ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಕ್ಷಮೆಯಾಚಿಸಿದ ಜಿಲ್ಲಾಧಿಕಾರಿ

Last Updated 9 ಸೆಪ್ಟೆಂಬರ್ 2011, 10:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಗುರುವಾರ ವಕೀಲರ ಕ್ಷಮೆಯಾಚಿಸಿ ಬಿಕ್ಕಟ್ಟನ್ನು ಶಮನಗೊಳಿಸಿದರು.

ಬುಧವಾರ ಜಿಲ್ಲಾಧಿಕಾರಿ ನ್ಯಾಯಾಲಯದ ಕಲಾಪ ಸಂದರ್ಭದಲ್ಲಿ ವಕೀಲ ಇ. ತಿಪ್ಪೇಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ವಕೀಲರು ದಿಢೀರ್ ಪ್ರತಿಭಟನೆ ನಡೆಸಿ ಕ್ಷಮೆಯಾಚನೆಗೆ ಆಗ್ರಹಿಸಿದ್ದರು.

ಗುರುವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದ ವಕೀಲರು, ವಕೀಲರ ಭವನದಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿ ಕ್ಷಮೆಯಾಚಿಸುವವರೆಗೂ ಕಲಾಪಕ್ಕೆ ಹಾಜರಾಗಬಾರದು ಎಂದು ನಿರ್ಣಯ ಕೈಗೊಂಡರು.

ಬೆಳಿಗ್ಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರು, ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ್ ಹರೀಶ್‌ಕುಮಾರ್ ಅವರನ್ನು ಭೇಟಿಯಾಗಿ ಘಟನೆಯ ವಿವರಗಳನ್ನು ನೀಡಿ ಸಮಾಲೋಚನೆ ನಡೆಸಿದರು.

ನಂತರ ವಕೀಲರ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ್ ಹರೀಶಕುಮಾರ್, ವಕೀಲರಿಗೆ ವಾದ ಮಂಡಿಸುವ ಹಕ್ಕು ಇದೆ. ವಕೀಲರಿಗೆ ಹೊರಗೆ ಹೋಗಿ ಎಂದು ಹೇಳಿದ್ದು ತಪ್ಪು. ಕಲಾಪದ ಸಮಯದಲ್ಲಿ ಹೊರಗೆ ಹಾಕುವುದು ತಪ್ಪು. ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ.

ಜಿಲ್ಲಾಧಿಕಾರಿ ನಮ್ಮ ಬಳಿ ಕ್ಷಮೆ ಕೋರಿದ್ದರು. ಆದರೆ, ಪದಾಧಿಕಾರಿಗಳು ಒತ್ತಾಯಿಸಿದ್ದರಿಂದ ಇಲ್ಲಿಗೆ ಆಗಮಿಸಿದ್ದಾರೆ. ವಕೀಲರು ಸಹ ಎಲ್ಲ ಸಿದ್ಧತೆಗಳೊಂದಿಗೆ ನ್ಯಾಯಾಲಯದ ಕಲಾಪಗಳಿಗೆ ಆಗಮಿಸಿದರೆ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.

ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಬಾಕಿ ಇರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಸಹಕಾರ ನೀಡಬೇಕು. ಅನೇಕ ವರ್ಷಗಳಿಂದ ಪ್ರಕರಣಗಳು ಬಾಕಿ ಉಳಿದಿದ್ದು, ನ್ಯಾಯಾಲಯಕ್ಕೆ ಅಲೆದಾಡುವುದರಿಂದ ಜನ ಸಾಮಾನ್ಯರಿಗೆ ಕಷ್ಟವಾಗುತ್ತದೆ. ಯಾವದೇ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು ಎಂದು ನುಡಿದರು. ಈ ಮಾತುಗಳಿಂದ ಅಸಮಾಧಾನಗೊಂಡ ವಕೀಲರು, ನಿಮ್ಮ ತಪ್ಪಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ವಕೀಲರಿಗೆ ಹೊರಗೆ ಹೋಗಿ ಎಂದು ಹೇಳಿದ್ದು ತಪ್ಪು. ಅದು ತಮಗೆ ಅರಿವಾಗಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯುವುದಿಲ್ಲ. ಎಲ್ಲರೂ ಒಟ್ಟಾಗಿ ಹೋಗೋಣ ಎಂದು ನುಡಿದು ಪ್ರಕರಣವನ್ನು ಅಂತ್ಯಗೊಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ಕೆ. ರಹಮತ್‌ವುಲ್ಲಾ, ಪ್ರಧಾನ ಕಾರ್ಯದರ್ಶಿ ಶಿವು ಯಾದವ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT