ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಿ ಭಯದಲ್ಲಿ ವಿಂಡೀಸ್‌

ಕ್ರಿಕೆಟ್‌: ಇಂದು ಎರಡನೇ ಏಕದಿನ ಪಂದ್ಯ; ಗೆಲುವಿನ ಓಟ ಮುಂದುವರಿಸುವ ತವಕದಲ್ಲಿ ಭಾರತ ‘ಎ’ ತಂಡ
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಪಂದ್ಯದಲ್ಲಿ ದೊರೆತ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಭಾರತ ‘ಎ’ ತಂಡ ಮಂಗಳವಾರ ಇಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ‘ಎ’ ತಂಡದ ಸವಾಲನ್ನು ಎದುರಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಸಹಜವಾಗಿ ಎಲ್ಲರ ಗಮನ ನೆಟ್ಟಿರುವುದು ನಾಯಕ ಯುವರಾಜ್‌ ಸಿಂಗ್‌ ಮೇಲೆ. ಭಾನುವಾರ ನಡೆದ ಪಂದ್ಯದಲ್ಲಿ ಯುವರಾಜ್‌  ಕೇವಲ 89 ಎಸೆತಗಳಲ್ಲಿ 123 ರನ್‌ ಸಿಡಿಸಿದ್ದರು. ಅವರ ಬ್ಯಾಟಿಂಗ್‌ ಬಲದಿಂದ ತಂಡ 77 ರನ್‌ಗಳ ಜಯ ಪಡೆದಿತ್ತು.

ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸಿ ಸರಣಿ ಗೆಲುವಿನ ಮುನ್ನಡೆ ಪಡೆಯುವುದು ಭಾರತದ ಲೆಕ್ಕಾಚಾರ. ರಾಷ್ಟ್ರೀಯ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವ ಪ್ರಯತ್ನದಲ್ಲಿರುವ ‘ಯುವಿ’ ಮತ್ತೊಂದು ಸೊಗಸಾದ ಇನಿಂಗ್ಸ್‌ ಕಟ್ಟುವ ವಿಶ್ವಾಸ ಹೊಂದಿದ್ದಾರೆ.

ಆದ್ದರಿಂದ ಕೀರನ್‌ ಪೊವೆಲ್‌ ನೇತೃತ್ವದ ಪ್ರವಾಸಿ ತಂಡ ‘ಯುವಿ’ ಭಯದಲ್ಲೇ ಕಣಕ್ಕಿಳಿಯಲಿದೆ. ಪಂಜಾಬ್‌ನ ಈ ಎಡಗೈ ಬ್ಯಾಟ್ಸ್‌ಮನ್‌ನ ಅಬ್ಬರಕ್ಕೆ ಕಡಿವಾಣ ತೊಡಿಸುವುದು ಹೇಗೆ ಎಂಬ ಚಿಂತೆ ವಿಂಡೀಸ್‌ ತಂಡವನ್ನು ಕಾಡುತ್ತಿದೆ. ಅದೇ ರೀತಿ ಯೂಸುಫ್‌ ಪಠಾಣ್‌ ಕೂಡಾ ಎದುರಾಳಿ ಬೌಲರ್‌ಗಳ ಎದೆಯಲ್ಲಿ ಭಯ ಮೂಡಿಸಿದ್ದಾರೆ. ಯುವರಾಜ್‌ ಮತ್ತು ಯೂಸುಫ್‌ ಭಾನುವಾರ ನಡೆದ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಆರಂಭಿಕ ಆಟಗಾರ ಕರ್ನಾಟದ ರಾಬಿನ್‌ ಉತ್ತಪ್ಪ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸುವರೇ ಎಂಬ ಕುತೂಹಲ   ಉದ್ಯಾನನಗರಿಯ ಕ್ರಿಕೆಟ್‌ ಪ್ರೇಮಿಗಳಲ್ಲಿದೆ. ರಾಬಿನ್‌ ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಎಡವಿದ್ದರು. ಆದ್ದರಿಂದ ಎಚ್ಚರಿಕೆಯ ಆಟವಾಡಿ ಕ್ರೀಸ್‌ ಬಳಿ ಹೆಚ್ಚುಹೊತ್ತು ನಿಲ್ಲುವ ಪ್ರಯತ್ನವನ್ನು ಕೊಡಗಿನ ಬ್ಯಾಟ್ಸ್‌ಮನ್‌ ಮಾಡುವುದು ಖಚಿತ.

ನ್ಯೂಜಿಲೆಂಡ್‌ ‘ಎ’ ತಂಡದ ವಿರುದ್ಧ ಇತ್ತೀಚೆಗೆ ನಡೆದ ಏಕದಿನ ಸರಣಿಯ ಒಂದು ಪಂದ್ಯದಲ್ಲಿ ರಾಬಿನ್‌ ಶತಕ ಗಳಿಸಿದ್ದರು. ಅದೇ ಫಾರ್ಮ್‌ಅನ್ನು ಇಲ್ಲೂ ಮುಂದುವರಿಸುವ ಲೆಕ್ಕಾಚಾರ ಅವರದ್ದು. ಯುವ ಆಟಗಾರ ಉನ್ಮುಕ್ತ್‌ ಚಾಂದ್‌ ಅವರೂ ಮೊದಲ ಪಂದ್ಯದಲ್ಲಿ ಉಂಟಾದ ನಿರಾಸೆಯಿಂದ ಹೊರಬರುವ ವಿಶ್ವಾಸದಲ್ಲಿದ್ದಾರೆ.

ಈ ಪಂದ್ಯದಲ್ಲೂ ಭಾರತವೇ ಗೆಲ್ಲುವ ನೆಚ್ಚಿನ ತಂಡ ಹೌದು. ಆದರೆ, ವೆಸ್ಟ್‌ ಇಂಡೀಸ್‌ ತಂಡವನ್ನು ಸುಲಭವಾಗಿ ಕಡೆಗಣಿಸುವಂತಿಲ್ಲ. ಮೊದಲ ಪಂದ್ಯದಲ್ಲಿ ಈ ತಂಡ ಬೌಲಿಂಗ್‌ ಮಾತ್ರವಲ್ಲ, ಬ್ಯಾಟಿಂಗ್‌ನಲ್ಲೂ ನೀರಸ ಪ್ರದರ್ಶನ ನೀಡಿತ್ತು. ಸರಣಿ ಗೆಲುವಿನ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಇಂದು ಗೆಲುವು ಪಡೆಯುವುದು ಅಗತ್ಯ. ಆದ್ದರಿಂದ ಕೀರನ್‌ ಪೊವೆಲ್‌ ನೇತೃತ್ವದ ತಂಡ ಒತ್ತಡದಲ್ಲೇ ಆಡಲಿದೆ.

ಪ್ರವಾಸಿ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಆಟವನ್ನು ನಿರೀಕ್ಷಿಸುತ್ತಿದೆ. ಪೊವೆಲ್‌ ಅಲ್ಲದೆ ಬಾನೆರ್‌ ಮತ್ತು ಕರ್ಕ್‌ ಎಡ್ವರ್ಡ್ಸ್‌ ಈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು. ಆದರೆ ಮೊದಲ ಪಂದ್ಯದಲ್ಲಿ ಇವರಲ್ಲಿ ಯಾರೂ 20 ರನ್‌ಗಳ ಗಡಿ ದಾಟಿರಲಿಲ್ಲ. ತಲಾ 57 ರನ್‌ ಗಳಿಸಿದ್ದ ನರಸಿಂಗ ದೇವ್‌ ನಾರಾಯಣ್‌ ಮತ್ತು ಆಶ್ಲೆ ನರ್ಸ್‌ ಮಾತ್ರ ಭಾರತದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದರು.

ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸದಿದ್ದರೆ ವಿಂಡೀಸ್‌ಗೆ ಗೆಲುವಿನ ಕನಸು ಕಾಣಬಹುದು. ಆದರೆ ಸಮರ್ಥ ಬೌಲರ್‌ಗಳು ಹಾಗೂ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಭಾರತ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ ಎಂಬ ಸತ್ಯವನ್ನು ವಿಂಡೀಸ್‌ ಆಟಗಾರರು ಅರಿತುಕೊಂಡಿದ್ದಾರೆ.

ತಂಡಗಳು ಇಂತಿವೆ
ಭಾರತ ‘ಎ’:
ಯುವರಾಜ್‌ ಸಿಂಗ್‌ (ನಾಯಕ), ಉನ್ಮುಕ್ತ್‌ ಚಾಂದ್‌, ರಾಬಿನ್‌ ಉತ್ತಪ್ಪ, ಬಾಬಾ ಅಪರಾಜಿತ್‌, ಕೇದಾರ್‌ ಜಾಧವ್‌, ನಮನ್‌ ಓಜಾ, ಯೂಸುಫ್‌ ಪಠಾಣ್‌, ಆರ್‌. ವಿನಯ್‌ ಕುಮಾರ್‌, ಜಯದೇವ್‌ ಉನದ್ಕತ್‌, ಸಿದ್ಧಾರ್ಥ್‌ ಕೌಲ್‌, ಸುಮಿತ್‌ ನರ್ವಾಲ್‌, ಶಹಬಾಜ್‌ ನದೀಮ್‌, ಮನ್‌ದೀಪ್‌ ಸಿಂಗ್‌, ರಾಹುಲ್‌ ಶರ್ಮಾ

ವೆಸ್ಟ್‌ ಇಂಡೀಸ್‌ ‘ಎ’: ಕೀರನ್‌ ಪೊವೆಲ್‌ (ನಾಯಕ), ವೀರಸ್ವಾಮಿ ಪೆರುಮಾಳ್‌, ರಾನ್ಸ್‌ಫರ್ಡ್‌ ಬೇಟನ್‌, ನಕರುಮಾ ಬಾನೆರ್‌, ಜೊನಾಥನ್‌ ಕಾರ್ಟರ್‌, ಶೆಲ್ಡನ್‌ ಕಾಟ್ರೆಲ್‌, ಮಿಗುಯೆಲ್‌ ಕಮಿನ್ಸ್‌, ನರಸಿಂಗ ದೇವ್‌ ನಾರಾಯಣ್‌, ಕರ್ಕ್‌ ಎಡ್ವರ್ಡ್ಸ್‌, ಆಂಡ್ರೆ ಫ್ಲೆಚರ್‌, ಲಿಯೊನ್‌ ಜಾನ್ಸನ್‌, ನಿಕಿತಾ ಮಿಲ್ಲರ್‌, ಆಶ್ಲೆ ನರ್ಸ್‌, ಆಂಡ್ರೆ ರಸೆಲ್‌, ಡೆವೊನ್‌ ಥಾಮಸ್‌

ಪಂದ್ಯದ ಆರಂಭ: ಬೆಳಿಗ್ಗೆ 9.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT