ಅದೊಂದು ಸುಂದರ ಸಂಜೆ. ಅಲ್ಲಿ ಯುವಕ, ಯುವತಿಯರ ಹಿಂಡು ಫ್ಯೂಷನ್ ಸಂಗೀತಕ್ಕೆ ತಲೆದೂಗುತ್ತಿತ್ತು, ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಿತ್ತು.
ಇದು ಸ್ನೇಹಿತರ ಸಂತೋಷ ಕೂಟವಲ್ಲ, ಬದಲಿಗೆ ಆರು ಸಮಾನ ಮನೋಭಾವ, ವಯಸ್ಸಿನ ಯುವಕರು ಸೇರಿ ನೆಟ್ಟಕಲ್ಲಪ್ಪ ವೃತ್ತದ ಸಮೀಪ ಆರಂಭಿಸಿದ `ಎಫ್ 5~ ಕೆಫೆ ರೆಸ್ಟೋರೆಂಟ್‌ನ ಉದ್ಘಾಟನೆ ಸಂದರ್ಭ.
ನಿಖಿಲ್, ಸಂತೋಷ್, ವಿನಯ್, ಸುಕೀರ್ತ್, ಸಂಕಲ್ಪ್ ಹಾಗೂ ಮನೀಷ್ ಸೇರಿ ಯುವಜನತೆಯನ್ನು ಗುರಿಯಾಗಿಸಿಕೊಂಡು ಈ ರೆಸ್ಟೋರೆಂಟ್ ಆರಂಭಿಸಿದ್ದಾರೆ. ವಿಶೇಷ ಎಂದರೆ ಇವರೆಲ್ಲ ವಿವಿಧ ವಿಷಯದಲ್ಲಿ ಪದವೀಧರರು, ಬೇರೆ ಬೇರೆ ವೃತ್ತಿಗಳನ್ನು ಮಾಡುತ್ತಿದ್ದಾರೆ.
`ಸುತ್ತಮುತ್ತ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳು, ಯುವಕರು ಸ್ನೇಹಿತರೊಂದಿಗೆ ಬಿಡುವಿನ ಸಮಯದಲ್ಲಿ ಕಾಲ ಕಳೆಯಲು ಸೂಕ್ತ ಸ್ಥಳದ ಕೊರತೆ ಇತ್ತು.
ಅದನ್ನು ತುಂಬುವ ಜತೆಗೆ ಆಹಾರ ಪದಾರ್ಥಗಳಿಗೆ ಬೇರೆ ರೆಸ್ಟೋರೆಂಟ್‌ಗಳಿಗಿಂತ ಕಡಿಮೆ ಬೆಲೆ ನಿಗದಿ ಮಾಡಿದ್ದೇವೆ. ಎಫ್ 5 ಅಂದರೆ ಫ್ರೆಂಡ್ಸ್ ಹಾಗೂ ಕಂಪ್ಯೂಟರ್ ಕೀ ಬೋರ್ಡಿನ ಸಂಖ್ಯೆಯ ಗುರುತು. ರಿಫ್ರೆಶ್ ಎಂಬ ಅರ್ಥವನ್ನು ಒಳಗೊಂಡಿದೆ~ ಎನ್ನುತ್ತಾರೆ ನಿಖಿಲ್.
ನಾಲ್ಕನೇ ಮಹಡಿ ಮೇಲಿರುವ ಈ ರೆಸ್ಟೋರೆಂಟ್ ಪಕ್ಕಾ ಸಸ್ಯಾಹಾರಿ. ಇಟಾಲಿಯನ್, ಮೆಕ್ಸಿಕನ್ ಹಾಗೂ ಚೈನೀಸ್ ಆಹಾರಗಳು ಜೊತೆಗೆ ಐಸ್‌ಕ್ರೀಂ, ತಂಪುಪಾನೀಯ ಲಭ್ಯವಿದೆ. ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಪಂದ್ಯ ವೀಕ್ಷಣೆಗಾಗಿ ಬೃಹತ್ ವಿಡಿಯೋ ಸ್ಕ್ರೀನ್ ಅಳವಡಿಸಲಾಗಿದೆ. ಒಳಗೋಡೆಯ ಮೇಲೆ ಜಲವರ್ಣ ಚಿತ್ರಗಳನ್ನು ಬಿಡಿಸಲಾಗಿದೆ. ತಿಂಡಿ ತಿನಿಸಿನಲ್ಲೂ ವೈವಿಧ್ಯವಿದೆ.