ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ಕ್ರಮ ಕೋರ್ಟ್‌ನಲ್ಲೇಕೆ ಪ್ರಶ್ನಿಸಲಿಲ್ಲ?

Last Updated 24 ಜನವರಿ 2011, 19:40 IST
ಅಕ್ಷರ ಗಾತ್ರ

ನವದೆಹಲಿ: ‘ಭೂ ಹಗರಣ’ದ ಸಂಬಂಧ ಮೊಕದ್ದಮೆ ಹೂಡಲು ವಕೀಲರಿಗೆ ಅನುಮತಿ ನೀಡಿದ ರಾಜ್ಯಪಾಲ ಭಾರದ್ವಾಜ್ ಅವರ ಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್‌ನಲ್ಲಿ ಯಾಕೆ ಪ್ರಶ್ನಿಸಲಿಲ್ಲ’. -ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಪ್ರಶ್ನೆ ಇದು. ರಾಜ್ಯಪಾಲರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಮೊದಲು ಹೇಳಿದ್ದರು. ಆದರೆ, ಭಾನುವಾರ ದೆಹಲಿಗೆ ಬಂದ ಬಳಿಕ ಅವರ ನಿಲುವು ಬದಲಾಯಿತು.

ಹಿರಿಯ ಬಿಜೆಪಿ ಮುಖಂಡ ಅರುಣ್ ಜೇಟ್ಲಿ, ಖ್ಯಾತ ವಕೀಲರಾದ ರಾಂ ಜೇಠ್ಮಲಾನಿ, ಸತ್ಯಪಾಲ್ ಜೈನ್ ಅವರನ್ನು ಭೇಟಿಯಾಗಿ ಸಮಾಲೋಚಿಸಿದ ಬಳಿಕ ಮುಖ್ಯಮಂತ್ರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಚಾರ ಕೈಬಿಟ್ಟರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಹೈಕೋರ್ಟ್ ಅಕಸ್ಮಾತ್ ಅರ್ಜಿ ತಿರಸ್ಕರಿಸಿದರೆ ಯಡಿಯೂರಪ್ಪ ಅವರಿಗೆ ಹಿನ್ನಡೆ ಆಗುತ್ತದೆ. ಬಳಿಕ  ರಾಜೀನಾಮೆಗೆ ಒತ್ತಡ ಹೆಚ್ಚಬಹುದು. ಪಕ್ಷದೊಳಗಿರುವ ‘ಹಿತಶತ್ರು’ಗಳು ಮತ್ತೊಮ್ಮೆ ಎದ್ದು ಕೂರಬಹುದು. ಇದರಿಂದ ಹೈಕೋರ್ಟ್‌ಗೆ ಹೋಗದಿರುವುದೇ ಲೇಸು ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ನೀಡಿದರು.

ಅನಂತರ ಯಡಿಯೂರಪ್ಪ ನಿಲುವು ಬದಲಾಯಿತು. ರಾಜ್ಯಪಾಲರ ಕ್ರಮದ ವಿರುದ್ಧ ಹೈಕೋರ್ಟ್‌ಗೆ ಹೋಗುವ ಬದಲು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಕೀಲರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿರುದ್ಧ ಕಾನೂನು ಸಮರ ನಡೆಸಲು ತೀರ್ಮಾನಿಸಲಾಯಿತು.

ವಕೀಲರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಬೇಕು. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಬೇಕು. ಆಮೇಲೆ ತನಿಖೆ ಆರಂಭಿಸಬೇಕು. ಬಳಿಕ ದೋಷಾರೋಪ ಪಟ್ಟಿ ಅಥವಾ ‘ಬಿ ರಿಪೋರ್ಟ್’ ಸಲ್ಲಿಸಬೇಕು. ಇಷ್ಟೆಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಸಾಕಷ್ಟು ಕಾಲಾವಕಾಶ ಬೇಕು.

ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಸಮಯ ತಳ್ಳುವಂತೆ ಕಾನೂನು ತಜ್ಞರು ಸಲಹೆ ಮಾಡಿದ್ದಾರೆ. ಇದೇ ತರಹದ ಸಲಹೆಯನ್ನು ಬಿಜೆಪಿ ಹೈಕಮಾಂಡ್‌ನಲ್ಲಿ ಯಡಿಯೂರಪ್ಪ ಅವರಿಗೆ ಹತ್ತಿರವಾಗಿರುವ ಕೆಲವು ಮುಖಂಡರು ನೀಡಿದ್ದಾರಂತೆ.ಪಕ್ಷದ ಒಳಗಿರುವ ಹಿತಶತ್ರುಗಳಿಗೆ ರಾಜ್ಯಪಾಲರ ತೀರ್ಮಾನದಿಂದ ಅತ್ಯಂತ ಖುಷಿಯಾಗಿದೆ. ಆದರೆ,  ಯಡಿಯೂರಪ್ಪ ಅವರನ್ನು ಬೆಂಬಲಿಸುವ ತೀರ್ಮಾನವನ್ನು ಬಿಜೆಪಿ ಮಾಡಿರುವುದರಿಂದ ‘ಅಪಸ್ವರ’ ಎತ್ತಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಒಗ್ಗಟ್ಟು ಕಾಣುತ್ತಿದೆ. ಇದರಿಂದ ಮುಖ್ಯಮಂತ್ರಿ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ಪಾರಾಗಿದ್ದಾರೆ. ಯಡಿಯೂರಪ್ಪ ಭಾನುವಾರ ದೆಹಲಿಗೆ ಬಂದಿದ್ದು ಎರಡು ಕಾರಣಕ್ಕೆ. ಮುಖ್ಯವಾದ ಮೊದಲ ಕಾರಣ ಕಾನೂನು ತಜ್ಞರ ಜತೆ ಸಮಾಲೋಚನೆ.ಮತ್ತೊಂದು ರಾಷ್ಟ್ರಪತಿಗೆ ಕೊಟ್ಟ ಮನವಿಗೆ ಅಂತಿಮ ರೂಪ ನೀಡುವುದು.

ಇದಕ್ಕೆ ಕೆಲವು ದಿನ ಮೊದಲು ಆಗಮಿಸಿದ್ದ ಯಡಿಯೂರಪ್ಪ ಬಿಡುವಿಲ್ಲದೆ ಕಾನೂನು ತಜ್ಞರು ಮತ್ತು ಪಕ್ಷದ ಮುಖಂಡರ ಜತೆ ಚರ್ಚಿಸಿದ್ದರು. ಎರಡು ಸುತ್ತಿನ ಚರ್ಚೆ ಬಳಿಕ ಹೈಕೋರ್ಟ್‌ಗೆ ಮೊರೆ ಹೋಗುವ ಆಲೋಚನೆ ಕೈಬಿಟ್ಟರು ಎಂಬುದು ಮೂಲಗಳ ಸ್ಪಷ್ಟನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT