ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪರದಾಟ: ಸಿಗದ ಬೀಜ

Last Updated 14 ಅಕ್ಟೋಬರ್ 2012, 6:25 IST
ಅಕ್ಷರ ಗಾತ್ರ

ಯಾದಗಿರಿ: ಮುಂಗಾರು ಹಂಗಾಮಿನಲ್ಲಿ ಆಗಿರುವ ಹಾನಿಯನ್ನು ಭರಿಸಿಕೊಳ್ಳುವ ತವಕದಲ್ಲಿರುವ ರೈತರ ಸಂಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಹಿಂಗಾರು ಹಂಗಾಮಿನಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಲು ಸಿದ್ಧರಾಗಿರುವ ರೈತರು, ಬೀಜ ಸಿಗದೇ ಪರದಾಡುತ್ತಿರುವುದು ಜಿಲ್ಲೆಯಾದ್ಯಂತ ಸಾಮಾನ್ಯವಾಗಿದೆ.

ಕಳೆದ ಒಂದು ವಾರದಿಂದ ಯಾದಗಿರಿ ತಾಲ್ಲೂಕಿನಾದ್ಯಂತ ರೈತರು, ಮಹಿಳೆಯರು ಶೇಂಗಾ ಬೀಜಕ್ಕಾಗಿ ಸಾಕಷ್ಟು ಅಲೆದಾಡುತ್ತಿದ್ದರೂ, ಬೀಜ ದೊರೆಯದೇ ಹತಾಶರಾಗಿದ್ದಾರೆ. ಶುಕ್ರವಾರ ಯಾದಗಿರಿ ರೈತ ಸಂಪರ್ಕ ಕೇಂದ್ರದಲ್ಲಿಯೂ ಶೇಂಗಾ ಬೀಜಕ್ಕಾಗಿ ರೈತರಿಂದ ನೂಕುನುಗ್ಗಲು ಉಂಟಾಗಿತ್ತು. ಇದರ ಬೆನ್ನಲ್ಲೇ ತಾಲ್ಲೂಕಿನ ಹತ್ತಿಕುಣಿ ರೈತ ಸಂಪರ್ಕ ಕೇಂದ್ರದಲ್ಲಿಯೂ ಶನಿವಾರ ಶೇಂಗಾ ಬೀಜಕ್ಕಾಗಿ ರೈತರು ಸಾಕಷ್ಟು ಪರದಾಡುವಂತಾಗಿದೆ.

ತಾಲ್ಲೂಕಿನಲ್ಲಿ ಸದ್ಯಕ್ಕೆ ಉತ್ತಮ ಮಳೆ ಆಗಿದ್ದು, ಕೆಲವೆಡೆ ಪಂಪ್‌ಸೆಟ್‌ಗಳನ್ನು ಅವಲಂಬಿಸಿ ಕೃಷಿ ಚಟುವಟಿಕೆ ಮಾಡಲಾಗುತ್ತಿದೆ. ಕಳೆದ ವರ್ಷ ಶೇಂಗಾಕ್ಕೆ ಸಿಕ್ಕ ಉತ್ತಮ ಬೆಲೆ ರೈತರಲ್ಲಿ ಒಂದಿಷ್ಟು ಆಶಾಭಾವನೆಯನ್ನು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ರೈತರು ಶೇಂಗಾ ಬಿತ್ತನೆಗೆ ಮುಂದಾಗಿದ್ದಾರೆ. ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ಬೀಜ ಪಡೆಯಲು ರೈತ ಸಂಪರ್ಕ ಕೇಂದ್ರಗಳ ಎದುರು ಹಗಲು ರಾತ್ರಿ ಎನ್ನದೇ ಬಿಡಾರ ಹೂಡಿದ್ದಾರೆ.

ಎಲ್ಲೆಡೆಯೂ ಶೇಂಗಾ ಬೀಜಕ್ಕಾಗಿ ಬೇಡಿಕೆ ಏರುತ್ತಲೇ ಇದ್ದು, ಬೇಡಿಕೆಗೆ ತಕ್ಕಂತೆ ಬೀಜ ಪೂರೈಕೆ ಆಗದೇ ಕೃಷಿ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ನೀರಿನ ಭರವಸೆ:
ಇದುವರೆಗೆ ವಿದ್ಯುತ್ ಸಮಸ್ಯೆಯಿಂದಾಗಿ ಪಂಪ್‌ಸೆಟ್‌ಗಳು ಕೆಲಸವಿಲ್ಲದೇ ಕುಳಿತುಕೊಳ್ಳುವಂತಾಗಿತ್ತು. ಇದರ ನಡುವೆ ರೈತರ ಬೇಡಿಕೆಗೆ ಸ್ಪಂದಿಸಿ ತಾಲ್ಲೂಕಿನ ಹತ್ತಿಕುಣಿ ಜಲಾಶಯದಿಂದ ಕಾಲುವೆಗೆ ನೀರು ಬಿಡುವುದಾಗಿ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಭರವಸೆ ನೀಡಿದ್ದು, ಇದು ರೈತರ ಆಸೆಯನ್ನು ಜೀವಂತವಾಗಿ ಇರಿಸಿದೆ.

ಇದರಿಂದಾಗಿಯೇ ಹತ್ತಿಕುಣಿ ಜಲಾಶಯದ ವ್ಯಾಪ್ತಿಯ ರೈತರೆಲ್ಲರೂ ಶೇಂಗಾ ಬಿತ್ತನೆಗೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಶೇಂಗಾ ಬೀಜಕ್ಕೆ ಕಳೆದ ಬಾರಿಗಿಂತ ಹೆಚ್ಚಿನ ಬೇಡಿಕೆ ಎದುರಾಗಿದೆ. ಒಟ್ಟಾರೆ ಜಿಲ್ಲೆಗೆ 10 ಸಾವಿರ ಕ್ವಿಂಟಲ್ ಶೇಂಗಾ ಬೀಜದ ಬೇಡಿಕೆ ಇದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಸದ್ಯಕ್ಕೆ ಕೇವಲ 700-800 ಕ್ವಿಂಟಲ್ ಮಾತ್ರ ಶೇಂಗಾ ಬೀಜ ಜಿಲ್ಲೆಗೆ ಬಂದಿದ್ದು, ಬಾಕಿ ಬೀಜ ಹಂತ ಹಂತವಾಗಿ ಜಿಲ್ಲೆಗೆ ಬರಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈಗಾಗಲೇ ಬಿತ್ತನೆಯ ಹಂಗಾಮು ಮುಗಿಯುವ ಆತಂಕ ರೈತರನ್ನು ಕಾಡುತ್ತಿದೆ. ಇನ್ನೊಂದು ವಾರದಲ್ಲಿ ಶೇಂಗಾ ಬೀಜ ದೊರೆಯದೇ ಇದ್ದಲ್ಲಿ, ರೈತರು ಮಾಡಿಕೊಂಡಿರುವ ಸಿದ್ಧತೆಗಳೆಲ್ಲವೂ ವ್ಯರ್ಥವಾಗಲಿದೆ ಎನ್ನಲಾಗುತ್ತಿದೆ.

ಹೀಗಾಗಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರೈತರು ಶೇಂಗಾ ಬೀಜಕ್ಕಾಗಿ ಮುಗಿ ಬೀಳುತ್ತಿದ್ದು, ಅದಕ್ಕೆ ತಕ್ಕಂತೆ ಬೀಜದ ಪೂರೈಕೆ ಮಾತ್ರ ಆಗುತ್ತಿಲ್ಲ ಎನ್ನುವ ಆರೋಪವನ್ನು ರೈತರು ಮಾಡುತ್ತಿದ್ದಾರೆ.

“ಈಗ ಹತ್ತಿಕುಣಿ ಡ್ಯಾಮ್‌ನಿಂದ ನೀರ ಬಿಡತೇವಿ ಅಂತ ಹೇಳ್ಯಾರ. ಅದಕ್ಕ ಶೇಂಗಾ ಬಿತ್ತಾಕ ನಾವು ಮುಂದ ಆಗೀವ. ನಮ್ಮ ರೈತರಿಗೆ ಶೇಂಗಾ ಬೀಜ ಭಾಳ ಜರೂರ ಐತಿ. ಆದರ ಎಲ್ಲಿ ನೋಡಿದ್ರು ಶೇಂಗಾ ಬೀಜ ಸಿಗವಾಲ್ತು. ಖಾಸಗಿ ಮಂದಿ ಕಡೆ ತಗೋ ಬೇಕಂದ್ರ ಕಂಡ್ಹಂಗ ರೇಟ್ ಹೇಳಲಾಕತ್ತಾರು. ಮೊದ್ಲ ಕರೆಂಟಿನ್ ಸಮಸ್ಯೆ ಆಗಿತ್ತು. ಈಗ ಬೀಜದ ಸಮಸ್ಯೆ ಆಗೇತಿ. ಇಂಥಾ ಪರಿಸ್ಥಿತ್ಯಾಗ ರೈತರ ಹೆಂಗ ಜೀವನ ಮಾಡಬೇಕ್ರಿ” ಎಂದು ಹತ್ತಿಕುಣಿಯ ರೈತ ಶರಣಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಎರಡು ನದಿಗಳು ಹರಿದಿದ್ದರೂ, ರೈತರ ಬವಣೆಗಳು ಮಾತ್ರ ಕಡಿಮೆ ಆಗುತ್ತಿಲ್ಲ. ರೈತರ ನಿರೀಕ್ಷೆ, ಉತ್ಸಾಹಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ರೈತರ ಸಹಾಯಕ್ಕೆ ಕೂಡಲೇ ಸರ್ಕಾರ ಧಾವಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT