ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಿತ್ರ ಮಗುವಿನ ಚಿಕಿತ್ಸೆಗೆ ನಿರ್ಲಕ್ಷ್ಯ

Last Updated 28 ಜೂನ್ 2012, 9:25 IST
ಅಕ್ಷರ ಗಾತ್ರ

ಬಳ್ಳಾರಿ: ಕರುಳು ಮತ್ತು ಜನನೇಂದ್ರಿಯದ ಅಸ್ವಾಭಾವಿಕ ರಚನೆಯೊಂದಿಗೆ ಇತ್ತೀಚೆಗಷ್ಟೇ ಜನಿಸಿದ ಗಂಡು ಮಗುವೊಂದಕ್ಕೆ ಸೂಕ್ತ ಚಿಕಿತ್ಸೆ ನೀಡದೆ,  ಹೆರಿಗೆಯಾದ 3ನೇ ದಿನಕ್ಕೇ ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಿರುವ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ) ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮಗು ಸಾವು- ಬದುಕಿನ ಹೋರಾಟ ನಡೆಸುವಂತಾಗಿದೆ.

ಸ್ಥಳೀಯ ಮಾರುತಿನಗರ ನಿವಾಸಿ, ಭಾರತೀಯ ಜೀವವಿಮಾ ಕಚೇರಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಅವರ ಪತ್ನಿ ಪಲ್ಲವಿ ಎಂಬ ಮಹಿಳೆ ಈ ವಿಚಿತ್ರ ಮಗುವಿಗೆ ಜನ್ಮ ನೀಡ್ದ್ದಿದಾರೆ.
ಮಗುವಿಗೆ ಪ್ರಾಣಾಪಾಯ ಇದ್ದು, ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ವಿಶೇಷ ಶಸ್ತ್ರಚಿಕಿತ್ಸೆ ನೀಡಿದರೆ ಉಳಿಯಬಹುದು ಎಂದು ತಿಳಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ವಿಮ್ಸನಲ್ಲಿ ಇದೇ 14ರಂದು ಬೆಳಿಗ್ಗೆ ಪಲ್ಲವಿ ಅವರಿಗೆ ಸಹಜ ಹೆರಿಗೆ ಮೂಲಕ ಅವಳಿ ಗಂಡುಮಕ್ಕಳು ಜನಿಸಿದ್ದು, ಒಂದು ಮಗು ಸಾಮಾನ್ಯವಾಗಿದ್ದು, ಆರೋಗ್ಯವಾಗಿದೆ. ಇನ್ನೊಂದು ಮಗುವಿನ ಕರುಳು ಹೊಟ್ಟೆಯ ಹೊರಭಾಗದಲ್ಲೇ ಇದೆ.

ಅಲ್ಲದೆ, ಜನನೇಂದ್ರಿಯದ ರಚನೆಯೂ ವಿಚಿತ್ರವಾಗಿದ್ದು, ಮಾಂಸದ ಮುದ್ದೆಯಂತೆ ಕಂಡುಬರುತ್ತಿದೆ. ಮಗು ಆಹಾರ ಸ್ವೀಕರಿಸುತ್ತಿದ್ದು, ಮೂತ್ರ ಮತ್ತು ಮಲ ವಿಸರ್ಜನೆಗೆ ಮಾರ್ಗವೇ ಇಲ್ಲ. ಮಗುವಿನ ಎಡಪಾದವೂ ವಕ್ರವಾಗಿದೆ.

ಶಸ್ತ್ರಚಿಕಿತ್ಸೆ ಮಾಡಿಸಿದರೆ ಉಳಿಯುವ ಸಾಧ್ಯೆತಗಳಿವೆ ಎಂದು ವಿಮ್ಸ ಸಿಬ್ಬಂದಿ ತಿಳಿಸಿದ್ದರಿಂದ, ಮಂಜುನಾಥ ಪತ್ನಿ, ಮಕ್ಕಳನ್ನು ಮನೆಗೆ ಕರೆದೊಯ್ದು, ಹಣ ಇಲ್ಲದ್ದರಿಂದ ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿಲ್ಲ ಎಂಬ ಕೊರಗಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

`ಗರ್ಭಿಣಿ ಪತ್ನಿಯನ್ನು ಕಳೆದ ಜನವರಿಯಲ್ಲಿ ವಿಮ್ಸಗೆ ಚಿಕಿತ್ಸೆಗೆ ಕರೆದೊಯ್ದಾಗ ಸ್ಕ್ಯಾನ್ ಮಾಡಿ, ಹೊಟ್ಟೆಯಲ್ಲಿ ಒಂದೇ ಮಗು ಇದೆ ಎಂದು ತಿಳಿಸಲಾಗಿತ್ತು. ಏಪ್ರಿಲ್ ವೇಳೆಗೆ ಖಾಸಗಿಯಾಗಿ ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದ್ದರಿಂದ ಬೇರೆಡೆ ಸ್ಕ್ಯಾನ್ ಮಾಡಿಸಲಾಯಿತು. ಆಗ, ಅವಳಿ ಮಕ್ಕಳಿರುವುದು ಗೊತ್ತಾಯಿತು. ಅಲ್ಲದೆ, ಸ್ಕ್ಯಾನಿಂಗ್ ವರದಿಯಲ್ಲಿ ಎರಡೂ ಮಕ್ಕಳು ಆರೋಗ್ಯವಾಗಿವೆ ಎಂದು ತಿಳಿದುಬಂದಿತ್ತು ಎಂದು ಮಂಜುನಾಥ `ಪ್ರಜಾವಾಣಿ~ ಎದುರು ಕಣ್ಣೀರು ಸುರಿಸಿದರು.

`ಹೆರಿಗೆಯ ನಂತರ ಒಂದು ಮಗು ಅಸಹಜವಾಗಿದೆ ಎಂಬುದು ತಿಳಿಯಿತು. ಇದೀಗ ಮಗು ಉಳಿಯುವ ಬಗ್ಗೆಯೇ ಶಂಕೆ ಮೂಡಿದೆ. ಬಡವರಾಗಿರುವ ನಮಗೆ ಲಕ್ಷಾಂತರ ಖರ್ಚು ಮಾಡುವುದಕ್ಕೆ ಹಣವಿಲ್ಲ~ ಎಂದೂ ಅವರು ದುಃಖ ತೋಡಿಕೊಂಡರು.

ನಮಗೆ ಮಾಹಿತಿ ಇಲ್ಲ: `ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಇಂತಹದೊಂದು ವಿಚಿತ್ರ ಅಂಗರಚನೆಯ ಮಗು ಜನಿಸಿರುವ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದು ಅಧೀಕ್ಷಕ ಲಕ್ಷ್ಮಿನಾರಾಯಣ ಹಾಗೂ ನಿರ್ದೇಶಕ ಡಾ.ಬಿ.ದೇವಾನಂದ್ ತಿಳಿಸಿ ಅಚ್ಚರಿ ಮೂಡಿಸಿದ್ದು, ಯಾವುದೇ ಸಿಬ್ಬಂದಿ ಈ ಕುರಿತು ನಮ್ಮ ಗಮನಕ್ಕೆ ತಂದಿಲ್ಲ ಎಂದು ಹೇಳಿದ್ದಾರೆ.

`ಹೆರಿಗೆ ವಿಭಾಗದಲ್ಲಿನ ದಾಖಲೆಗಳ ಪರಿಶೀಲನೆಯ ನಂತರ ಇಂತಹದೊಂದು  ಕರುಳು ಹೊಟ್ಟೆಯ ಹೊರಭಾಗದಲ್ಲೇ ಇರುವ ಮಗು ಜನಿಸಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಟಞಛ್ಝಿಟ್ಚಟಛ್ಝಿಛಿ ಎಂದು ಕರೆಯಲಾಗುತ್ತದೆ. ಇಂತಹ ಮಗುವಿಗೆ ಯಶಸ್ವೀ ಶಸ್ತ್ರಚಿಕಿತ್ಸೆ ಸೌಲಭ್ಯ ವಿಮ್ಸನಲ್ಲೇ ಲಭ್ಯವಿದೆ. ಮಗುವನ್ನು ಕರೆತಂದರೆ ಚಿಕಿತ್ಸೆ ನೀಡಿ, ಸಾಮಾನ್ಯ ಸ್ಥಿತಿಗೆ ತರಬಹುದಾಗಿದೆ ಎಂದು ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.
ಸಾರ್ವಜನಿಕರು ಇಂತಹ ವಿಷಯಗಳನ್ನು ಮುಖ್ಯಸ್ಥರ ಗಮನಕ್ಕೇ ತರುವುದಿಲ್ಲ. ಅಲ್ಲದೆ, ಇಂತಹ ವಿಷಯಗಳನ್ನು ಸಿಬ್ಬಂದಿ ಸಂಬಂಧಿಸಿದವರ ಗಮನಕ್ಕೆ ತರುವುದು ಮುಖ್ಯ ಎಂದು ಅವರು ತಿಳಿಸಿದರು.

`ಆ ಮಗುವನ್ನು ಖಾಸಗಿಯಾಗಿ ಸೇವೆ ಸಲ್ಲಿಸುವ ಚಿಕ್ಕಮಕ್ಕಳ ತಜ್ಞರ ಬಳಿ ಕರೆದೊಯ್ಯುವಂತೆ ಪಾಲಕರಿಗೆ ಸೂಚಿಸಲಾಗಿತ್ತು. ಆದರೆ, ಅದನ್ನು ನಿರಾಕರಿಸಿ ಮಗುವನ್ನು ಮನೆಗೆ ಕರೆದೊಯ್ಯಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದು ಅವರ ನಿರ್ಲಕ್ಷ್ಯ ಕಂಡುಬಂದಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮಗುವನ್ನು ಈಗ ವಿಮ್ಸಗೆ ಕರೆತಂದಲ್ಲಿ ಶಸ್ತ್ರಚಿಕಿತ್ಸೆ ನೀಡಲಾಗುವುದು ಎಂದು ಅವರು ತಿಳಿಸಿದರು.

ವಿಮ್ಸನಲ್ಲಿ ಚಿಕಿತ್ಸೆ ಸೌಲಭ್ಯವಿಲ್ಲ. ಬೆಂಗಳೂರಿಗೆ ಕರೆದೊಯ್ಯುವುದೇ ಲೇಸು ಎಂದು ತಿಳಿಸಿ, ಡಿಸ್‌ಚಾರ್ಜ್ ಮಾಡಿದ್ದರಿಂದಲೇ ಅನಿವಾರ್ಯವಾಗಿ ಮಗುವನ್ನು ಮನೆಗೆ ಕರೆತರಲಾಗಿದೆ ಎಂದು ಮಂಜುನಾಥ ಹಾಗೂ ಪಲ್ಲವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT