ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಬಾಗದಲ್ಲಿ ಮಣ್ಣು ಪರೀಕ್ಷಾ ಕೇಂದ್ರ

Last Updated 9 ಅಕ್ಟೋಬರ್ 2012, 10:25 IST
ಅಕ್ಷರ ಗಾತ್ರ

ರಾಯಬಾಗ: ತಾಲ್ಲೂಕಿನಲ್ಲಿ ರೈತರ ಜಮೀನಿನಲ್ಲಿನ ಮಣ್ಣು ಪರೀಕ್ಷೆಗಾಗಿ ಕೇಂದ್ರವಿಲ್ಲದ್ದರಿಂದ ರೈತರು ಜಮಖಂಡಿ ಹಾಗೂ ಗೋಕಾಕಗಳಿಗೆ ಹೋಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಆದ್ದರಿಂದ ರೈತರ ಆಗ್ರಹದ ಮೇರೆಗೆ ಶೀಘ್ರವಾಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲ್ಲೂಕಿನ ರೈತರಿಗಾಗಿ ಮಣ್ಣು ಪರೀಕ್ಷಾ ಕೇಂದ್ರವನ್ನು ಮಂಜೂರು ಮಾಡಿಸಿಕೊಡುವುದಾಗಿ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಸೋಮವಾರ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ರಾಯಬಾಗ ತಾಲ್ಲೂಕು ಮಟ್ಟದ ಕೃಷಿ ಮಾಹಿತಿ, ಜಾಗೃತಿ ಆಂದೋಲನ ಹಾಗೂ ರೈತ ಸಂಪರ್ಕ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಾಯಕ ನಿರ್ದೇಶಕರ ಕಚೇರಿಗೆ ವಿದ್ಯುತ್ ಸೌಲಭ್ಯ ಹಾಗೂ ಆವರಣ ಗೋಡೆಯನ್ನು ಸಹ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ರೈತರು ನೂತನ ತಂತ್ರಜ್ಞಾನ ಜ್ಞಾನ ಬಳಸಬೇಕು. ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಸಲಹೆ ನೀಡಿದರು. ರೈತರು

ಕೇವಲ ಸರ್ಕಾರದ ಸೌಲಭ್ಯಗಳಿಗೆ ಕೈಚಾಚದೆ ಸ್ವಂತ ಜಮೀನುಗಳಲ್ಲಿ ಸ್ವತಃ ದುಡಿದು ಒಕ್ಕಲುತನಕ್ಕೆ ಒತ್ತು  ಕೊಡಲು ಸಲಹೆ ನೀಡಿದರು. ಮುಂದಿನ ವರ್ಷ ಪ್ರತಿ ಎಕರೆಗೆ 200 ಟನ್ ಬೆಳೆಯುವ ರೈತರಿಗೆ 10ಸಾವಿರ ಬಹುಮಾನ ನೀಡುವುದಾಗಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್. ಬಿ. ಘಾಟಗೆ,  ತಾವು ಸ್ವತಃ ಒಕ್ಕಲುತನ ಮಾಡಿ ಪ್ರತಿ ಎಕರೆಗೆ 173 ಟನ್ ಕಬ್ಬು ಬೆಳೆದಿರುವುದಾಗಿ  ಹೇಳಿದರು. ಕೃಷಿ ಇಲಾಖೆಯಿಂದ ಸಲಹೆ ಪಡೆದು ಹೆಚ್ಚು ಇಳುವರಿ ತೆಗೆಯಲು ಮಾಡಿದರು.

ಪ್ರಾದೇಶಿಕ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಬಾಳಪ್ಪ ಬೆಳಕೂಡ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಅಪ್ಪಾಸಾಬ  ಮಳವಾಡ ಮಾತನಾಡಿದರು.

ಮಧ್ಯಾಹ್ನ ರೈತರೊಂದಿಗೆ ಸಂವಾದ ಹಾಗೂ ತಜ್ಞರಿಂದ ತಾಂತ್ರಿಕ ಸಲಹೆ ನೀಡಲಾಯಿತು. ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ರೈತ ಸಂಪರ್ಕ ಕೇಂದ್ರವನ್ನು ಸಹ ಉದ್ಘಾಟಿಸಲಾಯಿತು.

2010-11ನೇ ಸಾಲಿನಲ್ಲಿ ಕಬ್ಬಿನ ಬೆಳೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಡಚಿಯ ಸುಂದರಾಬಾಯಿ ಘಾಟಗೆ, ದ್ವಿತೀಯ ಸ್ಥಾನ ಪಡೆದ ಬಸ್ತವಾಡದ  ಈರಪ್ಪ ಮಂಗಸೂಳಿ, ತೃತೀಯ ಸ್ಥಾನ ಪಡೆದ ಪರಮಾನಂದವಾಡಿಯ  ಅನಿಲ ಅಕ್ಕೋಳ ಅವರನ್ನು ಸತ್ಕರಿಸಲಾಯಿತು.

ತಹಶೀಲ್ದಾರ ಶಿವಾನಂದ ಸಾಗರ, ತಾ.ಪಂ. ಕಾ.ನಿ. ವೀರಣ್ಣ ವಾಲಿ, ಜಿಲ್ಲಾ ಪಂಚಾಯ್ತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿತೇಂದ್ರ ಜಾಧವ, ತಾ.ಪಂ. ಅಧ್ಯಕ್ಷ ಲಕ್ಷ್ಮಣ ಗವಾನಿ, ಉಪಾಧ್ಯಕ್ಷೆ ಸುಮಿತ್ರಾ ಮುನ್ಯಾಳ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಾಂತಾ ಕಲ್ಲೋಳಕರ, ನೀಲವ್ವ ಮಳವಾಡ ಹಾಗೂ ತಾಲ್ಲೂಕಿನ ರೈತರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೆ.ಎಸ್.ಅಗಸನಾಳ ಸ್ವಾಗತಿಸಿದರು. ಆರ್. ಟಿ. ಜಿಲ್ಲೆದಾರ ಕಾರ್ಯಕ್ರಮ ನಿರೂಪಿಸಿದರು. ಎಂ. ಎಲ್. ಜನಮಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT