ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸ್ಥಳದಲ್ಲಿ ಪುರುಷನಿಗೆ ಸರಿಸಾಟಿ !

Last Updated 24 ಡಿಸೆಂಬರ್ 2010, 10:40 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ ಮಹಿಳೆಯ ಪಾತ್ರ ಏನು? ಪುರುಷನ ಹಾಗೆ ಆಕೆ ಭಾಗವಹಿಸಿರುವಳೆ? ‘ಇಲ್ಲ’ ಎಂದು ಯಾರಾದರೂ ತಕ್ಷಣಕ್ಕೆ ಹೇಳಿಬಿಡಬಹು ದಾದ ಉತ್ತರ. ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಮಹಿಳೆಗೆ ಸಿಕ್ಕ ಅವಕಾಶಗಳು ಕಡಿಮೆ. ಇತರ ಯಾವುದೇ ಕ್ಷೇತ್ರಗಳ ಸ್ಥಿತಿಯೇ ಇಲ್ಲಿಯದು ಎಂಬುದೇ ಇಂತಹ ತೀರ್ಮಾನಗಳಿಗೆ ಕಾರಣ. ಹವ್ಯಾಸಿ ರಂಗಭೂಮಿ ವಿಷಯದಲ್ಲಿ ಇದು ನಿಜ. ಆರಂಭದ ಘಟ್ಟದಲ್ಲಿ (1950ರ ನಂತರದ ಅವಧಿ) ಕಲಾವಿದೆಯರು ಇಲ್ಲವೇ ಇಲ್ಲ ಎಂಬಷ್ಟು ವಿರಳವಾಗಿದ್ದರು. ಅರ್ಧ ಶತಮಾನ ಕಳೆದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.

ವೃತ್ತಿರಂಗಭೂಮಿ ಹಾಗಿಲ್ಲ. ಅಲ್ಲಿ ಮಹಿಳೆಯರ ಪ್ರವೇಶ ಬೇಗನೇ ಆಗಿದೆ. 1900ರ ಹೊತ್ತಿಗೆ ಅದೇ ತಾನೆ ಹತ್ತಿಪ್ಪತ್ತು ವರ್ಷಗಳ ಶಿಶುವಾಗಿದ್ದ ವೃತ್ತಿರಂಗಭೂಮಿಗೆ ಮಹಿಳೆಯರ ರಂಗ ಪ್ರವೇಶವಾಯಿತು. ಒಮ್ಮೆ ಒಳಹೊಕ್ಕ ನಂತರ ಪುರುಷನ ಜತೆಯಲ್ಲೇ ಹೆಜ್ಜೆ ಹಾಕಿ ವೃತ್ತಿ ರಂಗಭೂಮಿಯ ವೈಭವಕ್ಕೆ ಕಾರಣಳಾಗಿದ್ದಾಳೆ. ಸಂಖ್ಯೆಯ ದೃಷ್ಟಿಯಿಂದ ಮಹಿಳೆ ಪುರುಷನಿಗೆ ಸಮ ಇರಲಿಕ್ಕಿಲ್ಲ. ಆದರೆ ಸಾಮರ್ಥ್ಯ, ಪ್ರತಿಭೆಯಲ್ಲಿ ಪುರುಷನಿಗೆ ಸರಿಸಾಟಿಯೇ.

ವೃತ್ತಿ ರಂಗಭೂಮಿಯಲ್ಲಿ ನಟಿಯರ ದೊಡ್ಡ ಪರಂಪರೆಯೇ ಇದೆ. ನಟಿ ಎಂದು ಕರೆದಾಕ್ಷಣ ಇವರಲ್ಲಿ ಹೆಚ್ಚಿನವರಿಗೆ ನಟನೆಯ ಹೊಣೆಗಾರಿಕೆ ಮಾತ್ರ ಇತ್ತೆಂದು ಅಲ್ಲ. ವಾಸ್ತವವಾಗಿ ಅವರು ಸಂಘಟನೆಯ ಜವಾಬ್ದಾರಿಯನ್ನೂ ಹೊತ್ತಿದ್ದರು. ಕೆಲವು ನಟಿಯರು ಮಾಲೀಕರ ತಾರಾಪತ್ನಿಯರು (ಎರಡನೇ ಹೆಂಡತಿ). ಮಾಲೀಕರು ವೃತ್ತಿ ನಾಟಕಗಳ ಮುಂದಿನ ಕ್ಯಾಂಪ್, ಲೈಸನ್ಸ್ ಮುಂತಾದ ವ್ಯವಹಾರಿಕ ಕೆಲಸಗಳಲ್ಲಿ ಹೊರಗಡೆ ಹೆಚ್ಚು ಓಡಾಡುತ್ತಿದ್ದರೆ, ಅವರ ಪತ್ನಿ ಕಂಪನಿಯ ಆಂತರಿಕ ಸಂಘಟನೆಯ ಹೊಣೆ ಹೊತ್ತಿರುತ್ತಿದ್ದರು. ಜತೆಗೆ ಅವರೆಲ್ಲ ಅಭಿನೇತ್ರಿಯರು. ಸಂಘಟನೆಯ ಜತೆಗೆ ತಮ್ಮ ಅದ್ಭುತ ಅಭಿನಯದಿಂದ ನಾಟಕದ ಕಲೆಕ್ಷನ್‌ಅನ್ನು ಸರಿದೂಗಿಸಿಕೊಂಡು ಹೋಗಬೇಕಾಗಿತ್ತು. ಮಾಲೀಕರೆಂದರೆ ಬರೀ ಬಂಡವಾಳ ತೊಡಗಿಸುವವರಲ್ಲ, ನಟರೋ ನಿರ್ದೇಶಕರೋ, ನಾಟಕಕಾರರೋ ಒಟ್ಟಾರೆ ನಾಟಕ ಕಂಪೆನಿಯ ಅವಿಭಾಜ್ಯ ಅಂಗವಾಗಿದ್ದವರೇ ಮಾಲೀಕರಾಗಿರುತ್ತಿದ್ದರು. ಹಾಗಾಗಿ ಇಲ್ಲಿ ಪುರುಷ ಹಾಗೂ ಸ್ತ್ರೀ ಸರಿಸಮವಾಗಿ ಹೆಜ್ಜೆ ಹಾಕಬೇಕಾಗಿತ್ತು. ಇನ್ನು ಕೆಲವು ನಾಟಕ ಕಂಪೆನಿಗಳನ್ನಂತೂ ಮಹಿಳೆಯರೇ ನಡೆಸಿಕೊಂಡು ಬರುತ್ತಿದ್ದರು. ಈಗಲೂ ಅಸ್ತಿತ್ವದಲ್ಲಿರುವ 15-20 ನಾಟಕ ಕಂಪೆನಿಗಳ ಪೈಕಿ 5-6 ಕಂಪೆನಿಗಳ ಸಾರಥ್ಯ ಮಹಿಳೆಯರದೇ ಆಗಿದೆ. ಇತರೆ ಕ್ಷೇತ್ರಗಳಲ್ಲಿ ಈ ರೀತಿಯ ಸರಿಸಾಟಿತನ ಕಡಿಮೆ.

ಹವ್ಯಾಸಿ ರಂಗಭೂಮಿಯಲ್ಲಿ ನಿರ್ದೇಶಕನ ಪಟ್ಟ ಚಾಲ್ತಿಗೆ ಬಂದಿದೆ. ಆದರೆ ವೃತ್ತಿರಂಗ ಭೂಮಿಯಲ್ಲಿ ಕಿರಿಯ ಕಲಾವಿದರಿಗೆ ಸಲಹೆ ನೀಡುತ್ತಿದ್ದ ನಟಿಯರೂ ಒಂದರ್ಥದಲ್ಲಿ ನಿರ್ದೇಶಕರೇ. ಹವ್ಯಾಸಿಯಷ್ಟು ವೈಜ್ಞಾನಿಕವಾಗಿ ನಿರ್ದೇಶಕನ ಹುದ್ದೆ ಬೆಳೆದಿರದಿದ್ದರೂ ಹೆಚ್ಚು ಕಡಿಮೆ ನಿರ್ದೇಶಕರ ಕೆಲಸವೇ ಇವರದು. ಆದ್ದರಿಂದಲೇ ನಾವು ಯಾರನ್ನು ವೃತ್ತಿರಂಗ ಭೂಮಿಯ ನಟಿ ಎಂದು ಪಟ್ಟಿ ಮಾಡುತ್ತೇವೆಯೋ ಅವರಲ್ಲಿ ಹೆಚ್ಚಿನವರು ಸಂಘಟಕಿಯರು, ನೇಪಥ್ಯ ಕರ್ಮಿಗಳು, ನಿರ್ದೇಶಕರೂ ಆಗಿರುತ್ತಾರೆ. ಅಷ್ಟಾಗಿ ನಾಟಕಕಾರರಿರಲಿಲ್ಲ ಎಂಬುದನ್ನು ಹೊರತು ಪಡಿಸಿದರೆ, ಇತರೆಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರೊಂದಿಗೆ ದಾಪುಗಾಲೇ ಇಟ್ಟಿದ್ದರು.

ಕಳೆದ 50 ವರ್ಷಗಳ ಹವ್ಯಾಸಿ ರಂಗಭೂಮಿಯನ್ನಷ್ಟೇ ಕಂಡವರಿಗೆ, ಜಾನಪದ ವೃತ್ತಿ ಕಲಾತಂಡಗಳಲ್ಲಿ ಮಹಿಳೆ ಪುರುಷನ ಹೆಗಲೆಣೆಯಾಗಿರುವ ಸತ್ಯ ಗೋಚರಿಸಿಲ್ಲ. ವೃತ್ತಿರಂಗಭೂಮಿಯೂ ಒಂದು ರೀತಿಯಲ್ಲಿ ಜಾನಪದದ ಮೌಖಿಕ ಪರಂಪರೆಗೆ ಹೋಲಿಕೆಯಾಗುವಂತಹದು. ಮಾಧ್ಯಮಗಳು ಪಟ್ಟಣ, ನಗರಕೇಂದ್ರಿತ ಶಿಕ್ಷಿತರ ಹವ್ಯಾಸಿ ನಾಟಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಚಾರ ನೀಡಿರುವುದರಿಂದ ರಂಗಭೂಮಿಯಲ್ಲಿ ಮಹಿಳೆ ಪುರುಷನಿಗೆ ಸಮನಾಗಿಯೇ ಹೆಜ್ಜೆ ಹಾಕಿದ್ದಾಳೆ ಎಂಬ ಸತ್ಯ ಸಂಗತಿ ಅಷ್ಟಾಗಿ ಬೆಳಕಿಗೆ ಬಂದೂ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಆರಂಭವಾದ ಸಂಶೋಧನೆ ಈ ವಿಷಯಗಳನ್ನು ಬಹಿರಂಗಪಡಿಸಿದೆ.

ರಂಗಕ್ಕೆ ಬಂದ ಮಹಿಳೆಯರಲ್ಲಿ ಸಾನಿಗಳ (ನಟುವರು, ಪಾತರದವರು, ಕಲಾವಂತರು) ಪಾತ್ರ ಗಣನೀಯವಾದುದು. ಹಾಗಂತ ಇತರರು ಇಲ್ಲವೆಂತಲ್ಲ. ಎಲ್ಲ ಜಾತಿಯವರು ಇದ್ದರು. ಜಾತಿ ಬೇಧ ಇರಲಿಲ್ಲ. ಆದ್ದರಿಂದಲೇ ವೃತ್ತಿರಂಗಭೂಮಿಯ ಅಂತರಂಗ ಜಾತ್ಯತೀತ ಸ್ವರೂಪದ್ದು.ಮಾಲೀಕರು ಸುಂದರವಾದ ನಟಿಯರನ್ನು ಮದುವೆಯಾಗಿಬಿಡುತ್ತಿದ್ದರು ಎಂದು ಹಗುರವಾಗಿ ಮಾತನಾಡುವವರ ಬಗ್ಗೆ ಬಹಳ ಗಂಭೀರ ಚರ್ಚೆಯೇ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮೊದಲ ಮಹಿಳಾ ರಂಗ ಸಮಾವೇಶದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪ್ರಸ್ತಾಪಕ್ಕೆ ಬಂತು.

ಅಂತಹ ನಟಿಯರು ಕಂಪೆನಿಗಳ ಯಶಸ್ಸಿಗೆ ದೊಡ್ಡ ಕಾಣಿಕೆ ನೀಡಿದ್ದರು ಎಂಬುದನ್ನು ಮನಗಾಣಿಸಿದ್ದು ಇಲ್ಲಿ ಮುಖ್ಯವಾಯಿತು. ಮಾಲೀಕರನ್ನು ಮದುವೆ ಆದವರು ಮಾತ್ರವಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಇತರ ನಟಿಯರೂ ಇದ್ದರು. ಅವರು ತಮ್ಮ ಸಹೋದ್ಯೋಗಿ ನಟರನ್ನು ಅಥವಾ ತನ್ನ ಅಭಿನಯಕ್ಕೆ ಅಡ್ಡಿ ಬಾರದ ಹೊರಗಿನವರನ್ನು ಸಂಗಾತಿಯಾಗಿ ಆಯ್ಕೆಮಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಬಹುಪಾಲು ನಟಿಯರ ಖಾಸಗಿ ಜೀವನ ಅತಂತ್ರ ಸ್ಥಿತಿಯಿಂದ ಕೂಡಿದ್ದರೂ, ರಂಗಭೂಮಿಗೆ ಅವರು ನೀಡಿದ ಕಾಣಿಕೆ ಮಾತ್ರ ಅಸಾಧಾರಣವಾದುದು.

ಸೌಂದರ್ಯ- ಮಾಲೀಕರ ಜತೆ ವಿವಾಹ ಎಂದೆಲ್ಲ ತೇಲಿಸಿ ಮಾತನಾಡುವುದರ ಹಿಂದಿನ ಪುರುಷ ಪ್ರಧಾನ ಮನೋಸ್ಥಿತಿಯನ್ನು  ಅನಾವರಣ ಮಾಡುವ ಪ್ರಯತ್ನವೂ ಈ ಸಂಕಿರಣದಲ್ಲಿ ನಡೆಯಿತು.

ಅಡ್ಡಿ ಏನು?
ಇನ್ನು ಹವ್ಯಾಸಿ ರಂಗಭೂಮಿಯಲ್ಲಿ ಮಹಿಳೆಯರ ಪ್ರವೇಶಕ್ಕೆ ಇದ್ದ ಅಡ್ಡಿ ಏನು? ಮಧ್ಯಮವರ್ಗದ ಮಡಿವಂತಿಕೆ. ಹಾಗಾಗಿ ಅವರ ಪ್ರವೇಶ ಕ್ವಚಿತ್ತಾಗಿತ್ತು. ಸಾರ್ವಜನಿಕ ರಂಗಕ್ಕೆ ಮಹಿಳೆ ಪ್ರವೇಶ ಮಾಡಿದ್ದೇ ಕಡಿಮೆ. ಆರ್ಥಿಕ ಸ್ವಾತಂತ್ರ್ಯ ಇರಲಿಲ್ಲ.
ಆದರೆ ಇಂದು ಮಹಿಳೆ ಎಲ್ಲ ಕ್ಷೇತ್ರಗಳನ್ನು ಪ್ರವೇಶಿಸಿದ್ದಾಳೆ. ಆರ್ಥಿಕ ಸ್ವಾವಲಂಬನೆ ಹಿಂದಿಗಿಂತ ಉತ್ತಮ. ಹಾಗಾಗಿ ಇಂದು ಮಹಿಳೆ ಪ್ರವೇಶಕ್ಕೆ ಭಾರೀ ಪ್ರಮಾಣದ ಅಡ್ಡಿ ಏನೂ ಬರಲಿಕ್ಕಿಲ್ಲ.
ಅಷ್ಟಾಗಿಯೂ ಮಹಿಳೆಗೆ ಇನ್ನೂ ಹಲವು ತೊಡಕುಗಳಿವೆ. ಅಂತಹ ತೊಡಕುಗಳ ಬಗ್ಗೆ ಈ ಪ್ರಥಮ ಮಹಿಳಾ ಸಮಾವೇಶದಲ್ಲಿ ನಟಿಯರು, ನಿರ್ದೇಶಕಿಯರು ಸಾಕಷ್ಟು ಚರ್ಚೆ ನಡೆಸಿದರು.
 ಹೌದು. ಮಧ್ಯಮ ವರ್ಗದ ಮಹಿಳೆಗೆ ಹವ್ಯಾಸಿ ರಂಗಭೂಮಿ ವೃತ್ತಿಯಲ್ಲ, ಪ್ರವೃತ್ತಿ. ತನ್ನ ವೃತ್ತಿಯನ್ನು ನಿಭಾಯಿಸಿದ ನಂತರವಷ್ಟೇ ಅವಳು ರಂಗಭೂಮಿಗೆ ಬಿಡುವು ಮಾಡಿಕೊಳ್ಳಬೇಕು. ಈಗೀಗ ಕೆಲವರು ಮಾತ್ರ ರಂಗಭೂಮಿಯನ್ನೇ ವೃತ್ತಿ ಮಾಡಿಕೊಳ್ಳುತ್ತಿದ್ದಾರೆ. ವೃತ್ತಿರಂಗಭೂಮಿ ಯಲ್ಲಿ ಹಾಗಾಗಲಿಲ್ಲ. ಮಹಿಳೆ ರಂಗಭೂಮಿಗೇ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಳು. ಅದೇ ಅವಳಿಗೆ ವೃತ್ತಿ ಪ್ರವೃತ್ತಿ ಎಲ್ಲವೂ ಆಯಿತು. ಹಾಗಾಗಿ ಎರಡರ ಸಮಸ್ಯೆಗಳು ಭಿನ್ನ. ಇದೆಲ್ಲ ಮಹಿಳೆಯರ ‘ಭಾಗವಹಿಸುವಿಕೆ’ ಬಗ್ಗೆ ಆಯಿತು.

ಇನ್ನು ಎರಡನೇ ಅಂಶ ‘ಮಹಿಳಾ ಪರ ಧೋರಣೆ.’ ಒಟ್ಟು ಎಲ್ಲ ಪ್ರಕಾರದ ನಾಟಕಗಳಲ್ಲಿ ಸ್ತ್ರೀಸಂವೇದನೆ ಎಷ್ಟರಮಟ್ಟಿಗೆ ಒಡಮೂಡಿದೆ ಎಂಬುದು.
ವೃತ್ತಿ ರಂಗಭೂಮಿಯ ಪೌರಾಣಿಕ ನಾಟಕಗಳಲ್ಲಿ ಗಟ್ಟಿಯಾದ ಸ್ತ್ರೀಪಾತ್ರಗಳೇ ಇದ್ದುವು. ಕಥೆಯೂ ಸಂಕೀರ್ಣವಾದುದು. ಸಾಮಾಜಿಕ ನಾಟಕಗಳ ಆರಂಭದ ಕಾಲದಲ್ಲಿ ವರದಕ್ಷಿಣೆ- ದೌರ್ಜನ್ಯ- ಶ್ರೀಮಂತಿಕೆಯ ವಿರೋಧಿ, ವಿಧವಾ ವಿವಾಹ, ದೇಶಪ್ರೇಮ, ಹರಿಜನೋದ್ದಾರದಂತಹ ಸಮಾಜ ಸುಧಾರಣೆಯ ನಾಟಕಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದವು. ಅಲ್ಲೆಲ್ಲ ಮಹಿಳೆಯರ ಸಂಕೀರ್ಣ ಪಾತ್ರಗಳು ಇದ್ದವು.ಆದರೆ ‘ಹೆಣ್ಣಿನ ಶೀಲರಕ್ಷಣೆ’ಯೇ ಪ್ರಧಾನವಾದ ಸಾಮಾಜಿಕ ನಾಟಕಗಳು ಬರಲಾರಂಭಿಸಿದ ಅನಂತರದ ದಿನಗಳಲ್ಲಿ ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಂತೆ ಚಿತ್ರಿಸುವ ನಾಟಕಗಳು ಹೆಚ್ಚಾದವು.ಆದರೂ ಕಮರ್ಷಿಯಲ್ ಸಿನಿಮಾಗಳಷ್ಟು ಮಹಿಳೆಯ ಪಾತ್ರ ಕಳಪೆಯಾಗಿರಲಿಲ್ಲ. ಪುರುಷ ಯಜಮಾನ್ಯವನ್ನು ಒಪ್ಪಿಕೊಂಡರೂ, ಅದನ್ನು ದೀರ್ಘಕಾಲ ಪ್ರತಿರೋಧಿಸುವ ಪಾತ್ರಗಳೂ ಇದ್ದವು. ಸಾಂಪ್ರದಾಯಿಕ ಚೌಕಟ್ಟಿನ ದೊಡ್ಡ ಪಾತ್ರಗಳೂ ಇದ್ದವು. ಇದೆಲ್ಲ ಪ್ರತ್ಯೇಕ ಅಧ್ಯಯನದ ವಸ್ತು.

ಹವ್ಯಾಸಿ ರಂಗಭೂಮಿಯಲ್ಲಿ ಒಂದು ಹಂತದವರೆಗೆ ಮಧ್ಯಮವರ್ಗದ ತೆಳು ಪಾತ್ರಗಳೇ ಪ್ರಧಾನ ಪಾತ್ರ ವಹಿಸಿದ್ದವು. ದರೆ ನಂತರದಲ್ಲಿ ಬಂದ ವೈಚಾರಿಕ ನಾಟಕಗಳಲ್ಲಿ ಸ್ತ್ರೀವಾದಿ ಎಳೆಗಳಿದ್ದವು. ಏಕವ್ಯಕ್ತಿ ಪ್ರದರ್ಶನಗಳಂತೂ ಸ್ತ್ರೀವಾದಿ ಸಂವೇದನೆಗೇ ಹೆಚ್ಚು ಒತ್ತುಕೊಟ್ಟಿವೆ.ಪೌರಾಣಿಕ ಪಾತ್ರಗಳಾದ ಶಕುಂತಲೆ, ಊರ್ಮಿಳೆ, ದ್ರೌಪದಿ ಕುರಿತ ಏಕವ್ಯಕ್ತಿ ನಾಟಕಗಳಂತೂ ಸ್ತ್ರೀಸಂವೇದನೆಯನ್ನು ಗಾಢವಾಗಿ ಚಿತ್ರಿಸಿವೆ.ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಗೆ ಬಂದ ಈ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಮಹಿಳೆಯರ ನಾಟಕಗಳೇ ಹೆಚ್ಚು ಯಶಸ್ಸು ಪಡೆದಿವೆ.ನಾಟಕದ ನಾಲ್ಕಾರು ಪಾತ್ರಗಳನ್ನು ಒಬ್ಬಳೇ ಅಭಿನಯಿಸಬೇಕು. ಒಂದು ಒಂದೂವರೆ ಗಂಟೆ ರಂಗದ ಮೇಲೆ ಒಬ್ಬರೇ ಮಾತಾಡಬೇಕು.ಅದಕ್ಕೆ ಅಸಾಧಾರಣ ಎನರ್ಜಿ ಬೇಕು. ರಂಗದಲ್ಲಿ ಮಹಿಳೆ ಸರಿಸಾಟಿ ಅಷ್ಟೇ ಅಲ್ಲ, ಒಂದು ಕೈಮೇಲೆಯೇ ಎನ್ನೋಣವೆ?                                                           n

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT