ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಧಾಟಿಯ ಕವಿ ನಾಮದೇವ ಢಸಾಳ

Last Updated 18 ಜನವರಿ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ನಿಧನರಾದ ನಾಮದೇವ ಢಸಾಳ ಮರಾಠಿಯ ವಿಭಿನ್ನ ಧಾಟಿಯ ಕವಿಯಾಗಿದ್ದರು. ಮರಾಠಿ ಕಾವ್ಯವನ್ನು ಖರೆ ಅರ್ಥದಲ್ಲಿ ಜಾಗತಿಕವಾಗಿಸಿದವರು. ಬಹುಪ್ರಾಂತೀಯರು ನೆಲೆಸಿರುವ ಮುಂಬೈನ ರೆಡ್‌ಲೈಟ್ ಪ್ರದೇಶದೊಳಗೆ ಹುಟ್ಟಿದ ವಿಶಿಷ್ಟ ಭಾಷೆಯಲ್ಲಿ ಕಾವ್ಯ ರಚಿಸಿದರು.

ಢಸಾಳರ ಚಿಂತನೆಗಳ ಕೇಂದ್ರ ಸ್ಥಾನದಲ್ಲಿ ಮಾರ್ಕ್‌್ಸ, ಬುದ್ಧ, ಮಾವೋ, ಚೆಗವೇರಾ, ಲೆನಿನ್‌, ಅಂಬೇಡ್ಕರ್‌ ಅವರ ವಿಚಾರಗಳಿದ್ದವು. ಅವರು ಅಧ್ಯಯನಶೀಲ ವ್ಯಕ್ತಿಯಾಗಿದ್ದರು.

ಢಸಾಳರು ಮೆಟ್ರಿಕ್‌ ಶಿಕ್ಷಣವನ್ನು ಕೂಡ ಪೂರ್ಣಗೊಳಿಸಿ­ದವರಲ್ಲ. ಆದರೆ ಅವರ ಅಧ್ಯಯನದ ವ್ಯಾಪ್ತಿ ಬಹು ವಿಸ್ತಾರದ್ದು. ಬದುಕಿನಿಂದ ಅವರು ಕಲಿತದ್ದು ಅಪಾರ.

ಚಿತ್ರಕಲೆ, ಸಿನಿಮಾ, ವೈಚಾರಿಕ ಬರಹ ಮತ್ತು ಕಾವ್ಯದ ಮೂಲಕ ಹೊಸ ಹೊಸ ಆಲೋಚನೆಗಳನ್ನು ಅಭಿವ್ಯಕ್ತಿಸಿದರು. ಬಹುದೊಡ್ಡ ಅಕಾಡೆಮಿಕ್ ಚಿಂತಕನಿಗೂ ನಿಲುಕದ ಒಳನೋಟಗಳು ಅವರಿಗಿದ್ದವು. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಢಸಾಳರು  ರೆಡ್‌ಲೈಟ್‌ ಏರಿಯಾದಲ್ಲಿ ಟ್ಯಾಕ್ಸಿ ಡ್ರೈವರ್‌ ಆಗಿ ಕಾರ್ಯ ನಿರ್ವಹಿಸು­ತ್ತಿದ್ದರು. ವಿರಾಮದ ಸಂದರ್ಭವನ್ನು ಕವನಗಳನ್ನು ಬರೆಯುವುದರಲ್ಲಿ ಕಳೆಯುತ್ತಿದ್ದರು.

ಎಪ್ಪತ್ತರ ಆಸುಪಾಸಿನಲ್ಲಿ ಬಂದ ಅವರ ಬಹು ಚರ್ಚಿತ ‘ಗೋಲಪೀಡಾ’ ಕವನ ಸಂಗ್ರಹದಲ್ಲಿ ಅವರ ಬದುಕಿನ ವಿವರಗಳು ದೊರೆಯುತ್ತವೆ. ಈ ಜೀವನಾನುಭವವು ಮರಾಠಿ ಸಾಹಿತ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತು. ಈ ಜೀವನ ವಿಶಿಷ್ಟವೂ ವಿಭಿನ್ನವೂ ಆಗಿತ್ತು.

ಢಸಾಳರು ದಲಿತ ಪ್ಯಾಂಥರ್‌ನ ಸಂಸ್ಥಾಪಕರು. ಸಂಘಟನೆಯ ಜತೆಗೆ ಅವರ ಒಡನಾಟ ಅದೆಷ್ಟು ಗಾಢವಾಗಿತ್ತೆಂದರೆ ಅವರನ್ನು ದಲಿತ ಪ್ಯಾಂಥರಿನ ಸಂರಕ್ಷಣಾ ಸಚಿವರೆಂದು ಕರೆಯಲಾಗುತ್ತಿತ್ತು.

ಕಾವ್ಯ ರಚನೆ ಮತ್ತು ಚಳವಳಿ ಇವೆರಡರಲ್ಲೂ ಸಮನಾಗಿ ತೊಡಗಿಸಿಕೊಂಡ ಭಾರತೀಯ ಸಾಹಿತ್ಯದೊಳಗಿನ ಒಬ್ಬ ವಿಚಿತ್ರ ಮತ್ತು ಆಧುನಿಕ ವ್ಯಕ್ತಿತ್ವ ಢಸಾಳರದಾಗಿತ್ತು. ದಲಿತ ಪ್ಯಾಂಥರಿನ ಚಳವಳಿಯಲ್ಲಿ ತೊಡಗಿಸಿಕೊಂಡ ಅವರ ಭಾಷಣ ಪ್ಯಾಂಥರಿನ ಆತ್ಮವಾಗಿತ್ತು. ಕಾವ್ಯ ಮತ್ತು ಚಿಂತನೆಯ ಆಕ್ರಮಣಕಾರಿಯಾದ ಅವರ ಶೈಲಿಯ ಬರಹವು ಯುವಕರನ್ನು ಸೆಳೆದಿತ್ತು. ಅವರ ಕಾವ್ಯ ಜಗತ್ತು ಎಂದರೆ ಮುಂಬೈ ಮಹಾನಗರದ ಇತಿಹಾಸ ಮತ್ತು ಭೂಗೋಳವೇ ಸರಿ. ಮುಂಬೈನ ಭೂಗತ ಲೋಕವನ್ನು ಕೂಡ ಮುಚ್ಚುಮರೆಯಿಲ್ಲದೇ ಚಿತ್ರಿಸಿದ ಕವಿ ಅವರು.

‘ಖೇಳ’, ‘ಮೂರ್ಖ ಮ್ಹಾತಾರ್‍ಯಾನೆ ಡೋಂಗರ ಹಲವಲೆ’, ‘ತುಹಿ ಇಯತ್ತಾ ಕಂಚಿ’, ‘ಮೀ ಭಯಂಕರಾಚ್ಯಾ ದಾರಾತ ಉಭಾ ಆಹೆ’, ‘ತುಝೆ ಬೋಟ ಧರುನ ಚಾಲಲೋ ಆಹೆ ಮೀ’– ಇವು ಢಸಾಳರ ಪ್ರಮುಖ ಕವಿತಾ ಸಂಗ್ರಹಗಳು.

  ಏಪ್ರಿಲ್‌ 14 ಹಾಗೂ ಡಿಸೆಂಬರ್‌ 6 ರಂದು ವ್ರತದಂತೆ ಅಂಬೇಡ್ಕರರ ಬಗೆಗೆ ಕವಿತೆ ಬರೆಯುತ್ತಿದ್ದರು. ‘ಆಂಧಳೆ ಶತಕ’, ಸರ್ವಕಾಹೀ ಸಮಷ್ಠಿಸಾಠೀ’–ಇವು ವೈಚಾರಿಕ ಗದ್ಯ ಕೃತಿಗಳು.

‘ನೆಗೆಟಿವ್ಹ್‌ ಸ್ಪೇಸ್‌’, ‘ಹಾಡಕಿ ಹಳವಳಾ’ ಇವೆರಡು ಕಾದಂಬರಿಗಳನ್ನು ಢಸಾಳರು ರಚಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಬಗ್ಗೆ ‘ಪ್ರಿಯದರ್ಶಿನಿ’ ಎಂಬ ದೀರ್ಘ ಕವಿತೆಯನ್ನು ರಚಿಸಿದ ಅವರು ರಾಜಕೀಯ ಸಂದರ್ಭದ ಬಗ್ಗೆ ಅನೇಕ ಕವನಗಳನ್ನು ಬರೆದಿದ್ದಾರೆ. ಅವರ ಹಲವಾರು ಕವಿತೆಗಳು ಭಾರತೀಯ ಭಾಷೆಗಳಲ್ಲದೆ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿವೆ. ಇಂಗ್ಲಿಷ್‌, ಲ್ಯಾಟಿನ್‌, ಸ್ಪಾನಿಷ್ ಹಾಗೂ ಇನ್ನೂ ಹಲವು ಭಾಷೆಗಳಿಗೆ ಅನುವಾದವಾಗಿ ಜನಪ್ರಿಯವಾಗಿವೆ.

ಢಸಾಳರ ರಾಜಕೀಯ ಧೋರಣೆ ಅವರ ವಿಚಿತ್ರ ವ್ಯಕ್ತಿತ್ವದ ಹಾಗೆ ವಿವಾದಾತ್ಮಕವಾಗಿತ್ತು. ಶಿವಸೇನೆ ಒಟ್ಟಿಗೆ ಒಪ್ಪಂದ ಮಾಡಿಕೊಳ್ಳುವುದು, ಆರ್‌.ಎಸ್‌.ಎಸ್‌.ನ ಸಮರಸ ವೇದಿಕೆ ಪ್ರವೇಶಿಸುವುದು –ಹೀಗೆ ರಾಜಕೀಯ ದೊಂಬರಾಟಗಳನ್ನು ನಡೆಸಿ ವಿವಾದ ಸೃಷ್ಟಿಸಿದರು. ಅವರು ರಾಜಕೀಯದಲ್ಲೂ ನೆಮ್ಮದಿ ಕಾಣದಿರುವುದನ್ನು ‘ವಾಲ್ಮೀಕಿ’ ಎಂಬ ಕವಿತೆಯಲ್ಲಿ ಹೇಳಿಕೊಂಡಿದ್ದಾರೆ.

ಅವರಿಗೆ ಪ್ರಿಯದರ್ಶಿನಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಹಾಗೂ ಮಹಾರಾಷ್ಟ್ರ ಸರ್ಕಾರದ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ–ಪುರಸ್ಕಾರಗಳು ಸಂದಿವೆ.

ಮಲ್ಲಿಕಾ ಅಮರಶೇಖ ಅವರನ್ನು ಮದುವೆಯಾಗಿ ನೆಮ್ಮದಿ­ಯಿಂ­ದಿದ್ದ ಢಸಾಳರ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿ­ಕೊಂಡಿತು. ದಂಪತಿ ವಿಚ್ಛೇದನ ಪಡೆದು ದೂರವಾದರು.

ಮಲ್ಲಿಕಾ ತಮ್ಮ ಆತ್ಮಕತೆ ‘ಮಲಾ ಉದ್ವಸ್ಥ ವ್ಹಾಯಚ ಆಹೆ’ ಕೃತಿಯಲ್ಲಿನ ಅನೇಕ ಖಾಸಗಿ ವಿವರಗಳು ಈ ಬಿರುಕಿಗೆ ಕಾರಣವಾಗಿರಬಹುದು. ಸೋಜಿಗವೆಂದರೆ ಮತ್ತೆ ಈ ದಂಪತಿ ಒಂದಾದರು.

ಢಸಾಳರು ಯುವಕರಾಗಿದ್ದಾಗ ಒಮ್ಮೆ ತಾವಿದ್ದ ಮುಂಬೈಯ ಶಿವಾಜಿ ಮಂದಿರಕ್ಕೆ ಮರಾಠಿಯ ಹಿರಿಯ ಕವಿಯೊಬ್ಬರು ಬಂದಿರುವುದನ್ನು ಕೇಳಿ ತಾವು ಕವನಗಳನ್ನು ಬರೆದಿಟ್ಟ  ನೋಟ್‌ಬುಕ್ ಜತೆ ಅಲ್ಲಿಗೆ ಧಾವಿಸಿದರು. ಬಿಡುವು ಇದ್ದಾಗ ಕವನಗಳನ್ನು ಬರೆದಿಡುವುದು ಅವರ ಹವ್ಯಾಸ. ಶಿವಾಜಿ ಮಂದಿರದಲ್ಲಿ ಆ ಕವಿಗೆ ತಮ್ಮ ಕವನಗಳನ್ನು ತೋರಿಸಿ ಮೆಚ್ಚುಗೆ ಪಡೆಯಬೇಕೆಂಬ ಸಹಜವಾದ ಹಂಬಲ ಅವರಲ್ಲಿತ್ತು.

ಆ ಹಿರಿಯ ಕವಿಯ ಕವನಗಳು ಆಗ ಆಕಾಶವಾಣಿಯಲ್ಲಿ ಮೇಲಿಂದ ಮೇಲೆ ಪ್ರಸಾರವಾಗುತ್ತಿದ್ದವು. ಅವರ ಕವನ ಕೇಳಿ ಬೆಳೆದ ಢಸಾಳರು ಅವರಿಗೆ ನೋಟ್‌ಬುಕ್ ನೀಡಿದರೆ ಅದನ್ನು ತೆರೆದು ಕೂಡ ನೋಡದೆ ಟ್ಯಾಕ್ಸಿ ಚಾಲಕನ ಉಡುಪಿನಲ್ಲಿದ್ದ ಢಸಾಳರನ್ನು ಆಪಾದಮಸ್ತಕವಾಗಿ ನೋಡಿ ‘ನಿನ್ನದು ಯಾವ ಜಾತಿ ?’ ಎಂದು ಪ್ರಶ್ನಿಸಿದರು. ಢಸಾಳರು ದಂಗುಬಡಿದು ಹೋದರು.

ಈ ಪ್ರಶ್ನೆಯನ್ನು ಆ ಜನಪ್ರಿಯ ಹಿರಿಯ ಕವಿಯಿಂದ ಖಂಡಿತ ನಿರೀಕ್ಷಿಸಿರಲಿಲ್ಲ. ಅಂದು ಅವರಿಗೆ ಆದ ಅವಮಾನ ತಾವು ದೊಡ್ಡ ಕವಿ ಆಗಬೇಕು ಎನ್ನುವ ಛಲ ಅವರಲ್ಲಿ ಮೂಡಿಸಿರಬೇಕು.

ಮರಾಠಿ ಭಾಷೆ ಮಾತ್ರವಲ್ಲ, ಭಾರತೀಯ ಸಾಹಿತ್ಯದ ಮಾನ, ಅಭಿಮಾನವನ್ನು ಹೆಚ್ಚಿಸಿದವರು ಅವರು. ತಳ ಸಮುದಾಯಗಳಿಗೆ ತಲೆಯೆತ್ತಿ ಬದುಕುವಂತೆ ಮಾಡಿದ ಈ ಕವಿ ಸದಾ ಸ್ಮರಣೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT