ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ವಿತರಣಾ ಜಾಲದ ಬಿಕ್ಕಟ್ಟು

Last Updated 5 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಜುಲೈ 30 ಮತ್ತು 31ರಂದು ದೇಶದ 60 ಕೋಟಿಗೂ ಹೆಚ್ಚು ಜನರು ವಿದ್ಯುತ್ ಪೂರೈಕೆ ಸ್ಥಗಿತಗೊಂಡು  ಪರಿತಪಿಸಿದರು.  ಉತ್ಪಾದನೆ - ಪೂರೈಕೆ - ಬೇಡಿಕೆ  ಮತ್ತು ಬಳಕೆ ಪ್ರಮಾಣದಲ್ಲಿನ ವ್ಯತ್ಯಾಸದ ಫಲವಾಗಿಯೇ ಈ ಬಿಕ್ಕಟ್ಟು ಉದ್ಭವಿಸಿತ್ತು.

ಬೇಡಿಕೆ ಹೆಚ್ಚಿಗೆ ಇರುವ ಸಮಯದಲ್ಲಿ ವಿದ್ಯುತ್ ಉತ್ಪಾದನಾ ಸ್ಥಾವರಗಳ ಮೇಲೆ ಹೆಚ್ಚಿನ ಹೊರೆ ಬಿದ್ದರೆ, ಬೇಡಿಕೆ ಕಡಿಮೆ ಇರುವಾಗಲೂ ಉತ್ಪಾದನಾ ಘಟಕೆಗಳು  ಸಾಮಾನ್ಯವಾಗಿ ಹೆಚ್ಚುವರಿ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಲೇ ಇರುತ್ತವೆ. ಬಹುತೇಕ ಸ್ಥಾವರಗಳು ರಾತ್ರಿ ಹೊತ್ತು ಸಾಧ್ಯವಿರುವಷ್ಟು ಮಟ್ಟಿಗೆ ಉತ್ಪಾದನಾ ಮಟ್ಟ ಕಡಿಮೆ ಮಾಡಿದರೂ, ಒಂದು ಹಂತದ ಆಚೆ ಉತ್ಪಾದನೆ ತಗ್ಗಿಸಲು ಸಾಧ್ಯವಾಗಲಾರದು.

ಅಣು ವಿದ್ಯುತ್ ಮತ್ತು ಶಾಖೋತ್ಪನ್ನ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ಕನಿಷ್ಠ ಮಟ್ಟಕ್ಕಿಂತ (technical minimum) ಕಡಿಮೆ ಪ್ರಮಾಣಕ್ಕೆ ಉತ್ಪಾದನೆ ತಗ್ಗಿಸುವುದು ಕಾರ್ಯಸಾಧುವಲ್ಲ. ತಾತ್ಕಾಲಿಕವಾಗಿ ಉತ್ಪಾದನೆ ಸ್ಥಗಿತಗೊಳಿಸುವುದು ದುಬಾರಿ ಮತ್ತು ವೇಳೆಯ ಅಪವ್ಯಯಕ್ಕೂ ಕಾರಣವಾಗುತ್ತದೆ.

ಜುಲೈ 30ರ ನಸುಕಿನಲ್ಲಿ ಉತ್ಪಾದನಾ ಘಟಕಗಳ ಮೇಲಿನ ಒತ್ತಡ ಸಾಕಷ್ಟು ಕಡಿಮೆಯಾಗಿತ್ತು. ಪೂರೈಕೆ ಅತ್ಯಧಿಕ ಪ್ರಮಾಣದಲ್ಲಿತ್ತು. ಈ ಹಂತದಲ್ಲಿ ಉತ್ಪಾದನಾ ಘಟಕಗಳು ಉತ್ಪಾದನಾ ಪ್ರಮಾಣ ಇನ್ನಷ್ಟು ತಗ್ಗಿಸಲು ಸಾಧ್ಯವಾಗದೇ ವಿದ್ಯುತ್ ವಿತರಣಾ ಜಾಲವು ಕುಸಿದು ಬಿದ್ದಿತು. ವಿದ್ಯುತ್ ವಿತರಣಾ ಜಾಲದ ಅಶಿಸ್ತಿನ ಫಲವೇ ಈ ವೈಫಲ್ಯಕ್ಕೆ ಕಾರಣವಾಗಿತ್ತು.

ಜುಲೈ 30ರಂದು ಅತ್ಯಧಿಕ ಪೂರೈಕೆಯಿಂದಾಗಿ ಸಮಸ್ಯೆ ಉದ್ಭವಿಸಿದ್ದರೆ, ಜುಲೈ 31ರಂದು  ವಿತರಣಾ ಜಾಲವು ಸೂಕ್ಷ್ಮ ಘಟ್ಟದಲ್ಲಿ ಇರುವಾಗ ಅತಿಯಾದ ಬಳಕೆಯಿಂದ ವಿದ್ಯುತ್ ವಿತರಣಾ ಜಾಲವು ಸ್ಥಗಿತಗೊಂಡಿತ್ತು. ಪೂರೈಕೆ ಮತ್ತು ಬೇಡಿಕೆ ಅಸಮತೋಲನದಿಂದಾಗಿಯೇ ಈ ಪರಿಸ್ಥಿತಿ ಉಲ್ಬಣಗೊಂಡಿತ್ತು.

ಸಮಸ್ಯೆಯ ಮೂಲ
ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಸಾಧಿಸಲು ವಿತರಣಾ ಜಾಲಗಳು ನಿರ್ದಿಷ್ಟ ಮಟ್ಟದ  ವಿದ್ಯುತ್ ರವಾನೆ ಆವರ್ತನ (50hz frequency) ಹೊಂದಿರಬೇಕಾಗಿರುತ್ತದೆ. ವಿದ್ಯುತ್ ಉತ್ಪಾದನಾ ಸ್ಥಾವರದಿಂದ  ಅಂತಿಮ ಬಳಕೆದಾರರಿಗೆ ಪೂರೈಕೆ ಮಾಡಲು ವಿದ್ಯುತ್ ಜಾಲಗಳ ಮಧ್ಯೆ ಈ ನಿರ್ದಿಷ್ಟ ಆವರ್ತನ ವ್ಯವಸ್ಥೆ ಬಳಕೆಯ ಇರುತ್ತದೆ. ಇದೊಂದು ಅಂತರರಾಷ್ಟ್ರೀಯ ಶಿಷ್ಟತೆಯಾಗಿದೆ.

ವಿತರಣಾ ಜಾಲ ವ್ಯಾಪ್ತಿಯ ರಾಜ್ಯಗಳು ತಮ್ಮ ಪಾಲಿನ ವಿದ್ಯುತ್‌ಗಿಂತ ಹೆಚ್ಚಿಗೆ ಇಲ್ಲವೇ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬಳಸಿದರೆ ಈ ಆವರ್ತನ ವ್ಯವಸ್ಥೆ ಕುಸಿದು ಬಿದ್ದು ಪೂರೈಕೆ ಸ್ಥಗಿತಗೊಳ್ಳುತ್ತದೆ. ಕೆಲವೇ ಸೆಕೆಂಡುಗಳಲ್ಲಿ ವಿತರಣಾ ಜಾಲದ ಒಂದು ಭಾಗ ಇಲ್ಲವೇ ಒಟ್ಟಾರೆ ವ್ಯವಸ್ಥೆಯೇ ವಿಫಲಗೊಳ್ಳುತ್ತದೆ.

ರಾಜ್ಯವೊಂದರ ಬೇಡಿಕೆ - ಪೂರೈಕೆ ಅಸಮತೋಲನವನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದರೆ ಅದು          ಒಟ್ಟಾರೆ ಗ್ರಿಡ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪರಸ್ಪರ ತಳಕು ಹಾಕಿಕೊಂಡಿರುವ ಗ್ರಿಡ್‌ಗಳಿಂದಾಗಿ ಹೆಚ್ಚು ಜನರು ಇದರಿಂದ ಬಾಧಿತರಾಗುತ್ತಾರೆ.

 ಬಿಕ್ಕಟ್ಟು
ವಿತರಣಾ ಜಾಲವು ಸ್ಥಗಿತಗೊಳ್ಳುವ ಸಂದರ್ಭ (ಗ್ರಿಡ್ ಟ್ರಿಪ್ಪಿಂಗ್) ಎದುರಾದಾಗ ಉತ್ಪಾದನಾ ಸ್ಥಾವರಗಳು ತಮ್ಮನ್ನು ರಕ್ಷಿಸಿಕೊಳ್ಳಲು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತವೆ.  ಅವುಗಳನ್ನು ಪುರಾರಂಭಿಸಲು ನಾಲ್ಕೈದು ಗಂಟೆಗಳೂ ಬೇಕಾಗುತ್ತವೆ.

ವಿತರಣಾ ಜಾಲಗಳು
ದೇಶದಲ್ಲಿ ಒಟ್ಟು 5 ವಿತರಣಾ ಜಾಲಗಳು ಇವೆ. ದಕ್ಷಿಣ, ಪಶ್ಚಿಮ, ಉತ್ತರ, ಪೂರ್ವ ಮತ್ತು ಈಶಾನ್ಯ. ಉತ್ತರದ ಗ್ರಿಡ್ ಜಾಲದ ವ್ಯಾಪ್ತಿಯಲ್ಲಿ ಪೂರೈಕೆಗಿಂತ ಬೇಡಿಕೆ ಹೆಚ್ಚಿಗೆ ಇದೆ. ಪ್ರತಿಕೂಲ ಹವಾಮಾನವು ವಿತರಣಾ ಜಾಲದ ಕಾರ್ಯಕ್ಕೆ ಮೇಲಿಂದ ಮೇಲೆ ಅಡ್ಡಿಪಡಿಸುತ್ತಲೇ ಇರುತ್ತದೆ.

ದಕ್ಷಿಣದ ಜಾಲ
ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳು ಇದರ ವ್ಯಾಪ್ತಿಗೆ ಬರುತ್ತವೆ. ಇಲ್ಲಿಯೂ ಗರಿಷ್ಠ ಬೇಡಿಕೆ ಇದೆ. ಜಲ ವಿದ್ಯುತ್ ಉತ್ಪಾದನಾ ಘಟಕಗಳು ಹೆಚ್ಚಿಗೆ ಇವೆ. ದೇಶದ ಇತರ ವಿತರಣಾ ಜಾಲಗಳ ಜತೆ ಹೆಚ್ಚು ಸಂಪರ್ಕ ಹೊಂದಿಲ್ಲ. ಹೀಗಾಗಿ ಕಳೆದ ವಾರದ ಬಿಕ್ಕಟ್ಟು ದಕ್ಷಿಣದ ರಾಜ್ಯಗಳಿಗೆ ಬಾಧಿಸಲಿಲ್ಲ.

ಪರಿಹಾರ
ರಾಜ್ಯ ಸರ್ಕಾರಗಳು, ಉತ್ಪಾದನಾ ಸ್ಥಾವರಗಳು ವಿದ್ಯುತ್ ಉತ್ಪಾದನೆ, ಪೂರೈಕೆ ಮತ್ತು ಬೇಡಿಕೆ ಮಧ್ಯೆ ಶಿಸ್ತು ಕಾಯ್ದುಕೊಂಡರೆ ಇಂತಹ ಅವಘಡ ತಪ್ಪಿಸಬಹುದು.

ವ್ಯವಸ್ಥೆಯ ವೈಫಲ್ಯ
ಉತ್ಪಾದನೆಯಾಗುವ ವಿದ್ಯುತ್ ಹಲವಾರು ಉಪ ಕೇಂದ್ರಗಳ ಮೂಲಕ ವಿತರಣೆಯಾಗುತ್ತದೆ. ಪೂರೈಕೆ ನಿಯಂತ್ರಣ ವ್ಯವಸ್ಥೆಯು ವಿಫಲವಾದಾಗ ಇಡೀ ವ್ಯವಸ್ಥೆ  ಕುಸಿಯುತ್ತದೆ.  ಉತ್ಪಾದನಾ ಘಟಕಗಳಿಂದ ಪೂರೈಕೆಯಾಗುವ ವಿದ್ಯುತನ್ನು ವಿತರಣಾ ಜಾಲಗಳಿಗೆ  ಉಪ ಕೇಂದ್ರಗಳು ಸರಬರಾಜು ಮಾಡುತ್ತವೆ.

 ವಿದ್ಯುತ್ ಉಪ ಕೇಂದ್ರಗಳು ಸಣ್ಣ ಸರಬರಾಜು ಕೇಂದ್ರಗಳಾಗಿದ್ದು, ಜಾಲದಲ್ಲಿನ ಹೈವೋಲ್ಟೇಜ್ ತಗ್ಗಿಸಿ ಬಳಕೆಗೆ ಅನುಕೂಲ ಮಾಡಿಕೊಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT