ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಡಿ ಮೂರ್ತಿ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಹಾತ್ಮಾ ಗಾಂಧಿ ರಸ್ತೆಯ ಜೋಯಾಲುಕ್ಕಾಸ್ ಆಭರಣ ಮಳಿಗೆಯಲ್ಲಿ ದೀಪಾವಳಿಗೆ ಮೊದಲೇ ದೀಪಾವಳಿ ಸಂಭ್ರಮ. ಅಂದು ಬಹುಭಾಷಾ ನಟ `ಮ್ಯಾಡಿ~ ಯಾನೆ ಮಾಧವನ್ ಮಳಿಗೆಗೆ ಬಂದಿದ್ದರು. ಅಚ್ಚ ಕನ್ನಡದ ಪ್ರತಿಭೆ ಚೆಂದುಳ್ಳಿ ಚೆಲುವೆ ರಾಧಿಕಾ ಪಂಡಿತ್ ಸಹ ಅವರ ಜೊತೆಗಿದ್ದರು.

ಮಾಧವನ್ ಅವರು ಜೋಯಾಲುಕ್ಕಾಸ್‌ನ ಬ್ರಾಂಡ್ ರಾಯಭಾರಿ. ಹಿಂದೆಯೂ ಅನೇಕ ಸಲ ಹೊಸ ಆಭರಣ ಸರಣಿ ಅಥವಾ ಹೊಸ ಯೋಜನೆ ಉದ್ಘಾಟನೆಗೆ ಬಂದಿದ್ದರಾದರೂ ಈ ಸಲದ ಉದ್ದೇಶವೇ ಬೇರೆ. ತಮ್ಮದೇ ಆಳೆತ್ತರದ ಮೇಣದ ಪ್ರತಿಮೆ ಅನಾವರಣಕ್ಕೆ ಖುದ್ದಾಗಿ ಹಾಜರಿ ಹಾಕಿದ್ದರು.

ತಮ್ಮದೇ ತದ್ರೂಪಿ ಮೇಣದ ಪ್ರತಿಮೆ ನೋಡಿ ಅವರ ಕಣ್ಣಲ್ಲಿ ಬೆರಗು ಮತ್ತು ಮಿಂಚು. ಅದರ ಪಕ್ಕವೇ ರಾಧಿಕಾ ಜತೆ ನಿಂತು ಪೋಸ್ ನೀಡಿದರು. ಪ್ರತಿಮೆಗೆ ತೊಡಿಸಿದಂತೆ ಕಪ್ಪು ಬಣ್ಣದ ಸೂಟ್ ಧರಿಸಿದ್ದ `ಮ್ಯಾಡಿ~ ಆಟೋಗ್ರಾಫ್‌ಗೆ ಕೈಒಡ್ಡುತ್ತಿದ್ದ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ.
 
ನಂತರ ಎಫ್‌ಎಂ ರೇಡಿಯೋಗಾಗಿ ರಾಧಿಕಾ ಜತೆ ಚಾಟ್ ನಡೆಸಿದರು. `ನನ್ನ ಬದಲು ರಾಧಿಕಾ ಅವರ ಮೇಣದ ಪ್ರತಿಮೆ ಮಾಡಿದ್ದರೆ ಕಡಿಮೆ ಮೇಣ ಸಾಕಾಗುತ್ತಿತ್ತು~ ಎಂದು ಏಳು ಮಲ್ಲಿಗೆ ತೂಕದ ರಾಜಕುಮಾರಿಯಂತೆ ಕಾಣುತ್ತಿದ್ದ ರಾಧಿಕಾರತ್ತ ಕಾಂಪ್ಲಿಮೆಂಟ್ ಎಸೆದರು.

`ಸಾಮಾನ್ಯವಾಗಿ ಆಭರಣದ ಕಂಪೆನಿಗಳು ಮಹಿಳೆಯರನ್ನು ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಪುರುಷನನ್ನು ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡ ಮೊದಲ ಆಭರಣ ಸಂಸ್ಥೆ ಜೋಯಾಲುಕ್ಕಾಸ್. ನಾಲ್ಕು ವರ್ಷಗಳಿಂದ ಈ ಸಂಸ್ಥೆ ಜೊತೆಗಿದ್ದೇನೆ. ಅವರ ಕಾರ್ಯವೈಖರಿ ನೋಡಿದ್ದೇನೆ. ಗ್ರಾಹಕ ಸ್ನೇಹಿ ನೀತಿ, ಸಮರ್ಥ ನಾಯಕತ್ವ ಹಾಗೂ ವೃತ್ತಿಪರತೆ ಈ ಬ್ರಾಂಡ್ ಜನಪ್ರಿಯತೆಗೆ ಕಾರಣ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಚಿತ್ರದಲ್ಲಿ ನಟಿಸುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ, `ಖಂಡಿತ, ಆದರೆ ಮೊದಲು ಕನ್ನಡ ಕಲಿಯುತ್ತೇನೆ. ನನ್ನ ಪಾತ್ರಕ್ಕೆ ಬೇರೆಯವರು ಡಬ್ ಮಾಡುವುದು ಇಷ್ಟವಿಲ್ಲ~ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು.
 
`ಶಾಂತಿ, ಶಾಂತಿ, ಶಾಂತಿ ಎಂಬ ಕನ್ನಡ ಚಿತ್ರದಲ್ಲೇ ನಾನು ಮೊದಲು ಕ್ಯಾಮೆರಾ ಎದುರಿಸಿದ್ದು. ಆಂಧ್ರ, ಕೇರಳದಿಂದಲೂ ಇಂತಹ ಆಫರ್‌ಗಳು ಬಂದಿವೆ. ಅಲ್ಲಿಯೂ ಅಷ್ಟೇ. ತೆಲುಗು, ಮಲಯಾಳಂ ಕಲಿತ ಮೇಲೆಯೇ ಅಭಿನಯಿಸುತ್ತೇನೆ. ಈ ವಿಚಾರದಲ್ಲಿ ನನಗೆ ಕಮಲ ಹಾಸನ್ ಮಾದರಿ. ಯಾವ ಭಾಷೆಯಲ್ಲಿ ನಟಿಸಿದರೂ ಅವರು ತಾವೇ ಧ್ವನಿ ನೀಡುತ್ತಾರೆ~ ಎಂದರು.

`ನಾನು ತೊಡುವ ಎಲ್ಲ ಆಭರಣಗಳು ಜೋಯಾಲುಕ್ಕಾಸ್‌ದ್ದೇ ಆಗಿವೆ. ಇದು ನನ್ನ ಫೇವರೀಟ್ ಬ್ರಾಂಡ್~ ಎಂದು ಕೆಂಪು ಕೆನ್ನೆಯನ್ನು ಮತ್ತಷ್ಟು ಕೆಂಪಗಾಗಿಸಿಕೊಂಡು ಹೇಳಿದರು ರಾಧಿಕಾ ಪಂಡಿತ್.

ಜೋಯಾಲುಕ್ಕಾಸ್ ಮಾಲೀಕ ಜಾಯ್ ಅಲುಕ್ಕಾಸ್, ಕಂಪೆನಿಯ ನಿರ್ದೇಶಕ ಜೋಸ್ ಮತ್ತಿತರು ಹಾಜರಿದ್ದರು. `ಮಾಧವನ್ ಮೇಣದ ಪ್ರತಿಮೆ ಬೆಂಗಳೂರು ಮಳಿಗೆಯಲ್ಲಿ ಶಾಶ್ವತವಾಗಿ ಇರುತ್ತದೆ. ಗ್ರಾಹಕರು ಈ ಪ್ರತಿಮೆ ಜತೆ ಫೋಟೊ ತೆಗೆಸಿಕೊಳ್ಳಬಹುದು~ ಎಂದರು. 

ದೇಶದ ಏಕೈಕ ಮೇಣ ಶಿಲ್ಪಿ
ಮಾಧವನ್ ಮೇಣದ ಪ್ರತಿಮೆ ಮಾಡಿದವರು ಕೇರಳದ ಅಲೆಪ್ಪಿ ಜಿಲ್ಲೆಯ ಖ್ಯಾತ ಮೇಣದ ಶಿಲ್ಪಿ ಸುನೀಲ್ ಖಂಡಲು. ದೇಶದ ಏಕೈಕ ಮೇಣದ ಶಿಲ್ಪಿ ಅವರು. ಲಂಡನ್‌ನ ಮೇಡಂ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಮ್ಯೂಸಿಯಂನಿಂದ ಪ್ರೇರಿತರಾಗಿ ಏಕಲವ್ಯನಂತೆ ತಮಗೆ ತಾವೇ ಗುರುವಾಗಿ ಮೇಣದ ಪ್ರತಿಮೆ ಮಾಡಲು ಕಲಿತವರು. ಕನ್ಯಾಕುಮಾರಿ ಹಾಗೂ ಪುಣೆ ಬಳಿಯ ಲೋಣಾವಳದಲ್ಲಿ ಖಾಸಗಿ ಮ್ಯೂಸಿಯಂ ಹೊಂದಿದ್ದಾರೆ.

ಮಾಧವನ್ ಮೇಣದ ಪ್ರತಿಮೆಗೆ 35 ಕಿಲೊ ಮೇಣ ಖರ್ಚಾಗಿದೆ. ಕ್ರಿಕೆಟಿಗರಾದ ಸಚಿನ್, ಧೋನಿ ಮುಂತಾದವರ ಪ್ರತಿಕೃತಿಯನ್ನ್ನೂ ಸುನೀಲ್ ಸಿದ್ಧಪಡಿಸಿದ್ದಾರೆ. ಅಮಿತಾಬ್ ಬಚ್ಚನ್ ಪ್ರತಿಮೆ ನಿರ್ಮಿಸಲು ಅವರಿಂದ ಅನುಮತಿ ಪತ್ರ ಪಡೆದಿದ್ದಾರೆ. ಪ್ರಸ್ತುತ ಅಣ್ಣಾ ಹಜಾರೆ ಮೇಣದ ಪ್ರತಿಮೆ ನಿರ್ಮಿಸುತ್ತಿದ್ದು, ಪುಣೆಯ ಮ್ಯೂಸಿಯಂನಲ್ಲಿ ಸದ್ಯದಲ್ಲೇ ಅದನ್ನು ಅನಾವರಣ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT