ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ = ಗುಂಡಿ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕರ್ನಾಟಕದ ಮತದಾರರ ಮನೆ ಹೊಸ್ತಿಲಿನಲ್ಲಿ ವಿಧಾನಸಭಾ ಚುನಾವಣೆ ಬಂದು ಕೂತಿದೆ. ಮುಂದಿನ ಐದು ವರ್ಷಗಳ ಅವಧಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತ್ತೊಂದು ಅವಕಾಶ ಮತದಾರರ ಮುಂದಿದೆ. ಕರ್ತವ್ಯಭ್ರಷ್ಟನಾಗುವ ಚುನಾಯಿತ ಅಭ್ಯರ್ಥಿಗಳನ್ನು ವಾಪಸು ಕರೆಸಿಕೊಳ್ಳುವ ಅಧಿಕಾರ ಇಲ್ಲದ ಭಾರತದ ಮತದಾರರ ಕೈಯಲ್ಲಿರುವುದು ಮತದಾನದ ಮೂಲಕ ಸಮರ್ಥರನ್ನು ಆಯ್ಕೆ ಮಾಡುವ ಅವಕಾಶ ಮಾತ್ರ. ಮತದಾರರು ಇದನ್ನು ವಿವೇಚನೆಯಿಂದ ಬಳಸುತ್ತಿದ್ದಾರೆಯೇ? ಇಲ್ಲವೆ ಅವರೂ ರಾಜಕೀಯ ನಾಯಕರು ಹರಿಯಬಿಡುವ ಜಾತಿ,ಧರ್ಮ ಮತ್ತು ದುಡ್ಡಿನ ಮಹಾಪೂರದಲ್ಲಿ ಕೊಚ್ಚಿಹೋಗುತ್ತಿದ್ದಾರೆಯೇ? ಚುನಾವಣಾ ಕಾಲದಲ್ಲಿ ನಿಜವಾಗಿ ನಡೆಯಬೇಕಾದ ಚರ್ಚೆಗಳೇನು?

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಒಂದೇ ಒಂದು ಯೋಜನೆ ಯಾಕೆ ಪೂರ್ಣಗೊಂಡಿಲ್ಲ?  ರಾಜ್ಯದ 5875 ಜನವಸತಿ ಪ್ರದೇಶಗಳಲ್ಲಿ ಈಗಲೂ ಯಾಕೆ ಕುಡಿಯುವ ನೀರಿಲ್ಲ?  ರಸ್ತೆ ಸಂಪರ್ಕ ಇಲ್ಲದ ಹಳ್ಳಿಗಳು ಇನ್ನೂ ಯಾಕೆ ಇವೆ? ಇರುವ ರಸ್ತೆಗಳು ಹೊಂಡಗಳಿಂದ ಯಾಕೆ ತುಂಬಿವೆ? ಮನೆಬಾಗಿಲಿಗೆ ಬರುವ ಅಭ್ಯರ್ಥಿಗಳನ್ನು ಮತದಾರರು ಕೇಳಬೇಕಾಗಿರುವುದು ಈ ಪ್ರಶ್ನೆಗಳನ್ನಲ್ಲವೇ?


.........
ವಿಕಾಸಸೌಧದಲ್ಲಿರುವ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಕೂತು ಅಧಿಕಾರಿಗಳು ತೆರೆದಿಡುವ ಮಾಹಿತಿಯನ್ನು ನೋಡುತ್ತಿದ್ದರೆ ರಾಜ್ಯದ ರಸ್ತೆಗಳ ಬಗ್ಗೆ ಸುಂದರ ಚಿತ್ರವೊಂದು ಮನಸ್ಸಲ್ಲಿ ಮೂಡುತ್ತದೆ. ಆದರೆ ಕಚೇರಿಯಿಂದ ಹೊರಬಂದಾಗ ಎದುರುಗೊಳ್ಳುವ ರಸ್ತೆಗಳು ಮನಸ್ಸಲ್ಲಿ ಮೂಡಿದ್ದ ಸುಂದರ ಚಿತ್ರವನ್ನು ಕದಡಿಬಿಡುತ್ತದೆ.

ರಸ್ತೆ ಅಭಿವೃದ್ಧಿ, ನಿರ್ವಹಣೆ ಮತ್ತು ಮರು ಡಾಂಬರೀಕರಣದ ಹೆಸರಿನಲ್ಲಿ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಹಣದ ಹೊಳೆಯೇ ಹರಿದಿದೆ. ಆದರೆ, ಅದಕ್ಕೆ ತಕ್ಕಂತೆ ರಸ್ತೆಗಳು ಅಭಿವೃದ್ಧಿ ಆಗಿವೆಯೇ?  ಹಣ ಖರ್ಚು ಮಾಡಿರುವ ಅಂಕಿ- ಸಂಖ್ಯೆಗಳು ಲೋಕೋಪಯೋಗಿ ಇಲಾಖೆಯಲ್ಲಿ ಲಭ್ಯ ಇವೆ. ಹಾಗೆಯೇ ಇಂತಿಷ್ಟು ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಮಾಡಿರುವ ಮಾಹಿತಿಯೂ ಸಿಗುತ್ತದೆ. ಆದರೆ, ರಸ್ತೆಗಳು ನಿಜಕ್ಕೂ ಜನ ಬಳಕೆಗೆ ಯೋಗ್ಯವಾಗಿದೆಯೇ ?

ಈ ಪ್ರಶ್ನೆ ಕೇಳಿದ ತಕ್ಷಣ ಅಧಿಕಾರಿಗಳು ಮುಖ ತಿರುಗಿಸುತ್ತಾರೆ. `ಹಣ ಎಷ್ಟು ಖರ್ಚಾಗಿದೆ ಮತ್ತು ಎಷ್ಟು ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ ಎಂಬುದರ ವಿವರ ನಮ್ಮಲ್ಲಿದೆ. ಭೌತಿಕ ಪರಿಶೀಲನೆ ಸ್ಥಳೀಯ ಮಟ್ಟದಲ್ಲಿ ಆಗುತ್ತದೆ' ಎನ್ನುತ್ತಾರೆ. ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಆಯ್ದ ಹೆದ್ದಾರಿಗಳನ್ನು ಹೊರತುಪಡಿಸಿ, ಉಳಿದ ಬಹುತೇಕ ರಸ್ತೆಗಳು (ರಾಜ್ಯ, ಜಿಲ್ಲಾ ಮತ್ತು ಗ್ರಾಮೀಣ ಭಾಗದ ರಸ್ತೆಗಳು) ಹಾಳಾಗಿವೆ. ಎಲ್ಲಿ ನೋಡಿದರೂ ಗುಂಡಿಗಳಿಂದ ತುಂಬಿರುವ ಮತ್ತು ಡಾಂಬರು ಕಿತ್ತುಹೋಗಿರುವ ರಸ್ತೆಗಳೇ ಕಾಣುತ್ತವೆ.

ರಾಜ್ಯದಲ್ಲಿ ಇನ್ನೂ ಸುಮಾರು 2,235 ಜನವಸತಿಗಳಿಗೆ ರಸ್ತೆ ಸಂಪರ್ಕವೇ ಇಲ್ಲ. ಹಿಂದಿನ ಸರ್ಕಾರಗಳು ಮರೆತೇಬಿಟ್ಟಿರುವ ಈ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಪ್ರಯತ್ನವನ್ನು ಈಗಿನ ಸರ್ಕಾರವೂ ಮಾಡಿಲ್ಲ. ಹಳೆ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಅವುಗಳ ನಿರ್ವಹಣೆಗೆ ಒತ್ತು ನೀಡಿರುವ ಹಾಗೆ ರಸ್ತೆಯೇ ಇಲ್ಲದ ಜನರಿಗೆ ಕನಿಷ್ಠ ಮಣ್ಣಿನ ರಸ್ತೆ ನಿರ್ಮಿಸುವ ಗೋಜಿಗೂ ಈ ಸರ್ಕಾರ ಹೋಗಿಲ್ಲ. ಇಲಾಖೆ ಮಟ್ಟದಲ್ಲಿನ ಅಂಕಿ ಸಂಖ್ಯೆಗಳನ್ನು ನೋಡಿದರೆ 2008ರಿಂದಲೂ ರಸ್ತೆ ಸಂಪರ್ಕ ಇಲ್ಲದ ಜನವಸತಿಗಳ ಸಂಖ್ಯೆ ಬದಲಾಗಿಲ್ಲ ಎನ್ನುತ್ತವೆ ಮೂಲಗಳು.

ಕಳೆದ ಐದು ವರ್ಷಗಳಲ್ಲಿ  ರಸ್ತೆ ಅಭಿವೃದ್ಧಿ, ನಿರ್ವಹಣೆ ಮತ್ತು ಡಾಂಬರೀಕರಣ ಸಲುವಾಗಿ ವಿವಿಧ ಮೂಲಗಳಿಂದ ಸುಮಾರು 15 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದರಿಂದ ಸುಮಾರು 30 ಸಾವಿರ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರದ ಅಂಕಿ ಸಂಖ್ಯೆಗಳು ಹೇಳುತ್ತವೆ. ಇದರಲ್ಲಿ ರಸ್ತೆ ನಿರ್ವಹಣೆ ಮತ್ತು ಡಾಂಬರೀಕರಣ ಕೂಡ ಸೇರಿದೆ ಎನ್ನುತ್ತವೆ ಲೋಕೋಪಯೋಗಿ ಇಲಾಖೆ ಮೂಲಗಳು. ರಾಜ್ಯದಲ್ಲಿ 4,490 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 20,774 ಕಿ.ಮೀ ರಾಜ್ಯ ಹೆದ್ದಾರಿ ಹಾಗೂ 49,905 ಕಿ.ಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಗಳು ಇವೆ.

ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯನ್ನು ರಾಜ್ಯ ಸರ್ಕಾರವೇ ಮಾಡಿದರೂ ಅದಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಇದನ್ನು ಹೊರತುಪಡಿಸಿ, ವಿವಿಧ ರೀತಿಯ ಹನ್ನೊಂದು ಯೋಜನೆಗಳಡಿ ಉಳಿದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳನ್ನು ಲೋಕೋಪಯೋಗಿ ಇಲಾಖೆ ಮಾಡುತ್ತದೆ. ಐದು ವರ್ಷಗಳಲ್ಲಿ 10,650 ಕಿ.ಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಗಳನ್ನು ರೂ. 3,639 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ನಬಾರ್ಡ್ ನೆರವಿನಿಂದ ಗ್ರಾಮೀಣ ಭಾಗದ 5,909 ಕಿ.ಮೀ ಉದ್ದದ ರಸ್ತೆ ಹಾಗೂ 187 ಸೇತುವೆಗಳನ್ನು  ರೂ. 1,226 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಎಲ್ಲ ರಸ್ತೆಗಳ ಅಭಿವೃದ್ಧಿಗೂ ಸರ್ಕಾರದ ಹಣ ನೆಚ್ಚಿಕೊಂಡರೆ ಕಷ್ಟ ಎಂದು ಖಾಸಗಿ ಸಹಭಾಗಿತ್ವದಲ್ಲೂ ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಾಗ್ದಾರಿ- ರಿಬ್ಬನ್‌ಪಲ್ಲಿ ನಡುವಿನ 141 ಕಿ.ಮೀ ರಾಜ್ಯ ಹೆದ್ದಾರಿಯನ್ನು ರೂ. 243 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಧಾರವಾಡ- ಅಳ್ನಾವರ ನಡುವಿನ 60 ಕಿ.ಮೀ ರಸ್ತೆಯನ್ನು ರೂ. 238 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿವೆ.

ಚಿಕ್ಕನಾಯಕನಹಳ್ಳಿ- ತಿಪಟೂರು- ಹಾಸನ ರಸ್ತೆ ಅಭಿವೃದ್ಧಿಗೂ (74 ಕಿ.ಮೀ ಉದ್ದ, ವೆಚ್ಚ ರೂ. 242 ಕೋಟಿ) ಟೆಂಡರ್ ನೀಡಿದ್ದು, ಇನ್ನೂ ಕಾಮಗಾರಿಯನ್ನು ಆರಂಭಿಸಿಲ್ಲ. ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಗುತ್ತಿಗೆದಾರ ಸಂಸ್ಥೆ ಕೂಡ ಪಟ್ಟಿಯಲ್ಲಿದ್ದು, ಅದರ ಬ್ಯಾಂಕ್ ಖಾತೆಗಳನ್ನು ತನಿಖಾ ಸಂಸ್ಥೆಗಳು ಸ್ಥಗಿತಗೊಳಿಸಿವೆ. ಈ ಕಾರಣಕ್ಕೆ ಇನ್ನೂ ಕಾಮಗಾರಿಯನ್ನು ಆರಂಭಿಸಿಲ್ಲ.

ರಸ್ತೆಗಳಲ್ಲಿನ ಗುಂಡಿ ಮುಚ್ಚುವುದು, ರಸ್ತೆ ಪಕ್ಕದ ಚರಂಡಿಗಳ ದುರಸ್ತಿ ಇತ್ಯಾದಿ ನಿರ್ವಹಣಾ ಕೆಲಸಗಳ ಸಲುವಾಗಿ ಒಟ್ಟು ರೂ. 424 ಕೋಟಿ ಖರ್ಚು ಮಾಡಲಾಗಿದೆ. ಸುವರ್ಣ ರಸ್ತೆ ವಿಕಾಸ ಯೋಜನೆ ಸದ್ಯ ಚಾಲ್ತಿಯಲ್ಲಿ ಇಲ್ಲದಿದ್ದರೂ ಅದು ಇರುವವರೆಗೂ 1,733 ಕಿ.ಮೀ ರಸ್ತೆಯನ್ನು ರೂ. 351 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ 3,319 ಕಿ.ಮೀ ಉದ್ದದ ರಸ್ತೆಯನ್ನು ರೂ. 499 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಪರಿಶಿಷ್ಟ ಜಾತಿಯ ಜನರು ಹೆಚ್ಚು ನೆಲೆಸಿರುವ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಸಲುವಾಗಿ ವಿಶೇಷ ಘಟಕ ಯೋಜನೆ ಜಾರಿಯಲ್ಲಿದೆ. ಇದರಡಿ ಐದು ವರ್ಷಗಳಲ್ಲಿ 2,237 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಿದ್ದು, ಈ ಸಲುವಾಗಿ ರೂ. 478 ಕೋಟಿ ಖರ್ಚು ಮಾಡಲಾಗಿದೆ. ಪರಿಶಿಷ್ಟ ಪಂಗಡದ ಜನರು ಹೆಚ್ಚು ನೆಲೆಸಿರುವ ಕಡೆಗಳಲ್ಲಿ ಗಿರಿಜನ ಉಪ ಯೋಜನೆಯಡಿ 953 ಕಿ.ಮೀ ರಸ್ತೆಯನ್ನು ರೂ.  183 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಇವು ರಾಜ್ಯದ ಬೊಕ್ಕಸದ ಹಣದಿಂದ ಕೈಗೆತ್ತಿಕೊಂಡ ಯೋಜನೆಗಳಾದರೆ, ಕೇಂದ್ರ ಸರ್ಕಾರದ ರಸ್ತೆ ನಿಧಿ ಯೋಜನೆಯಡಿ ರಾಜ್ಯಕ್ಕೆ ಬಂದ ಹಣದಲ್ಲಿ 3,590 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ರೂ. 1,012 ಕೋಟಿ ಖರ್ಚು ಮಾಡಲಾಗಿದೆ. ಇಷ್ಟೊಂದು ಹಣ ಖರ್ಚಾಗಿದೆ, ಆದರೆ ಸಂಚಾರ ಯೋಗ್ಯ ರಸ್ತೆಗಳೆಲ್ಲಿ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT