಟಿ ವಿಶೇಷ ಆಹ್ವಾನಿತರಾಗಿರುತ್ತಾರೆ.

ಆಸನಗಳ ಬದಲು
ಸರ್ಕಾರ ಬದಲಾಗಿರುವ ಕಾರಣ ಮೇಲ್ಮನೆಯಲ್ಲಿ ಆಸನಗಳ ವ್ಯವಸ್ಥೆ ಅದಲು ಬದಲಾಗಿದೆ. ಐದು ವರ್ಷಗಳಿಂದ ಆಡಳಿತ ಪಕ್ಷದ ಭಾಗದ ಆಸನಗಳಲ್ಲಿ ಕೂರುತಿದ್ದ ಬಿಜೆಪಿ ಸದಸ್ಯರು, ಸೋಮವಾರ ವಿರೋಧ ಪಕ್ಷದ ಕಡೆಯ ಆಸನಗಳಲ್ಲಿ ಕುಳಿತಿದ್ದರು. ಇದುವರೆಗೆ ವಿರೋಧ ಪಕ್ಷದ ಕಡೆಯ ಆಸನಗಳಲ್ಲಿ ಕೂರುತಿದ್ದ ಕಾಂಗ್ರೆಸ್ ಸದಸ್ಯರು ಸೋಮವಾರ ಆಡಳಿತ ಪಕ್ಷದ ಕಡೆಯ ಆಸನಗಳಲ್ಲಿ ಕುಳಿತಿದ್ದರು.

ವಿರೋಧ ಪಕ್ಷದ ಕಡೆಯ ಮೊದಲ ಸಾಲಿನಲ್ಲಿ ಡಿ.ವಿ.ಸದಾನಂದಗೌಡ, ಕೆ.ಬಿ.ಶಾಣಪ್ಪ, ರಾಮಚಂದ್ರಗೌಡ, ಬಿ.ಬಿ.ಶಿವಪ್ಪ ಅವರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್.ಪಾಟೀಲ ವಿರೋಧ ಪಕ್ಷದ ಕಡೆಯ ಮೊದಲ ಸಾಲಿನ ಎರಡನೇ ಆಸನದಲ್ಲಿ ಕೂರುತಿದ್ದರು. ಈಗ ಸಭಾನಾಯಕರಾಗಿದ್ದು, ಆಡಳಿತ ಪಕ್ಷದ ಕಡೆಯ ಮೊದಲ ಸಾಲಿನ ಎರಡನೇ ಆಸನದಲ್ಲಿ ಕೂರುತ್ತಾರೆ.

ಮಿಂಚಿದ ತಾರಾ
ಚಿತ್ರನಟಿಯೂ ಆದ ಮೇಲ್ಮನೆ ಸದಸ್ಯೆ ತಾರಾ ಸೋಮವಾರ ಉಭಯ ಸದನಗಳಲ್ಲಿ ಕೇಂದ್ರ ಬಿಂದುವಾಗಿದ್ದರು. ಸದನ ಆರಂಭವಾಗುವುದಕ್ಕೂ ಮೊದಲೇ ವಿಧಾನಸಭೆಗೆ ಬಂದಿದ್ದ ಅವರು ಶಾಸಕರು, ಸಚಿವರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು.

ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ಮುಕ್ತಾಯವಾದ ನಂತರ ಪರಿಷತ್ ಸದಸ್ಯರು ಮೇಲ್ಮನೆಗೆ ತೆರಳಿದರು. ಕಲಾಪ ಆರಂಭವಾಗುವುದಕ್ಕೂ ಮುಂಚೆ ತಾರಾ ಅವರು ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮರಾಗಳ ಮುಂದೆ ಕಾಣಿಸಿಕೊಂಡರು. ಸ್ವಲ್ಪಹೊತ್ತು ನಾನಾ ಭಂಗಿಯಲ್ಲಿ ಪೋಸು ನೀಡಿದ ನಂತರ ತಮ್ಮ ಆಸನದಲ್ಲಿ ಕುಳಿತುಕೊಂಡರು.

ಪ್ರತಿಧ್ವನಿಸಿದ ಜೈನ.. .ಮೀನು...
ಕಾರ್ಯದರ್ಶಿ ಅವರು ರಾಜ್ಯಪಾಲರ ಭಾಷಣದ ಪ್ರತಿ ಮಂಡಿಸಿದ ನಂತರ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಕಟಣೆಗಳನ್ನು ಓದಿದರು. ಇದಾದ ನಂತರ ಸಭಾಪತಿಗಳ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರನ್ನು ಸದನಕ್ಕೆ ಪರಿಚಯಿಸಿಕೊಟ್ಟರು.

ಸಿದ್ದರಾಮಯ್ಯ ಅವರು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಎದ್ದು ನಿಂತ ವಿರೋಧ ಪಕ್ಷದ ಉಪನಾಯಕ ಕೆ.ಬಿ.ಶಾಣಪ್ಪ, ಜೈನರಿಗೂ ಮೀನುಗಾರರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಇದರಿಂದ ಪ್ರೇರೇಪಿತರಾದ ಗೋ. ಮಧುಸೂದನ್ `ಜೈನುಗಾರಿಕೆ' ಎಂದು ಕರೆಯುವುದೇ ಸೂಕ್ತ ಎಂದರು. `ಮಾನವೀಯ ಸಂಬಂಧಗಳಿವೆ. ಅವೆಲ್ಲ ನಿಮಗೆ ಅರ್ಥವಾಗಲ್ಲ ಬಿಡಿ' ಎನ್ನುವ ಮೂಲಕ ಸಿದ್ದರಾಮಯ್ಯ ಚರ್ಚೆಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT