ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ ಕ್ರೀಡಾಂಗಣದಲ್ಲಿ ಯಾವುದೂ ಸರಿ ಇಲ್ಲ

Last Updated 24 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ತುಕ್ಕುಹಿಡಿದು ಹಾಳಾಗಿರುವ ಜಿಮ್ನಾಷಿಯಂ ಸಲಕರಣೆಗಳು. ನೀರು ಕಾಣದ ಸಿಂಡರ್ ಟ್ರ್ಯಾಕ್. ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ಶೌಚಾಲಯವಂತೂ ಇಲ್ಲವೇ ಇಲ್ಲ.

ಇದು ವಿಜಾಪುರದ ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ವ್ಯಥೆಯ ಕಥೆ. ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ; ಮಿಂಚುತ್ತಿದ್ದಾರೆ. ಸೈಕ್ಲಿಂಗ್‌ನಲ್ಲಂತೂ ಅಂತರರಾಷ್ಟ್ರೀಯ ಖ್ಯಾತಿ ತಂದು ಕೊಟ್ಟಿದ್ದಾರೆ. ಅವರೆಲ್ಲರಿಗೂ ಈ ಕ್ರೀಡಾಂಗಣವೇ ಆಸರೆ.

`ಜಿಮ್‌ನಲ್ಲಿರುವ ಬಹುತೇಕ ಉಪಕರಣಗಳೂ ತುಕ್ಕು ಹಿಡಿದು ಮುರಿದು ಬಿದ್ದವೆ. ಇತ್ತೀಚಿನ ವರ್ಷಗಳಲ್ಲಿ  ಜಿಮ್ ಬಾಗಿಲು ತೆರೆದಿದ್ದನ್ನು ನಾವು ಕಂಡೇ ಇಲ್ಲ. ಅಥ್ಲೆಟಿಕ್ಸ್ ತರಬೇತಿಯ ಸಿಂಡರ್ ಟ್ರ್ಯಾಕ್‌ಗೆ ನೀರು ಹಾಕುವುದೇ ಇಲ್ಲ. ಹೀಗಾಗಿ ಧೂಳಿನ ಹಾವಳಿ ತಪ್ಪುತ್ತಿಲ್ಲ' ಎಂಬುದು ಕ್ರೀಡಾಪಟುಗಳ ದೂರು.

`ಕ್ರೀಡಾಂಗಣದಲ್ಲಿ ಸೈಕ್ಲಿಂಗ್ ಟ್ರ್ಯಾಕ್ ಇದೆ. ಅದು ಅಲ್ಲಲ್ಲಿ ಕಿತ್ತುಹೋಗಿದೆ. ನಮ್ಮ ತರಬೇತಿಯ ಅವಧಿಯಲ್ಲಿಯೇ ಕ್ರಿಕೆಟ್ ಮತ್ತಿತರ ಆಟಗಳು ಅಲ್ಲಿ ನಡೆಯುವುದರಿಂದ ನಾವು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಹೀಗಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಅಪಾಯಕಾರಿಯಾದ ಹೆದ್ದಾರಿಗಳಲ್ಲಿಯೇ ತರಬೇತಿ ನಡೆಸುತ್ತಿದ್ದೇವೆ' ಎಂದು ಒಬ್ಬ ಸೈಕ್ಲಿಸ್ಟ್ ಹೇಳಿದರು.

`ಕ್ರೀಡಾಂಗಣದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ. ಕಚೇರಿಗೆ ಹೊಂದಿಕೊಂಡಿರುವ ಶೌಚಾಲಯ ಸದಾ ಬಾಗಿಲು ಮುಚ್ಚಿರುತ್ತದೆ. ಯುವಕರು ಕಟ್ಟಡಗಳ ಮೂಲೆಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ನಮ್ಮ ಪಾಡಂತೂ ಹೇಳತೀರದಾಗಿದೆ.

ಕೆಲವೊಮ್ಮೆ ತರಬೇತಿ ಮೊಟಕುಗೊಳಿಸಿ ಮನೆಗೆ ಹೋಗಬೇಕಾಗುತ್ತದೆ' ಎಂದು ಕ್ರೀಡಾಂಗಣದ ಬಳಿ ಮಾತಿಗೆ ಸಿಕ್ಕಿದ ಕೆಲವು ಓಟಗಾರ್ತಿಯರು ಅಳಲು ತೋಡಿಕೊಂಡರು.

ಕ್ರೀಡಾಂಗಣದ ಆವರಣದಲ್ಲಿ `ಸ್ವರ್ಣ ಜಯಂತಿ ಸ್ಕೇಟಿಂಗ್ ರಿಂಕ್' ಇದೆ. ನಿರ್ಮಿಸಿದಾಗಿನಿಂದ ಅದನ್ನು ಬಳಸಿಯೇ ಇಲ್ಲ! ಅಲ್ಲಿ ಒಮ್ಮೆಯೂ ಸ್ಕೇಟಿಂಗ್ ತರಬೇತಿ ನಡೆದಿಲ್ಲ. ಅದು ಶೌಚಾಲಯವಾಗಿ ಮಾರ್ಪಟ್ಟಿದೆ ಎಂದು ಹಿರಿಯ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸುಮಾರು 10 ಎಕರೆ ವಿಸ್ತಾರದ ಕ್ರೀಡಾಂಗಣದಲ್ಲಿ ನಿತ್ಯ 500ಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ನಡೆಸುತ್ತಾರೆ. ಸಹಾಯಕ ನಿರ್ದೇಶಕರು ಸೇರಿ ಐವರು ಸಿಬ್ಬಂದಿ, ಎಂಟು ಜನ ಮಾರ್ಕರ್, ಆರು ಜನ ತರಬೇತುದಾರರು ಕಾರ್ಯನಿರ್ವಹಿಸುತ್ತಿದ್ದಾರೆ.

ವಾಲಿಬಾಲ್‌ಗೆ ತರಬೇತುದಾರರು ಇಲ್ಲ. ಕ್ರೀಡಾಂಗಣಕ್ಕೆ ಹೊಂದಿಕೊಂಡು 43 ವಾಣಿಜ್ಯ ಮಳಿಗೆಗಳಿದ್ದು, ವರ್ಷಕ್ಕೆ ರೂ.13ಲಕ್ಷಕ್ಕೂ ಅಧಿಕ ಬಾಡಿಗೆ ಬರುತ್ತದೆ.

`ಮೂಲ ಸೌಲಭ್ಯಗಳ ಕೊರತೆ ಒಂದೆಡೆಯಾದರೆ, ಸಮರ್ಪಕ ನಿರ್ವಹಣೆ ಮತ್ತು ಶಿಸ್ತು ಪಾಲನೆ ಇಲ್ಲದಿರುವುದು ಬಹುತೇಕ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಭದ್ರತೆ ವ್ಯವಸ್ಥೆ ಸರಿಯಾಗಿಲ್ಲ.

ಮುಖ್ಯದ್ವಾರದಿಂದಲೇ ಬೀಡಾಡಿ ದನಗಳು ರಾಜಾರೋಷವಾಗಿ ಒಳನುಗ್ಗುತ್ತವೆ. ಕ್ರೀಡಾಂಗಣದಲ್ಲಿ ರಾತ್ರಿ ಮದ್ಯ ಸೇವಿಸಿ ಶೀಷೆಗಳನ್ನು ಒಡೆದು ಹೋಗುವುದು, ಮತ್ತಿತರ ಹೀನ ಕೃತ್ಯಗಳೂ ಜರುಗುತ್ತಿರುತ್ತವೆ. ಅಧಿಕಾರಿಗಳು ಇದಕ್ಕೆಲ್ಲ ಕಡಿವಾಣ ಹಾಕುತ್ತಿಲ್ಲ' ಎಂಬುದು ಕ್ರೀಡಾಪಟುಗಳ ದೂರು.

ಆದರೆ ಈ ಕ್ರೀಡಾಂಗಣದಲ್ಲಿಯೇ ನಿತ್ಯವೂ ವಾಯುವಿಹಾರ ನಡೆಸುವ ಸ್ಥಳೀಯ ಶಾಸಕರಿಗೆ ಈ ಸಮಸ್ಯೆಗಳಾವುದೂ ಕಣ್ಣಿಗೆ ಬೀಳುತ್ತಿಲ್ಲ !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT