ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟಕ್ಕೆ ಬದ್ಧ

Last Updated 13 ಅಕ್ಟೋಬರ್ 2012, 8:45 IST
ಅಕ್ಷರ ಗಾತ್ರ

ಸೊರಬ: ಹೋರಾಟ ಎಂಬುದು ಎಸ್. ಬಂಗಾರಪ್ಪ ಅವರಿಂದ ಬಂದ ಬಳುವಳಿ.  ತಾಲ್ಲೂಕಿನ ರೈತರಪರ ಹೋರಾಟಕ್ಕೆ ತಾವೆಂದೂ ಬದ್ಧ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ಆಶ್ವಾಸನೆ ನೀಡಿದರು.

ತಾಲ್ಲೂಕಿನ ಉದ್ರಿ ಗ್ರಾಮದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ತಾವು ಹಿಂದೆ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ರಾಜ್ಯದ ರೈತರ ಹಿತಕ್ಕಾಗಿ ಹೋರಾಟದ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.  ಅಂದು, ಇಂದು, ಮುಂದೂ, ಎಂದೆಂದೂ ನನ್ನ ಕೊನೆಯ ಉಸಿರು ಇರುವ ತನಕ ರಾಜ್ಯದ ರೈತರಹಿತ ಕಾಯಲು ಬದ್ಧ ಎಂದರು.

ದಿ.ಎಸ್. ಬಂಗಾರಪ್ಪ ಇಲ್ಲದೇ ಇರುವುದನ್ನು ಕಂಡು ಕೆರೆಹಳ್ಳಿ- ತಾಳಗುಪ್ಪದಲ್ಲಿ ರೈತರನ್ನು ಒಕ್ಕಲೆಬ್ಬಿಸಿದಾಗ ಎಲ್ಲೋ ಒಂದು ಕಡೆ ರೈತರು ಅನಾಥರಾಗಿದ್ದೇವೆ ಎಂದು ಅಳುಕಬೇಕಿಲ್ಲ.  ಅವರ ಸ್ಥಾನದಲ್ಲಿ ನಿಂತು ತಾಲ್ಲೂಕು ಹಾಗೂ ರಾಜ್ಯದ ಬಗರ್‌ಹುಕುಂ ಸಾಗುವಳಿದಾರರ ಹೋರಾಟಕ್ಕೆ ನಿಲ್ಲುವುದಾಗಿ ತಿಳಿಸಿದರು.

ಸ್ಥಳೀಯ ಶಾಸಕ ತಮ್ಮನ್ನು ತಬ್ಬಲಿಯಲ್ಲ ಹೆಬ್ಬುಲಿ ಎಂದು ಹೇಳಿದ್ದಾರೆ.  ಕುಟುಂಬದವರ ಬಗ್ಗೆ ಮಾತನಾಡಿದರೆ ಹೆಬ್ಬುಲಿಯ ಪರಿಣಾಮ ಎದುರಿಸಬೇಕಾಗುತ್ತದೆ.  

ತಾಲ್ಲೂಕಿನ ಜನತೆ 40 ವರ್ಷದ ರಾಜಕೀಯದಲ್ಲಿ ಬಂಗಾರಪ್ಪ ಅವರಿಗೆ ಅಧಿಕಾರದ ಶಕ್ತಿ ಕೊಟ್ಟು ರಾಜ್ಯಕ್ಕೂ ಗೌರವ ನೀಡಿದ್ದಾರೆ.  ತಾವು ಜನಪ್ರತಿನಿಧಿ ಅಲ್ಲದಿದ್ದರೂ ಸುಮ್ಮನೆ ಕೂರದೇ ಅನೇಕ ಆರೋಗ್ಯ ಶಿಬಿರ, ಚಿಕಿತ್ಸಾ ಶಿಬಿರಗಳಂತಹ ಜನಪರ ಕಾರ್ಯಗಳನ್ನು ಮಾಡಿದ್ದೇನೆ.  ಆದರೆ, ಶಾಸಕ ಹಾಲಪ್ಪ ಮಾಡಿದ್ದೇನು? ಜನತೆ ಬಿಜೆಪಿಗೆ ಮತ ನೀಡಿ ಮಾಡಿದ ತಪ್ಪನ್ನು ಮತ್ತೆಂದೂ ಮಾಡಬಾರದು ಎಂದರು.

ರೈತರಿಗೆ ಬಗರ್‌ಹುಕುಂ ನೋಟಿಸ್ ಬರುತ್ತಿದ್ದರೆ ಭ್ರಷ್ಟಾಚಾರದ ಅಧಿಪತಿ ಯಡಿಯೂರಪ್ಪಗೆ ಸಿಬಿಐ ನೋಟಿಸ್ ಬರುತ್ತಿದೆ.  ಶಿಕಾರಿಪುರಕ್ಕೆ ಮಧು ಬಂಗಾರಪ್ಪ ಬಂದು ಹೇಗೆ ಭಾಷಣ ಮಾಡುತ್ತಾರೋ ನೋಡೋಣ ಎಂದಿದ್ದರು.  ನಾನು ಹೆಬ್ಬುಲಿ ಆಗಿದ್ದಕ್ಕೆ ಶಿಕಾರಿಪುರದಲ್ಲಿ ಸಾವಿರಾರು ಜನರ ಮುಂದೆ ಭಾಷಣ ಮಾಡಿದೆ.  ಏನೂ ತಪ್ಪು ಮಾಡದ ನನ್ನನ್ನು ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದರು.

ಬ್ಲಾಕ್ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಕುಮಾರ್, ಮುಖಂಡರಾದ  ಎಂ. ಪಕ್ಕೀರಪ್ಪ, ಚೌಟಿ ಚಂದ್ರಣ್ಣ, ಎಂ.ಡಿ. ಶೇಖರ, ಎಸ್.ಆರ್. ಕುಮಾರಸ್ವಾಮಿ, ಮಂಚಿ ಸೋಮಪ್ಪ, ಭಾಸ್ಕರ ಶೆಟ್ಟಿ, ಸುರೇಶ ಬಿಳವಾಣಿ, ಶೇಖರಮ್ಮ, ಪ್ರಶಾಂತ ಮೇಸ್ತ್ರಿ, ಮಂಜಣ್ಣ, ಬಡಿಗೆಪ್ಪ, ಚಂದ್ರಪ್ಪ, ಎಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT