ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ ರೂ ಪರಿಹಾರಕ್ಕೆ ಆದೇಶ

Last Updated 1 ಜನವರಿ 2012, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಿಗದಿತ ಅವಧಿಯಲ್ಲಿ ಮೂಲ ಬೆಲೆಗೆ ನಿವೇಶನ ನೀಡಲು ವಿಫಲವಾದ ಗೃಹ ನಿರ್ಮಾಣ ಸಹಕಾರ ಸಂಘವೊಂದು, ಈಗ ಅರ್ಜಿದಾರರು ನಿವೇಶನ ಬಯಸದಿದ್ದರೆ, ಅವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ.

`ಕರ್ನಾಟಕ ಟೆಲಿಕಾಂ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ~ ಇಂತಹ ಪರಿಸ್ಥಿತಿ ಎದುರಿಸುವಂತಾಗಿದೆ. ಕಾರಣ ಇದರ ವಿರುದ್ಧ ಕೆಂಗೇರಿ ಉಪನಗರದ ನಿವಾಸಿ ಆರ್.ಎ.ವಿನಯ್ ಸಿಂಗ್ ಅವರು 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲು ಮಾಡಿದ್ದು, ವೇದಿಕೆಯಿಂದ ಇಂಥದೊಂದು ಆದೇಶ ಹೊರಬಿದ್ದಿದೆ.

ಅರ್ಜಿದಾರರು ನಿವೇಶನಕ್ಕಾಗಿ 2.65 ಲಕ್ಷ ರೂಪಾಯಿಗಳನ್ನು ಸಂಘಕ್ಕೆ ನೀಡಿದ್ದರು. ಅಷ್ಟೇ ಹಣ ಸಾಕು ಎಂದಿದ್ದ ಸಂಘ ನಂತರದಲ್ಲಿ ಹೆಚ್ಚುವರಿಯಾಗಿ 60 ಸಾವಿರ ರೂಪಾಯಿಗಳ ಬೇಡಿಕೆ ಇಟ್ಟಿತು.

ಅದಕ್ಕೆ ಅರ್ಜಿದಾರರು ಮೂಲ ಹಣದಲ್ಲಿಯೇ ನಿವೇಶನ ನೋಂದಣಿ ಮಾಡಿಕೊಡುವಂತೆ ಸಂಘಕ್ಕೆ ಮನವಿ ಮಾಡಿಕೊಂಡರು. ಈ ಮಧ್ಯೆ, ಅರ್ಜಿದಾರರು ನಿವೇಶನವನ್ನು ಪರಿಶೀಲಿಸಿದಾಗ ಅಲ್ಲಿ ಕನಿಷ್ಠ ಮೂಲಸೌಲಭ್ಯವೂ ಇಲ್ಲದೆ ಇರುವುದು ಗಮನಕ್ಕೆ ಬಂತು. ರಸ್ತೆ, ನೀರು, ಬೆಳಕು ಯಾವ ಸೌಲಭ್ಯವೂ ಅಲ್ಲಿ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಹಣ ನೀಡುವುದು ತಮ್ಮಿಂದ ಸಾಧ್ಯವಿಲ್ಲ. ಮೂಲ ಹಣದಲ್ಲಿಯೇ ನೋಂದಣಿ ಮಾಡಿಕೊಡಿ ಎಂದು ಅರ್ಜಿದಾರರು ಸಂಘಕ್ಕೆ ಹೇಳಿದರು. ಆದರೆ ಅದಕ್ಕೆ ಸಂಘ ಒಪ್ಪದಿದ್ದಾಗ ಅವರು ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲು ಮಾಡಿದರು.

`ನಿವೇಶನ ಮಂಜೂರು ಮಾಡುವ ಸಂದರ್ಭದಲ್ಲಿ ಹಾಕಿದ್ದ ಷರತ್ತಿನ ಪ್ರಕಾರ, `ಒಂದು ವೇಳೆ ನಿವೇಶನದ ಅಭಿವೃದ್ಧಿಗೆ ಹೆಚ್ಚುವರಿ ಹಣ ಅಗತ್ಯ ಕಂಡುಬಂದರೆ ಅದನ್ನು ಅರ್ಜಿದಾರರು ನೀಡಬೇಕು~ ಎಂದು ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಹಣದ ಬೇಡಿಕೆ ಇಟ್ಟಿದ್ದೇವೆ~ ಎಂದು ಸಂಘ ಸಮರ್ಥಿಸಿಕೊಂಡಿತು. ಆದರೆ ಅಲ್ಲಿ ಮೂಲ ಸೌಕರ್ಯವೇ ಇಲ್ಲದ ಕುರಿತು ಅರ್ಜಿದಾರರು ಗಮನ ಸೆಳೆದರು.

ಈ ಹಿನ್ನೆಲೆಯಲ್ಲಿ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ, `ಒಂದು ವೇಳೆ ಆ ನಿವೇಶನ ಬಯಸಿದರೆ ಅರ್ಜಿದಾರರು ಹೆಚ್ಚುವರಿಯಾಗಿ 60 ಸಾವಿರ ರೂಪಾಯಿ ನೀಡಬೇಕು. ನಿವೇಶನ ಸರಿಯಿಲ್ಲ ಎಂದು ಕಂಡುಬಂದರೆ, ತಾವು ನೀಡಿರುವ ಸಂಪೂರ್ಣ 2.65 ಲಕ್ಷ ರೂಪಾಯಿಗಳನ್ನು  ವಾಪಸು  ಪಡೆದುಕೊಳ್ಳಲು ಅವರು ಅರ್ಹರು. ಹಣ ವಾಪಸು ಪಡೆದುಕೊಂಡ ಪಕ್ಷದಲ್ಲಿ, ಸಂಘವು ಅರ್ಜಿದಾರರಿಗೆ ಪರಿಹಾರದ ರೂಪದಲ್ಲಿ ಒಂದು ಲಕ್ಷ ರೂಪಾಯಿ ನೀಡಬೇಕು~ ಎಂದು ಆದೇಶಿಸಿದೆ.

ದೋಷಪೂರಿತ ಹೀಟರ್
ದೋಷಪೂರಿತ ಸೋಲಾರ್ ವಾಟರ್ ಹೀಟರ್ ನೀಡಿ, ಅದನ್ನು ರಿಪೇರಿ ಮಾಡಿಕೊಡದ ಗಂಗಾನಗರದ ಬಳಿಯ `ಎಮ್ವಿ ಸೋಲಾರ್ ಸಿಸ್ಟಮ್ಸ ಲಿಮಿಟೆಡ್~ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ, ಅರ್ಜಿದಾರರಿಗೆ ಹೊಸ ಹೀಟರ್ ನೀಡುವಂತೆ ಆದೇಶಿಸಿದೆ.

ಕಂಪೆನಿ ವಿರುದ್ಧ ಜಿ.ರಾಮಯ್ಯ ಎನ್ನುವವರು ದೂರು ದಾಖಲು ಮಾಡಿದ್ದರು. ಇವರು 2005ರಲ್ಲಿ 25 ಸಾವಿರ ರೂಪಾಯಿ ನೀಡಿ ಸೋಲಾರ್ ವಾಟರ್ ಹೀಟರ್ ಖರೀದಿ ಮಾಡಿದ್ದರು. 10 ವರ್ಷಗಳ ಗ್ಯಾರೆಂಟಿ ನೀಡಲಾಗಿತ್ತು.
ಆದರೆ ಐದು ವರ್ಷಕ್ಕೆ ಅದು ಕೆಟ್ಟು ನಿಂತಿತು. ಹಲವು ಬಾರಿ ಕಂಪೆನಿಗೆ ಮನವಿ ಮಾಡಿಕೊಂಡ ನಂತರ ಒಮ್ಮೆ ರಿಪೇರಿ ಮಾಡಿಕೊಡಲಾಯಿತು. ಗ್ಯಾರೆಂಟಿ ಅವಧಿ ಇನ್ನೂ ಮುಗಿದಿಲ್ಲದ ಹಿನ್ನೆಲೆಯಲ್ಲಿ ಉಚಿತವಾಗಿ ರಿಪೇರಿ ಮಾಡಬೇಕಿತ್ತು. ಆದರೆ ಅರ್ಜಿದಾರರಿಂದ 500 ರೂಪಾಯಿ ವಸೂಲಿ ಮಾಡಲಾಯಿತು.

ರಿಪೇರಿ ಮಾಡಿದ ಕೆಲವೇ ತಿಂಗಳಲ್ಲಿ ಪುನಃ ಹೀಟರ್ ಕೈಕೊಟ್ಟಿತು. ಈ ಕುರಿತು ಪುನಃ ಕಂಪೆನಿಯ ಗಮನ ಸೆಳೆದರೂ ಪ್ರಯೋಜನ ಆಗಲಿಲ್ಲ. 18 ಸಾವಿರ ರೂಪಾಯಿ ನೀಡಿ ಹೊಸ ಹೀಟರ್ ಪಡೆದುಕೊಳ್ಳುವಂತೆ ಕಂಪೆನಿ ಸಿಬ್ಬಂದಿ ಅರ್ಜಿದಾರರಿಗೆ ತಿಳಿಸಿದರು.

ಇದರಿಂದ ಅರ್ಜಿದಾರರು ವೇದಿಕೆ ಮೊರೆ ಹೋದರು.
 ಹಾಳಾದ ವಾಟರ್ ಹೀಟರ್ ಅನ್ನು 30 ದಿನಗಳ ಒಳಗೆ ಸರಿಯಾಗಿ ರಿಪೇರಿ ಮಾಡಿಕೊಡುವಂತೆ, ಇಲ್ಲದೇ ಹೋದರೆ ಹೊಸ ಹೀಟರ್ ನೀಡುವಂತೆ ವೇದಿಕೆಯ ಅಧ್ಯಕ್ಷ ಎಚ್.ವಿ.ರಾಮಚಂದ್ರ ರಾವ್ ನೇತೃತ್ವದ ಪೀಠ ಆದೇಶಿಸಿದೆ. ಇದರ ಜೊತೆಗೆ 2 ಸಾವಿರ ರೂಪಾಯಿ ನ್ಯಾಯಾಲಯದ ವೆಚ್ಚವನ್ನು ಅರ್ಜಿದಾರರಿಗೆ ನೀಡುವಂತೆಯೂ ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT