ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದಲ್ಲಿ ಆಸಕ್ತಿ ಇಲ್ಲ : ನಾರಾಯಣಮೂರ್ತಿ

Last Updated 10 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ಶಿವಮೊಗ್ಗ: ದೇಶದ ಅಭಿವೃದ್ಧಿಗೆ ರಾಜಕೀಯ ಕ್ಷೇತ್ರವೇ ಆಗಬೇಕೆಂದಿಲ್ಲ. ಸಾಧನೆಗೆ ಮನಸ್ಸು, ಶಕ್ತಿ ಇರುವ ವ್ಯಕ್ತಿಗೆ ಯಾವ ಕ್ಷೇತ್ರವಾದರೂ ಸರಿ. ಇತರ ಕ್ಷೇತ್ರಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ದೇಶದ ಮೌಲ್ಯ ಹೆಚ್ಚಿಸಬಹುದು. ಹಾಗಾಗಿ, ನನಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಯಾವ ಆಸಕ್ತಿಯೂ ಇಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ಡಾ.ಎನ್.ಆರ್. ನಾರಾಯಣ ಮೂರ್ತಿ ತಿಳಿಸಿದರು.

ನಗರದಲ್ಲಿ ಭಾನುವಾರ ಜಾವಳ್ಳಿಯ ಜ್ಞಾನದೀಪ ವಿದ್ಯಾಸಂಸ್ಥೆಯ ಅರಬಿಂದೋ ಪದವಿಪೂರ್ವ ಕಾಲೇಜಿನ ದಶಮಾನೋತ್ಸವದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂವಾದದಲ್ಲಿ 9ನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಕೇಳಿದ, ಯಾಕೆ ನೀವು ರಾಜಕೀಯಕ್ಕೆ ಸೇರಿ ಇನ್ನೂ ಹೆಚ್ಚಿನ ಸಾಧನೆ ಮಾಡಬಾರದು? ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ದೇಶದ ಅಭಿವೃದ್ಧಿಗೆ ಅನೇಕ ಮಾರ್ಗಗಳಿವೆ. ಅದರಲ್ಲಿಯೂ ಅಧ್ಯಾಪಕ ವೃತ್ತಿ ಅತ್ಯುತ್ತಮವಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ರೂಪಿಸುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.

ಇಂದಿನ ದಿನಗಳಲ್ಲಿ ಐಟಿ- ಬಿಟಿಗಳಿಲ್ಲದೇ ಬದುಕು ಸಾಧ್ಯವೇ ಇಲ್ಲ ಎಂಬಂತಾಗಿದೆ ಏಕೆ? ಎಂಬ ಪ್ರಶಾಂತ್ ಆರಾಧ್ಯ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ವಿಶ್ವದಲ್ಲಿ ಆಟೋಮೊಬೈಲ್ ಕೂಡ ಇರಲಿಲ್ಲ. ಆಗ ಅದು ಅನಿವಾರ್ಯವಾಗಿರಲಿಲ್ಲ. ಆದರೆ, ಈಗ ಆಟೋಮೊಬೈಲ್ ಇಲ್ಲದಿರುವ ಕಲ್ಪನೆಯು ಸಹ ನಮ್ಮಿಂದ ಅಸಾಧ್ಯ.
 
ಜಾಗತೀಕರಣದ ನಂತರ ತಂತ್ರಜ್ಞಾನ ಯುಗವಾಗಿದ್ದು, ಯುವಜನತೆ ದೇಶದ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆಯತ್ತ ಹೆಚ್ಚಿನ ಆದ್ಯತೆ ನೀಡಬೇಕು. ದೇಶದ ತೀರಾ ಕೆಳಮಟ್ಟದ ಹಳ್ಳಿಗಳಲ್ಲಿ ಸಹ ಕಂಪ್ಯೂಟರ್ ಶಿಕ್ಷಣ, ಅಂತರ್ಜಾಲ ಲಭ್ಯವಾಗಬೇಕು. ಆಗ ಕೈಬೆರಳಿನಲ್ಲಿಯೇ ಮಾಹಿತಿ ಸಂಗ್ರಹಿಸಬಹುದು. ಇದರಿಂದ ಸಮಯ, ಹಣ ಎರಡೂ ಉಳಿತಾಯವಾಗುತ್ತದೆ ಅಲ್ಲದೇ, ಇ-ಆಡಳಿದ ಸಮಗ್ರ ಬಳಕೆಯಾಗಬೇಕು ಎಂದರು.

ಭಾರತದಲ್ಲಿನ ಭ್ರಷ್ಟಾಚಾರ ತಡೆಗೆ ಕಾರ್ಪೊರೇಟ್ ಕ್ಷೇತ್ರದ ಕೊಡುಗೆ ಏನು? ಎಂಬ ದ್ವಿತೀಯ ಪಿಯು ವಿದ್ಯಾರ್ಥಿನಿ ಮೇಘನಾ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಪೊರೇಟ್ ವಲಯ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದೇ ಹೇಳಬಹುದು.

ಏಕೆಂದರೆ ಕಾರ್ಪೊರೇಟ್ ವಲಯದಿಂದಲೇ ಹೆಚ್ಚಿನ ತೆರಿಗೆ ಪಾವತಿಯಾಗುತ್ತಿದ್ದು, ಆರ್ಥಿಕ ಶಕ್ತಿಯಿಂದ ಮಾತ್ರವೇ ಎಲ್ಲಾ ಸೌಲಭ್ಯಗಳನ್ನು ಒದಗಿಸಬಹುದು. ಆದರೆ, ನಮ್ಮಲ್ಲಿನ ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರದಿಂದಾಗಿ ಆರ್ಥಿಕ ಬೆಳವಣಿಗೆಯು 1.5ರವರೆಗೆ ಕುಂಠಿತವಾಗಿದೆ ಎಂದು ಇತ್ತೀಚಿನ ಅಂಕಿ-ಅಂಶಗಳಿಂದ ತಿಳಿದುಬಂದಿದೆ ಎಂದರು.
 ದೇಶದ ಆಸ್ತಿಯೆಂದರೆ ಅದು ಯುವಜನತೆ ಮಾತ್ರ. ದೇಶದ ಅಭಿವೃದ್ಧಿ ಕಾರ್ಯವು ಸಹ ಯುವಜನತೆಯ ಮೇಲಿದೆ. ದೇಶದ ಅಭಿವೃದ್ಧಿಗೆ ಅನೇಕ ಅವಕಾಶಗಳಿದ್ದು, ಯುವಜನತೆ ಅಂತಹ ಅವಕಾಶಗಳ ಬಾಗಿಲನ್ನು ತೆರೆಯುವ ಕಾರ್ಯ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT