ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ 8 ಟೋಲ್ ರಸ್ತೆ ನಿರ್ಮಾಣ: ಉದಾಸಿ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

 ಬೆಂಗಳೂರು: ರಾಜ್ಯದಲ್ಲಿ ಎಂಟು ಟೋಲ್ ರಸ್ತೆಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಆರ್.ವಿ. ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಟೋಲ್ ರಸ್ತೆಗಳ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ 15ರಿಂದ 20 ಟೋಲ್ ರಸ್ತೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ದೆಹಲಿಯಿಂದ ಬೆಂಗಳೂರಿನವರೆಗೆ 43 ಕಡೆಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಕಳೆದ ವರ್ಷದಿಂದ ಇದುವರೆಗೆ 12 ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಇಂಧನ ಹಾಗೂ ಸಮಯದ ಉಳಿತಾಯಕ್ಕಾಗಿ ಟೋಲ್ ರಸ್ತೆಗಳನ್ನು ನಿರ್ಮಿಸುವುದು ಅನಿವಾರ್ಯವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಂದ ಮಾತ್ರ ಟೋಲ್ ಸಂಗ್ರಹಿಸಲು ಉದ್ದೇಶಿಸಿರುವುದರಿಂದ ಜನತೆ ಟೋಲ್ ರಸ್ತೆಗಳ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದು ಸಚಿವರು ಮನವಿ ಮಾಡಿದರು.

ರಸ್ತೆ ಅಭಿವೃದ್ಧಿ: ರಾಜ್ಯದಲ್ಲಿ 20,769.78 ಕಿ.ಮೀ. ರಾಜ್ಯ ಹೆದ್ದಾರಿ ಪೈಕಿ 14,305.16 ಕಿ.ಮೀ. ಉದ್ದದ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದವು. ಇದರಲ್ಲಿ 13,669.47 ಕಿ.ಮೀ. ಉದ್ದದ ರಸ್ತೆ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಉಳಿದ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 2193 ಕೋಟಿ ರೂಪಾಯಿ ವೆಚ್ಚದಲ್ಲಿ 4133 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೂ 605 ಕೋಟಿ ರೂಪಾಯಿ ವೆಚ್ಚದಲ್ಲಿ 3122 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣ ಯೋಜನೆ ಪರಿಶೀಲನೆಯಲ್ಲಿದೆ. ಒಟ್ಟು 2797 ಕೋಟಿ ರೂ.ವೆಚ್ಚದಲ್ಲಿ 7255 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT