ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣರಂಜಿತ ಅಮ್ಮ

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಸಿನಿಮಾ ಸಮ್ಮೊಹಕ ಮಾಧ್ಯಮ. ಎರಡೂವರೆ ಗಂಟೆಗಳಲ್ಲಿ ಹುಟ್ಟು, ಸಾವು, ಪ್ರೀತಿ, ವಂಚನೆ, ವಿರಹ ಎಲ್ಲವೂ ಬೆಳ್ಳಿತೆರೆಯ ಮೇಲೆ ಬಂದುಹೋಗುತ್ತವೆ. ಪ್ರೇಕ್ಷಕ ಆ ಕಥೆಯಲ್ಲಿ ಕಳೆದುಹೋಗುತ್ತಾನೆ.

ದಕ್ಷಿಣ ಭಾರತದ ಅತಿ ಪ್ರಭಾವಿ ನಾಯಕಿ, ತಮಿಳುನಾಡು ಮುಖ್ಯಮಂತ್ರಿ ಎಐಎಡಿಎಂಕೆಯ ಪ್ರಶ್ನಾತೀತ ನಾಯಕಿ ಜಯರಾಮ್ ಜಯಲಲಿತಾ ಬದುಕಿನ ಕಥೆ ಸಹ ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲದಷ್ಟು ರೋಚಕ.

ಸಂಕೋಚದ ಮುದ್ದೆಯಾಗಿದ್ದ, ತಮ್ಮನ್ನು ಟೀಕಿಸಿದವರು, ಅವಮಾನ ಮಾಡಿದವರಿಗೆ ಪ್ರತಿ ಹೇಳಲು ಸಾಧ್ಯವಾಗದೇ ಅಳು ಮುಖ ಮಾಡಿಕೊಂಡು ಮನೆಗೆ ಮರಳುತ್ತಿದ್ದ ಮಧ್ಯಮ ವರ್ಗದ ಅಯ್ಯಂಗಾರಿ ಹೆಣ್ಣು ಮಗಳು ಈಗ ಜಾಗತಿಕ ಮಾಧ್ಯಮಗಳು ಗಮನಿಸುತ್ತಿರುವ ರಾಜಕಾರಣಿ. ಅವರಾಡುವ ಪ್ರತಿ ಮಾತಿಗೂ ಅವರ ದೇಹಗಾತ್ರದಷ್ಟೇ ತೂಕ. ಮಹತ್ವ.
ತಮಿಳರ ಪಾಲಿನ ಅಮ್ಮ, ಎಐಎಡಿಎಂಕೆ ಕಾರ್ಯಕರ್ತರ ಮೆಚ್ಚಿನ `ಪುರಚ್ಚಿ ತಲೈವಿ~ (ಕ್ರಾಂತಿಕಾರಿ ನಾಯಕಿ) ಈ ಮಟ್ಟದ ನಾಯಕಿಯಾಗಿ ಬೆಳೆದ ದಾರಿ ಹೂವಿನ ಹಾಸಿಗೆಯಾಗಿರಲಿಲ್ಲ. ಪ್ರೇಮ, ವಿರಹ, ಅವಮಾನ, ನಿರಾಸೆ, ಹತಾಶೆ, ಹೋರಾಟ, ಸೇಡು ಎಲ್ಲವೂ ಈ ಮಾರ್ಗದಲ್ಲಿದ್ದವು.

ಹರೆಯಕ್ಕೆ ಬರುವವರೆಗೆ ತಾಯಿಯ ಕೈಗೊಂಬೆ. ಆಮೇಲೆ ಸಹನಟ, ಸಂಗಾತಿ, ಗುರು ಎಲ್ಲವೂ ಆಗಿದ್ದ ಎಂಜಿಆರ್ ಅಣತಿ. ಎಂಜಿಆರ್ ಮರಣದ ನಂತರ ಅವರ ರಾಜಕೀಯ ಉತ್ತರಾಧಿಕಾರಿಯ ಪಾತ್ರ. ಎಂಜಿಆರ್‌ಗೂ ಗುರುವಾಗಿದ್ದ ಡಿಎಂಕೆ ನಾಯಕ ಕರುಣಾನಿಧಿ ಜತೆ ಜಿದ್ದಿನ ರಾಜಕಾರಣ. ಮೈ ತುಂಬ ಮೆತ್ತಿದ ಭ್ರಷ್ಟಾಚಾರದ ಕೆಸರು. ಆ ಕೆಸರು ತೊಳೆದುಕೊಳ್ಳಲು ಈಗ ಕಾನೂನು ಹೋರಾಟ.

1948ರ ಫೆಬ್ರುವರಿ 24ರಂದು ಮೇಲುಕೋಟೆಯ ಜಯರಾಮ್, ಸಂಧ್ಯಾ ದಂಪತಿಗೆ ಜನಿಸಿದ ಜೆ. ಜಯಲಲಿತಾ ಹುಟ್ಟು ಹೆಸರು `ಕೋಮಲವಲ್ಲಿ~. ತಾತ (ತಂದೆಯ ತಂದೆ) ಮೈಸೂರು ಒಡೆಯರ್ ಬಳಿ ಕೆಲಸ ಮಾಡುತ್ತಿದ್ದರಿಂದ ಜಯಲಲಿತಾ ಎಂದು ಮರುನಾಮಕರಣ.

ಜಯಾ ಎರಡು ವರ್ಷದ ಹಸುಳೆಯಾಗಿದ್ದಾಗ ತಂದೆಯ ಹಠಾತ್ ಮರಣ. ತಾಯಿ ಸಂಧ್ಯಾ ತಮ್ಮ ತವರು ಬೆಂಗಳೂರಿಗೆ ಮರಳಿದರು. ಅಜ್ಜ, ಅಜ್ಜಿ ಕಣ್ಣಳತೆಯಲ್ಲಿ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ ಜಯಾ ಪ್ರಾಥಮಿಕ ಶಿಕ್ಷಣ. ಎಲ್ಲ ಅಯ್ಯಂಗಾರಿ ಹೆಣ್ಣು ಮಕ್ಕಳಂತೆ ಸಂಗೀತ, ಭರತನಾಟ್ಯದಲ್ಲಿ ಪಳಗಿದರು. ತಾಯಿ ಸಂಧ್ಯಾ ಸಹ ಆ ಕಾಲದ ಪ್ರಖ್ಯಾತ ಭರತನಾಟ್ಯ ಕಲಾವಿದೆ. ಬಣ್ಣದ ಬದುಕು ಅರಸಿ ಸಂಧ್ಯಾ ಮದ್ರಾಸ್‌ಗೆ ಹೋದರು. ತಮಿಳು ಸಿನಿಮಾಗಳಲ್ಲಿ ಮಿಂಚತೊಡಗಿದರು. ಸೆಕ್ರೇಡ್ ಹಾರ್ಟ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಜಯಾ ಆಗಷ್ಟೇ ಅರಳುತ್ತಿದ್ದರು. ತಾಯಿ ಸಂಧ್ಯಾಗೆ ಮಗಳ ಉಜ್ವಲ ಭವಿಷ್ಯ ಕಣ್ಣಿಗೆ ಕಟ್ಟತೊಡಗಿತು. ಬೇಸಿಗೆ ರಜೆಯಲ್ಲಿ ಚಿತ್ರರಂಗಕ್ಕೆ ಪರಿಚಯಿಸೇಬಿಟ್ಟರು. 1961ರಲ್ಲಿ ಬಿಡುಗಡೆಯಾದ `ಎಪಿಸ್ಟಲ್~ ಎಂಬ ಇಂಗ್ಲಿಷ್ ಚಿತ್ರದಲ್ಲಿ ಜಯಾ ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದರು. 1964ರಲ್ಲಿ 15 ವರ್ಷದವರಿದ್ದಾಗ ಬಿಡುಗಡೆಯಾದ `ಚಿನ್ನದ ಗೊಂಬೆ~ ಕನ್ನಡ ಚಿತ್ರ ಅವರು ನಾಯಕಿಯಾಗಿ ಅಭಿನಯಿಸಿದ್ದ ಮೊದಲ ಚಿತ್ರ. ದಿ.ಕಲ್ಯಾಣ್‌ಕುಮಾರ್ ಚಿತ್ರದ ನಾಯಕ.

ತಮಿಳು ಚಿತ್ರರಂಗದಲ್ಲಿ ಮೊತ್ತಮೊದಲ ಬಾರಿ ಸ್ಕರ್ಟ್ ಧರಿಸಿದ್ದ ಗ್ಲಾಮರಸ್ ನಾಯಕಿ ಜಯಾ ಆಗಿನ ಸೂಪರ್‌ಸ್ಟಾರ್ ಎಂ.ಜಿ. ರಾಮಚಂದ್ರನ್ ಕಣ್ಣಿಗೆ ಬಿದ್ದರು. ಅಲ್ಲಿಂದ ಮುಂದೆ ಅವರ ಚಿತ್ರ ಬದುಕು, ಖಾಸಗಿ ಬದುಕು ಎಲ್ಲವೂ ಬದಲಾಯಿತು. 1964ರಿಂದ 1971ರ ಅವಧಿಯಲ್ಲಿ ಈ ಜೋಡಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿತು.

1972ರಲ್ಲಿ ಕರುಣಾನಿಧಿ ಜತೆ ಜಗಳವಾಡಿಕೊಂಡು ಎಂಜಿಆರ್ ಅಣ್ಣಾಡಿಎಂಕೆ ಸ್ಥಾಪಿಸಿದಾಗಲೇ ಜಯಲಲಿತಾ ರಾಜಕೀಯದ ಮೊದಲ ಪಾಠ ಕಲಿತರು. ಜಯಾರನ್ನು ಆಗಲೇ ಪಕ್ಷದಲ್ಲಿ ಬೆಳೆಸುವ ಎಂಜಿಆರ್ ಆಸೆಗೆ ಹಿರಿಯ ನಾಯಕರು ಮಣೆ ಹಾಕಲಿಲ್ಲ.

1977ರ ಚುನಾವಣೆಯಲ್ಲಿ ಜಯಗಳಿಸಿ ಮುಖ್ಯಮಂತ್ರಿಯಾದ ಎಂಜಿಆರ್ 1980ರಲ್ಲಿ ಜಯಲಲಿತಾರನ್ನು ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿ ನೇಮಿಸಿದರು. 1984ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಜಯಾ, ಸಂಸತ್‌ನಲ್ಲಿ ಮಾಡಿದ ನಿರರ್ಗಳ ಭಾಷಣಕ್ಕೆ ಅಂದಿನ ಪ್ರಧಾನಿ ಇಂದಿರಾ ತಲೆದೂಗಿದ್ದರು.

ಎಂಜಿಆರ್ ಆಪ್ತಸಖಿ ಜಯಾ ರಾಜಕೀಯವಾಗಿ ಬೆಳೆಯತೊಡಗಿದಾಗ ಪಕ್ಷದೊಳಗೆ ಅಸಮಾಧಾನ ಹೊಗೆಯಾಡತೊಡಗಿತು. 1984ರಲ್ಲಿ ಆದ ಹೃದಯಾಘಾತ, ಮೂತ್ರಪಿಂಡ ವೈಫಲ್ಯದ ನಂತರ ಎಂಜಿಆರ್ ಆರೋಗ್ಯ ಕುಸಿಯತೊಡಗಿತ್ತು. ಅವರ ಆಪ್ತರು ಆಗ ಜಯಾರನ್ನು ದೂರ ಇಟ್ಟರು.

70ರ ದಶಕದ ಉತ್ತರಾರ್ಧದಲ್ಲಿ ಜಯಾ ತೆಲಗು ನಟರೊಬ್ಬರಿಗೆ ಆಪ್ತರಾಗಿದ್ದರು. ಆದರೆ, ಈ ಸಂಬಂಧ ಹೆಚ್ಚು ದಿನ ಬಾಳಲಿಲ್ಲ. ಜಯಾಗೆ ಹೈದರಾಬಾದ್‌ನಲ್ಲಿ ಮಗಳಿದ್ದಾಳೆ ಎಂಬ ಗುಸು, ಗುಸು ಅವರು ಸಿಎಂ ಆದಾಗ ಕೇಳಿಬಂದಿತ್ತು.

1987ರ ಡಿಸೆಂಬರ್ 24ರ ನಸುಕಿನಲ್ಲಿ ಎಂಜಿಆರ್ ಕೊನೆಯುಸಿರೆಳೆದಿದ್ದರು. ಅಂದು ನಡೆದಿದ್ದು ಮಾತ್ರ ತಮಿಳುನಾಡು ಎಂದೂ ಮರೆಯಲಾರದ ಅಸಹ್ಯ ಪ್ರಹಸನ. ಸಾವಿನ ಸುದ್ದಿ ತಿಳಿದು ಜಯಾ ಎಂಜಿಆರ್ ನಿವಾಸಕ್ಕೆ ಧಾವಿಸಿ ಬಂದಾಗ ಮೃತದೇಹ ಇಡಿಸಿದ್ದ ಕೋಣೆಯ ಬಾಗಿಲುಗಳನ್ನು ಮುಚ್ಚಲಾಯಿತು. ಅಲ್ಲಿಂದ ಜಯಾರನ್ನು ಅಕ್ಷರಶಃ ಹೊರಹಾಕಲಾಯಿತು.

ಎಂಜಿಆರ್ ಕಳೇಬರವನ್ನು ರಾಜಾಜಿ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಅಲ್ಲಿ ನುಸುಳಿ ಬಂದ ಜಯಲಲಿತಾ ಅಖಂಡ 30 ಗಂಟೆಗಳ ಕಾಲ ಎಂಜಿಆರ್ ತಲೆಯ ಬಳಿ ದುಃಖಿಸುತ್ತ ಕುಳಿತರು. ಎದೆಯ ಮೇಲೆ ಬಿದ್ದು ರೋಧಿಸಿದರು. ಭಾವಾನಾತ್ಮಕ ತಮಿಳರ ಹೃದಯ ಕದಿಯಲು ಇಷ್ಟು ಸಾಕಾಯಿತು. ಎಂಜಿಆರ್ ಧರ್ಮಪತ್ನಿ ಜಾನಕಿಗೆ ಪಾರ್ಥಿವ ಶರೀರದ ಕೈಹಿಡಿದು ನಮಸ್ಕರಿಸಲು ಮಾತ್ರ ಸಾಧ್ಯವಾಯಿತು.

ಅಂತ್ಯ ಸಂಸ್ಕಾರಕ್ಕೆ ತೆರೆದ ಮಿಲಿಟರಿ ಟ್ರಕ್‌ನಲ್ಲಿ ಕಳೇಬರ ಒಯ್ಯುತ್ತಿದ್ದಾಗ ಟ್ರಕ್ ಏರಲು ಯತ್ನಿಸಿದ ಜಯಲಲಿತಾರನ್ನು ಜಾನಕಿ ಸಂಬಂಧಿಗಳು, ಬೆಂಬಲಿಗರು ಎಳೆದುಹಾಕಿದರು. ಆಗ ನಡೆದ ಗಲಾಟೆಯಲ್ಲಿ ಜಾನಕಿ ಸಹ ಕೆಳಗಿಳಿಯಬೇಕಾಯಿತು. ತಮಿಳುನಾಡು ಕಂಡ ಮಹಾನ್ ನಟ, ಪ್ರಭಾವಿ ರಾಜಕಾರಣಿಯ ಅಂತ್ಯಸಂಸ್ಕಾರ ಪತ್ನಿ, ಆಪ್ತಸಖಿಯ ಗೈರುಹಾಜರಿಯಲ್ಲಿ ನಡೆಯಿತು.

ಎಂಜಿಆರ್ ಉತ್ತರಾಧಿಕಾರಿಯೆಂದು ಘೋಷಿಸಿಕೊಂಡ ಜಾನಕಿ ರಾಮಚಂದ್ರನ್ ಮುಖ್ಯಮಂತ್ರಿಯಾದರು. ಪಕ್ಷ ಎರಡು ಹೋಳಾಯಿತು. ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಜಯಾರನ್ನು ಬೆಂಬಲಿಸಿತು. ಸಂವಿಧಾನದ 356ನೇ ವಿಧಿಯಡಿ ಜಾನಕಿ ರಾಮಚಂದ್ರನ್ ಸರ್ಕಾರವನ್ನು 21 ದಿನಗಳಲ್ಲಿ ವಜಾ ಮಾಡಿತು. ಕೆಲ ತಿಂಗಳಲ್ಲೇ ಜಾನಕಿ ತೆರೆಮರೆಗೆ ಸರಿದರು. 1988ರಲ್ಲಿ ಹೋಳಾಗಿದ್ದ ಪಕ್ಷ ಜಯಾ ನೇತೃತ್ವದಲ್ಲಿ ಮತ್ತೆ ಒಂದಾಯಿತು.

ವಿಧಾನಸಭೆ ವಿಸರ್ಜನೆ ನಂತರ ನಡೆದ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಹಿಡಿಯಿತು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ಜಯಾ ಸೀರೆಯನ್ನು ಡಿಎಂಕೆ ಶಾಸಕರು ಸೆಳೆದ ದುಶ್ಯಾಸನ ಪ್ರಸಂಗವೂ ನಡೆಯಿತು. ಅಂದಿನಿಂದ ಜಯಾ ಸೀರೆ ಮೇಲೆ ಮೇಲಂಗಿ ಧರಿಸತೊಡಗಿದರು. ಈ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಶಪಥ ತೊಟ್ಟರು.

ಎಂಜಿಆರ್ ಯುಗ ಮರಳಿ ತರುತ್ತೇನೆ ಅನ್ನುತ್ತಲೇ ಕಣಕ್ಕಿಳಿದಿದ್ದ ಜಯಾಗೆ 1991ರ ಚುನಾವಣೆಯಲ್ಲಿ ತಮಿಳು ಮತದಾರರು ಕೈಬಿಚ್ಚಿ ಮತ ನೀಡಿದ್ದರು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ 1991-1996ರ ಅವಧಿಯಲ್ಲೇ ಜಯಾ ರಾಜಕೀಯವಾಗಿ, ವ್ಯಕ್ತಿಯಾಗಿ ತ್ರಿವಿಕ್ರಮನಂತೆ ಬೆಳೆದದ್ದು.

ಎಐಎಡಿಎಂಕೆ ನಾಯಕರು, ಜಯಾ ಸಂಪುಟದ ಸಚಿವರು, ಸಾರ್ವಜನಿಕ ವೇದಿಕೆಗಳಲ್ಲಿ, ಪಕ್ಷದ ಸಭೆಯಲ್ಲಿ ಯಾವುದೇ ಮುಜುಗರವಿಲ್ಲದೇ ಆಕೆಯ ಕಾಲಿಗೆ ಬೀಳತೊಡಗಿದರು. ಮದ್ರಾಸ್‌ನಲ್ಲಿ 50, 60 ಅಡಿಯ ಜಯಾ ಕಟೌಟ್‌ಗಳು ರಾಜಾಜಿಸತೊಡಗಿದವು.

ಜಯಾರನ್ನು ಆದಿ ಪರಾಶಕ್ತಿಯ ಅವತಾರ, ಮದರ್ ಮೇರಿ ಪ್ರತಿರೂಪ ಎಂದೆಲ್ಲ ಬಿಂಬಿಸತೊಡಗಿದರು. ಎಂಜಿಆರ್ ನೆರಳಾಗಿ ರಾಜಕೀಯ ಪ್ರವೇಶಿಸಿದ್ದ ಈ ಕೆನೆಬಣ್ಣದ ಅಯ್ಯಂಗಾರಿ ಹೆಣ್ಣುಮಗಳು ದ್ರಾವಿಡ ಪ್ರಜ್ಞೆಯ ತಮಿಳು ಜನಮಾನಸದಲ್ಲಿ ಅಮ್ಮನಾಗಿ ಬೆಳೆಯತೊಡಗಿದಳು.

ಇದೇ ಸಮಯದಲ್ಲೇ ಜಯಾ ದತ್ತುಪುತ್ರನ ಮದುವೆಯಾಯಿತು. ಆ ಕಾಲದ ಅತಿ ಆಡಂಬರದ ಮದುವೆ ಎಂಬ ಕುಖ್ಯಾತಿಯೂ ಅಂಟಿತು. ಜಯಾ, ಗೆಳತಿ ಶಶಿಕಲಾ ಜತೆ ಸೇರಿ ಖರೀದಿಸಿದ್ದ ಕೇಜಿಗಟ್ಟಲೇ ಆಭರಣ, ಲೆಕ್ಕವಿಲ್ಲದಷ್ಟು ಸೀರೆ, ಚಪ್ಪಲಿ ಅವರ ಮತ್ತೊಂದು ಮುಖ ಪರಿಚಯಿಸಿತು. ಬಡವರ ದನಿಯಾಗುವುದಾಗಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದಿದ್ದ ಜಯಾ, ಅಳತೆ ಮೀರಿ ಚರಾಸ್ತಿ, ಸ್ಥಿರಾಸ್ತಿ ಖರೀದಿಸಿದ್ದರು. ಆಗ ಸುತ್ತಿಕೊಂಡ್ದ್ದಿದ ಭ್ರಷ್ಟಾಚಾರದ ಉರುಳಿನಿಂದ ತಪ್ಪಿಸಿಕೊಳ್ಳಲು ಈಗಲೂ ಸಾಧ್ಯವಾಗುತ್ತಿಲ್ಲ.
1996ರ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬಂತು. ಆದರೆ, 1998ರ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದ ಜಯಾ ಕಿಂಗ್ ಮೇಕರ್ ಆದರು. ವಾಜಪೇಯಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 13 ತಿಂಗಳಲ್ಲಿ ಹಠಾತ್ ಹಿಂತೆಗೆದುಕೊಂಡು ಸರ್ಕಾರ ಬೀಳಿಸಿದರು.

2001ರಲ್ಲಿ ಮತ್ತೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿದರು. 2006ರ ಚುನಾವಣೆಯಲ್ಲಿ ಕರುಣಾನಿಧಿಗೆ ಮೇಲುಗೈ. ಕಾಂಗ್ರೆಸ್ ಸಾಮೀಪ್ಯದಿಂದ ಡಿಎಂಕೆ ಮೆರೆಯುತ್ತಿದೆ ಎಂದುಕೊಳ್ಳುವಾಗಲೇ 2011ರ ಚುನಾವಣೆಯಲ್ಲಿ ಅಮ್ಮಾಗೆ ಗೆಲವು.

ಈಗ ಅಮ್ಮಾ ಸ್ವರೂಪ ಮತ್ತಷ್ಟು ಬದಲಾಗಿದೆ. ವಯಸ್ಸಿನ ಪರಿಣಾಮವೋ ಏನೋ ಪಕ್ವತೆ, ಪ್ರಬುದ್ಧತೆ ಕಾಣಿಸಿಕೊಂಡಿದೆ. ಬಹಿರಂಗವಾಗಿ ತಮ್ಮ ಕಾಲಿಗೆ ಬೀಳದಂತೆ ಸಂಪುಟ ಸಹೋದ್ಯೋಗಿಗಳು, ಬೆಂಬಲಿಗರು, ಕಾರ್ಯಕರ್ತರಿಗೆ ತಾಕೀತು ಮಾಡಿದ್ದಾರೆ.

ಕರುಣಾನಿಧಿ ಮೇಲೆ ಪರೋಕ್ಷವಾಗಿ ಸೇಡು ತಿರಿಸಿಕೊಳ್ಳುತ್ತಿದ್ದಾರೆ. ಚೆನ್ನೈ ವಿಧಾನಮಂಡಲ, ಸಚಿವಾಲಯಕ್ಕಾಗಿ ಕರುಣಾನಿಧಿ ಕಟ್ಟಿಸಿದ್ದ ಹೊಸ ಕಟ್ಟಡ, ಅಣ್ಣಾದೊರೈ ಶತಮಾನೋತ್ಸವ ಸಂದರ್ಭದಲ್ಲಿ ಕಟ್ಟಿಸಿದ್ದ ಗ್ರಂಥಾಲಯ ಕಟ್ಟಡಗಳಲ್ಲಿ ಬಡವರಿಗೆ, ಮಕ್ಕಳಿಗೆ ಹೈಟೆಕ್ ಆಸ್ಪತ್ರೆ ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ಗ್ರಂಥಾಲಯ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸುವ ಅವರ ನಿರ್ಧಾರಕ್ಕೆ ಶುಕ್ರವಾರ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ.

ಹಸುಳೆಯಾಗಿದ್ದಾಗ ಮೈಸೂರಿನ ಲಕ್ಷ್ಮಿಪುರದ ಮನೆಯಲ್ಲಿ ಆಟವಾಡಿಕೊಂಡಿದ್ದ ಜಯಾರನ್ನು ನೋಡಿದ್ದ ಹಿರಿಯರು ಅವರನ್ನು `ಅತಿ ಮುದ್ದಾಗಿದ್ದ ಮಗು~ ಎಂದೇ ನೆನಪಿಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಮೈಸೂರಿನ ಚಾಮುಂಡಿಗೆ ಪೂಜೆ ಸಲ್ಲಿಸಲು ಬರುವ ಹೊರತಾಗಿ ಜಯಾ ತಮ್ಮ ಕನ್ನಡ ಮೂಲವನ್ನು ಸಂಪೂರ್ಣ ಮರೆತಿದ್ದಾರೆ. ಅಥವಾ ಮರೆತಂತೆ ನಟಿಸುತ್ತಾರೆ.

ಕಾವೇರಿ ಅಥವಾ ಮತ್ಯಾವುದೇ ವಿಚಾರ ಬಂದಾಗಲೆಲ್ಲ ತಮಿಳುನಾಡಿನ ಹಿತಾಸಕ್ತಿ ಕಾಯುವಂತೆ ಪ್ರಧಾನಿಗೆ ಬಹಿರಂಗ ಪತ್ರ ಬರೆಯುತ್ತಾರೆ. ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪಾತ್ರ ಗಟ್ಟಿಯಾಗಿರಲೆಂದೇ ಆಗಾಗ ದೆಹಲಿಗೆ ತೆರಳುತ್ತಾರೆ. ಯುಪಿಎ, ಎನ್‌ಡಿಎ ಮೈತ್ರಿಕೂಟಕ್ಕೆ ಹೊರತಾದ ತೃತೀಯ ರಂಗದ ಮಂತ್ರ ಜಪಿಸುತ್ತಾರೆ. ಈ ಮಧ್ಯೆ ಮಾಯಾವತಿ ಅವರಂತೆಯೇ ಪ್ರಧಾನಿ ಹುದ್ದೆಯ ಕನಸು ಜಯಾಗೆ ಬೀಳತೊಡಗಿದೆ.
ತಮ್ಮ ಜೀವನದ ಪ್ರಥಮಾರ್ಧದಲ್ಲಿ ಸಿನಿಮಾ ನಟಿಯಾಗಿದ್ದ, ದ್ವಿತೀಯಾರ್ಧದಲ್ಲಿ ರಾಜಕಾರಣಿಯಾಗಿರುವ ಜಯಾರನ್ನು ರಾಜಕೀಯ ಹೋರಾಟಕ್ಕಿಂತ, ಕಾನೂನು ಹೋರಾಟ ದಣಿಸುತ್ತಿದೆ. ನ್ಯಾಯಾಲಯ ಏನೇ ತೀರ್ಪು ನೀಡಲಿ ಅಥವಾ ಅವರ ರಾಜಕೀಯ ಜೀವನ ಹೇಗೆಯೇ ಅಂತ್ಯವಾಗಲಿ ಜಯಲಲಿತಾ ಅವರನ್ನು ಈ ದೇಶದ ಇತಿಹಾಸ, ವಿವಾದಾತ್ಮಕ ಹಾಗೂ ಅಷ್ಟೇ ವರ್ಣರಂಜಿತ ವ್ಯಕ್ತಿತ್ವದ ನಾಯಕಿಯೆಂದು ನೆನಪಿಟ್ಟುಕೊಳ್ಳುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT