ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲೇ ವಹಿವಾಟು

Last Updated 7 ಅಕ್ಟೋಬರ್ 2011, 8:20 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುವ ಚಿಂತಾಮಣಿಯಲ್ಲಿ ತರಕಾರಿ ಮಾರುಕಟ್ಟೆಗೆ ಸೂಕ್ತ ಸ್ಥಳವಿಲ್ಲ. ಮೂಲಸೌಕರ್ಯವಿಲ್ಲದ ಕಾರಣ ಸಾರ್ವಜನಿಕ ರಸ್ತೆಗಳಲ್ಲಿಯೇ ತರಕಾರಿ ವ್ಯಾಪಾರ ನಡೆಯುತ್ತಿದೆ. ಭಾನುವಾರ ನಡೆಯುವ ಸಂತೆ ಇಡೀ ರಾಜ್ಯದಲ್ಲೇ ಪ್ರಸಿದ್ಧಿ. ತಿಪ್ಪೆಗುಂಡಿಯಂತಿರುವ ರಾಮಕುಂಟೆ ಪ್ರದೇಶದ ರಸ್ತೆಯಲ್ಲಿ ನಡೆಯುವ ಸಂತೆಗೆ ಜನರು ಕೆಸರಿನಲ್ಲೇ ನಡೆದುಕೊಂಡು ಬಂದು ಹಣ್ಣುತರಕಾರಿ ಕೊಳ್ಳಬೇಕು.

ನಗರದ ಮಾರುತಿ ಸ್ಟುಡಿಯೋ ರಸ್ತೆಯಲ್ಲಿ, ಥಿಯಾಸಾಫಿಕಲ್ ಸೊಸೈಟಿ ಕ್ರಾಸ್ ರಸ್ತೆಯಲ್ಲಿ ಮತ್ತು ಐಡಿಎಸ್‌ಎಂಟಿ ಮಳಿಗೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತರಕಾರಿ ವ್ಯಾಪಾರ- ವಹಿವಾಟು ನಡೆಯುತ್ತದೆ. ಬಿಸಿಲು ಮತ್ತು ಮಳೆಯ ರಕ್ಷಣೆಯಾಗಿ ರಸ್ತೆಯ ಎರಡು ಬದಿಗಳಲ್ಲಿ ಟಾರ್‌ಪಾಲ್ ಕಟ್ಟಿಕೊಂಡು ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಾರೆ. ಮಳೆ ಬಂದರಂತೂ ಇಡಿ ವಾತಾವರಣ ಕೊಚ್ಚೆ ಗುಂಡಿಯಾಗಿ ಮಾರ್ಪಡುತ್ತದೆ. ಎಲ್ಲೆಡೆ ಕೆಸರು ಆವರಿಸಿಕೊಳ್ಳುತ್ತದೆ.

`ಐಡಿಎಸ್‌ಎಂಟಿ ಸಮೀಪದ ರಸ್ತೆಯಲ್ಲಿ ವ್ಯಾಪಾರಸ್ಥರು ಕಟ್ಟುವ ಟಾರ್‌ಪಾಲ್ ಹಗ್ಗಗಳಿಂದಾಗಿ ದ್ವಿಚಕ್ರ ವಾಹನಗಳ ಸಂಚಾರ ಮತ್ತು ಜನರ ಓಡಾಟಕ್ಕೆ ಕಷ್ಟವಾಗುತ್ತದೆ. ಇದರಿಂದ ತೊಂದರೆ ಅನುಭವಿಸಿ, ಕೆಲವರು ಕೆಳಗಡೆ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ನಗರಸಭೆಯವರಾಗಲಿ ಅಥವಾ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ~ ಎಂದು ಸಾರ್ವಜನಿಕರು ದೂರುತ್ತಾರೆ.

`ಹಿಂದೆ ಇದೇ ಸ್ಥಳದಲ್ಲಿ (ಸರ್ಕಾರಿ ಬಸ್ ನಿಲ್ದಾಣದ ಬಳಿ) ಸಂತೆಯೂ ನಡೆಯುತ್ತಿತ್ತು. ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಗಳ ನಿರ್ಮಾಣದ ನಂತರ ಸಂತೆಯನ್ನು ರಾಮಕುಂಟೆ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ನೆಲದ ಸಮತಟ್ಟು, ನೀರು, ನೆರಳು, ಶೌಚಾಲಯ ಮುಂತಾದ ಯಾವುದೇ ಮೂಲಸೌಕರ್ಯಗಳಿಲ್ಲ. ಇಡೀ ಪ್ರದೇಶ ತಿಪ್ಪೆ ಗುಂಡಿಯಂತಿದೆ. ಇಲ್ಲಿ ಸ್ಥಳಾಂತರಗೊಂಡು ಹಲವು ವರ್ಷಗಳೇ ಕಳೆದರೂ ನಮಗೆ ಯಾವುದೇ ಸೌಕರ್ಯ ಕಲ್ಪಿಸಲಾಗಿಲ್ಲ~ ಎಂದು ವ್ಯಾಪಾರಸ್ಥರು ದೂರುತ್ತಾರೆ.

ನಗರದ ಬಂಬೂಬಜಾರ್‌ನಿಂದ ಚೇಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಯಲ್ಲಿ ಸುಮಾರು ಒಂದು ಕಿ.ಮೀ. ದೂರದವರೆಗೆ ಸಂತೆ ನಡೆಯುತ್ತದೆ. ಸುತ್ತಮುತ್ತಲ ಗ್ರಾಮಗಳ ರೈತರು ತಾವು ಬೆಳೆದ ತರಕಾರಿ, ದವಸ ಧಾನ್ಯ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ತರುತ್ತಾರೆ. ರೈತರಿಗೆ ಅಗತ್ಯವಾದ ಸಣ್ಣ ಪುಟ್ಟ ವಸ್ತುಗಳು, ಬಟ್ಟೆಗಳು, ದಿನಸಿ ಮೊದಲಾದವುಗಳನ್ನು ಮಾರಾಟ ಮಾಡಲು ವ್ಯಾಪಾರಿಗಳು ಬರುತ್ತಾರೆ. ಕೊಳ್ಳುವವರಿಗೆ ಹಾಗೂ ಮಾರುವವರಿಗೆ ತೀವ್ರ ಅನಾನುಕೂಲವಾಗಿದೆ.

`ತಾಲ್ಲೂಕಿನ ಜನರಲ್ಲದೆ ಶ್ರಿನಿವಾಸಪುರ, ಬಾಗೇಪಲ್ಲಿ, ಶಿಡ್ಲಘಟ್ಟದಿಂದ ಸಹ ಪ್ರತಿವಾರ ಜನ ಬರುತ್ತಾರೆ. ನಗರದ ಜನಸಂಖ್ಯೆ ಸುಮಾರು 75 ಸಾವಿರ ಇದೆ. ನಗರದ ಜನರು ತರಕಾರಿ ಮತ್ತಿತರ ವಸ್ತುಗಳನ್ನು ಸಂತೆಯಲ್ಲಿಯೇ ಕೊಳ್ಳುತ್ತಾರೆ. ಇಷ್ಟೊಂದು ಜನ ಸೇರುವ ಹಾಗೂ ನಗರಸಭೆಗೆ ಆದಾಯವೂ ಬರುವ ಸಂತೆ, ತರಕಾರಿ ಮಾರುಕಟ್ಟೆಗಳಿಗೆ ಸೌಲಭ್ಯ ಒದಗಿಸದಿರುವುದು ವಿಪರ‌್ಯಾಸ~ ಎಂದು ವ್ಯಾಪಾರಸ್ಥ ಮುನಿಕೃಷ್ಣ ಹೇಳುತ್ತಾರೆ.

ಸಮೀಪದಲ್ಲೇ ಎಪಿಎಂಸಿ ಮಾರುಕಟ್ಟೆ ಇದೆ. ರಾಮಕುಂಟೆ ಪ್ರದೇಶದಲ್ಲಿ  ಸಾಕಷ್ಟು ಸ್ಥಳಾವಕಾಶ ವಿದೆ. ಇಲ್ಲಿಗೆ ಖಾಸಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಬೇಕು ಎಂಬ ಕೂಗು ಬಹಳ ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ, ಖಾಸಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿದರೆ ಸಂತೆಗೂ ಅನುಕೂಲವಾಗುತ್ತದೆ.

ಈಗಿರುವ ಖಾಸಗಿ ಬಸ್‌ನಿಲ್ದಾಣವೂ ಸದಾ ಕೊಚ್ಚೆಗುಂಡಿಯಾಗಿರುತ್ತದೆ. ನಗರಸಭೆಯು ಸಂತೆ ಮತ್ತು ತರಕಾರಿ ಮಾರುಕಟ್ಟೆಗಳಿಂದ ತೆರಿಗೆ ವಸೂಲಿ ಮಾಡುವ ಜತೆಗೆ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಜವಾಬ್ದಾರಿಯನ್ನು ಹೊರಬೇಕಿದೆ~ ಎಂದು ಸಾರ್ವಜನಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT