ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಅಧಿವೇಶನಕ್ಕೆ`ಸುವರ್ಣ ವಿಧಾನ ಸೌಧ' ಸಜ್ಜು

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಯ ನವ ಮನ್ವಂತರಕ್ಕೆ ನಾಂದಿ ಹಾಡುವ ಡಿಸೆಂಬರ್ 5ರಿಂದ 12ರವರೆಗೆ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಯ `ಸುವರ್ಣ ವಿಧಾನ ಸೌಧ'ವು ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.

ಈ ಹಿಂದೆ  2006 ಸೆಪ್ಟೆಂಬರ್ 25ರಿಂದ 29ರವರೆಗೆ ಹಾಗೂ 2009 ಜನವರಿ 16ರಿಂದ 24ರವರೆಗೆ  ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಸಭಾಭವನದಲ್ಲಿ ಚಳಿಗಾಲದ ಅಧಿವೇಶನ ನಡೆದಿತ್ತು. ಪ್ರತಿ ವರ್ಷ ಚಳಿಗಾಲದ ಅಧಿವೇಶನ ನಡೆಸುವ ಸಲುವಾಗಿಯೇ ರೂ 391 ಕೋಟಿ ವೆಚ್ಚದಲ್ಲಿ ಇಲ್ಲಿ ನಿರ್ಮಿಸಿರುವ  `ಸುವರ್ಣ ವಿಧಾನ ಸೌಧ'ದಲ್ಲಿ ಮೊದಲ ಅಧಿವೇಶನ ನಡೆಯುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

ಅಧಿವೇಶನದ ಹಿನ್ನೆಲೆಯಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಅಗತ್ಯ ಕಡತಗಳೊಂದಿಗೆ ಇಲ್ಲಿಗೆ ಈಗಾಗಲೇ ಆಗಮಿಸಿದ್ದು, ತಾತ್ಕಾಲಿಕವಾಗಿ ಕಚೇರಿ  ಆರಂಭಿಸಿದ್ದಾರೆ. ವಿಧಾನ ಸೌಧದ ವಿಶೇಷ ಭದ್ರತಾ ಸಿಬ್ಬಂದಿ ಹಾಗೂ ಮಾರ್ಷಲ್‌ಗಳು ಸೋಮವಾರ ಆಗಮಿಸಿದ್ದು, ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.

ಅಧಿವೇಶನಕ್ಕೆ ಸಜ್ಜಾಗಿರುವ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಜನಪ್ರತಿನಿಧಿಗಳ ಆಸನಗಳನ್ನು ನಿಗದಿಗೊಳಿಸಲಾಗಿದ್ದು, ನಾಮಫಲಕ ಹಾಕುವ ಕೆಲಸ ನಡೆಯುತ್ತಿದೆ. ವಿಧಾನಸಭೆಯ ಅಧಿಕಾರಿಗಳ ಬಳಕೆಗಾಗಿ ಕಂಪ್ಯೂಟರ್ ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿಗಳ ಹಾಗೂ ಸಚಿವರುಗಳ ಹಾಗೂ ವಿವಿಧ ಪಕ್ಷದ ನಾಯಕರ ಕೊಠಡಿಗಳನ್ನು ಸಿದ್ಧಗೊಳಿಸಲಾಗಿದೆ.

ವಿಧಾನಸಭಾಧ್ಯಕ್ಷ ಕೆ.ಜಿ. ಭೋಪಯ್ಯ ಅವರು ಸೋಮವಾರ ವಿಧಾನಸಭೆ ಮತ್ತು ಪರಿಷತ್ ಸಭಾಂಗಣಗಳಿಗೆ ಭೇಟಿ ನೀಡಿ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.

ಭಾರಿ ವ್ಯವಸ್ಥೆ
`ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಕಲಾಪ, ಸಚಿವಾಲಯದ ಕಚೇರಿಗಳು ಹಾಗೂ ಮಾಧ್ಯಮ ಕೇಂದ್ರಗಳಿಗೆ ಅಗತ್ಯ ಇರುವ ಪೀಠೋಪಕರಣ, ಕಂಪ್ಯೂಟರ್‌ಗಳನ್ನು ಅಳವಡಿಸಲಾಗುತ್ತಿದೆ. ದೂರವಾಣಿ, ಇಂಟರ್‌ನೆಟ್, ಫ್ಯಾಕ್ಸ್, ಜೆರಾಕ್ಸ್ ಯಂತ್ರಗಳನ್ನು ಪೂರೈಸಲಾಗುತ್ತಿದೆ. ಸುಮಾರು 300 ಕಂಪ್ಯೂಟರ್‌ಗಳ ನ್ನು ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇಂಟರ್‌ನೆಟ್ ಸೌಲಭ್ಯಕ್ಕಾಗಿ 75 ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆಯಲಾಗಿದೆ. 30ಕ್ಕೂ ಹೆಚ್ಚು ಸ್ಥಿರ ದೂರವಾಣಿಗಳನ್ನು ಅಳವಡಿಸಲಾಗುವುದು' ಎಂದು ಕಚೇರಿಗಳ ನಿರ್ವಹಣೆಯ ಉಸ್ತುವಾರಿ ವಹಿಸಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್. ಹೂಲಿ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ವಾಸ್ತವ್ಯಕ್ಕೆ ಹೋಟೆಲ್, ಹಾಸ್ಟೇಲ್
`ಅಧಿವೇಶನಕ್ಕೆ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲು ಸಮನ್ವಯ (ನೋಡಲ್) ಅಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗುತ್ತಿದೆ. ವಿಧಾನಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ವಾಸ್ತವ್ಯಕ್ಕಾಗಿ ಈಗಾಗಲೇ ಸರ್ಕ್ಯೂಟ್ ಹೌಸ್, ನಗರದ ಪ್ರಮುಖ ಹೋಟೆಲ್, ಹಾಸ್ಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ' ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು ತಿಳಿಸಿದರು.

`ಭದ್ರತೆ ದೃಷ್ಟಿಯಿಂದ ಮತ್ತು ಜನರ ಚಲನವಲನಗಳ ಮೇಲೆ ನಿಗಾ ಇಡಲು ಸುವರ್ಣಸೌಧದ ಆವರಣದಲ್ಲಿ 100 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಾಲ್ಕು ಸಾವಿರ ಪೊಲೀಸ್ ಸಿಬ್ಬಂದಿ, ಕ್ಷಿಪ್ರ ಕಾರ್ಯ ಪಡೆಯ ತುಕಡಿ  ನಿಯೋಜಿಸಲಾಗುತ್ತಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT