ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಹೂವಿಗೆ ಈಗ ಕಷ್ಟದ ಕಾಲ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಾಲಕ್ಕೆ ತಕ್ಕಂತೆ ಬದಲಾಗದಿದ್ದರೆ ಎಂತಹ ದಿಗ್ಗಜ  ಸಂಸ್ಥೆಗಳೂ ಸ್ಪರ್ಧೆಯಲ್ಲಿ ಹಿಂದುಳಿದು ಬಿಡುತ್ತವೆ ಎನ್ನುವುದಕ್ಕೆ `ಯಾಹೂ~ ಈಗ ಅತ್ಯುತ್ತಮ   ಉದಾಹರಣೆ.

ಸದ್ಯ ಗೂಗಲ್ ಮತ್ತು  ಫೇಸ್‌ಬುಕ್‌ನೊಂದಿಗೆ ಸ್ಪರ್ಧಿಸಲಾಗದೆ  ಯಾಹೂ ಷೇರುಗಳು ನೆಲಕಚ್ಚುತ್ತಿವೆ. ಜೆರ‌್ರಿ ಯಾಂಗ್ ನಂತರ ಯಾಹೂವಿನ `ಸಿಇಒ~ ಆಗಿನೇಮಕಗೊಂಡಿದ್ದ ಕ್ಯಾರೋಲ್ ಬಾಟ್ಜ್ ಕೂಡ ಈ ಸ್ಪರ್ಧೆ ಎದುರಿಸಲಾಗದೆ ತಲೆದಂಡ ತೆತ್ತಿದ್ದಾರೆ. ಯಾಹೂವಿಗೆ ಈಗ  ಕಷ್ಟದ ಕಾಲ..

ಎರಡು ವರ್ಷಗಳ ಹಿಂದೆ ಮೈಕ್ರೊಸಾಫ್ಟ್ `ಯಾಹೂ~ವನ್ನು ಕೊಳ್ಳಲು 47.5 ಶತಕೋಟಿ ಡಾಲರ್ ಮೌಲ್ಯದ ಪ್ರಸ್ತಾಪ ಮುಂದಿಟ್ಟಿತ್ತು.  ಯಾಹೂ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ದಿನಗಳವು.

ಜಾಗತಿಕ ಆರ್ಥಿಕ ಹಿಂಜರಿತದಿಂದ ಕಂಪೆನಿಯು ನೂರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಆದರೆ, ಯಾಹೂವಿನ `ಸಿಇಒ~ ಜೆರ‌್ರಿ ಯಾಂಗ್ ಮೈಕ್ರೊಸಾಫ್ಟ್ ಪ್ರಸ್ತಾಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು.

ಜೆರ‌್ರಿ ನಿಲುವು ಷೇರುದಾರರನ್ನು ತೀವ್ರವಾಗಿ ಕೆರಳಿಸಿತ್ತು. ಈ ಘಟನೆಯ ನಂತರ ಯಾಹೂ ಷೇರುಗಳು ಗಣನೀಯವಾಗಿ ಕುಸಿದಿದ್ದವು. ನಂತರದ ದಿನಗಳಲ್ಲಿ ಜೆರ‌್ರಿ ತಮ್ಮ ಹುದ್ದೆಯನ್ನು ಬದಲಿಸುವ ಇಚ್ಚೆ ವ್ಯಕ್ತ ಪಡಿಸಿದ್ದರು.

ಇದಕ್ಕೆ ಇನ್ನೂ ಎರಡು ಪ್ರಮುಖ ಕಾರಣಗಳಿದ್ದವು. ಚೀನಾದ ಟಿಯಾನ್ಮೆನ್ ಚೌಕದಲ್ಲಿ 1989ರಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ನಿಮಗೆ ನೆನಪಿರಬಹುದು. 2005ರಲ್ಲಿ ಇದರ 15ನೇ ವಾರ್ಷಿಕೋತ್ಸವ.

ಈ ಸಂದರ್ಭದಲ್ಲಿ ಈ  ಕುರಿತು ವರದಿ ಪ್ರಕಟಿಸುವುದನ್ನು ಚೀನಾ ಸರಕಾರ ನಿಷೇಧಿಸಿತ್ತು. ಅಷ್ಟೇ ಅಲ್ಲ ಎಲ್ಲ ಸಂವಹನ ಮಾಧ್ಯಮಗಳ ಮೇಲೂ ನಿಯಂತ್ರಣ ವಿಧಿಸಿತ್ತು. ಚೀನಾದ ಶಿತೊ ಎನ್ನುವ ಪತ್ರಕರ್ತ ಯಾಹೂ ಇಮೇಲ್ ಬಳಸಿಕೊಂಡು ಈ ಚಿತ್ರ -ವರದಿಗಳನ್ನು ರವಾನಿಸಿದ್ದ.
 
ಜೆರ‌್ರಿ ಯಾಂಗ್ ಆತ ಬಳಿಸಿದ್ದ ಐಪಿ ಸಂಖ್ಯೆಯನ್ನು ಚೀನಾ ಪೊಲೀಸರಿಗೆ ಕೊಟ್ಟು ಶಿತೊವಿನ ಬಂಧನಕ್ಕೆ ಕಾರಣನಾಗಿದ್ದ. ನಂತರ ಇದು ಭಾರೀ ಸುದ್ದಿಯಾಗಿ `ಜೆರ‌್ರಿ ಒಬ್ಬ ಚೀನಾ ಪೊಲೀಸ್ ಗೂಢಚರ್ಯ` ಎನ್ನುವ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ಪತ್ರಕರ್ತನನ್ನು ಜೈಲಿಗೆ ಕಳುಹಿಸಿದ ಯಾಹೂ ಕಂಪನಿ ಚೀನಾ ಸರಕಾರದ ಪರ ಕೆಲಸ ಮಾಡುತ್ತಿದೆಯೆಂದು ಅಮೆರಿಕನ್ ಪತ್ರಿಕೆಗಳು ಬರೆದಿದ್ದವು.ಒಂದು ಕಡೆ ಬಂಡವಾಳ ಹೂಡಿಕೆದಾರರ ವಿರೋಧವನ್ನೂ, ಇನ್ನೊಂದು ಕಡೆ ಅಮೆರಿಕ ಸರಕಾರದ ಒತ್ತಡವನ್ನೂ ಜೊತೆಗಿಟ್ಟುಕೊಂಡು ಕೆಲಸ ಮಾಡುವುದು ಕಷ್ಟವಾದ್ದರಿಂದ ಜೆರ‌್ರಿ ತಮ್ಮ ಸಿಇಒ ಹುದ್ಧೆಗೆ ರಾಜೀನಾಮೆ ನೀಡಿದರು.

ಹೀಗೆ ಜೆರ‌್ರಿ ನಂತರ ಯಾಹುವಿಗೆ ಯಾರು ಎನ್ನುವ ಸಂದರ್ಭದಲ್ಲಿ ಬಂದವರೇ ಕ್ಯಾರೋಲ್ ಬಾಟ್ಜ್. ನಾಲ್ಕು ವರ್ಷಗಳ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ `ಯಾಹೂ~ವಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾರೋಲ್ ಬಾಟ್ಜ್  (63) ಅವರನ್ನೂ ನಿರ್ದೇಶಕ ಮಂಡಳಿ ಕಳೆದ ವಾರ ಪದಚ್ಯುತಗೊಳಿಸಿದೆ.

ಸಾಮಾಜಿಕ ಸಂವಹನ ತಾಣಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ `ಯಾಹೂ~ ಇನ್ನೂ ಹಳೆಯ ಜಾಯಮಾನಕ್ಕೇ ಅಂಟಿಕೊಂಡಿದ್ದು, ಮತ್ತು ಆರ್ಥಿಕ ಚೇತರಿಕೆ ಕಾಣದಿರುವುದು ಕ್ಯಾರೋಲ್ ಅವರ ತಲೆದಂಡಕ್ಕೆ ಪ್ರಮುಖ ಕಾರಣ ಎಂಬ ವಿಶ್ಲೇಷಣೆ ಈಗ ನಡೆಯುತ್ತಿದೆ. 
 
ಬಾಟ್ಜ್ ರಾಜೀನಾಮೆ ಸಲ್ಲಿಸಿ ಹೊರನಡೆದ ನಂತರ, ಫಾರ್ಚೂನ್ ನಿಯತಕಾಲಿಕಕ್ಕೆ ಸಂದರ್ಶನ ನೀಡಿ, `ಯಾಹೂ~ವಿನ ವೈಫಲ್ಯಕ್ಕೆ ಕಾರಣಗಳನ್ನೂ, ನಿರ್ದೇಶಕ ಮಂಡಳಿ ವಿರುದ್ಧ ತಮ್ಮ ಅಸಮಾಧಾನವನ್ನೂ ತೋಡಿಕೊಂಡಿದ್ದರು.
 
ಒಬ್ಬರ ನಂತರ ಒಬ್ಬರಂತೆ ಈಗಾಗಲೇ ಯಾಹೂ ವಿನಿಂದ 9 ಜನ ಪ್ರಮುಖರು ಹೊರನಡೆದಿದ್ದಾರೆ. ಅಷ್ಟೇ ಅಲ್ಲ `ಯಾಹೂವಿನಲ್ಲಿ ಶೇ 5ರಷ್ಟು ಪಾಲು ಹೊಂದಿರುವ ಹೂಡಿಕೆ ಸಂಸ್ಥೆಯೊಂದು ಈಗಿನ ಅಧ್ಯಕ್ಷ ರಾಯ್ ಬೊಸ್ಟೋಕ್ ಸೇರಿದಂತೆ  ಇತರ ಮೂವರು ಕಾರ್ಯನಿರ್ವಾಹಕ ನಿರ್ದೇಶಕರೂ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿದೆ.

ಯಾಹೂ ಎಡವಿದ್ದು ಎಲ್ಲಿ?
ಬಾಟ್ಜ್ ಅವರು 2009ರಲ್ಲಿ  ಯಾಹೂ ಸೇರಿದ್ದರು. ಆದರೆ, ಅವರು ಯಾಹೂವಿನ ಉಸ್ತುವಾರಿ ವಹಿಸಿಕೊಂಡ ನಂತರದ ವರ್ಷಗಳಲ್ಲಿ ಯಾಹೂವಿನ ಷೇರು ದರಗಳು ಗಣನೀಯವಾಗಿ ಕುಸಿದಿವೆ. 
 
ಆನ್‌ಲೈನ್ ಜಾಹೀರಾತು ಮತ್ತು ಕಂಟೆಂಟ್ ಮಾರುಕಟ್ಟೆಯಲ್ಲಿ ಯಾಹೂ ಹಿಂದೆ ಬಿದ್ದಿರುವುದು ಮತ್ತು ತನ್ನ ಶೋಧ ವ್ಯವಸ್ಥೆಯನ್ನು ಮೈಕ್ರೊಸಾಫ್ಟ್‌ಗೆ ಹಸ್ತಾಂತರಿಸಿದ್ದು, ಯಾಹೂವಿನ ವೈಫಲ್ಯಕ್ಕೆ ಪ್ರಮುಖ ಕಾರಣ.

ಈ ಪಾಲುದಾರಿಕೆ ಒಪ್ಪಂದದಂತೆ ಮೈಕ್ರೊಸಾಫ್ಟ್ ಯಾಹೂವಿನ ವೆಬ್ ತಾಣಗಳ ಶೋಧ ವ್ಯವಸ್ಥೆಯನ್ನು ನಿರ್ವಹಿಸುತ್ತಿತ್ತು. ಮತ್ತು ಒಟ್ಟು ಜಾಹೀರಾತು ವರಮಾನದ ಸಿಂಹಪಾಲನ್ನು ಪಡೆಯುತ್ತಿತ್ತು.

ಚೀನಾದ ಪಾಲುದಾರ ಸಂಸ್ಥೆ `ಅಲಿಬಾಬಾ~ವನ್ನು ಸಮರ್ಥವಾಗಿ ಕ್ಯಾರೋಲ್ ನಿಭಾಯಿಸಲಿಲ್ಲ ಎನ್ನುವ ಆರೊಪವೂ ಇದೆ.  ಕ್ಯಾರೋಲ್ ಬಾಟ್ಜ್ ಅವರು ಯಾಹೂವಿನ `ಸಿಇಒ~ ಆಗಿ ನೇಮಕಗೊಂಡ ನಂತರ `ಅಲಿಬಾಬ~ ಕಂಪೆನಿ ಜತೆಗಿನ ಸಂಬಂಧ ವಿಷಮಿಸಿದೆ.

ಅಲಿಬಾಬ ಸಮೂಹದ ಸ್ಥಾಪಕ ಜಾಕ್ ಎಂ ಮತ್ತು ಬಾಟ್ಜ್ ನಡುವಿನ ತಿಕ್ಕಾಟ ಕೂಡ ಕಂಪೆನಿಯ ಪ್ರಗತಿ ಮುಳುವಾಯಿತು. ಯಾಹೂವಿಗೆ ತಿಳಿಯದಂತೆ `ಅಲಿಬಾಬ~ ಕಂಪೆನಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎನ್ನುವುದು ಬಾಟ್ಜ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಹಾಗೆ ನೋಡಿದರೆ, ಯಾಹೂ ಈಗಲೂ ಪ್ರಮುಖ ಅಂತರ್ಜಾಲ ಕಂಪೆನಿಗಳಲ್ಲಿ ಒಂದು. ಆದರೆ, ಪ್ರತಿಸ್ಪರ್ಧಿ ಕಂಪೆನಿಗಳಿಂದ ತೀವ್ರತರವಾದ ಪೈಪೋಟಿ ಎದುರಿಸುತ್ತಿದೆ. ಸದ್ಯ ಗೂಗಲ್‌ನ ಮಾರುಕಟ್ಟೆ ಮೌಲ್ಯ 170 ಶತಕೋಟಿ ಡಾಲರ್.
 

ಯಾಹೂವಿನದ್ದು 16 ಶತಕೋಟಿ ಡಾಲರ್. ಅಂದರೆ ಗೂಗಲ್ ಯಾಹೂವಿಗಿಂತಲೂ 10 ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.  ಯಾಹೂವಿನ ಏಷ್ಯಾ ವಲಯದ ಒಟ್ಟು ಮೌಲ್ಯ 7ರಿಂದ 9 ಶತಕೋಟಿ ಡಾಲರ್ ಎಂದು ತಜ್ಞರು ಅಂದಾಜಿಸಿದ್ದಾರೆ. ಸದ್ಯ ಕಂಪೆನಿಯ ಪ್ರತಿ ಷೇರಿನ ಮೌಲ್ಯ 13 ಡಾಲರ್ ಇದೆ.  

ಸದ್ಯ ಫೇಸ್‌ಬುಕ್ ಅಮೆರಿಕದ ಆನ್‌ಲೈನ್ ಜಾಹೀರಾತು ಮಾರುಕಟ್ಟೆಯಲ್ಲಿ ಯಾಹೂವನ್ನು ಹಿಂದಿಕ್ಕಿದೆ. 

ಟಿಮ್ ಹೊಸ ಸಿಇಒ
ಮುಖ್ಯ ಹಣಕಾಸು ಅಧಿಕಾರಿ `ಟಿಮ್ ಮೋರಸ್~ ಅವರನ್ನು ಯಾಹೂವಿನ ಮಧ್ಯಂತರ `ಸಿಇಒ~ ಆಗಿ ನೇಮಕ ಮಾಡಲಾಗಿದೆ.  ಖಾಯಂ `ಸಿಇಒ~ ಒಬ್ಬರ ಹುಡುಕಾಟದಲ್ಲಿದೆ.

ಸ್ವಿಲ್ವರ್‌ಲೇಕ್ ಮಡಿಲಿಗೆ ಯಾಹೂ?
ಈ ನಡುವೆ ಖಾಸಗಿ ಹೂಡಿಕೆ ಸಂಸ್ಥೆ ಸಿಲ್ವರ್‌ಲೇಕ್ ಯಾಹೂವನ್ನು ಖರೀದಿಸಲಿದೆ ಎನ್ನುವ ಹೊಸ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಯಾಹೂ ಖರೀದಿಗೆ ಕಣದಲ್ಲಿರುವ ಸಂಸ್ಥೆಗಳಲ್ಲಿ `ಸಿಲ್ವರ್‌ಲೇಕ್~ ಮುಂಚೂಣಿಯಲ್ಲಿದೆ ಎಂದು ವಾಲ್‌ಸ್ಟ್ರೀಲ್ ಜರ್ನಲ್ ವರದಿ ಮಾಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT