ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಪ್ರಗತಿ ಪರಿಶೀಲನಾ ಸಭೆಗೆ ಬಹಿಷ್ಕಾರ

Last Updated 11 ಜನವರಿ 2012, 8:15 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಜನಪ್ರತಿನಿಧಿಗಳು ಹಾಗೂ ತ್ಲ್ಲಾಲೂಕು ಪಂಚಾಯ್ತಿ ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಕೊರತೆ ಹೆಚ್ಚಿದ ಪರಿಣಾಮ ಮಂಗಳವಾರ ಇಲ್ಲಿ ಕರೆಯಲಾಗಿದ್ದ ಕೆಡಿಪಿ ಸಭೆ ಬಹಿಷ್ಕಾರಕ್ಕೆ ಒಳಗಾಯಿತು.

ತಾ.ಪಂ. ಆವರಣದಲ್ಲಿರುವ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷೆ ರತ್ನಮ್ಮ ಮಹೇಶ್, `ಸರ್ಕಾರ ಮಂಜೂರು ಮಾಡಿರುವ ಅನುದಾನ ವರ್ಷಾಂತ್ಯ ಸಮೀಪಿಸಿದರೂ ಬಳಕೆಗೆ ಮುಂದಾಗಿಲ್ಲ. ಪರಿಣಾಮ ಅನುದಾನ ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಒ ತಮ್ಮ ಅಧಿಕಾರ ವ್ಯಾಪ್ತಿಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ಎಲ್ಲದಕ್ಕೂ ಜಿ.ಪಂ. ಸಿಇಒ ಅವರ ಕಡೆ ಕೈತೋರಿಸುತ್ತಾರೆ~ ಎಂದು ಆರೋಪಿಸಿದರು.

ಸಭೆಗಳ ಮಾಹಿತಿ ನೀಡುವುದಿಲ್ಲ, ತಾಲ್ಲೂಕಿನ ಯಾವುದೇ ಅಧಿಕಾರಿಗಳು ತಾ.ಪಂ. ಸದಸ್ಯರಿಗೆ ಬೆಲೆ ನೀಡುವುದಿಲ್ಲ, ಅಭಿವೃದ್ಧಿ ಕಾರ್ಯಗಳ ಬಗ್ಗೆ ದಾರಿ ತಪ್ಪಿಸುತ್ತಾರೆ. ಸಹಿ ಬೇಕಾದಲ್ಲಿ ಮಾತ್ರ ಮನೆಗೆ ಬಂದು ಹಾಕಿಸಿಕೊಂಡು ಹೋಗುತ್ತಾರೆ ಎಂದ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕೊಠಡಿಗಳನ್ನು ಅನುಮತಿ ಪಡೆಯದೇ ಹಾಗೂ ಮಾಹಿತಿ ನೀಡದೆ ಗಣತಿ ಕಾರ್ಯಕ್ಕೆ ನೀಡಲಾಗಿದೆ. ಕಚೇರಿ ಕಾರ್ಯಕ್ಕೆ ನಾವು ಬಂದಲ್ಲಿ ಕುಳಿತುಕೊಳ್ಳಲು ಕೊಠಡಿ ಇಲ್ಲ ಎಂದು ದೂರಿದರು.

ಉಪಾಧ್ಯಕ್ಷೆ ಕವಿತಾ ಮಾತನಾಡಿ, ಇಂದು ಕೆಡಿಪಿ ಸಭೆ ನಡೆಯುತ್ತಿರುವ ಬಗ್ಗೆ ನನಗೆ ನೋಟಿಸ್ ಕಳುಹಿಸಿಲ್ಲ. ಮಾಹಿತಿ ನೀಡಿಲ್ಲ, ಹೀಗೆ ಮಾಡಿದರೆ ಸಭೆಯಲ್ಲಿ ಏನು ಚರ್ಚೆ ಮಾಡುವುದು ಎಂದು ಸಭೆ ಬಹಿಷ್ಕರಿಸಿದ್ದೇವೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತರೆಡ್ಡಿ ಮಾತನಾಡಿ, `13ನೇ ಹಣಕಾಸು ಯೋಜನೆ ಬಗ್ಗೆ ಇವರ ಬಳಿ ಮಾಹಿತಿ ಇಲ್ಲ. ಸಿದ್ಧಪಡಿಸಿ ಕಳಿಸಿರುವ ಕ್ರಿಯಾಯೋಜನೆಗಳು ತಿರಸ್ಕೃತವಾಗಿವೆ. ಹೊಸ ಕ್ರಿಯಾಯೋಜನೆ ಮಾಡುವ ಬದಲು ಮತ್ತೆ ಅವುಗಳನ್ನು ಮರು ಸಲ್ಲಿಸಲಾಗುವುದು ಎನ್ನುತ್ತಾರೆ.

ಮಾರ್ಚ್ ತಿಂಗಳ ಒಳಗಾಗಿ ಕಾಮಗಾರಿಗಳು ಮುಗಿಯಬೇಕು. 8 ತಿಂಗಳುಗಳಿಂದ ಬಿಆರ್‌ಜಿಎಫ್ ಅನುದಾನದ ಅಡಿ ಮಳಿಗೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಹ ಹಿಂದೇಟು ಹಾಕಿದ್ದಾರೆ. ಇದಕ್ಕೆ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಬೇರೆ ಸ್ಥಳದಲ್ಲಿ ನಿರ್ಮಿಸಿ ಎಂದು ಹೇಳಿರುವುದು ಒತ್ತು ನೀಡಿದೆ ಎಂದು ಆರೋಪಿಸಿದರು.

ಅನಿರ್ಬಂಧಿತ ಅನುದಾನದಲ್ಲಿ  ಒಂದು ಕೋಟಿ ರೂಪಾಯಿ ಅನುದಾನ ಬಂದಿದ್ದು, ಕಾಮಗಾರಿ ಆರಂಭವಾಗಿಲ್ಲ. ಬಾಕಿ ಒಂದೂವರೆ ತಿಂಗಳ ಒಳಗಾಗಿ ಮುಗಿಸಬೇಕು ಇಲ್ಲವಾದಲ್ಲಿ ಅನುದಾನ ವಾಪಸ್ ಆಗಲಿದೆ ಎಂದರು.

ಕೊಠಡಿಗೆ ಭೇಟಿ ನೀಡಿದ್ದ ಇಒ ಅಂಜನ್‌ಕುಮಾರ್ ಅಭಿವೃದ್ಧಿ ಹೆಸರಿನಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಲು ಬಹಿಷ್ಕಾರ ಮಾಡುತ್ತಿದ್ದೀರಿ ಇದು ಎಷ್ಟರ ಮಟ್ಟಿಗೆ ಸರಿ, ಏನು ಬೇಕಾದರೂ ಮಾಡಿಕೊಳ್ಳಿ. ಜೆಸಿಬಿ ಯಂತ್ರ ತರಿಸಿ ತಾ.ಪಂ. ಕಚೇರಿಯನ್ನು ಕೆಡವಿಸಿ ಎಂದು ಹೇಳಿ ಸಭೆ ಕರೆಯಲಾಗಿದ್ದ ಸಾಮರ್ಥ್ಯಸೌಧಕ್ಕೆ ತೆರಳಿ ಸಭೆಯನ್ನು ಅನಿರ್ಧಿಷ್ಟಾವಧಿ ಮುಂದೂಡಲಾಗಿದೆ ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT