ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡೆನ್ ಸೆರೆ ಸಿಕ್ಕರೆ ಸೇನಾ ಕಾರಾಗೃಹಕ್ಕೆ ರವಾನೆ

Last Updated 17 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ನಿಷೇಧಿತ ಅಲ್‌ಖೈದಾ ಸಂಘಟನೆಯ ಮುಖಂಡ ಒಸಾಮ ಬಿನ್ ಲಾಡೆನ್ ಹಾಗೂ ಉಪನಾಯಕ ಐಮನ್ ಅಲ್ ಜವಾಹರಿ ಸೆರೆ ಸಿಕ್ಕರೆ ಅವರಿಬ್ಬರನ್ನೂ ಕರಾವಳಿ ತೀರದ ಗ್ವಾಂಟಾನಾಮೊದಲ್ಲಿರುವ ಸೇನಾ ಕಾರಾಗೃಹಕ್ಕೆ ಕಳುಹಿಸಲಾಗುವುದು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಈ ಇಬ್ಬರೂ ಮುಖಂಡರು ಈಗ ಪಾಕಿಸ್ತಾನದಲ್ಲೇ ಅಡಗಿಕೊಂಡಿದ್ದಾರೆ ಎಂಬುದು ನಮಗೆ ಖಚಿತವಾಗಿದೆ. ಸದ್ಯದಲ್ಲೇ ಅವರ ಕಾರಸ್ಥಾನವನ್ನು ಅಮೆರಿಕ ಸೇನೆ ಭೇದಿಸಲಿದೆ’ ಎಂದು ಅಮೆರಿಕದ ಸಿಐಎ ಮುಖ್ಯಸ್ಥ ಲಿಯೊನ್ ಪ್ಯಾನೆಟ್ಟಾ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಈ ಮಹತ್ತರ ವಿಷಯವನ್ನು ಬಹಿರಂಗಪಡಿಸುವ ಮೂಲಕ ಅಮೆರಿಕ ಸರ್ಕಾರವು ಅಲ್‌ಖೈದಾ ಮುಖಂಡರ ಬಂಧನದ ಕುರಿತಂತೆ ಮತ್ತು ಅವರ ಮೇಲೆ ಕೈಗೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ತನ್ನ ಭವಿಷ್ಯದ ನಿಲುವುಗಳೇನು ಏನೆಂಬುದನ್ನು ತಿಳಿಯಪಡಿಸಿದಂತಾಗಿದೆ. ಇದರಿಂದಾಗಿ ಒಸಾಮ ವಿರುದ್ಧ ಅಮೆರಿಕದ ಯಾವುದೇ ಫೆಡರಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದಿಲ್ಲ ಎಂಬುದೂ ಕೂಡಾ ಸ್ಪಷ್ಟವಾದಂತಾಗಿದೆ. ಆದಾಗ್ಯೂ ಈ ದಿಸೆಯಲ್ಲಿನ ಮುಂದಿನ ಕ್ರಮಗಳ ಬಗ್ಗೆ ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳೊಂದಿಗೆ ಸರ್ಕಾರ ಚರ್ಚೆ ನಡೆಸುತ್ತಿದೆ ಎಂದು ಬೇಹುಗಾರಿಕಾ ಅಧಿಕಾರಿ ಆರ್.ಕ್ಲಾಪರ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಒಬಾಮ ಸರ್ಕಾರ ಗ್ವಾಂಟಾನಾಮೊ ಸೇನಾ ಕಾರಾಗೃಹವನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂದು ತಿಳಿಸಿದ್ದರು. ಆದರೆ ಲಾಡೆನ್ ಅನ್ನು ಇಲ್ಲಿಗೆ ಅಟ್ಟಲಾಗುವುದು ಎಂದು ಲಿಯೊನ್ ಅವರು ಹೇಳಿರುವುದು ಒಂದಿಷ್ಟು ಕುತೂಹಲ ಮೂಡಿಸಿದೆ.

‘ಅಲ್‌ಖೈದಾ ಈಗಾಗಲೇ ತನ್ನ ಅನೇಕ ಮುಖಂಡರನ್ನು ಕಳೆದುಕೊಂಡಿದ್ದು ತೀವ್ರ ಸಂಕಷ್ಟದಲ್ಲಿದೆ. ಸಂಘಟನೆಯ ಕಾರ್ಯಾಚರಣೆಗಳಲ್ಲಿ ತಾಳಮೇಳವಿಲ್ಲದಂತಾಗಿದೆ. ಅಂತೆಯೇ ಆರ್ಥಿಕ ಮುಗ್ಗಟ್ಟಿನಿಂದಲೂ ಅದು ಬಳಲುತ್ತಿದೆ’ ಎಂದು ಅಮೆರಿಕದ ಮತ್ತೊಬ್ಬ ಸೇನಾ ಮುಖ್ಯಸ್ಥ ಅಡ್ಮಿರಲ್ ಮೈಕ್ ಮುಲನ್ ಅಲ್‌ಖೈದಾದ ಸ್ಥಿತಿಯನ್ನು ವಿವರಿಸಿದ್ದಾರೆ.

ಎಲ್‌ಇಟಿ ಜಾಲ ವಿಸ್ತರಣೆ:ಆತಂಕ
ವಾಷಿಂಗ್ಟನ್ (ಪಿಟಿಐ):
ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯು ಮುಂಬೈ ಮಾದರಿಯ ದಾಳಿಯನ್ನು ಯೂರೋಪ್ ಮತ್ತಿತರ ರಾಷ್ಟ್ರಗಳಲ್ಲಿ ನಡೆಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಗೂಢಚರ್ಯೆಗೆ ಸಂಬಂಧಿಸಿದ ಸೆನೆಟ್ ಸಮಿತಿಯ ಎದುರು ಹೇಳಿಕೆ ನೀಡಿರುವ ಅವರು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯು ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ ಎಂದು ಅವರು ತಿಳಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಮುಂಬೈ ದಾಳಿಗೆ ಕಾರಣರಾದವರನ್ನು ಪಾಕಿಸ್ತಾನದ ಐಎಸ್‌ಐ ಭಾರತಕ್ಕೆ ಹಸ್ತಾಂತರಿಸದೆ ಇರುವ ವಿಚಾರ ಪ್ರಸ್ತಾಪವಾದಾಗ, ಲಷ್ಕರ್ ಸಂಘಟನೆ ಬಲ ವೃದ್ಧಿಸಿಕೊಳ್ಳುತ್ತಿದೆ ಎಂದು ಲೈಥರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT