ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಯಟ್ನಾಂನಲ್ಲಿ ಕಾಫಿ- ಕಾಳು ಮೆಣಸು ಬೆಳೆವ ವಿಧಾನ

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

 ವಿಯೆಟ್ನಾಂನಲ್ಲಿ ರೊಬಸ್ಟಾ ಕಾಫಿ ಹೆಚ್ಚು ಜನಪ್ರಿಯ. ಎಕರೆಗೆ ಸರಾಸರಿ 1.5ರಿಂದ 3 ಟನ್ ಇಳುವರಿ  ಬರುತ್ತದೆ. ವರ್ಷಕ್ಕೆ ಹತ್ತು ಲಕ್ಷ ಟನ್ ರೊಬಸ್ಟಾ ಕಾಫಿ ಉತ್ಪಾದನೆಯಾಗುತ್ತದೆ. ರೊಬಸ್ಟಾ ಕಾಫಿ ಮತ್ತು ಕಾಳು ಮೆಣಸು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ.

 ಅಲ್ಲಿನ ಕಾಫಿ ಮತ್ತು ಕಾಳು ಮೆಣಸು ಬೆಳೆಗಾರರ ಸಾಧನೆಯನ್ನು ಕಣ್ಣಾರೆ ಕಾಣಲು ಇತ್ತೀಚೆಗೆ ಚಿಕ್ಕಮಗಳೂರಿನ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‌ನ ನಿಯೋಗ ಅಧ್ಯಕ್ಷ ಸಹದೇವ್ ಬಾಲಕೃಷ್ಣ ಅವರ ನೇತೃತ್ವದಲ್ಲಿ ವಿಯೆಟ್ನಾಂಗೆ ಹೋಗಿತ್ತು.ನಿಯೋಗದ ಸದಸ್ಯರು ಅಲ್ಲಿನ ಹಲವು ಕಾಫಿ ತೋಟಗಳಿಗೆ ಭೇಟಿ ನೀಡಿ ಬೆಳೆಗಾರರ ಜತೆಯಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡರು.

ವಿಯೆಟ್ನಾಂನ ರೈತರು ರೊಬಸ್ಟಾ ಕಾಫಿ ಮತ್ತು ಕಾಳು ಮೆಣಸು ಬೆಳೆಯುವ ವಿಧಾನ ಹಾಗೂ ಬೇಸಾಯ ಕ್ರಮಗಳನ್ನು ಕುರಿತಂತೆ ಅನೇಕ ಮಾಹಿತಿಗಳನ್ನು ನಮ್ಮ ಕಾಫಿ, ಮೆಣಸು ಬೆಳೆಗಾರರಿಗಾಗಿ ಇಲ್ಲಿ ಸಂಗ್ರಹಿಸಿಕೊಡಲಾಗಿದೆ.

ವಿಯೆಟ್ನಾಂನಲ್ಲಿ ರೊಬಸ್ಟಾ ಕಾಫಿ ಮತ್ತು ಕಾಳು ಮೆಣಸು ಇಳುವರಿ ಹೆಚ್ಚಾಗಲು ಅಲ್ಲಿನ ಪ್ರಕೃತಿ ನೆರವಾಗಿದೆ. ಜ್ವಾಲಾಮುಖಿಯ ಲಾವಾರಸ ಹರಿದು ರೂಪುಗೊಂಡ ವಿಯೆಟ್ನಾಂನ ಮೇಲ್ಮಣ್ಣು ಅತ್ಯಂತ ಫಲವತ್ತಾದುದು. ಇಳಿಜಾರು ಕಡಿಮೆ. ಮಳೆಗಾಲದ ಅವಧಿ ಕರ್ನಾಟಕದ ಮಲೆನಾಡಿಗಿಂತ ಹೆಚ್ಚು. ಆದರೆ ಅತಿವೃಷ್ಟಿ ಎನ್ನುವಷ್ಟು ಮಳೆ ಇಲ್ಲ. ಮೇಲ್ಮಣ್ಣು ಹೆಚ್ಚು ಸಾಂದ್ರವಾಗಿದೆ. ನೊರಜು ಕಲ್ಲುಗಳಿಲ್ಲ.

ತೆಂಗಿನ ಗಿಡ ನೆಡಲು ಗುಂಡಿ ತೆಗೆಯುವಂತೆ 3x3 ಅಳತೆಯ ಗುಂಡಿ ತೆಗೆದು ಅದರಲ್ಲಿ ಕಾಫಿ ಗಿಡ ನೆಡುತ್ತಾರೆ. ಈ ಗುಂಡಿಗೆ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರಗಳನ್ನು ಹಾಕಿ ನೀರುಣಿಸುತ್ತಾರೆ. ಬೇರಿನ ಸುತ್ತ ವೃತ್ತಾಕಾರದಲ್ಲಿ ಪಾತಿ ಮಾಡುತ್ತಾರೆ. ಬೇಸಿಗೆಯಲ್ಲಿಯೂ ಈ ಪಾತಿಗೆ ಪೈಪ್ ಮೂಲಕ ನೀರು ಕೊಡುತ್ತಾರೆ. ಗಿಡದಿಂದ ಗಿಡಕ್ಕೆ 10 ಅಡಿ ಅಂತರ ಕಾಯ್ದುಕೊಳ್ಳುತ್ತಾರೆ. ಬಹುಕಾಂಡ ಪದ್ಧತಿಯ ಬೇಸಾಯ ಅಳವಡಿಸಿಕೊಂಡಿದ್ದಾರೆ. ಪ್ರತಿ 30 ವರ್ಷಕ್ಕೊಮ್ಮೆ ಗಿಡಗಳನ್ನು ಬದಲಿಸುತ್ತಾರೆ.

ವಿಯೆಟ್ನಾಂನ ಕಾಫಿ ಬೆಳೆಗಾರರು ತಮ್ಮ ತೋಟಗಳಿಗೆ ಒಂದು ವರ್ಷಕ್ಕೆ ಸರಾಸರಿ 1.2 ಟನ್ ರಸಗೊಬ್ಬರ ಕೊಡುತ್ತಾರೆ. ಅಲ್ಲಿನ ರಸಗೊಬ್ಬರ ಕಂಪೆನಿಗಳು ಗೊಬ್ಬರ ಚೀಲದ ಮೇಲೆಯೇ ಯಾವ ಕಾಲಕ್ಕೆ ಈ ಗೊಬ್ಬರ ಸೂಕ್ತವಾದುದು ಎಂಬ ಮಾಹಿತಿಯನ್ನೂ ಮುದ್ರಿಸಿರುತ್ತವೆ. ಗೊಬ್ಬರದ ಜತೆಗೆ ಸೂಕ್ಷ್ಮ ಪೋಷಕಾಂಶಗಳನ್ನು (ಮೈಕ್ರೋ ನ್ಯೂಟ್ರಿಯೆಂಟ್ಸ್)  ನೀಡುತ್ತಾರೆ. ಕಾಫಿ ತೋಟದಲ್ಲಿ ನೆರಳಿನ ಮರಗಳೂ ಇರುವುದಿಲ್ಲ. ಸರ್ಕಾರ ರಿಸೋರ್ಸ್ ಡಿಪಾರ್ಟ್‌ಮೆಂಟ್ ಎಂಬ ಇಲಾಖೆ ಬೆಳೆಗಾರರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತದೆ.

ಕರಿಮೆಣಸು: ಇಡೀ ವಿಯೆಟ್ನಾಂನಲ್ಲಿ ವರ್ಷಕ್ಕೆ 1.2 ಲಕ್ಷ ಟನ್ ಮೆಣಸು ಬೆಳೆಯುತ್ತಾರೆ. ಅಲ್ಲಿನ ಚಯೂಸೆ ಪ್ರಾಂತ್ಯ ವಿಶ್ವದಲ್ಲಿಯೇ ಅತಿಹೆಚ್ಚು ಮೆಣಸು ಬೆಳೆಯುವ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪ್ರಾಂತ್ಯದಲ್ಲಿ ವರ್ಷಕ್ಕೆ 1 ಲಕ್ಷ ಟನ್ ಮೆಣಸು ಉತ್ಪಾದನೆಯಾಗುತ್ತದೆ. ನಮ್ಮಲ್ಲಿ ಕಾಫಿ ಅಥವಾ ಅಡಿಕೆ ತೋಟದಲ್ಲಿ ಮೆಣಸು ಬೆಳೆದರೆ, ಅಲ್ಲಿ ಮೆಣಸು ಬೆಳೆಯುವ ತೋಟಗಳೇ ಪ್ರತ್ಯೇಕವಾಗಿದೆ.

ಮರದ ಬೊಂಬು, ಕಾಂಕ್ರಿಟ್ ಅಥವಾ ಇಟ್ಟಿಗೆ ಕಂಬಗಳಿಗೆ ಅವರು ಮೆಣಸು ಬಳ್ಳಿ ಹಬ್ಬಿಸುತ್ತಾರೆ. 6.5 ಅಡಿ ಅಂತರದಲ್ಲಿ ಪಾತಿಗಳನ್ನು ಮಾಡಿ ಬಳ್ಳಿಗಳನ್ನು ನೆಡುತ್ತಾರೆ. ಒಂದು ಎಕರೆಯಲ್ಲಿ ಸರಾಸರಿ 1000 ಬಳ್ಳಿಗಳನ್ನು ನೆಡುತ್ತಾರೆ. ಪಾತಿಗಳಿಗೆ ವರ್ಷವಿಡೀ ನೀರು ಮತ್ತು ಗೊಬ್ಬರ ಕೊಡುತ್ತಾರೆ. ಕಾಫಿಗಿಂತ ಮೆಣಸು ಅಲ್ಲಿ ಹೆಚ್ಚು ಇಳುವರಿ ಕೊಡುತ್ತಿದೆ. ಎಕರೆಗೆ ಸರಾಸರಿ 2 ಟನ್ ಇಳುವರಿ ಇದೆ.

ಇತ್ತೀಚೆಗೆ ಅಲ್ಲಿಯೂ ಮೆಣಸಿಗೆ ವಿಲ್ಟ್ ಡಿಸೀಸ್ (ಸೊರಗು ರೋಗ) ಕಾಣಿಸಿಕೊಳ್ಳುತ್ತಿದೆ. ಬಹುಶಃ ಮೋನೋಕಲ್ಚರ್‌ನ ಪರಿಣಾಮ ಇರಬಹುದು. ಮುಂದಿನ ದಿನಗಳಲ್ಲಿ ಅದು ದೊಡ್ಡ ಸಮಸ್ಯೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಭಾರತಕ್ಕೆ ಹೋಲಿಸಿದರೆ ಆಯಾ ದೇಶದ ಭೂಮಿಯ ಧಾರಣ ಶಕ್ತಿಯನ್ನು ಆಲೋಚಿಸಿ ರೈತರು ಬೆಳೆ ಪದ್ಧತಿ ಅಳವಡಿಸಿಕೊಳ್ಳುತ್ತಾರೆ. ವಿಯೆಟ್ನಾಂ ಕೃಷಿ ಪದ್ಧತಿಯನ್ನು ಇಲ್ಲಿ ಯಥಾವತ್ತಾಗಿ ಅಳವಡಿಸಲು ಸಾಧ್ಯವಿಲ್ಲ. ಚಿಕ್ಕಮಗಳೂರಿನ ಬೆಳೆಗಾರರು ತಮ್ಮ ತೋಟಗಳಿಗೆ ನೀಡುವ ಗೊಬ್ಬರದ ಎರಡು ಪಟ್ಟು ಗೊಬ್ಬರ ಮತ್ತು ನೀರನ್ನು ವಿಯೆಟ್ನಾಂನ ಬೆಳೆಗಾರರು ಕೊಡುತ್ತಾರೆ.

ಅವರಿಗೆ ಮಳೆಗಾಲ ಹೆಚ್ಚು. ಹೀಗಾಗಿ ತೇವಾಂಶ ಕಾಪಾಡಿಕೊಳ್ಳಲು ಮರಗಳ ಅವಶ್ಯಕತೆ ಇಲ್ಲ. ಇಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದರೂ ಮಳೆಗಾಲದ ಅವಧಿ ಕಡಿಮೆ ಹೀಗಾಗಿ ತೇವಾಂಶ ಕಾಪಾಡಿಕೊಳ್ಳಲು ಮರಗಳ ಅವಶ್ಯಕತೆ ಇದೆ. ಸದ್ಯದ ಸ್ಥಿತಿಯಲ್ಲಿ ವಿಯೆಟ್ನಾಂ ರೈತರು ನಮಗಿಂತ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅವರ ಭೂಮಿ ಹೇಗೆ ವರ್ತಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುವುದು ನಿಯೋಗದ ಸದಸ್ಯರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT