ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ಮೇಲೆ ಅನಗತ್ಯ ಆರೋಪ: ಸಿಎಂ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: `ಭಯೋತ್ಪಾದಕರ ಜಾಡು ಹಿಡಿಯುವಲ್ಲಿ ಹಿನ್ನಡೆ ಅನುಭವಿಸಿರುವ ಕೇಂದ್ರ ಸರ್ಕಾರ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಫೋಟದ ಕಡೆಗೆ ಬೆಟ್ಟು ಮಾಡುತ್ತಿದೆ~ ಎಂದು ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಶನಿವಾರ ತಿರುಗೇಟು ಕೊಟ್ಟರು.

ಗೃಹ ಸಚಿವ ಪಿ. ಚಿದಂಬರಂ  ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಯಾರಿಗೂ ಗೌರವ ತರುವ ನಡವಳಿಕೆಯಲ್ಲ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.

`ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟದ ಪ್ರಗತಿ ಕುರಿತು ಗೃಹ ಸಚಿವರಿಗೆ ಮಾಹಿತಿ ಕೊಡಲು ಸಿದ್ಧರಿದ್ದೇವೆ. ನಮ್ಮ ಪೊಲೀಸರು ಈ ಘಟನೆ ಸಂಬಂಧ ಇದುವರೆಗೆ 75ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ನಾವು ಸಮರ್ಥರಿದ್ದೇವೆ. ಕೇಂದ್ರದ ಬಳಿ ಹೆಚ್ಚಿನ ವಿವರಗಳಿದ್ದರೆ ಕೊಡಲಿ. ಇದನ್ನು ಬಿಟ್ಟು ನಿಂದಿಸುವ ಕೆಲಸ ಮಾಡಬಾರದು~  ಎಂದು ಕಿವಿಮಾತು ಹೇಳಿದರು.

~ಚಿದಂಬರಂ ಗೃಹ ಸಚಿವರಾದ ಮೇಲೆ ಏಳು ಸ್ಫೋಟ ಸಂಭವಿಸಿದೆ. ಒಂದೂ ಪತ್ತೆಯಾಗಿಲ್ಲ~ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಮಾಡಿರುವ ಟೀಕೆಗೆ ಪ್ರತಿಯಾಗಿ ಚಿದಂಬರಂ ಶುಕ್ರವಾರ ರಾಜ್ಯದ ಕಡೆ ಬೆರಳು ತೋರಿದ್ದರು. ~ಏಕೆ ಈ ಪ್ರಕರಣ ಪತ್ತೆ ಹಚ್ಚಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ~ ಎಂದು ಪ್ರಶ್ನಿಸಿದ್ದರು.

ಕಳೆದ ವರ್ಷ ಏಪ್ರಿಲ್ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಬಾಂಬ್ ಸ್ಫೋಟಿಸಿ 17 ಜನ ಗಾಯಗೊಂಡಿದ್ದರು. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಗಣಿಗಾರಿಕೆ ಪುನರಾರಂಭಕ್ಕೆ ಸುಪ್ರೀಂಗೆ ಪ್ರಮಾಣ ಪತ್ರ
~ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ಕೇಳಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ. ಪರಿಸರ ಕಾಳಜಿ ಇಟ್ಟುಕೊಂಡೇ ಗಣಿಗಾರಿಕೆ ನಡೆಸುತ್ತೇವೆ. ಗಣಿಗಾರಿಕೆ ಬಂದ್‌ನಿಂದ ಸುಮಾರು ಐವತ್ತು ಸಾವಿರ ಜನ ಉದ್ಯೋಗ   ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕೆ ರಾಜಧನ ಬರುವುದು ನಿಂತಿದೆ. ಇವೆಲ್ಲ ಅಂಶಗಳನ್ನು ಪ್ರಮಾಣ ಪತ್ರದಲ್ಲಿ ವಿವರಿಸಲಾಗುತ್ತದೆ~ ಎಂದರು.

`ಬಳ್ಳಾರಿ ರೆಡ್ಡಿಗಳ ಪ್ರಕರಣ ಇನ್ನು ತನಿಖೆ ಹಂತದಲ್ಲಿದೆ. ಅವರೀಗ ಆರೋಪಿಗಳೇ ವಿನಾ ಅಪರಾಧಿಗಳಿಲ್ಲ. ರೆಡ್ಡಿಗಳೀಗ ನಮ್ಮ ಪಕ್ಷದಲ್ಲಿದ್ದಾರೆ. ಅವರನ್ನು ಬೆಂಬಲಿಸುವುದು ನಮ್ಮ ಧರ್ಮ. ತನಿಖೆ ಮುಗಿದು ಅವರು ಅಪರಾಧಿಗಳು ಎಂದು ನಿರ್ಧಾರವಾದ ಬಳಿಕ ಮುಂದೇನು ಎಂಬ ಕುರಿತು ಆಲೋಚಿಸೋಣ~ ಎಂದು ಸದಾನಂದಗೌಡ ಹೇಳಿದರು.

ಮಾಜಿ ಸಚಿವ ಶ್ರೀರಾಮುಲು ಶಾಸಕ ಸ್ಥಾನಕ್ಕೆ ಕೊಟ್ಟಿರುವ ರಾಜೀನಾಮೆ ಕುರಿತ ತೀರ್ಮಾನ ವಿಧಾನಸಭೆ ಸ್ಪೀಕರ್‌ಗೆ ಬಿಟ್ಟಿದ್ದು. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ರಾಜೀನಾಮೆ ವಾಪಸ್ ಪಡೆಯುವಂತೆ ಅವರಿಗೆ ಮನವಿ ಮಾಡಲಾಗಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು ಮುಖ್ಯಮಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT