ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್ ಒಲಿಂಪಿಕ್: ದೃಶ್ಯ ವೈಭವದ ಮೋಹಕ ಮೆರವಣಿಗೆ

Last Updated 28 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್: ಒಲಿಂಪಿಕ್ ಸಂಘಟಕರು ಉದ್ಘಾಟನಾ ಸಮಾರಂಭದಲ್ಲಿ ತಮ್ಮ ದೇಶದ ಭವ್ಯ ಕಲೆ, ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ನಂಬಿಕೆಗಳನ್ನು ಕೆದಕಿ ತೆಗೆಯುವುದೇ ಹೆಚ್ಚು. ಡ್ಯಾನಿ ಬೊಯ್ಲ ರೂಪಿಸಿದ 30ನೇ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವೂ ಇದಕ್ಕೆ ಹೊರತಾಗಿರಲಿಲ್ಲ. ದೇಶದ ಸಾಂಸ್ಕೃತಿಕ ವೈಭವ, ಪರಂಪರೆ, ಇತಿಹಾಸ ಇತ್ಯಾದಿ ಸೂತ್ರಗಳಿಗೇ ಅಂಟಿಕೊಂಡಿದ್ದು ಸ್ಪಷ್ಟವಾಗಿ ಕಾಣಿಸಿತು.

ವಿಶ್ವಖ್ಯಾತಿ ಗಳಿಸಿದ ಸಿನಿಮಾ ನಿರ್ದೇಶಕ ತನಗೆ ಸಮಾರಂಭದ ಕಾರ್ಯಕ್ರಮ ರೂಪಿಸುವ ಜವಾಬ್ದಾರಿ ಸಿಕ್ಕ ತಕ್ಷಣ ದೇಶದ ಇತಿಹಾಸದ ಪುಟಗಳನ್ನು ತೆರೆದಿರಬಹುದು. ಅಲ್ಲಿ ಮೊದಲಿಗೆ ಗಮನ ಸೆಳೆದಿದ್ದು ವಿಲಿಯಮ್ ಶೇಕ್ಸ್‌ಪಿಯರ್ ಯುಗ. ಅದೇ ಮಾರ್ಗದಲ್ಲಿ ಡಿ ಬಾರ್ಡ್‌ನ `ಟೆಂಪೆಸ್ಟ್~ ಮೋಹಕತೆ ಇಲ್ಲಿ ಜೀವ ಪಡೆದಂತಿತ್ತು.

80 ಸಾವಿರ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದು ಅದೇ ಸ್ವರೂಪದ ದೃಶ್ಯ. ವಿಶ್ವದಾದ್ಯಂತ ನೂರು ಕೋಟಿಗೂ ಹೆಚ್ಚು ಟೆಲಿವಿಷನ್ ವೀಕ್ಷಕರಿಗೂ ಈ ಪ್ರಕೃತಿಯ ತುಣುಕಿನ ವೈಭವವೇ ಸೊಗಸಾಗಿ ಕಂಡಿತು. ಒಂದು ರೀತಿಯಲ್ಲಿ ಕಾಲಯಂತ್ರದಲ್ಲಿ ಕುಳಿತು ಸವಾರಿ ಮಾಡಿಕೊಂಡು ಬಂದಂಥ ಅನುಭವ.

`ಭಯ ಪಡಬೇಡ ಈ ದ್ವೀಪವು ಸಂಪೂರ್ಣ ಸದ್ದಿನಿಂದ ಕೂಡಿದೆ~ ಎನ್ನುವ ಬಾರ್ಡ್ ನುಡಿಯ ಹಿನ್ನೆಲೆಯಲ್ಲಿಯೇ ನಡೆಯಿತು ಸ್ವಲ್ಪ ಹೊತ್ತು ಸದ್ದು ಗದ್ದಲ. ಆದರೆ ಈ ಗೊಂದಲವು ಯಾವುದೇ ಸಂದೇಶವನ್ನಂತೂ ಸಾರಲಿಲ್ಲ. ಬದಲಿಗೆ ಬಣ್ಣದಾಟ ಹಾಗೂ ಸಂಗೀತದ್ದೇ ಅಬ್ಬರ.

ಈ ಸದ್ದು ಉತ್ತುಂಗ ಮುಟ್ಟಿ ಏರಿದ ಅಲೆಯು ಇಳಿದಾಗ ಒಂದಿಷ್ಟು ಹಿತ. ಸಂಗೀತ ಸಂಯೋಜಕ ಸರ್ ಪಾಲ್ ಮೆಕ್‌ಕಾರ್ಟ್ನಿ ಅವರ ಮಂದ ಲಯದ ಹಿತವಾದ ಗಾನ. ಬೀಟ್‌ಲೆಸ್ ಸೂಪರ್ ಹಿಟ್ ಎನಿಸಿರುವ ` ಹೇಯ್ ಜುಡೆ~ ಗಾನ ಮೋಡಿಯೊಂದಿಗೆ ಬಾನಂಗಳದಲ್ಲಿ ಬಾಣಬಿರುಸುಗಳ ಬೆಳಕು.

ಸಿನಿಮೀಯ ರೀತಿಯಲ್ಲಿಯೇ ಉದ್ಘಾಟನಾ ಸಮಾರಂಭ ಆರಂಭವಾಯಿತು. ಅತ್ತ `ಜೇಮ್ಸ ಬಾಂಡ್~ ಖ್ಯಾತಿಯ ಡೇನಿಯಲ್ ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡರೆ ಅದೇ ಸಮಯಕ್ಕೆ ಬ್ರಿಟನ್ ಮಹಾರಾಣಿ ಎಲಿಜಬೆತ್ ಅವರಿಗೆ ಭವ್ಯ ಸ್ವಾಗತ. ರಾಣಿಯಿಂದಲೇ ಕೂಟದ ಉದ್ಘಾಟನೆ.

ಮಿಶ್ರಲೋಹದಿಂದ ತಯಾರಿಸಿದ 204 ಹೂವಿನ ದಳಗಳನ್ನು ಹೋಲುವ ದೀವಿಗೆಗಳು ಒಂದಾಗುವ ಮುನ್ನ ಅದಕ್ಕೆ ಜ್ಯೋತಿ ಸ್ಪರ್ಶ ಮಾಡಿದ್ದು ಯುವ ಅಥ್ಲೀಟ್‌ಗಳು. ಬೊಯ್ಲ ನಿರ್ದೇಶನದಲ್ಲಿ ನಡೆದ ಒಟ್ಟಾರೆ ಕಾರ್ಯಕ್ರಮದಲ್ಲಿ ಒಂದಿಷ್ಟು ಅಚ್ಚರಿ ನೀಡಿದ್ದು ಮಾತ್ರ ಜ್ಯೋತಿ ಬೆಳಗುವ ಕ್ಷಣ. ಪ್ರತ್ಯೇಕವಾಗಿ ಅರಳಿದ ದಳಗಳು ಒಂದಾಗಿ ಮುಗಿಲೆತ್ತರದಲ್ಲಿ ನಿಂತಾಗ ಅದೇ ವಿಶ್ವವೇ ಒಂದು ಎನ್ನುವ ಹಿತವಾದ ಭಾವ ಮನದಲ್ಲಿ ಸುಳಿದಾಡಿತು.

ಮೊದಲೇ ಗೊತ್ತಿದ್ದಂತೆ ಸಮಾರಂಭ ಆರಂಭವಾಗಿದ್ದು ಬ್ರಿಟನ್‌ನ ಗ್ರಾಮೀಣ ಪ್ರದೇಶದ ಅನುಭವ ನೀಡುವ ಮೂಲಕ. ಆಸ್ಪತ್ರೆಯ ದೃಶ್ಯ ತೆರೆದುಕೊಂಡಾಗ ಬೆಡ್‌ಗಳಲ್ಲಿ ಪುಟಿಯುವ ಮಕ್ಕಳು ಮುದ ನೀಡಿದ್ದು ಸಹಜ.
ತಂತ್ರಜ್ಞಾನ ಪ್ರಭಾವ ಕೂಡ ಮಹತ್ವ ಪಡೆದುಕೊಂಡಿತು.

ಯುವಜನರ ಐಪಾಡ್ ಪ್ರೀತಿಯ ನಡುವೆ ಸುಳಿದಾಡಿದ ಲಂಡನ್‌ನ ವಿಭಿನ್ನ ಜೀವನ ಶೈಲಿಯೂ ವಿಶಿಷ್ಟ. ಅದರೊಳಗೊಂದು ಪ್ರೇಮ ಕಥೆ ಅಲ್ಲಿ ತುಟಿಗಳಿಗೂ ಸಿಕ್ಕಿತು `ಜೊತೆ~! ಈ ಎಲ್ಲ ಕಥಾನಕದ ಅಂತ್ಯಕ್ಕೆ ವರ್ಲ್ಡ್ ವೈಡ್ ವೆಬ್ ಶೋಧಿಸಿದ ಸರ್ ಟಿಮ್ ಬೆರ್ನೆರ್ಸ್-ಲೀ ಪ್ರತ್ಯಕ್ಷ.

ಸಂಪ್ರದಾಯದಂತೆ ಕ್ರೀಡಾಪಟುಗಳ ಪಥ ಸಂಚಲನ ಹಾಗೂ ಒಲಿಂಪಿಕ್ ಧ್ವಜ ಹಾರಿಸುವ ಶಿಷ್ಟಾಚಾರ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಜಾಕ್ ರೋಗ್ `ಉದ್ದೀಪನ ಮದ್ದಿನಿಂದ ದೂರವಿರಿ. ಎದುರಾಳಿ ಸ್ಪರ್ಧಿಗಳನ್ನು ಗೌರವಿಸಿ, ನೀವು ಮಾದರಿಯಾಗಿ ನಿಲ್ಲುವ ವ್ಯಕ್ತಿಗಳು. ಮುಂದಿನ ತಲೆಮಾರಿನವರಿಗೆ ಪ್ರೇರಣೆ~ ಎಂದು ಸಂದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT