ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರೈತರಿಗಾಗಿ ಜೀವ ಕೊಡಲು ಸಿದ್ಧ'

Last Updated 6 ಡಿಸೆಂಬರ್ 2012, 7:07 IST
ಅಕ್ಷರ ಗಾತ್ರ

ಸುರಪುರ: ನಮಗೆ ಅನ್ನ ನೀಡುವ ರೈತರು ದೇವರಿದ್ದಂತೆ. ರೈತರ ಹಿತ ಕಾಪಾಡುವ ಜನಪ್ರತಿನಿಧಿಗಳು ಇದ್ದರೂ ಸತ್ತಂತೆ. ಕಳೆದ ಎರಡು ವರ್ಷಗಳಿಂದ ಕಾಲುಗೆ ನೀರಿಲ್ಲದೆ ರೈತ ಕಂಗಾಲಾಗಿದ್ದಾನೆ. ಆಡಳಿತ ಪಕ್ಷದವರನ್ನು ನಂಬಿ ಮೋಸ ಹೋಗಿದ್ದಾನೆ. ರೈತರು ನನ್ನ ಮನೆಗೆ ಬಂದು ಕಷ್ಟ ತೋಡಿಕೊಂಡಿದ್ದಾರೆ. ಇದರಿಂದ ಅನಿವಾರ್ಯವಾಗಿ ಬೀದಿ ಗಿಳಿಯಬೇಕಾಗಿದೆ. ಈ ಪಾದಯಾತ್ರೆ ನನ್ನ ಜೀವನದ ಪರಮೋಚ್ಛ ಹೋರಾಟ. ರೈತರಿಗಾಗಿ ಜೀವ ಕೊಡಲು ಸಿದ್ಧ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ್ ಭಾವಾವೇಶದಿಂದ ನುಡಿದರು.

ಕಾಂಗ್ರೆಸ್ ಪಕ್ಷದ ಆಶ್ರಯದಲ್ಲಿ ತಮ್ಮ ನೇತೃತ್ವದಲ್ಲಿ ನಾರಾಯಣಪುರ ಆಣೆಕಟ್ಟೆಯಿಂದ ಏಪ್ರಿಲ್ 15ರ ವರೆಗೆ ಕಾಲುವೆಗೆ ನೀರು ಹರಿಸಬೇಕೆಂದು ನಾರಾಯಣಪುರದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಬುಧವಾರ ಇಲ್ಲಿನ ಗಾಂಧಿವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು.ಈ ಹೋರಾಟದಿಂದ ವಿಚಲಿತರಾದಂತೆ ಕಂಡುಬಂದ ವಿರೋಧಿಗಳು ಇದನ್ನು ಚುನಾವಣೆ ಗಿಮಿಕ್ ಎನ್ನುತ್ತಿರುವುದು ಅವರ ಹತಾಶೆಯನ್ನು ಬಿಂಬಿಸುತ್ತದೆ. ರೈತರ ಹಕ್ಕಿಗಾಗಿ ಹೋರಾಟ ಮಾಡುವುದು ಚುನಾವಣೆ ಗಿಮಿಕ್ ಎನ್ನುವವರೆಗೆ ರಾಜಕೀಯದ ಪ್ರಾಥಮಿಕ ಹಂತವೂ ಗೊತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಮೂದಲಿಸಿದರು.

ಪಾದಯಾತ್ರೆಗೆ ಶುಭ ಕೋರಿ ಮಾತನಾಡಿದ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ನೀರಿಗಾಗಿ ರಾಜಕೀಯ ಬೇಡ. ಜಿಲ್ಲಾ ಉಸ್ತುವಾರಿ ಮಂತ್ರಿ ರೈತರ ಹಿತಾಸಕ್ತಿ ಕಾಪಾಡಲು ವಿಫಲರಾಗಿದ್ದಾರೆ. ಮೊದಲೆ ಕಾಲುವೆಗೆ ನೀರು ನಿಲ್ಲಿಸುವ ದಿನ ಪ್ರಕಟಿಸಿದ್ದರೆ ರೈತ ಅದಕ್ಕೆ ಪೂರಕವಾಗಿ ಬಿತ್ತನೆ ಮಾಡುತ್ತಿದ್ದ. ಈಗ ರೈತ ಕೈಸುಟ್ಟುಕೊಳ್ಳುವಂತಾಗಿದೆ. ಇದರ ಪರಿಣಾಮ ಖಂಡಿತ ರಾಜೂಗೌಡ ಅವರ ಮೇಲೆ ಉಂಟಾಗುತ್ತದೆ ಎಂದು ಭವಿಷ್ಯ ನುಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಮುಖಂಡರಾದ ಶಿವಣ್ಣ ಮಂಗಿಹಾಳ, ಸೂಲಪ್ಪ ಕಮತಗಿ, ನಿಂಗಣ್ಣ ಚಿಂಚೋಡಿ ಮಾತನಾಡಿ, ಬಿಜೆಪಿ ಸರ್ಕಾರ ಕಾವೇರಿ ಮತ್ತು ಕೃಷ್ಣೆಯ ವಿಷಯದಲ್ಲಿ ರೈತರಿಗೆ ಮೋಸ ಮಾಡುತ್ತಿದೆ. ಸರ್ಕಾರಕ್ಕೆ ಅಧಿಕಾರದಲ್ಲಿರಲು ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಲಾರೆಪ್ಪ ಸಗರ ರೈತ ಕ್ರಾಂತಿ ಗೀತೆಗಳನ್ನು ಹಾಡಿದರು.

ಮುಖಂಡರಾದ ವಿಠಲ ಯಾದವ, ಕಿಶನರಾವ ಕುಲಕರ್ಣಿ, ಪ್ರಭುಗೌಡ ಪಾಟೀಲ, ರಾಜಶೇಖರಗೌಡ ಪಾಟೀಲ, ಬಸನಗೌಡ ಯಡಿಯಾಪುರ, ಮಾನಪ್ಪ ಸಾಹುಕಾರ, ರಾಜಾ ಮೌನೇಶ್ವರನಾಯಕ್, ಮಲ್ಲಯ್ಯ ಕಮತಗಿ, ಅಬ್ದುಲ ಗಫಾರ್ ನಗನೂರಿ, ದೊಡ್ಡದೇಸಾಯಿ ದೇವರಗೋನಾಲ, ಆದಪ್ಪ ಹೊಸ್ಮನಿ, ರಾಜಾ ಶ್ರೀರಾಮನಾಯಕ್, ರಾಜಾ ವಾಸುದೇವನಾಯಕ್, ದುರ್ಗಪ್ಪ ಗೋಗಿಕರ್, ಮಾನಪ್ಪ ಸೂಗೂರ, ವೆಂಕಟರೆಡ್ಡಿ, ವೆಂಕಟೇಶ ಹೊಸ್ಮನಿ, ರಾಜಾ ಪಿಡ್ಡನಾಯಕ್ ತಾತಾ, ಸೋಮನಾಥ ಡೊಣ್ಣಿಗೇರಿ, ಅಬ್ದುಲ ಆಲೀಂ ಗೋಗಿ, ವೆಂಕೋಬ ಸಾಹುಕಾರ್, ಅಹ್ಮದ ಪಠಾಣ, ತಿಪ್ಪರಾಜಗೌಡ ಬಾಚಿಮಟ್ಟಿ, ಅರವಿಂದಕುಮಾರ್, ಸೂಗೂರೇಶ ವಾರದ, ರಾಜಾ ಅಪ್ಪಾರಾವ ನಯಕ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶರಣಮ್ಮ ಸಾಹುಕಾರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಾಬಮ್ಮ ದೇಸಾಯಿ, ಸದಸ್ಯೆ ಹಣಮಂತಿ ಸಾಹುಕಾರ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಪ್ರಾಂತ ರೈತ ಸಂಘದ ದೇವಿಂದ್ರಪ್ಪ ಪತ್ತಾರ, ಯಲ್ಲಪ್ಪ ಚಿನ್ನಾಕಾರ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಬಸವಸಾಗರ ರೈತ ಹಿತರಕ್ಷಣಾ ಸಮಿತಿಯ ಡಾ. ಶರಣಪ್ಪ ಯಾಳಗಿ, ಸೋಮಶೇಖರ ಶಾಬಾದಿ, ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಪಾದಯಾತ್ರೆಗೆ ಬೆಂಬಲಿಸಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT