ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ನಲ್ಲಿ ಹಾಪ್‌ಕಾಮ್ಸ್ ತರಕಾರಿ ದರ!

Last Updated 21 ಜನವರಿ 2011, 9:50 IST
ಅಕ್ಷರ ಗಾತ್ರ

ಮೈಸೂರು: ತರಕಾರಿ ಮತ್ತು ಹಣ್ಣು ಖರೀದಿ ಮಾಡುವ ಗ್ರಾಹಕರಿಗೆ ಹಿಂದಿನ ದಿನವೇ ಸಂಜೆ 7 ಗಂಟೆಗೆ ತರಕಾರಿ ಮತ್ತು ಹಣ್ಣಿನ ದರವನ್ನು ಎಸ್‌ಎಂಎಸ್ ಮೂಲಕ ಕಳುಹಿಸಲು ಜಿಲ್ಲಾ ಹಾಪ್‌ಕಾಮ್ಸ್ ಚಿಂತನೆ ನಡೆಸಿದೆ.

ಮಾರುಕಟ್ಟೆಯಲ್ಲಿ ಪ್ರತಿ ನಿತ್ಯ ತರಕಾರಿ ಮತ್ತು ಹಣ್ಣಿನ ದರ ಬದಲಾಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಖರೀದಿಗೂ ಮುನ್ನವೇ ಬೆಲೆ ಎಷ್ಟಿದೆ ಎಂಬುದನ್ನು ಗ್ರಾಹಕರಿಗೆ ತಿಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಎಸ್‌ಎಂಎಸ್ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಯೋಜನೆಯ ಸಾಧಕ-ಬಾಧಕಗಳ ಕುರಿತು ಇಲಾಖೆ ಗ್ರಾಹಕರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಹಾಪ್‌ಕಾಮ್ಸ್ ಸೂಚಿಸಿದ ದೂರವಾಣಿ ಸಂಖ್ಯೆಗೆ ಗ್ರಾಹಕರು ಎಸ್‌ಎಂಎಸ್ ಕಳುಹಿಸಿದರೆ, ಪ್ರಮುಖ 30 ತರಕಾರಿ ಮತ್ತು ಹಣ್ಣಿನ ದರಗಳನ್ನು ಮೊಬೈಲ್‌ನಲ್ಲಿ ಪಡೆಯಬಹುದಾಗಿದೆ.

ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಹಾಗೂ ಕೇಂದ್ರ ಸರ್ಕಾರದ ನ್ಯಾಷನಲ್ ಇನ್ಫರ್‌ಮೇಷನ್ ಸೆಂಟರ್ (National Information Centre) ಜೊತೆಗೂಡಿ ಈ ಯೋಜನೆಯನ್ನು ಸಿದ್ಧಪಡಿಸಿದೆ. ಪ್ರತಿ ದಿನ ಹಾಪ್‌ಕಾಮ್ಸ್ ವೆಬ್‌ಸೈಟ್‌ನಲ್ಲಿ ಈಗಾಗಲೇ ತರಕಾರಿ ಮತ್ತು ಹಣ್ಣಿನ ದರಗಳನ್ನು ಇಲಾಖೆ ಸೇರ್ಪಡೆ ಮಾಡುತ್ತಿದೆ ಅದೇ ದರವನ್ನು ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ಕಳುಹಿಸುವ ಉದ್ದೇಶವನ್ನು ಹಾಪ್‌ಕಾಮ್ಸ್ ಹೊಂದಿದೆ.

ಈ ಯೋಜನೆಯಿಂದ ಮಧ್ಯವರ್ತಿಗಳ ಹಿಡಿತದಿಂದ ಉತ್ಪಾದಕರು (ರೈತರು) ಹಾಗೂ ಗ್ರಾಹಕರನ್ನು ಮುಕ್ತಗೊಳಿಸುವುದು ಹಾಗೂ ಉತ್ತಮ ಗುಣಮಟ್ಟದ ತರಕಾರಿ ಹಾಗೂ ಹಣ್ಣುಗಳನ್ನು ಸೂಕ್ತ ದರದಲ್ಲಿ ಗ್ರಾಹಕರಿಗೆ ತಲುಪಿಸುವುದು ಹಾಪ್‌ಕಾಮ್ಸ್ ಉದ್ದೇಶವಾಗಿದೆ.

ಮನೆ ಮನೆಗೆ ತರಕಾರಿ: ಹಾಪ್‌ಕಾಮ್ಸ್ ನಗರದಲ್ಲಿ ಈಗಾಗಲೇ 44 ಮಳಿಗೆಗಳನ್ನು ಹೊಂದಿದ್ದು, ಸಾವಿರಾರು ಗ್ರಾಹಕರನ್ನು ಹೊಂದಿದೆ. ಗ್ರಾಹಕರು ನೇರವಾಗಿ ಹಾಪ್‌ಕಾಮ್ಸ್ ಮಳಿಗೆಗೆ ಬಂದು ಖರೀದಿಸುವ ಬದಲು, ಗ್ರಾಹಕರ ಮನೆಗಳಿಗೇ ತರಕಾರಿ ಹಾಗೂ ಹಣ್ಣುಗಳನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲೂ ಹಾಪ್‌ಕಾಮ್ಸ್ ಯೋಜನೆ ರೂಪಿಸಿದೆ.

ಮುಖ್ಯವಾಗಿ ಅಪಾರ್ಟ್‌ಮೆಂಟ್‌ಗಳನ್ನು ಗುರಿಯಾಗಿಟ್ಟುಕೊಂಡಿರುವ ಇಲಾಖೆ, ಒಂದು ಅಪಾರ್ಟ್‌ಮೆಂಟ್‌ಗೆ ಹೋದರೆ ಕನಿಷ್ಠ 25 ರಿಂದ 30 ಮನೆಗಳಿಗೆ ಹಣ್ಣು ಮತ್ತು ತರಕಾರಿ ವಿತರಿಸಬಹುದು ಎಂದು ಅಂದಾಜಿಸಿದೆ. ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತ ನಂತರ ಈ ಯೋಜನೆಯನ್ನು ಜಾರಿಗೆ ತರಲು ಹಾಪ್‌ಕಾಮ್ಸ್ ನಿರ್ಧರಿಸಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಹಾಪ್‌ಕಾಮ್ಸ್ ಅಧಿಕಾರಿ ರಾಜು, ‘ಅಪಾರ್ಟ್‌ಮೆಂಟ್‌ಗಳಿಗೆ ತರಕಾರಿ ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿ ಯೋಜನೆಗೆ ಅನುಮತಿ ಸಿಗುವ ನಿರೀಕ್ಷೆ ಇದೆ. ಆರಂಭದಲ್ಲಿ ಬಾಡಿಗೆ ವಾಹನ ತೆಗೆದುಕೊಂಡು ತರಕಾರಿ ಮತ್ತು ಹಣ್ಣು ವಿತರಿಸಲಾಗುವುದು. ಯೋಜನೆಯಿಂದ ಉತ್ತಮ ಪ್ರತಿಕ್ರಿಯೆ ಬಂದರೆ, ಮುಂಬರುವ ದಿನಗಳಲ್ಲಿ ಇಲಾಖೆಯಿಂದಲೇ ಸ್ವಂತ ವಾಹನಗಳನ್ನು ಖರೀದಿಸಲಾಗುವುದು’ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT