ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧ ಎದುರು 22ರಿಂದ ಧರಣಿ

ಕಬ್ಬು ಬೆಳೆಗಾರರ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಧಾರ
Last Updated 9 ಜನವರಿ 2014, 6:56 IST
ಅಕ್ಷರ ಗಾತ್ರ

ಬಾಗಲಕೋಟೆ: ‘ರಾಜ್ಯ ಸರ್ಕಾರ ನಿಗದಿಪಡಿಸಿರುವ ಕಬ್ಬಿನ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳಿಂದ ಒಂದು ವಾರದೊಳಗೆ ಕೊಡಿಸದೇ ಇದ್ದಲ್ಲಿ ಇದೇ 17ರಂದು ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಇಲ್ಲಿಯ ವಿದ್ಯಾಗಿರಿಯ ಸಾಯಿ­ಮಂದಿರದಲ್ಲಿ ಬುಧವಾರ ನಡೆದ ಕಬ್ಬು ಬೆಳೆಗಾರರ ರಾಜ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ‘17ರ ಧರಣಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಇದೇ 22ರಿಂದ ಬೆಂಗಳೂರಿನ ವಿಧಾನಸೌಧದ ಎದುರು ನಿರಂತರ ಧರಣಿ, ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ರಾಜ್ಯ ಸರ್ಕಾರ ಪ್ರತಿ ಟನ್‌ಗೆ ರೂ 2500 ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿ ಎರಡು ತಿಂಗಳಾದರೂ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹಣ ನೀಡುತ್ತಿಲ್ಲ. ಸಂಪುಟದಲ್ಲಿರುವ ಸಚಿವರೇ ಆದೇಶ ಪಾಲನೆ ಮಾಡದೇ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಅವರು ದೂರಿದರು.

‘ಸರ್ಕಾರ ನಿಗದಿ ಪಡಿಸಿದ ಬೆಲೆಯನ್ನು ಕೊಡಿಸುವಲ್ಲಿ ಜಿಲ್ಲಾಧಿಕಾರಿ­ಗಳು ಮೀನ–ಮೇಷ ಎಣಿಸುತ್ತಿದ್ದು, ಇದು ರೈತರಿಗೆ ನುಂಗಲಾರದ ತುತ್ತಾಗಿದೆ’ ಎಂದರು.

‘ತಮಿಳುನಾಡಿನಲ್ಲಿ ಶೇ 8.5 ಸಕ್ಕರೆ ಇಳುವರಿ ಬರುವ ಕಬ್ಬಿಗೆ ರೂ. 2650, ಉತ್ತರ ಪ್ರದೇಶದಲ್ಲಿ ರೂ. 2800, ಆಂಧ್ರ­ಪ್ರದೇಶದಲ್ಲಿ 2650 ದರ ನಿಗದಿ ಮಾಡ­ಲಾಗಿದೆ. ಅಲ್ಲದೇ ಸಕ್ಕರೆ ಕಾರ್ಖಾನೆ­ಗಳಿಗೆ ಅಲ್ಲಿಯ ಸರ್ಕಾರಗಳು ಯಾವುದೇ ತೆರಿಗೆ ಮನ್ನಾ, ಪ್ರೋತ್ಸಾಹ­ಧನ ನೀಡಿರುವುದಿಲ್ಲ. ಆದರೆ, ರಾಜ್ಯ­ದಲ್ಲಿ ಸರ್ಕಾರ ರೂ. 250 ಪ್ರೋತ್ಸಾಹಧನ ನೀಡಿ, ಕಾರ್ಖಾನೆಗಳು ಟನ್ನಿಗೆ ರೂ. 2400 ಪಾವತಿಸಲು ನಿರ್ಧಾರ ಕೈಗೊಂಡಿದ್ದರೂ ಕಾರ್ಖಾನೆ­ಗಳು ರೈತರಿಗೆ ಹಣ ಪಾವತಿ ಮಾಡದೇ ಇರುವುದು ರಾಜ್ಯ ಸರ್ಕಾರದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ’ ಎಂದು ಅವರು ಟೀಕಿಸಿದರು.

‘ಕೆಲವೊಂದು ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಶೇ 5 ರಿಂದ 10ರಷ್ಟು ಕಡಿತ ಮಾಡುತ್ತಿರುವುದು ನಿಲ್ಲದಿದ್ದರೆ, ರೈತರು ಅಂತಹ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ, ತಕ್ಕ ಪಾಠ ಕಲಿಸುತ್ತಾರೆ’ ಎಂದು ಅವರು ಎಚ್ಚರಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್‌, ಸಂಘದ ಉಪಾಧ್ಯಕ್ಷ ಬೆಳಗಾವಿಯ ಬಾಬು ಉಪಾಸೆ, ರಾಜ್ಯ ಕಾರ್ಯದರ್ಶಿ ದತ್ತಾತ್ರೇಯ ಕುಲ­ಕರ್ಣಿ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಅರಳಿಕಟ್ಟಿ, ಬಾಗಲ­ಕೋಟೆಯ ನಾಗೇಶ ಸೊರಗಾವಿ, ಸುಭಾಷ ಶಿರಬೂರು, ಮುತ್ತಪ್ಪ ಕೋಮಾರ, ಮೈಸೂರಿನ ಅತ್ತಳ್ಳಿ ದೇವ­ರಾಜ, ವಿಠಲ ಗಣಾಚಾರಿ, ಗುಲ್ಬರ್ಗದ ರಮೇಶ, ಬಂಡೂ ಘಾಟಗೆ, ಕಲ್ಮೇಶ ಅರಳಿಕಟ್ಟಿ, ವಿಜಾಪುರದ ಗುರುನಾಥ ಬಗಲಿ, ಸಿದ್ಧಪ್ಪ ಬಳಗಾನೂರು, ಪರಶುರಾಮ ಮಂಟೂರು ಸೇರಿದಂತೆ 15 ಜಿಲ್ಲೆಗಳ ಕಬ್ಬು ಬೆಳೆಗಾರರ ಸಂಘದ ಪ್ರತಿನಿಧಿ­ಗಳು ಸಭೆಯಲ್ಲಿದ್ದರು.

ಯುವಜನ ಮೇಳ 11 ರಂದು
ಜಮಖಂಡಿ:
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ 2013– 14ನೇ ಸಾಲಿನ ತಾಲ್ಲೂಕು ಮಟ್ಟದ ಯುವಜನ ಮೇಳವನ್ನು ಇದೇ 11 ರಂದು ತಾಲ್ಲೂಕಿನ ಹಳಿಂಗಳಿ ಗ್ರಾಮ­ದಲ್ಲಿ ಆಯೋಜಿಸಲಾಗಿದೆ ಎಂದು ಕ್ರೀಡಾ ವ್ಯವಸ್ಥಾಪಕ ಜಿನ್ನಪ್ಪ ಆಲಗೂರ (ಮೊ.9448986462) ತಿಳಿಸಿದ್ದಾರೆ.

ಯುವಜನ ಮೇಳದಲ್ಲಿ ಭಾವಗೀತೆ, ಗೀಗೀಪದ, ಲಾವಣಿ, ಕೋಲಾಟ, ವೀರಗಾಸೆ, ಡೊಳ್ಳು ಕುಣಿತ, ರಂಗಗೀತೆ, ಜಾನಪದ ನೃತ್ಯ, ಜೋಳ ಬೀಸುವ ಪದ, ಸೋಬಾನಪದ, ಭಜನೆ, ಜಾನಪದ ಗೀತೆ, ದೊಡ್ಡಾಟ, ಸಣ್ಣಾಟ, ಯಕ್ಷಗಾಣ, ಚರ್ಮವಾದ್ಯ ಮೇಳ, ಏಕ ಪಾತ್ರಾಭಿನಯ ಹಾಗೂ ಚರ್ಚಾಸ್ಪರ್ಧೆ ಜರುಗಲಿವೆ.


ಯುವಜನ ಮೇಳದಲ್ಲಿ ಯುವಕ ಯುವತಿ­ಯರ ಸಂಘ–ಸಂಸ್ಥೆಗಳ 15 ರಿಂದ 35 ವರ್ಷದೊಳಗಿನ ಯುವಕ ಯುವತಿಯರು ಪಾಲ್ಗೊಳ್ಳಬಹುದು. ಸ್ಪರ್ಧಾಳುಗಳು ಅಂದು ಬೆಳಿಗ್ಗೆ 10 ಗಂಟೆಗೆ ಸ್ಪರ್ಧಾ ಸ್ಥಳದಲ್ಲಿ ಹಾಜರರಿತಕ್ಕದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT