ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಯುವಜನೋತ್ಸವ: ರಸ್ತೆಗಳಿಗೆ ತರಾತುರಿಯಲ್ಲಿ ತೇಪೆ ಕಾರ್ಯ

Last Updated 7 ಜನವರಿ 2012, 9:00 IST
ಅಕ್ಷರ ಗಾತ್ರ

ಮಂಗಳೂರು: ಹದಿನೇಳನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು, ಕೊನೆ ಕ್ಷಣದ ತಯಾರಿ ನಡೆದಿದೆ. ಉತ್ಸವಕ್ಕೆ ಐದು ದಿನ ಬಾಕಿ ಇದೆ ಎನ್ನುವಾಗ ನಗರದಲ್ಲಿ ಶುಕ್ರವಾರ ಹೊಂಡ ಮುಚ್ಚುವ ಕಾರ್ಯ ಹಾಗೂ ತೇಪೆ ಕಾಮಗಾರಿ ತರಾತುರಿಯಲ್ಲಿ ಶುಕ್ರವಾರ ನಡೆದಿದೆ.

ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಕೊನೆಯ ಕ್ಷಣದ `ಎಚ್ಚರ~ದಿಂದ ವಾಹನ ಚಾಲಕರು ಪಡಿಪಾಟಲು ಅನುಭವಿಸಬೇಕಾಯಿತು. ಕೊನೆ ಕ್ಷಣದಲ್ಲಿ ಗಡಿಬಿಡಿಯಲ್ಲಿ ಸಿದ್ಧತೆ ನಡೆಸಿದ ಅಧಿಕಾರಿಗಳಿಗೆ ವಾಹನ ಚಾಲಕರು ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು. `ಹೊಂಡ ಬಿದ್ದ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ನಡೆಯಬೇಕಿತ್ತು. ಈಗ ಮುಂಚಿತವಾಗಿ ಮಾಡಲಾಗುತ್ತಿದೆ~ ಎಂದು ಜಿಲ್ಲಾಧಿಕಾರಿ ಚನ್ನಪ್ಪ ಗೌಡ ತಿಳಿಸಿದರು.

ವಿದ್ಯುತ್‌ದೀಪ ಅಲಂಕಾರ: ನಗರದ ಪ್ರಮುಖ ರಸ್ತೆಗಳಿಗೆ ವಿದ್ಯುತ್‌ದೀಪದ ಅಲಂಕಾರ ಮಾಡಲಾಗುತ್ತಿದೆ. ದಾನಿಗಳ ಹಾಗೂ ಬಿಲ್ಡರ್‌ಗಳ ನೆರವಿನಿಂದ ಈ ಕಾರ್ಯ ಮಾಡಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಇಲಾಖೆ ಕಟ್ಟಡಗಳಿಗೆ ಜಿಲ್ಲಾಡಳಿತದ ವತಿಯಿಂದಲೇ ವಿದ್ಯುತ್‌ದೀಪ ಅಲಂಕಾರ ಮಾಡಲಾಗುತ್ತಿದೆ.

ಹಂಪನಕಟ್ಟೆ- ಫಳ್ನೀರು ವೃತ್ತ, ಹಂಪನಕಟ್ಟೆ- ಪಿವಿಎಸ್ ವೃತ್ತ- ಮಂಗಳಾ ಕ್ರೀಡಾಂಗಣ- ಉರ್ವ, ಯೆಯ್ಯಾಡಿ- ಲಾಲ್‌ಭಾಗ್, ಜಿಲ್ಲಾಧಿಕಾರಿ ಕಚೇರಿ- ಹಂಪನಕಟ್ಟೆ, ಹಂಪನಕಟ್ಟೆ- ಫಳ್ನೀರು- ಕಂಕನಾಡಿ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿದ್ಯುತ್‌ದೀಪದ ಅಲಂಕಾರ ಮಾಡಲಾಗುತ್ತಿದೆ. ನಗರದ ಪ್ರಮುಖ ಬ್ಯಾಂಕ್ ಕಚೇರಿಗಳು ಹಾಗೂ ಕಾಲೇಜು ಕಟ್ಟಡಗಳಿಗೆ ವಿದ್ಯುತ್‌ದೀಪ ಅಲಂಕಾರ ಮಾಡಲು ಸಂಸ್ಥೆಯ ಅಧ್ಯಕ್ಷರು ಹಾಗೂ ಕಾಲೇಜು ಆಡಳಿತ ಮಂಡಳಿ ಬಳಿ ಜಿಲ್ಲಾಡಳಿತ ವಿನಂತಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ನೋಡಲ್ ದೂರವಾಣಿ ಸಂಖ್ಯೆ:ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಪ್ರತ್ಯೇಕ ಕಚೇರಿ ತೆರೆಯಲಾಗಿದೆ. ಈ ಕಚೇರಿಗೆ 2 ತಾತ್ಕಾಲಿಕ ಮೊಬೈಲ್ ಸಂಪರ್ಕ ನೀಡಲಾಗಿದ್ದು. ದೂರವಾಣಿ ಸಂಖ್ಯೆ 9187704681, 9187704682 ಆಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT