ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗಳು ಹತ್ತಾರೂ ಸಮಸ್ಯೆಗಳು ನೂರಾರು!

Last Updated 7 ಜನವರಿ 2014, 6:41 IST
ಅಕ್ಷರ ಗಾತ್ರ

ಲಿಂಗಸುಗೂರು: ಸರ್ಕಾರಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಜಾರಿಗೆ ತಂದಿರುವ ಬಹುತೇಕ ಯೋಜನೆಗಳು ಯಾವು­ದಾದರು ಗ್ರಾಮಕ್ಕೆ ತಲುಪಿವೆ ಎಂದು ನೋಡುವುದಾದರೆ ತಾಲ್ಲೂಕಿನ ನಾಗರಹಾಳ ಗ್ರಾಮಕ್ಕೆ ಒಂದು ಬಾರಿ ಭೇಟಿ ನೀಡಬೇಕು.

ಲಿಂಗಸುಗೂರು ತಾಲ್ಲೂಕು ಕೇಂದ್ರದಿಂದ 32ಕಿ.ಮೀ. ಅಂತರದಲ್ಲಿರುವ ನಾಗರಹಾಳ ಮೂಲತಃ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳವಾಗಿದೆ. 7ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಲೇಜು ಶಿಕ್ಷಣ, ಜೆಸ್ಕಾಂ ಶಾಖೆ, ಬ್ಯಾಂಕ್‌, ಗ್ರಂಥಾಲಯ, ಸಂತೆ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರ, ಗುರುಸದನದಂತಹ ವಿಶೇಷ ಯೋಜನೆಗಳು ಈ ಗ್ರಾಮಕ್ಕೆ ತಲುಪಿವೆ.

ಎಷ್ಟೆಲ್ಲಾ ಯೋಜನೆಗಳು ಗ್ರಾಮಕ್ಕೆ ಬಂದಿದ್ದರು ಕೂಡ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಅಸಮರ್ಪಕ ಚರಂಡಿಗಳ ನಿರ್ಮಾಣ, ಹದಗೆಟ್ಟ ರಸ್ತೆಗಳಿಂದ ಇಡಿ ಗ್ರಾಮದ ವಾರ್ಡಗಳು ಗಬ್ಬೆದ್ದು ನಾರುತ್ತಿವೆ. ಮುಖ್ಯ ರಸ್ತೆ ಸೇರಿದಂತೆ ವಾರ್ಡಗಳ ರಸ್ತೆಗಳ ಶಾಶ್ವತ ದುರಸ್ತಿ ಇಲ್ಲದೆ ಇಡಿ ಗ್ರಾಮ ಧೂಳು ಆವರಿಸಿಕೊಂಡು ವಿವಿಧ ರೋಗಗಳ ತಾಣವಾಗಿ ಮಾರ್ಪಟ್ಟಿದೆ.

ಸರ್ಕಾರಿ ಪ್ರೌಢಶಾಲೆಗೆ ನಿರೀಕ್ಷಿತ ಮಟ್ಟಕ್ಕಿಂತ ದುಪ್ಪಟ್ಟು ಕೊಠಡಿಗಳು ಮಂಜೂರ ಆಗಿವೆ. ಆದರೆ, ಭಾಗಶಃ ಕೊಠಡಿಗಳ ನಿರ್ಮಾಣ ಅಪೂರ್ಣಾವಸ್ತೆಯಲ್ಲಿದ್ದು ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರೌಢಶಾಲೆ ಮಧ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆದು ಆಳವಾದ ಕಂದಕ ನಿರ್ಮಾಣಗೊಂಡು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ಕಳೆದ ಏಳೆಂಟು ವರ್ಷಗಳ ಹಿಂದೆ ಗುರುಸದನ (ಶಿಕ್ಷಕರ ವಸತಿಗೃಹ) ನಿರ್ಮಾಣಕ್ಕೆ ಲಕ್ಷಾಂತರ ಹಣ ಖರ್ಚು ಮಾಡಿದ್ದರು ಕೂಡ ಪೂರ್ಣಗೊಳ್ಳದೆ ಅಪೂರ್ಣಾವಸ್ತೆಯಲ್ಲಿ ಅನಾಥ ಸ್ಥಿತಿಯಲ್ಲಿ ನಿಂತಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೂಡ ಗ್ರಾಮೀಣ ಸಂತೆ ಮಾರುಕಟ್ಟೆಗೆ ಹಣ ಖರ್ಚು ಮಾಡಿದ್ದರು ಕೂಡ ಪ್ರತಿಯೊಂದು ಕಾಮಗಾರಿಗಳು ಮೇಲುಸ್ತುವಾರಿ ಮತ್ತು ನಿರ್ವಹಣೆ ಕೊರತೆ ಎದುರಿಸುತ್ತಿವೆ.

ವಿಶೇಷ ಯೋಜನೆಗಳು ಗ್ರಾಮಕ್ಕೆ ಬಂದಿದ್ದರು ಕೂಡ ಮಹಿಳೆಯರ ಶೌಚಾಲಯ ಕೊರತೆಯಿಂದ ಬಹಿರ್ದೆಷೆಗೆ ಬಯಲು ಪ್ರದೇಶ ಬಳಕೆ ಅನಿವಾರ್ಯವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿರುವ ಐತಿಹಾಸಿಕ ತೆರೆದ ಬಾವಿ ಘನತ್ಯಾಜ್ಯ ಹಾಕುವ ಸ್ಥಳವಾಗಿ ಅಕ್ಕಪಕ್ಕದ ಮನೆಯವರಿಗೆ ರೋಗ ಹರಡುವ ತಾಣವಾಗಿದೆ ಎಂದು ನಿರ್ವಹಣೆ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರೋಗಗ್ರಸ್ತ ಗ್ರಾಮ’
ನಾಗರಹಾಳ ಗ್ರಾಮಕ್ಕೆ ಬಸ್‌ ನಿಲ್ದಾಣ ಮತ್ತು ಪೊಲೀಸ್‌ ಠಾಣೆ ಹೊರತು ಪಡಿಸಿದರೆ ತಾಲ್ಲೂಕಿನ ಇತರೆ ಗ್ರಾಮಗಳನ್ನು ಹೋಲಿಕೆ ಮಾಡಿದರೆ ಸರ್ಕಾರದ ಬಹುತೇಕ ಯೋಜನೆಗಳು ತಲುಪಿವೆ. ಆದಾಗ್ಯೂ ಏನೊಂದು ಅಭಿವೃದ್ಧಿ ಕಾಣದೆ ದೂಳು, ದುರ್ನಾತದಿಂದ ರೋಗಗ್ರಸ್ಥ ಗ್ರಾಮವಾಗಿದೆ.
–ಬಸಪ್ಪ ಮೇಟಿ, ನಿವೃತ್ತ ಶಿಕ್ಷಕ ನಾಗರಹಾಳ


‘ಅಭಿವೃದ್ಧಿ ಕಾಮಗಾರಿ ಗೌಣ’
ನಾಗರಹಾಳ ಗ್ರಾಮಕ್ಕೆ ಮೊದಲಿನಿಂದಲೂ ಸಾಕಷ್ಟು ಯೋಜನೆಗಳು ಬಂದಿವೆ. ಗ್ರಾಮದ ಮುಖ್ಯ ರಸ್ತೆ ಹಾಗೂ ಅಪೂರ್ಣಾವಸ್ತೆಯಲ್ಲಿರುವ ಗುರುಸದನ, ಗ್ರಾಮೀಣ ಸಂತೆ ಮಾರುಕಟ್ಟೆ, ಪ್ರೌಢಶಾಲೆ ಕಟ್ಟಡಗಳು ಮೇಲ್ನೊಟಕ್ಕೆ ಕಾಣುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಗೌಣವಾಗಿವೆ. ವಿಸ್ತಾರಗೊಳ್ಳುತ್ತಿರುವ ಗ್ರಾಮಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಅಗತ್ಯವಿದೆ.
–ಸೋಮನಗೌಡ ಲೆಕ್ಕಿಹಾಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT