ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ಆಂಟನಿ ವರ್ಸಸ್ ಅಚ್ಚುತಾನಂದನ್!

Last Updated 9 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಎರ್ನಾಕುಳಂ: ಫುಟ್‌ಬಾಲ್ ಪ್ರಿಯರ ಕೇರಳದಲ್ಲಿ ಈಗ ಕ್ರಿಕೆಟ್ ಕೂಡ ಅಷ್ಟೇ ಕೆಚ್ಚು ಹಚ್ಚಿದೆ. ಬಂದರು ನಗರ ಕೊಚ್ಚಿಯಲ್ಲಿ ಶನಿವಾರ ಹಬ್ಬವೋ ಹಬ್ಬ. ಐಪಿಎಲ್ ಕ್ರಿಕೆಟ್‌ನಲ್ಲಿ ಕೊಚ್ಚಿ ತಂಡವು ಚೊಚ್ಚಲ ಪ್ರವೇಶ ಪಡೆದಿರುವುದು ಈ ಸಂಭ್ರಮಕ್ಕೆ ಕಾರಣ. ಇನ್ನೊಂದೆಡೆ ವಿಷು ಹಬ್ಬ ಸಮೀಪಿಸುತ್ತಿದೆ. ಮತ್ತೊಂದೆಡೆ ಚುನಾವಣೆ ಎಂಬ ‘ಮಾರಿ ಹಬ್ಬ’ ಬಂದಿದೆ. ಇವೆಲ್ಲವೂ ಸೇರಿ ಈ ನಾಡಿನಲ್ಲಿ ಈಗ ಗೌಜಿ-ಗದ್ದಲ.

ಕೋಟ್ಯಧಿಪತಿಗಳು!

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಒಟ್ಟು 971 ಅಭ್ಯರ್ಥಿಗಳ ಪೈಕಿ 53ಕ್ಕೂ ಹೆಚ್ಚು ಕೋಟ್ಯಧಿಪತಿಗಳಿದ್ದಾರೆ. 153 ಅಭ್ಥರ್ಥಿಗಳ ವಿರುದ್ಧ ಒಂದಲ್ಲ ಒಂದು ಕ್ರಿಮಿನಲ್ ಪ್ರಕರಣಗಳಿವೆ. ಈ ಪೈಕಿ 30 ಮಂದಿ ವಿರುದ್ಧ ಗಂಭೀರವಾದ ಆರೋಪಗಳಿವೆ.

ಕೊಚ್ಚಿಯ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ತಂಡ ಗೆಲ್ಲುವುದೇ, ಸ್ಥಳೀಯ ಕೊಚ್ಚಿ ತಂಡ ಕರಾಮತ್ತು ತೋರಿಸುವುದೇ ಎಂಬ ಕುತೂಹಲದಂತೆಯೇ ಈ ರಾಜ್ಯವನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆ ಎಲ್‌ಡಿಎಫ್ ಮರಳಿ ಅಧಿಕಾರಕ್ಕೆ ಬರುವುದೇ ಅಥವಾ ಯುಡಿಎಫ್ ಅಧಿಕಾರಕ್ಕೆ ಮರಳುವುದೇ? ವಿ.ಎಸ್. ಅಚ್ಚುತಾನಂದನ್ ಮತ್ತೆ ಮುಖ್ಯಮಂತ್ರಿ ಆಗುತ್ತಾರೆಯೇ ಅಥವಾ ಪ್ರತಿಪಕ್ಷ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ರಮೇಶ್ ಚೆನ್ನಿತ್ತಲ ಅವರಿಗೆ ಅವಕಾಶ ಸಿಗುವುದೇ? ಎಂಬುದು.

ಯುಡಿಎಫ್ ನಾಯಕತ್ವದ ಬಗ್ಗೆ ಇನ್ನೂ ನಿರ್ಧಾರ ಆಗದೇ ಇದ್ದರೂ ಕೂಡ ಇಲ್ಲಿ ಚುನಾವಣೆಯಲ್ಲಿ ಯುಡಿಎಫ್‌ನ ನೇತೃತ್ವ ವಹಿಸಿರುವುದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಎ.ಕೆ. ಆಂಟನಿ ಅವರು. ಹೀಗಾಗಿ ಇಲ್ಲಿ ನೇರ ಯುದ್ಧ ನಡೆಯುತ್ತಿರುವುದೂ ಅಚ್ಚುತಾನಂದನ್ ಮತ್ತು ಆಂಟನಿ ನಡುವೆ. ಇವರಿಬ್ಬರ ನಡುವೆ ವಾಗ್ಯುದ್ಧವೂ ಬಿರುಸಾಗಿ ನಡೆಯುತ್ತಿದೆ. ತೆರೆಮರೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರು ಉಭಯ ಒಕ್ಕೂಟಗಳಲ್ಲಿ ಇದ್ದರೂ, ಚುನಾವಣೆಯಲ್ಲಿ ನೇರ ಗುರಿ ಇರುವುದು ಆಂಟನಿ ಮತ್ತು ಅಚ್ಚುತಾನಂದನ್ ಅವರ ನಡುವೆ ಎಂಬುದು ನಿಚ್ಚಳ.  ಸರಣಿ ವಿವಾದಗಳು  ಹಾಗೂ ಆರೋಪ-ಪ್ರತ್ಯಾರೋಪಗಳ ಬಳಿಕ ಈಗ ರಾಜ್ಯದ ಅಭಿವೃದ್ಧಿ ವಿಚಾರ ಪ್ರಧಾನ ಅಸ್ತ್ರವಾಗಿದೆ. ಸಾಧನೆಗಳ ವಕ್ತಾರರಾಗಿ ಉಭಯ ಬಣಗಳ ನಾಯಕರು ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ.

ನಾಯಕರ ದಂಡು: ಕೇರಳದ ಅಭಿವೃದ್ಧಿಯಲ್ಲಿ ತಮ್ಮ ಪಾಲು ಎಷ್ಟು ಎಂಬುದನ್ನು ಸಾರಿ ಹೇಳಲು ಶನಿವಾರ ಸ್ವತ: ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೇ ಬಂದರು. ಕಾಂಗ್ರೆಸ್ಸಿನ ಯುವ ನಾಯಕ ರಾಹುಲ್ ಗಾಂಧಿ ಅವರೂ ಯುವಕರಲ್ಲಿ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದಾರೆ. ಸಿಪಿಎಂ ನಾಯಕರಾದ ಪ್ರಕಾಶ್ ಕಾರಟ್ ಮತ್ತು ವೃಂದಾ ಕಾರಟ್ ಅವರು ಗ್ರಾಮೀಣ ಭಾಗಗಳಲ್ಲಿ ಹಾಗೂ ಕಾರ್ಮಿಕ ವರ್ಗಗಳಲ್ಲಿ ಸಂಚಲನ ಉಂಟು ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇ ಗೌಡ ಅವರೂ ಎಡರಂಗದ ಬೆಂಬಲಕ್ಕೆ ಬಂದಿದ್ದಾರೆ.

ಇನ್ನೊಂದೆಡೆ ಉಭಯ ಒಕ್ಕೂಟಗಳ ವಿರುದ್ಧ ಸಮರ ಸಾರುತ್ತ ಬಿಜೆಪಿ ಇಲ್ಲಿ ನೆಲೆಯೂರಲು ತೀವ್ರ ಕಸರತ್ತು ನಡೆಸತೊಡಗಿದೆ. ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಶನಿವಾರ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ರಾಜನಾಥ ಸಿಂಗ್ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಪ್ರಚಾರ ಜೋರು: ಮಧ್ಯ ಕೇರಳದ ಪಾಲಕ್ಕಾಡ್, ತ್ರಿಚೂರು, ಎರ್ನಾಕುಳಂ ಜಿಲ್ಲೆಗಳ ಜೊತೆಗೆ ಮಲೆನಾಡು, ತೋಟಗಾರಿಕಾ ಬೆಳೆಗಳ ಪ್ರದೇಶವಾದ ಆಲಪ್ಪುಳ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ ಜಿಲ್ಲೆಗಳಲ್ಲಿ ನಾಯಕರ ದಂಡು ಮಿಂಚಿನ ಸಂಚಾರ ನಡೆಸುತ್ತಿದೆ.

ಚುನಾವಣಾ ಪ್ರಚಾರವೂ ಜೋರಾಗಿದೆ. ಚುನಾವಣಾ ಆಯೋಗದ ನಿಯಂತ್ರಣಗಳ ನಡುವೆಯೂ ಅಲ್ಲಲ್ಲಿ ಸಣ್ಣಪುಟ್ಟ ಸಭೆಗಳು, ಬಾವುಟಗಳು, ಘೋಷಣೆಗಳು ಮೊಳಗುತ್ತಿವೆ. ನಾಯಕರ ಮೈನವಿರೇಳಿಸುವ  ಭಾಷಣಗಳಿಗೆ ಜನರು ತುಡಿಯುತ್ತಿದ್ದಾರೆ, ಸ್ಪಂದಿಸುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಇದ್ದ ಅಬ್ಬರ, ಭರಾಟೆ ಈಗ ಇಲ್ಲವಾದರೂ ಕರ್ನಾಟಕಕ್ಕೆ ಹೋಲಿಸಿದಲ್ಲಿ ಪ್ರಚಾರದ ವೈಖರಿ ಜೋರಾಗಿಯೇ ಸಾಗಿದೆ. ಮೀನುಗಾರರಂತೆ ತೋಟ ಕಾರ್ಮಿಕರ ರೋಷವೂ ಅಲ್ಲಲ್ಲಿ ಸ್ಫೋಟಿಸುತ್ತಿರುವುದು ಕಂಡುಬಂದಿದೆ.

ಗಮನ ಸೆಳೆದ ಮಲಪ್ಪುಳ: ಸಿಪಿಎಂನಲ್ಲಿ ಕೆಲವೊಂದು ನಾಟಕೀಯ ಬೆಳವಣಿಗೆಗಳ ಬಳಿಕ ಮುಖ್ಯಮಂತ್ರಿ ವಿ.ಎಸ್.ಅಚ್ಚತಾನಂದನ್ ಅವರಿಗೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಈ ಅವಕಾಶ ಸಿಕ್ಕಿದ್ದೇ ತಡ ಅವರ ಸ್ವಕ್ಷೇತ್ರ ಪಾಲಕ್ಕಾಡ್ ಜಿಲ್ಲೆಯ ಮಲಪ್ಪುಳ ಗಮನ ಸೆಳೆಯುವ ಕ್ಷೇತ್ರವಾಗಿ ಮಾರ್ಪಟ್ಟಿತು. 2001ರಿಂದ 2011ರ ವರೆಗೆ ವಿ.ಎಸ್. ದಶಕ. 2006 ರಲ್ಲಿ ಇಲ್ಲಿಂದ ಎರಡನೇ ಬಾರಿಗೆ ಗೆದ್ದ ಅವರು ಮುಖ್ಯಮಂತ್ರಿಯೂ ಆದರು. ತಮ್ಮ ಸರಳ, ನೇರ ನಡೆ-ನುಡಿಯಿಂದ ಜನಮನ ಗೆದ್ದರು. ಆದರೆ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲೂ ಎಲ್‌ಡಿಎಫ್ ಹಿನ್ನಡೆ ಕಂಡಿತು. ಅದೇ ಯುಡಿಎಫ್‌ಗೆ ಸ್ಫೂರ್ತಿಯಾಗಿದೆ.

ಕೇರಳದ ಪ್ರತಿಪಕ್ಷ ನಾಯಕ ಉಮ್ಮನ್ ಚಾಂಡಿ ವಿರುದ್ಧ ಎಲ್‌ಡಿಎಫ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ ತಂತ್ರಕ್ಕೆ ಪ್ರತಿತಂತ್ರವಾಗಿ ಅಚ್ಚುತಾನಂದನ್ ವಿರುದ್ಧ ಅಭ್ಯರ್ಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತೆಯಾದ ಲತಿಕಾ ಸುಭಾಷ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿತು. ಲತಿಕಾ ‘ಪ್ರಸಿದ್ಧಿ’ ಬಗ್ಗೆ ಅಚ್ಚುತಾನಂದನ್ ಹೇಳಿದ ಮಾತು ವಿವಾದವಾಗಿ ಈಗ ಕೋರ್ಟ್ ಕಟ್ಟೆ ಏರಿದೆ. ಎನ್‌ಡಿಎ ಅಂಗ ಪಕ್ಷವಾದ ಜನತಾದಳ (ಯು) ರಾಜ್ಯ ಉಪಾಧ್ಯಕ್ಷ ಪಿ.ಕೆ.ಮಜೀದ್ ಅವರನ್ನು ಇಲ್ಲಿ ಬಿಜೆಪಿ ಬೆಂಬಲಿಸುತ್ತಿದೆ.

ಪುದುಪ್ಪಳ್ಳಿ: ಕೊಟ್ಟಾಯಂ ಜಿಲ್ಲೆಯ ಪುದುಪ್ಪಳ್ಳಿ ಕ್ಷೇತ್ರದಿಂದ ಹತ್ತನೇ ಬಾರಿಗೆ ಸ್ಪರ್ಧಿಸುತ್ತಿರುವ ಉಮ್ಮನ್ ಚಾಂಡಿ 2004 ರಿಂದ 2006 ವರೆಗೆ ಮುಖ್ಯಮಂತ್ರಿಯೂ ಆದರು. ಎ.ಕೆ.ಆಂಟನಿ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿಯಾದ ಚಾಂಡಿ ಈಗ ಪ್ರತಿಪಕ್ಷ ನಾಯಕ. ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗಮನ ಸೆಳೆದಿದ್ದಾರೆ. ಅವರ ಪ್ರತಿಸ್ಫರ್ಧಿ ಕವಯಿತ್ರಿ ಹಾಗೂ ಕಾಲೇಜು ಪ್ರಾಧ್ಯಾಪಕಿಯಾಗಿರುವ ಸೂಜಾ ಸೂಸನ್ ಜಾರ್ಜ್ ಸಿಪಿಎಂ ಅಭ್ಯರ್ಥಿ. ಪಿ.ಸುನಿಲ್   ಕುಮಾರ್ ಬಿಜೆಪಿ ಅಭ್ಯರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT