ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ವಿರುದ್ಧ ಆರೋಪಪಟ್ಟಿ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಸಿಬಿಐ ಬುಧವಾರ ಆರೋಪಪಟ್ಟಿ ಸಲ್ಲಿಸಿದೆ. 

ಆರೋಪಿಗಳು ಅಕ್ರಮ ಗಣಿಗಾರಿಕೆ ಮೂಲಕ ಸರ್ಕಾರದ ಬೊಕ್ಕಸಕ್ಕೆ 480 ಕೋಟಿ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ 22ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ 2011ರ ಅಕ್ಟೋಬರ್ 1ರಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದ ಸಿಬಿಐ ಪೊಲೀಸರು, ತನಿಖೆ ಆರಂಭಿಸಿದ್ದರು.

ರೆಡ್ಡಿ ದಂಪತಿ, ಜನಾರ್ದನ ರೆಡ್ಡಿ ಬಂಟ ಮೆಹಫೂಜ್ ಅಲಿ ಖಾನ್, ಐಎಎಸ್ ಅಧಿಕಾರಿ ಎಂ.ಈ.ಶಿವಲಿಂಗಮೂರ್ತಿ, ಐಎಫ್‌ಎಸ್ ಅಧಿಕಾರಿ ಎಸ್.ಮುತ್ತಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್.ಪಿ.ರಾಜು ಮತ್ತು ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ಮಾಜಿ ಸಚಿವ ವಿ.ಮುನಿಯಪ್ಪ, ಜಿಂದಾಲ್ ಸ್ಟೀಲ್ ವರ್ಕ್ಸ್ ಸೇರಿದಂತೆ 13 ಕಂಪೆನಿಗಳ ವಿರುದ್ಧದ ತನಿಖೆ ಪ್ರಗತಿಯಲ್ಲಿದೆ ಎಂದು ಇದೇ ವೇಳೆ ತನಿಖಾ ತಂಡ ನ್ಯಾಯಾಲಯಕ್ಕೆ ತಿಳಿಸಿದೆ. ಉಳಿದ ಆರೋಪಿಗಳ ವಿರುದ್ಧ ತನಿಖೆ ಪೂರ್ಣಗೊಂಡ ಬಳಿಕ ವಿವಿಧ ಹಂತಗಳಲ್ಲಿ ಆರೋಪಪಟ್ಟಿ ಸಲ್ಲಿಸುವ ಇಂಗಿತವನ್ನೂ ಸಿಬಿಐ ವ್ಯಕ್ತಪಡಿಸಿದೆ.
 

ಐವರಿಗೂ ಜಾಮೀನು ನಕಾರ
ಎಎಂಸಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಜಿ.ಜನಾರ್ದನ ರೆಡ್ಡಿ, ಮೆಹಫೂಜ್ ಅಲಿಖಾನ್, ಎಸ್.ಮುತ್ತಯ್ಯ, ಎಸ್.ಪಿ.ರಾಜು ಮತ್ತು ಮಹೇಶ್ ಪಾಟೀಲ್ ಅವರಿಗೆ ಜಾಮೀನು ನೀಡಲು ಸಿಬಿಐ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

ಐವರೂ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಂ.ಅಂಗಡಿ ಅವರು ಆದೇಶ ಪ್ರಕಟಣೆ ಕಾಯ್ದಿರಿಸಿದ್ದರು. ಬುಧವಾರ ಮಧ್ಯಾಹ್ನ 3.30ಕ್ಕೆ ಆದೇಶ ಪ್ರಕಟಿಸಿದ ನ್ಯಾಯಾಧೀಶರು, ಐವರ ಅರ್ಜಿಗಳನ್ನೂ ತಿರಸ್ಕರಿಸಿದರು.

`ದೇಶದ ಜನರ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುವಂತಹ ಆರ್ಥಿಕ ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪ ಇವರ ಮೇಲಿದೆ. ಪ್ರಕರಣದ ಗಂಭೀರತೆ ಮತ್ತು ಅದರಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ಹಾನಿ ದೊಡ್ಡ ಪ್ರಮಾಣದ್ದು. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ಈ ಆರೋಪಿಗಳೆಲ್ಲರೂ ಪ್ರಭಾವಿಗಳು. ಅವರಿಗೆ ಜಾಮೀನು ನೀಡಿದಲ್ಲಿ ಸಾಕ್ಷಿಗಳ ಮೇಲೆ ಒತ್ತಡ ಹೇರುವ, ಬೆದರಿಕೆ ಹಾಕುವ, ಸಾಕ್ಷ್ಯ ನಾಶದಂತಹ ಕೃತ್ಯಗಳ ಮೂಲಕ ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ  ತಿರಸ್ಕರಿಸಲಾಗಿದೆ~ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದರು.

ಜಾಮೀನು ಅರ್ಜಿ ತಿರಸ್ಕೃತವಾದ ಕೆಲವೇ ಕ್ಷಣಗಳ ಬಳಿಕ ಈ ಎಲ್ಲ ಆರೋಪಿಗಳು ಸೇರಿದಂತೆ ಏಳು ಮಂದಿಯ ವಿರುದ್ಧ ಸಿಬಿಐ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದರು.


ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಸಿಬಿಐ ಡಿಐಜಿ ಆರ್.ಹಿತೇಂದ್ರ ಅವರೊಂದಿಗೆ ಬುಧವಾರ ಮಧ್ಯಾಹ್ನ ನಗರದ ಸಿವಿಲ್ ನ್ಯಾಯಾಲಯಗಳ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಬಂದ ತನಿಖಾಧಿಕಾರಿ ಟಿ.ವಿ.ಜಾಯ್, ಎಎಂಸಿ ಪ್ರಕರಣದ ಆರೋಪಪಟ್ಟಿ ಸಲ್ಲಿಸಿದರು. 28 ಪುಟಗಳ ಆರೋಪಪಟ್ಟಿ, 18,327 ದಾಖಲೆಗಳು ಮತ್ತು ದಾಖಲೆಗಳ ಪಟ್ಟಿಯ ಸಂಪುಟಗಳನ್ನು ಸಿಬಿಐ ನ್ಯಾಯಾಧೀಶ ಬಿ.ಎಂ.ಅಂಗಡಿ ಅವರಿಗೆ ಸಲ್ಲಿಸಿದರು. ಒಂಬತ್ತು ಬೃಹತ್ ಟ್ರಂಕ್‌ಗಳಲ್ಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ತರಲಾಗಿತ್ತು.

ಓಬಳಾಪುರಂ ಮೈನಿಂಗ್ ಕಂಪೆನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಸಿಬಿಐ ಪೊಲೀಸರು 2011ರ ಸೆಪ್ಟೆಂಬರ್ 5ರಂದು ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದರು. ಸಂಚಾರ ವಾರೆಂಟ್ ಆಧಾರದಲ್ಲಿ ಅವರನ್ನು ಕರೆತಂದ ಬೆಂಗಳೂರು ಸಿಬಿಐ ಪೊಲೀಸರು, ಎಎಂಸಿ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದರು.

ದೀರ್ಘ ಕಾಲದಿಂದ ತಲೆಮರೆಸಿಕೊಂಡಿದ್ದ ಅಲಿಖಾನ್ ಕೂಡ ಅದೇ ದಿನ ನ್ಯಾಯಾಲಯಕ್ಕೆ ಶರಣಾಗಿದ್ದ. ಇಬ್ಬರೂ ಆರೋಪಿಗಳನ್ನು ಬಂಧಿಸಿ 90 ದಿನಗಳಾದ ಹಿನ್ನೆಲೆಯಲ್ಲಿ ತನಿಖಾ ತಂಡ ಏಳು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹಿಂದಿನ ಲೋಕಾಯುಕ್ತರು ಸಲ್ಲಿಸಿದ್ದ ವರದಿಯಲ್ಲಿ ಎಎಂಸಿ ಕುರಿತು ಉಲ್ಲೇಖಿಸಿದ್ದ ಅಭಿಪ್ರಾಯವನ್ನು ಸಿಬಿಐ ದೃಢಪಡಿಸಿದೆ. ಬಳ್ಳಾರಿಯ ಗಣಿ ಉದ್ಯಮಿಗಳಾದ ಕೆ.ಎಂ.ಪಾರ್ವತಮ್ಮ ಎಂಬುವರ ಕುಟುಂಬ ಎಎಂಸಿ ಒಡೆತನ ಹೊಂದಿತ್ತು. ಅವರಿಗೆ 1966ರಲ್ಲಿ 10.12 ಹೆಕ್ಟೇರ್ ವಿಸ್ತೀರ್ಣದ ಗಣಿ ಗುತ್ತಿಗೆ ನೀಡಲಾಗಿತ್ತು. 1996ರಲ್ಲಿ ಈ ಗುತ್ತಿಗೆಯ ಅವಧಿ ಅಂತ್ಯಗೊಂಡಿತ್ತು. ಆದರೆ, 2000ನೇ ಇಸವಿಯಲ್ಲಿ ಕಾನೂನುಬಾಹಿರವಾಗಿ ಹತ್ತು ವರ್ಷಗಳ ಅವಧಿಗೆ ಗುತ್ತಿಗೆ  ನವೀಕರಿಸಲಾಗಿತ್ತು. ಕಾನೂನುಬಾಹಿರವಾಗಿ ಸಲ್ಲಿಕೆಯಾದ ಗುತ್ತಿಗೆ ನವೀಕರಣ ಪ್ರಸ್ತಾವವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಶಿವಲಿಂಗಮೂರ್ತಿ ಅನುಮೋದಿಸಿದ್ದರು ಎಂಬುದಾಗಿ ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 2009ರ ಜುಲೈ 31ರಂದು ಜನಾರ್ದನ ರೆಡ್ಡಿ ಮತ್ತು ಲಕ್ಷ್ಮಿ ಅರುಣಾ ಪಾಲುದಾರರಾಗಿ ಎಎಂಸಿ ಸೇರಿಕೊಳ್ಳುತ್ತಾರೆ. ಮರುದಿನವೇ (ಆಗಸ್ಟ್ 1) ಮೂಲ ಮಾಲೀಕರನ್ನು ನಿವೃತ್ತಿಗೊಳಿಸಿ ಕಂಪೆನಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಾರೆ. ಒಂದೇ ದಿನದಲ್ಲಿ ಎಎಂಸಿ ಗಣಿ ಗುತ್ತಿಗೆಯನ್ನೂ ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳುತ್ತಾರೆ.

ಯಾವ ಕಲಮಿನಡಿ ಆರೋಪಪಟ್ಟಿ?
ಭಾರತೀಯ ದಂಡ ಸಂಹಿತೆಯ ಕಲಂ 120-ಬಿ (ಒಳಸಂಚು), 379 (ಕಳ್ಳತನ), 409 (ಸಾರ್ವಜನಿಕ ನೌಕರನಿಂದ ವಿಶ್ವಾಸದ್ರೋಹ), 420 (ವಂಚನೆ), 447 (ಅತಿಕ್ರಮ ಪ್ರವೇಶ), 468 (ವಂಚನೆಗಾಗಿ ನಕಲಿ ದಾಖಲೆ ಸೃಷ್ಟಿ), 471 (ನಕಲಿ ದಾಖಲೆಯನ್ನು ಅಸಲಿ ಎಂದು ಬಿಂಬಿಸಿ ಬಳಸುವುದು), 477-ಎ (ಸುಳ್ಳು ಲೆಕ್ಕ ಸೃಷ್ಟಿಸುವುದು).

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1)(ಸಿ) ಹಾಗೂ 13 (1)(ಡಿ)- ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ.

ಗಣಿ ಮತ್ತು ಖನಿಜ (ಅಭಿವೃದ್ಧಿ ಹಾಗೂ ನಿಯಂತ್ರಣ) ಕಾಯ್ದೆ ಪ್ರಕಾರ ಗಣಿ ಗುತ್ತಿಗೆ ವರ್ಗಾವಣೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಪೂರ್ವಾನುಮತಿ ಅಗತ್ಯ. ಆದರೆ, ಈ ಪ್ರಕರಣದಲ್ಲಿ ಅನುಮತಿ ಇಲ್ಲದೇ ಗುತ್ತಿಗೆ ವರ್ಗಾವಣೆ ನಡೆದಿದೆ. ಈ ಪ್ರಕರಣದಲ್ಲೂ ಶಿವಲಿಂಗಮೂರ್ತಿ ಅಕ್ರಮ ಎಸಗಿದ್ದಾರೆ ಎಂಬ ಅಂಶ ಆರೋಪಪಟ್ಟಿಯಲ್ಲಿದೆ ಎಂದು ಗೊತ್ತಾಗಿದೆ.

ರೂ 480 ಕೋಟಿ ಲೂಟಿ: `ಎಎಂಸಿ ಕಂಪೆನಿ, ಜನಾರ್ದನ ರೆಡ್ಡಿ ಕುಟುಂಬದ ಹೆಸರಿಗೆ ವರ್ಗಾವಣೆ ಆದ ಬಳಿಕ 40 ಸಾವಿರ ಟನ್ ಅದಿರನ್ನು ಮಾತ್ರ ಆ ಗಣಿಯಿಂದ ತೆಗೆಯಲಾಗಿದೆ. ತನಿಖೆಯ ಅವಧಿಯಲ್ಲಿ ನಡೆಸಿದ `ತ್ರೀ ಡಿ ಲೇಸರ್ ಸರ್ವೆ~ಯಿಂದ ಇದು ಖಚಿತವಾಗಿದೆ. ಆದರೆ, ಎಎಂಸಿ ಹೆಸರಿನಲ್ಲಿ ಹಲವು ಲಕ್ಷ ಟನ್ ಅದಿರು ಸಾಗಣೆ ಮಾಡಲಾಗಿದೆ. 

 ದಾಲ್ಮಿಯಾ ಗಣಿಯಿಂದ ಭಾರಿ ಪ್ರಮಾಣದ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿದೆ. ಎಎಂಸಿ ಸೇರಿದಂತೆ ಹಲವು ಕಂಪೆನಿಗಳ ಹೆಸರಿನಲ್ಲಿ ಈ ಅಕ್ರಮ ನಡೆದಿದೆ. ಅಸೋಸಿಯೇಟೆಡ್ ಕಂಪೆನಿ ಜೊತೆ ಸಂಬಂಧವಿರುವ ಬ್ಯಾಂಕ್ ಖಾತೆಗಳ ಮೂಲಕ ಈ ಅದಿರಿಗೆ ಹಣ ಪಾವತಿಯಾಗಿದೆ~ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಎಎಂಸಿ ಹೆಸರಿನಲ್ಲಿ ಜನಾರ್ದನ ರೆಡ್ಡಿ, ಲಕ್ಷ್ಮಿ ಅರುಣಾ, ಅಲಿಖಾನ್ ಮತ್ತಿತರರು ರೂ 480 ಕೋಟಿ  ಮೌಲ್ಯದ ಅದಿರನ್ನು ಅಕ್ರಮವಾಗಿ ತೆಗೆದು, ಮಾರಾಟ ಮಾಡಿದ್ದಾರೆ. ಇದರಿಂದ ರೂ 480 ಕೋಟಿಗಳಷ್ಟು ಆರೋಪಿಗಳಿಗೆ ಲಾಭವಾಗಿದೆ. ಸರ್ಕಾರ ಅಷ್ಟೇ ಮೊತ್ತದ ನಷ್ಟವನ್ನೂ ಅನುಭವಿಸಿದೆ. ಈ ಆರೋಪಗಳನ್ನು ಪುಷ್ಟೀಕರಿಸುವ ಪ್ರಬಲ ಸಾಕ್ಷ್ಯ ತನ್ನ ಬಳಿ ಇದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

`ಅರಣ್ಯ ಪ್ರದೇಶದಲ್ಲಿ ಎಎಂಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ತಿಳಿದಿದ್ದರೂ ಮುತ್ತಯ್ಯ ಮತ್ತು ಮಹೇಶ್ ಪಾಟೀಲ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬೇರೆ ಗಣಿಗಳು ಮತ್ತು ಅರಣ್ಯ ಪ್ರದೇಶದಲ್ಲಿ ತೆಗೆದ ಅದಿರನ್ನು ಎಎಂಸಿ ಹೆಸರಿನಲ್ಲಿ ಸಾಗಿಸಲು ಸಾಗಣೆ ಪರವಾನಗಿ ವಿತರಿಸಿದ್ದರು. ಕಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪರವಾನಗಿಗಳನ್ನು ಕೊಡಿಸಿದ್ದರು. ಕಂಪೆನಿ ಬಾಕಿ ಇರಿಸಿಕೊಂಡಿದ್ದ ಅರಣ್ಯ ಅಭಿವೃದ್ಧಿ ಶುಲ್ಕದ ವಸೂಲಿಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೊಸಪೇಟೆ ವಿಭಾಗದ ಉಪ ನಿರ್ದೇಶಕರಾಗಿದ್ದ ರಾಜು ಕೂಡ ಈ ಕೃತ್ಯದಲ್ಲಿ ಕೈಜೋಡಿಸಿದ್ದರು~ ಎಂಬುದಾಗಿ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT