ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೌನ ಬದುಕಿನ ದೊಡ್ಡ ಪಾಠ'

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

`ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಕಿರುತೆರೆಯ ವೀಕ್ಷಕರ ಮನೆಮಾತು ಆದವರಲ್ಲಿ ಅರುಣ್ ಸಾಗರ್ ಪ್ರಮುಖರು. ಬಹುಮುಖ ಪ್ರತಿಭೆಯ ಅರುಣ್ ಅವರೊಂದಿಗಿನ ಕಿರು ಸಂದರ್ಶನ ಇಲ್ಲಿದೆ.

`ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ನೀವೇ ಗೆಲ್ತೀರಾ ಅಂತ ಬಹಳಷ್ಟು ವೀಕ್ಷಕರು ಊಹಿಸಿದ್ದರು...
ಹೊರಗೆ ಬಂದ ಮೇಲೆ ನನಗೆ ಈ ವಿಷಯ ಗೊತ್ತಾಯಿತು. ನಿನ್ನೆ ಮೊನ್ನೆಯಿಂದ ನಾನು ಎಲ್ಲೇ ಹೋಗಲಿ ಜನ ಹಾಗೇ ಕೇಳ್ತಾ ಇದ್ದಾರೆ.

ನಿಮಗೆ ನಿರೀಕ್ಷೆ ಇರಲಿಲ್ಲವೆ?
98 ದಿನಗಳ ಕಾಲ ಹೊರ ಜಗತ್ತಿನ ಯಾವುದೇ ಸಂಪರ್ಕ ಇಲ್ಲದೇ ಇದ್ದವನು ನಾನು. ನನಗೆ ಹ್ಯಾಗೆ ಗೊತ್ತಾಗುತ್ತೆ? ಅಂತಿಮ ಕ್ಷಣದಲ್ಲಿ ನಾನು ಸೋತಿದ್ದೀನಿ ನಿಜ, ಆದರೆ ಜನ ಬಹಳ ಇಷ್ಟಪಟ್ಟಿದ್ದಾರೆ. ವಿಜಯ್ ರಾಘವೇಂದ್ರ ಕೂಡ ಒಳ್ಳೆಯ ಸ್ಪರ್ಧಿ. ಒಳ್ಳೆಯ ಮನುಷ್ಯ. ಆತನಿಂದಾನು ನಾನು ಕಲಿತಿದ್ದೇನೆ.

ಕೂದಲೆಳೆ ಅಂತರದಲ್ಲಿ ಸೋತಿರಬಹುದು. ಜನ ತಪ್ಪು ಆಯ್ಕೆ ಮಾಡಿದರು ಅನಿಸುತ್ತಾ?
ಜನರ ತಪ್ಪು ಏನೂ ಇಲ್ಲ. ವಿಜಯ್ ಆಯ್ಕೆ ಸರಿಯಾಗೇ ಇದೆ.

ಎಸ್‌ಎಂಎಸ್‌ನಲ್ಲಿ ಯಾರ ಪರವಾಗಿ ಎಷ್ಟು ಮತ ಬಿದ್ದವು ಅನ್ನೋದನ್ನ ಬಹಿರಂಗ ಪಡಿಸಿಲ್ಲ  ಅನ್ನೋ ಅನುಮಾನ ಹಲವು ವೀಕ್ಷಕರಲ್ಲಿ ಉಳಿದುಕೊಂಡಿದೆ.
ಎಸ್‌ಎಂಎಸ್ ಬಗ್ಗೆ ಮಾತಾಡೋದು ತಪ್ಪಾಗುತ್ತೆ. ಅದು ಸೂಕ್ಷ್ಮ ವಿಚಾರ. ಕಾರ್ಯಕ್ರಮ ನಿರ್ಮಾಪಕರು ಮಾಡಿರೋದು ಸತ್ಯವಾಗೇ ಇದೆ.

`ಬಿಗ್ ಬಾಸ್' ಮನೆಯೊಳಗಿನ ಇಡೀ ತಂಡವನ್ನು ನಿಭಾಯಿಸ್ತಾ ಇದ್ದಿರಿ. ಹಾಗಾಗಿ ನೀವೇ ಗೆಲ್ಲಬಹುದು ಅನ್ನೋ ನಿರೀಕ್ಷೆ ಇತ್ತು.
ನಾನು ಎಲ್ಲೇ ಇರಲಿ, ಜವಾಬ್ದಾರಿಯಿಂದ ಎಲ್ಲವನ್ನೂ ನಿಭಾಯಿಸಬೇಕು ಅನ್ನೋದನ್ನ ನನ್ನ ತಂದೆ ತಾಯಿ (ಹೋಟೆಲ್ ಸಣ್ಣಯ್ಯ- ಸರಸ್ವತಮ್ಮ), ನನ್ನನ್ನ ಬೆಳೆಸಿದ ಗುರುಗಳು ಹೇಳಿಕೊಟ್ಟಿದ್ದಾರೆ.

ನಾಮಫಲಕಗಳ ಮೇಲಿನ ಅಕ್ಷರ ಬರೆಯುವ ಕಲಾವಿದ ಆಗಿದ್ದೆ. ಆರ್ಕೆಸ್ಟ್ರಾಗಳಲ್ಲಿ ಹಾಡ್ತಿದ್ದೆ. ಸಾಗರದಂತಹ ಪುಟ್ಟ ಊರೇ ನನಗೆ ದೊಡ್ಡ ಜಗತ್ತಾಗಿತ್ತು. ನನ್ನನ್ನ ಪ್ರೀತಿಯಿಂದ ಬೆಳೆಸಿದ ಊರು ಅದು. ಜತೆಗೆ ರಂಗಭೂಮಿ ನನಗೆ ಸಹನೆ, ಸಹಕಾರದ ಮನೋಭಾವ ಕಲಿಸಿಕೊಟ್ಟಿದೆ.

`ಬಿಗ್ ಬಾಸ್' ಮನೆ (ಸೆರೆ)ವಾಸ ನಿಮ್ಮ ಬದುಕಿಗೆ ಏನಾದರೂ ಪಾಠ ಕಲಿಸ್ತಾ?
ನನ್ನ ತಪ್ಪುಗಳ ಅರಿವಾಗಿದೆ. ನಾನೆಷ್ಟು ಸಣ್ಣವನು ಅನ್ನುವುದು, ನನ್ನ ಕೆಲವು ಮಿತಿಗಳು ಗೊತ್ತಾಗಿವೆ. ನನ್ನನ್ನ ನಾನು ಕಂಡುಕೊಳ್ಳೋಕೆ ಅರಿವಿನ ಮನೆ ಆಯಿತು. ರಂಗಾಯಣದ ಕಲಾವಿದನಾಗಿ ನಾನು ಬಿ.ವಿ. ಕಾರಂತರ ಜತೆ ಕೆಲಸ ಮಾಡಿದೋನು. ಜೀವನದ ಯಾವುದೋ ಒಂದು ಸಂದರ್ಭದಲ್ಲಿ ಒಂದು ದೊಡ್ಡ ಮೌನ (ಸೈಲೆನ್ಸ್) ಬೇಕಾಗುತ್ತೆ ಅಂತ ಕಾರಂತರು ಹೇಳ್ತಾ ಇದ್ದರು. ಅದು ನನಗೆ ಇಲ್ಲಿ ದೊರೆಯಿತು.

ಮೂರೂವರೆ ತಿಂಗಳು ಒಂದು ಮನೆಯಲ್ಲಿ ನಿಷ್ಕ್ರಿಯರಾಗಿ ಕಾಲ ಕಳೆಯೋದು ಅಂದರೆ ದುಡ್ಡಿಗಾಗಿ ಹೋಗಿರಬೇಕು ಅನ್ನೋದು ಕೆಲವರ ಅನುಮಾನ.
ಸತ್ಯವಾಗಿ ಹೇಳ್ತೇನೆ. ನನಗೆ ಆಹ್ವಾನ ಬಂದಾಗ ನನ್ನನ್ನ ನಾನೇ ಪರೀಕ್ಷೆ ಮಾಡಿಕೊಳ್ಳೋಕೆ ಒಪ್ಪಿಕೊಂಡೆ. ಇದರಿಂದ ನನಗೆ ದೊಡ್ಡ ವೇದಿಕೆ ಸಿಗ್ತು. ಅದೇ ನನಗೆ ದೊಡ್ಡ ಪಾರಿತೋಷಕ.

ಕೆಲವು ಪ್ರತಿಭಾವಂತರಿಗೆ ಅವಕಾಶಗಳೇ ಇರೋದಿಲ್ಲ. ನಾವೇ ಅಂತಹ ಅವಕಾಶಗಳನ್ನು (ಸ್ಪೇಸ್) ಸೃಷ್ಟಿಸಿಕೊಳ್ಳಬೇಕು. ಸಿನಿಮಾಗಳಲ್ಲಿ ತಮ್ಮ ಅವಕಾಶವನ್ನ ತಾವೇ ಸೃಷ್ಟಿಸಿಕೊಂಡ ಕಾರಣಕ್ಕೆ ನನಗೆ ಸುದೀಪ್, ಉಪೇಂದ್ರ ಬಹಳ ಇಷ್ಟ ಆಗ್ತಾರೆ. ಕಲಾ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದೆ.

ನಟನಾಗೋದಿಕ್ಕೆ ಸುದೀಪ್, ನಾಗಶೇಖರ್ ತಕ್ಕಮಟ್ಟಿಗೆ ಅವಕಾಶ ನೀಡಿದರು. ಇಲ್ಲಿ ಎಲ್ಲದಕ್ಕೂ ನಾವೇ ಒದ್ದಾಡಬೇಕು. ನನ್ನದೇ ಆದ ಅವಕಾಶಗಳನ್ನ ನಾನು ಸೃಷ್ಟಿಸಿಕೊಳ್ಳೋಕೆ `ಬಿಗ್ ಬಾಸ್' ಅವಕಾಶ ಮಾಡಿಕೊಟ್ಟಿದೆ. ಸೋಲು ಗೆಲುವು ಮುಖ್ಯ ಅಲ್ಲ, ಜನರ ಪ್ರೀತಿ ಧಾರಾಳವಾಗಿ ಸಿಕ್ಕಿದೆ.

-ಗುಡಿಹಳ್ಳಿ ನಾಗರಾಜ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT