ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತ: ಬೈಕ್ ಸವಾರ ಸಾವು

Last Updated 3 ಅಕ್ಟೋಬರ್ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರ ಸಮೀಪದ ಜಿ.ಎಂ.ಪಾಳ್ಯ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ.

ದೊಮ್ಮಲೂರು ಬಳಿಯ ಎ.ಕೆ.ಕಾಲೊನಿ ನಿವಾಸಿ ಶಿವಕುಮಾರ್ (35) ಮೃತಪಟ್ಟವರು. ಆಂಧ್ರಪ್ರದೇಶ ಮೂಲದ ಅವರು, ಪತ್ನಿ ಸುಧಾ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಗರದಲ್ಲಿ ನೆಲೆಸಿದ್ದರು.

ಕಗ್ಗದಾಸಪುರದ ವ್ಯಕ್ತಿಯೊಬ್ಬರ ಬಳಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್, ಬೈಕ್‌ನಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಚಾಲನೆ ಮಾಡುತ್ತಿದ್ದ ವೇಳೆ ಅವರು ನಿಯಂತ್ರಣ ತಪ್ಪಿದ್ದರಿಂದ ಅಡ್ಡಾದಿಡ್ಡಿ ಚಲಿಸಿದ ಬೈಕ್, ರಸ್ತೆ ಬದಿ ನಿಂತಿದ್ದ ಜೆಸಿಬಿ ವಾಹನಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಇಂದಿರಾನಗರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರಗಳವು
ಬನಶಂಕರಿಯ ಕಾಮಾಕ್ಯ ಬಸ್ ನಿಲ್ದಾಣದ ಬಳಿ ದುಷ್ಕರ್ಮಿಗಳು ಬುಧವಾರ ಬೆಳಿಗ್ಗೆ ಸರಳಾ ಎಂಬುವರ ಚಿನ್ನದ ಸರವನ್ನು ದೋಚಿದ್ದಾರೆ.

ಬನಶಂಕರಿ ಸಮೀಪದ ಸಿಂಡಿಕೇಟ್ ಬ್ಯಾಂಕ್ ಕಾಲೊನಿ ನಿವಾಸಿಯಾದ ಸರಳಾ ಅವರು ಎಂ.ಜಿ.ರಸ್ತೆಯ ಹೋಟೆಲ್ ಒಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲಸಕ್ಕೆ ಹೊರಟಿದ್ದ ಅವರು ಕಾಮಾಕ್ಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಬಸ್‌ಗೆ ಕಾಯುತ್ತಾ ನಿಂತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರದ ಮೌಲ್ಯ ಸುಮಾರು 60 ಸಾವಿರ ರೂ. ಎಂದು ಪೊಲೀಸರು ಹೇಳಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುಂಡಿನ ದಾಳಿ: ಬಂಧನ

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮಂಗಳವಾರ ಸಂಜೆ ಮಟಾಮ್‌ರೆಡ್ಡಿ ಎಂಬುವರ ಮೇಲೆ ಗುಂಡಿನ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಶೋದಮ್ಮ (55) ಎಂಬುವರನ್ನು ಬಂಧಿಸಿದ್ದಾರೆ. ಯಶೋದಮ್ಮ ಅವರ ಪುತ್ರ ಮಂಜುನಾಥ ರೆಡ್ಡಿ, ಜಮೀನು ವಿವಾದದ ವಿಷಯವಾಗಿ ಮಟಾಮ್ ರೆಡ್ಡಿ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದ. ಈ ಸಂಬಂಧ ಮಟಾಮ್ ರೆಡ್ಡಿ, ಮಂಜುನಾಥ ರೆಡ್ಡಿ ಮತ್ತು ಕುಟುಂಬ ಸದಸ್ಯರ ವಿರುದ್ಧ ದೂರು ಕೊಟ್ಟಿದ್ದರು.

ಘಟನೆ ನಂತರ ಮಂಜುನಾಥ ರೆಡ್ಡಿ ಮತ್ತು ಆತನ ತಂದೆ ಅನಂತರಾಮರೆಡ್ಡಿ ತಲೆ ಮರೆಸಿಕೊಂಡಿದ್ದಾರೆ ಎಂದು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ತಿಳಿಸಿದ್ದಾರೆ. ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಯಶೋದಮ್ಮ ಅವರನ್ನು ಬಂಧಿಸಲಾಗಿದೆ. ಅವರನ್ನು ಬುಧವಾರ ಮಧ್ಯಾಹ್ನ ನಗರದ ಐದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ನಂತರ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT