ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಜಿಪಂ ಅತಂತ್ರ, ಜೆಡಿಎಸ್ ನಿರ್ಣಾಯಕ

Last Updated 5 ಜನವರಿ 2011, 9:55 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಪಂಚಾಯಿತಿ ಗದ್ದುಗೆ ಏರುವ ಕನಸು ಕಂಡಿದ್ದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಕನಸಿಗೆ ಜಿಲ್ಲೆಯ ಮತದಾರ ಪ್ರಭು ತಣ್ಣೀರೆರಚಿದ್ದು, ಜಾಣ ಮತದಾರನ ಚಮತ್ಕಾರಕ್ಕೆ ರಾಯಚೂರು ಜಿಲ್ಲಾ ಪಂಚಾಯಿತಿ ಅತಂತ್ರಗೊಂಡಿದೆ.

35 ಕ್ಷೇತ್ರದಲ್ಲಿ ಕಾಂಗ್ರೆಸ್ 15, ಬಿಜೆಪಿ 11 ಹಾಗೂ ಜೆಡಿಎಸ್ 9 ಸ್ಥಾನಗಳಿಸಿದ್ದು, ಸ್ವಂತ ಸದಸ್ಯ ಬಲದಿಂದ ಯಾವೋಂದು ಪಕ್ಷ ಅಧಿಕಾರ ಗದ್ದುಗೆ ಏರಲು ಸಾಧ್ಯವಿಲ್ಲ. ಹೆಚ್ಚು ಸ್ಥಾನ ಗಳಿಸಿದ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳು ಜಿಪಂ ಚುಕ್ಕಾಣಿ ಹಿಡಿಯಬೇಕಾದರೆ 9 ಕ್ಷೇತ್ರದಲ್ಲಿ ವಿಜಯ ಸಾಧಿಸಿರುವ ಜೆಡಿಎಸ್‌ಗೆ ತಲೆಬಾಗಬೇಕು!

ಕಳೆದ ಬಾರಿ ಚುನಾವಣೆಯಲ್ಲಿ 26 ಸ್ಥಾನಗಳಿಸಿದ್ದ ಕಾಂಗ್ರೆಸ್ ಈ ಬಾರಿ 15 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರೂ ಜಿಲ್ಲೆಯಲ್ಲಿ ಅದರ ಅಸ್ತಿತ್ವವನ್ನು ಮತದಾರ ಉಳಿಸಿದ್ದಾನೆ. ಅದೇ ರೀತಿ ಕೇವಲ 1 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 11 ಸ್ಥಾನ ಗೆದ್ದಿದೆ. ಆಡಳಿತರೂಢ ಪಕ್ಷವಾಗಿರುವುದರಿಂದ ಆ ಪಕ್ಷಕ್ಕೆ ಎದೆ ತಟ್ಟಿಕೊಳ್ಳುವಂಥ ಗೆಲುವೇನಲ್ಲ. ಅದೇ ರೀತಿ ಕಳೆದ ಬಾರಿ ಕೇವಲ 6 ಸ್ಥಾನ ಗಳಿಸಿದ್ದ ಜಾತ್ಯತೀತ ಜನತಾ ದಳ ಪಕ್ಷವು ಈ ಬಾರಿ 9 ಸ್ಥಾನ ಗಳಿಸಿದೆ. ಮೂರು ಸ್ಥಾನ ಹೆಚ್ಚು ಗಳಿಸುವ ಮೂಲಕ ನಿರ್ಣಾಯಕ ಪಾತ್ರ ವಹಿಸುವ ಜವಾಬ್ದಾರಿ ಆ ಪಕ್ಷದ ಹೇಗಲೇರಿದೆ. ಮುಖ್ಯವಾಗಿ ಅಧಿಕಾರಕ್ಕೆ ಹಪಹಪಿಸುತ್ತಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಜೆಡಿಎಸ್‌ನ ಗೆಲುವು ಎರಡೂ ಪಕ್ಷಗಳಿಗೂ ನುಂಗಲಾರದ ತುತ್ತಾಗಿದೆ. ಅಧಿಕಾರಕ್ಕಾಗಿ ಆ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಸ್ಥಿತಿ ತಲುಪಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸಿದರೆ 24 ಸ್ಥಾನ ಬಲವಾಗುತ್ತದೆ. ಅಧಿಕಾರ ಸರಳ. ಬಿಜೆಪಿ ಜೊತೆ ಕೈ ಜೋಡಿಸಿದರೆ 20 ಸ್ಥಾನ ಬಲ ದೊರಕುತ್ತದೆ. ಆದರೆ, ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಇದು ಅಸಾಧ್ಯ. ಕಡಿಮೆ ಸ್ಥಾನ ಗಳಿಸಿದ್ದರೂ ಕಳೆದ ಬಾರಿಯಂತೆ ಈ ಬಾರಿಯೂ ಜಿಪಂನಲ್ಲಿ ತನ್ನದೇ ಆದ ವರ್ಚಸ್ಸು ಉಳಿಸಿಕೊಳ್ಳುವ ಇರಾದೆ ಇದೆ.

ಹೀಗಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಬಹುದು. ಆದರೆ ಬಿಜೆಪಿ ಜೊತೆ ಅಸಾಧ್ಯವೇ ಸರಿ. ಆದಾಗ್ಯೂ ಈ ಹಿಂದಿನ ಜಿಪಂ ಆಡಳಿತ ಅವಧಿಯಲ್ಲಿ ಆಪರೇಷನ್ ಕಮಲದ ಮಾದರಿಯಲ್ಲಿ ಚಮತ್ಕಾರ ನಡೆದು ಜೆಡಿಎಸ್‌ನ 9 ಜನರಲ್ಲಿ 7-8 ಜನ ಬಿಜೆಪಿ ಹಾರಿದರೆ ಅಧಿಕಾರದ ಗದ್ದುಗೆ ಬಿಜೆಪಿಯದ್ದೇ.

ಆದರೆ, ಇದು ಅಷ್ಟು ಸುಲಭ ಸಾಧ್ಯವಿಲ್ಲ. ದೇವದುರ್ಗ ತಾಲ್ಲೂಕಿನ 6 ಸ್ಥಾನಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಹೀಗಾಗಿ ಅನರ್ಹಗೊಂಡ ಶಾಸಕ, ಮಾಜಿ ಸಚಿವ ಶಿವನಗೌಡ ನಾಯಕ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಲ್ಲದೇ ಪ್ರತಿಷ್ಠೆ ಪ್ರಶ್ನೆಯಾಗಿ ತೆಗೆದುಕೊಂಡಿದ್ದರು. ಅಲ್ಲದೇ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಅವರ ಹಿಡಿತ ಪ್ರಬಲವಾಗಿದೆ. ಬೇರೆ ಕಡೆಯ ಮೂರು ಸದಸ್ಯರನ್ನು ಬಿಜೆಪಿ ಏಗರಿಸಿದರೂ ಈ ಕ್ಷೇತ್ರದ ಜೆಡಿಎಸ್ ಸದಸ್ಯರು ಭದ್ರ!

ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸಬಹುದು. ಆದರೆ, ಕಡಿಮೆ ಸ್ಥಾನ ಗಳಿಸಿದ್ದರೂ ಅಧಿಕಾರ ಗದ್ದುಗೆ ಕನಸು ಜೆಡಿಎಸ್‌ಗೂ ಇದೆ. ಹೀಗಾಗಿ ಅಧ್ಯಕ್ಷ ಹುದ್ದೆಯೇ ತನಗೆ ಬೇಕು ಎಂಬ ಬಲವಾದ ಶರತ್ತು ಹಾಕಿದರೂ ಅಚ್ಚರಿ ಇಲ್ಲ.
ಆದರೆ, ಜಿಲ್ಲೆಯ ಜಿಲ್ಲಾ ಪಂಚಾಯಿತಿ ರಾಜಕಾರಣ, ಅಧಿಕಾರದ ಗದ್ದುಗೆ ರುಚಿಯನ್ನು ಹಲವು ದಶಕಗಳ ಕಾಲ ಅನುಭವಿಸುತ್ತ ಬಂದ ಕಾಂಗ್ರೆಸ್ ಪಕ್ಷವು ಕೆಲ ದಿನ ಕಾದು ನೋಡುವ ತಂತ್ರ ಅನುಸರಿಸಬಹುದು. ಜೆಡಿಎಸ್‌ಗೆ ಬಿಜೆಪಿ ಸಖ್ಯ ಬೇಕಾಗಿಲ್ಲ. ಅದಕ್ಕೆ ಕಾಂಗ್ರೆಸ್ ಜೊತೆ ಕೈ ಜೋಡಿಸುವುದು ಅನಿವಾರ್ಯ ಎಂಬ ಹಿನ್ನೆಲೆಯಲ್ಲಿ ಜೆಡಿಎಸ್‌ನ್ನು ಉಪಾಯವಾಗಿ ಬಳಸಿಕೊಳ್ಳುವ ಹವಣಿಕೆ ಎದ್ದು ಕಾಣುತ್ತಿದೆ.

ಜಿಲ್ಲೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದ್ದರೂ ಈ ಚುನಾವಣೆಯಲ್ಲಿ ಮತದಾರ ಈ ಬಾರಿ ಕೈ ಹಿಡಿದಿದ್ದಾರೆ. ಗ್ರಾಮೀಣದಲ್ಲಿ ನಮ್ಮ ಬೇರು ಸದೃಢವಾಗಿವೆ ಎಂಬ ಕಾಂಗ್ರೆಸ್‌ನವರ ಹೇಳಿಕೆ ಸ್ವಲ್ಪ ಮಟ್ಟಿಗೆ ಸತ್ಯ ಎಂಬುದನ್ನು ಮತದಾರ ತೋರಿಸಿದ್ದಾನೆ. ಆದರೆ, ಹಿಂದಿನಂತೆ ಪೂರ್ಣ ಸ್ಥಾನ ಗೆಲ್ಲಿಸಿ ನಂತರ ನಡೆಯುತ್ತಿದ್ದ ಅಧಿಕಾರದ ಹುಚ್ಚಾಟಕ್ಕೆ ಈ ಬಾರಿ ಮತದಾರ ಮೂಗುದಾರ ಹಾಕಿದ್ದಾನೆ.

ಒಟ್ಟಾರೆಯಾಗಿ ಮತದಾರ ಪ್ರಭು ಅತಂತ್ರ ಜಿಪಂ ಸ್ಥಿತಿ ಸೃಷ್ಟಿಸುವ ಮೂಲಕ ಅಧಿಕಾರದ ಅಬ್ಬರ, ಪಕ್ಷ ಪ್ರತಿಷ್ಠೆ ಸಾಕು ಎಚ್ಚರಿಕೆ ಮತ್ತು ಹೊಂದಾಣಿಕೆಯಿಂದ ಆಡಳಿತ ನಡೆಸಿ ಎಂಬ ಸಂದೇಶ ರವಾನಿಸಿದ್ದಾನೆ. ಆತನ ಈ ಸೂಕ್ಷ್ಮ ನಿರೀಕ್ಷೆಯನ್ನು ಎಷ್ಟರ ಮಟ್ಟಿಗೆ ಈ ಪಕ್ಷಗಳು ಅರ್ಥ ಮಾಡಿಕೊಳ್ಳಬಲ್ಲವೋ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT