ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪಕ್ಷಿಗೆ ಇಲ್ಲ ರಕ್ಷಣೆ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

 ಪಕ್ಷಿಗಳು ಈ ಭೂಮಿಯ ಮೇಲಿನ ಜೀವರಾಶಿಯ ಅವಿಭಾಜ್ಯ ಭಾಗ. ಅವು ಇತರೇ ಜೀವಿಗಳಿಗೆ ಮತ್ತು ಮನುಷ್ಯರಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಮಾಡುವ ಉಪಕಾರಕ್ಕೆ ಎಣೆಯೇ ಇಲ್ಲ.

ಬಹುತೇಕ ಪಕ್ಷಿಗಳು `ನಿಸರ್ಗದ ಸ್ವಚ್ಛತಾ ಕಾರ್ಮಿಕರು~. ಏಕೆಂದರೆ ಭೂಮಿಯ ಮೇಲೆ ಬಿದ್ದ ಕೊಳಕನ್ನು, ಉಪದ್ರವಕಾರಿ ಕ್ರಿಮಿಕೀಟ ಸೂಕ್ಷ್ಮಜೀವಿಗಳನ್ನು ತಿನ್ನುತ್ತವೆ; ಪರಾಗಸ್ಪರ್ಶ, ಬೀಜ ಪ್ರಸರಣ ಮುಂತಾದ ಕಾರ್ಯಗಳಲ್ಲೂ ಮಹತ್ತರವಾದ ಕೊಡುಗೆಯನ್ನು ನೀಡುತ್ತಿವೆ.

ಅವುಗಳ ನಡೆದಾಟ, ಹಾರಾಟ, ನರ್ತನ ನೋಡುವುದು, ಚಿಲಿಪಿಲಿ ದನಿ ಕೇಳುವುದೇ ಒಂದು ಸೊಗಸು. ಸೂರ್ಯೋದಯದಿಂದ ಆರಂಭಿಸಿ ಸೂರ್ಯಾಸ್ತದ ವರೆಗೂ ನಿರಂತರವಾಗಿ ಚಟುವಟಿಕೆಗಳಿಂದ ಕೂಡಿರುವುದೇ ಇವುಗಳ ಅದ್ಭುತ ಕ್ರಿಯೆ. ಇಂಥ ಪಕ್ಷಿ ಸಂಕುಲಗಳಲ್ಲಿ ಎದ್ದುಕಾಣುವುದು ನವಿಲು.

ಅದರ ಗರಿ, ಮಾಟ, ನರ್ತನ, ಚಿನ್ನಾಟಕ್ಕೆ ಮರುಳಾಗದವರೇ ಇಲ್ಲ. ಹೀಗಾಗಿಯೇ ಅದಕ್ಕೆ ರಾಷ್ಟ್ರಪಕ್ಷಿ ಎಂಬ ಹಿರಿಮೆಯೂ ದೊರಕಿದೆ. ಅದರ ಉಳಿವಿಗಾಗಿ ನಮ್ಮ ರಾಜ್ಯದಲ್ಲಿ ಆದಿಚುಂಚನಗಿರಿ ಜತೆಗೆ ಹಾವೇರಿ ಜಿಲ್ಲೆ ಬಂಕಾಪುರ ಕೋಟೆಯಲ್ಲೊಂದು ನವಿಲುಧಾಮ ಇದೆ.

ನವಿಲು ಸಂತತಿಗಳ ಸಂರಕ್ಷಣೆ, ಅವು ನಿರ್ಭಯವಾಗಿ ಬದುಕುವ ವಾತಾವರಣ ಕಲ್ಪಿಸುವುದೇ ಈ ಧಾಮಗಳ ಮುಖ್ಯ ಉದ್ದೇಶ. ಆದರೆ ಬಂಕಾಪುರ ನವಿಲುಧಾಮದಲ್ಲಿ ಇವಕ್ಕೆ ಸೂಕ್ತ ರಕ್ಷಣೆ ದೊರಕುತ್ತಿಲ್ಲವೇನೋ ಎಂಬ ಅನುಮಾನ ಈಗೀಗ ಪಕ್ಷಿಪ್ರಿಯರಲ್ಲಿ ಮೂಡತೊಡಗಿದೆ. ಇನ್ನೊಂದು ಕಡೆ ಈ ನವಿಲುಗಳು ತಮ್ಮ ಬೆಳೆ ತಿಂದು ಹಾಕುತ್ತಿವೆ ಎಂಬ ಆಕ್ರೋಶ ಸುತ್ತಮುತ್ತಲ ಭಾಗದ ರೈತರಲ್ಲಿ ಬೆಳೆಯಲಾರಂಭಿಸಿದೆ.

ಬಂಕಾಪುರ ನವಿಲುಧಾಮದಿಂದ ಕೇವಲ 8 ಕಿ.ಮೀ ದೂರ ಹುಲಿಕಟ್ಟಿ ಗ್ರಾಮದಲ್ಲಿ ಈಚೆಗೆ ಕಂಡುಬಂದ 8 ನವಿಲುಗಳ ಸಾಮೂಹಿಕ ಹತ್ಯೆ ಈ ಆತಂಕ- ಆಕ್ರೋಶಗಳಿಗೆ ಸಾಕ್ಷಿ.
ಹಾವೇರಿಯಿಂದ ಕೇವಲ 22 ಕಿ.ಮೀ ದೂರ, ರಾಷ್ಟ್ರೀಯ ಹೆದ್ದಾರಿಗೆ ತೀರ ಸನಿಹದಲ್ಲಿ ಬಂಕಾಪುರ ಕೋಟೆಯ ಕಂದಕಗಳ ಅವಶೇಷಗಳ ನಡುವೆ 139 ಎಕರೆ ಜಾಗದಲ್ಲಿ ಈ ನವಿಲುಧಾಮ ಅಸ್ತಿತ್ವಕ್ಕೆ ಬಂದು 6 ವರ್ಷ ಪೂರ್ಣಗೊಂಡಿದೆ. ಇದು 6 ಸಾವಿರಕ್ಕೂ ಹೆಚ್ಚು ನವಿಲುಗಳಿಗೆ ಆಶ್ರಯ ನೀಡಿದೆ. ನವಿಲುಗಳ ಸಂತಾನಾಭಿವೃದ್ಧಿಗೆ ಹೇಳಿ ಮಾಡಿಸಿದಂತ ಸ್ಥಳ ಎನ್ನುವುದು ಇದರ ಇನ್ನೊಂದು ಹೆಗ್ಗಳಿಕೆ.

ನವಿಲುಧಾಮವೆಂದು ಘೋಷಣೆ ಮಾಡಿ ತನ್ನ ಜವಾಬ್ದಾರಿ ಮುಗಿಯಿತು ಎಂದು ಭಾವಿಸಿದಂತಿದೆ ಸರ್ಕಾರ. ಇದಕ್ಕಾಗಿ ಯಾವುದೇ ವಿಶೇಷ ಅನುದಾನ ಬಿಡುಗಡೆ ಮಾಡುವ ಗೋಜಿಗೇ ಹೋಗಿಲ್ಲ.
 
ಹೀಗಾಗಿ ನವಿಲುಧಾಮದ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ. ಉರುವಲಿಗಾಗಿ ಅಲ್ಲಿನ ಮರಗಳ ಸಾಗಣೆ ನಿರಂತರವಾಗಿ ನಡೆಯುತ್ತಿದೆ. ನೈಸರ್ಗಿಕ ಕಾಡು ಈಗ ಕಾಂಕ್ರೀಟ್ ಕಾಡಾಗುತ್ತಿದೆ.

ಇಲ್ಲಿ ನವಿಲುಗಳಷ್ಟೇ ಅಲ್ಲದೆ ಮರಕುಟಿಗ, ಕೊಂಬಿನ ಗೂಬೆ, ಮಡಿವಾಳ ಹಕ್ಕಿ, ನೈಟ್‌ಜಾರ್, ಚುಕ್ಕಿ ಮುನಿಯಾ, ಬಾಲದಂಡೆ ಹಕ್ಕಿ, ಬ್ಯಾಬ್ಲರ್, ನೊಣಹಿಡುಕ, ಹಾರ್ನ್‌ಬಿಲ್ ಮುಂತಾದ ಅನೇಕ ಜಾತಿಯ ಪಕ್ಷಿ ಸಂಕುಲಗಳಿವೆ. ಇವುಗಳಿಗೆ ಆಶ್ರಯವಾಗಿ ಜಾಲಿ ಮತ್ತು ಹಿಪ್ಪೆ ಮರಗಳು ಪಕ್ಷಿಗಳಿಗೆ ಸಂತಾನಾಭಿವೃದ್ಧಿ ಹಾಗೂ ವಿಶ್ರಾಂತಿಗೆ ಅನುಕೂಲವಾಗಿದೆ.

ಬಂಕಾಪುರದ ನವಿಲುಧಾಮ ಎನ್ನುವುದು ಹೆಸರಿಗೆ ಮಾತ್ರ. ಏಕೆಂದರೆ ಇದರ ಸುತ್ತಮುತ್ತ ಹೊಲಗದ್ದೆಗಳಿವೆ. ಪಶು ಸಂಗೋಪನಾ ಇಲಾಖೆಯ ಹಸು ತಳಿ ಅಭಿವೃದ್ಧಿ ಕೇಂದ್ರವಿದೆ. ಅಲ್ಲಿನ ಜಾನುವಾರುಗಳನ್ನು ಮೇಯಲು ಹೊರಗೆ ಬಿಡುವುದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ.

ಈ ಸಲ ಮಳೆ ಕೈಕೊಟ್ಟಿದೆ. ಪ್ರಾಣಿ ಪಕ್ಷಿಗಳಿಗೆ ಸ್ವಾಭಾವಿಕ ಆಹಾರ ಸಿಗುತ್ತಿಲ್ಲ. ಹೀಗಾಗಿ ಅವು ಆಹಾರ ಹುಡುಕಿಕೊಂಡು ಹೋಗುವುದು ಸರ್ವೆಸಾಮಾನ್ಯ. ನವಿಲುಗಳು ಮೊಳಕೆಯೊಡೆದ ಸಸಿಗಳನ್ನು ತಿಂದು ಬೆಳೆಯನ್ನೆಲ್ಲ ಹಾಳು ಮಾಡುತ್ತವೆ ಎಂಬ ಆತಂಕದಿಂದ ಕೆಲ ರೈತರು ಕಾಳುಗಳಿಗೆ ವಿಷ ಬೆರೆಸಿ ಹೊಲದಲ್ಲಿ ಹಾಕುತ್ತಾರೆ. ಅದನ್ನು ತಿಂದು ನವಿಲುಗಳು, ಇತರ ಪಕ್ಷಿಗಳು ಸಾಯುತ್ತಿವೆ.

ಇದರ ಜತೆಗೆ  ಹೃದಯರೋಗ, ಪಾರ್ಶ್ವವಾಯು ಉಪಚಾರಕ್ಕೆ ನವಿಲಿನ ದೇಹದಲ್ಲಿ ಉತ್ತಮ ಔಷಧವಿದೆ ಎಂಬ ಭ್ರಮೆಯಿಂದಲೂ ನವಿಲುಗಳನ್ನು ಕೊಲ್ಲುವವರಿದ್ದಾರೆ. ಹೀಗಾಗಿ ಒಂದೊಂದು ಹಂಗಾಮಿನಲ್ಲೂ ನೂರಾರು ನವಿಲುಗಳ ಮಾರಣಹೋಮವಾಗುತ್ತಿದೆ.

ನವಿಲುಗಳಿಂದ ರೈತರ ಬೆಳೆ ನಾಶವಾದರೆ ಪರಿಹಾರ ನೀಡಲು ಸರ್ಕಾರ ಮುಂದೆ ಬರಬೇಕು. ಆಗಲಾದರೂ ನವಿಲುಗಳು ಬದುಕಿಕೊಂಡಾವು. ಏಕೆಂದರೆ ನವಿಲು ಕೊಲ್ಲುವುದು ರೈತರಿಗೆ ನೋವಿನ ಸಂಗತಿಯೂ ಹೌದು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT