ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಕೃತಿ ಓದಿ, ಆತ್ಮವಿಶ್ವಾಸ ಬೆಳೆಸಿ

Last Updated 7 ಅಕ್ಟೋಬರ್ 2012, 8:55 IST
ಅಕ್ಷರ ಗಾತ್ರ

ಮಂಗಳೂರು: ವಿವೇಕಾನಂದರ ಸಾಹಿತ್ಯ ಅಧ್ಯಯನ ಮಾಡಿದಲ್ಲಿ, ಆತಂಕ ನಾಶವಾಗಿ, ಧೈರ್ಯ ನೆಲೆಸಲಿದ್ದು, ಅವರ ಕೃತಿಗಳನ್ನು ಓದುವುದು ಅವಶ್ಯ ಎಂದು ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜಿ ಹೇಳಿದರು.

ಚಿರಂತನ ಚಾರಿಟೆಬಲ್ ಟ್ರಸ್ಟ್, ವಿಭಿನ್ನ ಮಂಗಳೂರು, ರಾಮಕೃಷ್ಣ ಮಠ ಶನಿವಾರ ಏರ್ಪಡಿಸಿದ್ದ `ಪಂಚಮದ ಇಂಚರ- ವಿವೇಕ ಸ್ಮೃತಿ~ ಕಲಾಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರು ಬರುವ ಮುನ್ನ ಭಾರತ ಅಂಧಕಾರದಲ್ಲಿ ಮುಳುಗಿತ್ತು. ಎಲ್ಲರಿಗೂ ಶಿಕ್ಷಣ ಸಿಗುತ್ತಿರಲಿಲ್ಲ. ಈ ಕಾರಣದಿಂದಾಗಿ ಭಾರತದ ಅನೇಕ ಮಂದಿಗೆ ಕೀಳರಿಮೆ ಬೆಳೆದಿತ್ತು. ಈ ಪರಿಸ್ಥಿತಿಯನ್ನು ಬದಲಿಸಿ, ಭಾರತೀಯರಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದು ವಿವೇಕಾನಂದರು. ವಿವೇಕಾನಂದರ `ವ್ಯಕ್ತಿತ್ವ ವಿಕಸನ~ ಕೃತಿಯನ್ನು ಓದಿದರೆ, ಮನಸ್ಸಿನಲ್ಲಿರುವ ಎಲ್ಲ ಆತಂಕ ನಾಶವಾಗಿ, ಧೈರ್ಯ ನೆಲೆಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯರಲ್ಲಿ ವಿಶ್ವಾಸ ತುಂಬಿ, ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸಿದ ಆಧ್ಯಾತ್ಮಿಕ ಸಂತ ವಿವೇಕಾನಂದ. ಭಾರತೀಯರ ಬಗ್ಗೆ ಇಡೀ ವಿಶ್ವವೇ ಕೀಳು ಅಭಿಪ್ರಾಯವನ್ನು ಹಿಂದೆ ಹೊಂದಿತ್ತು. ಅಮೆರಿಕ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಭಾರತದ ಬಗ್ಗೆ ವಿದೇಶಿಯರಲ್ಲಿ ಅಭಿಮಾನ ಮೂಡಿಸಿ, ಭಾರತವನ್ನು ಅಚ್ಚರಿಯ ಕಣ್ಣುಗಳಿಂದ ನೋಡುವಂತೆ ಮಾಡಿದರು. ಭಾರತದ ಬಗ್ಗೆ ಎಲ್ಲರಲ್ಲೂ ಗೌರವ ಮೂಡಿಸಲು ವಿವೇಕಾನಂದರು ಶ್ರಮಿಸಿದರು. ಅವರಿಂದಲೇ ಭಾರತೀಯರಿಂದು ಸ್ವಾಭಿಮಾನದ ಬದುಕು ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲೂ ವಿವೇಕಾನಂದರ ಪಾತ್ರ ಹಿರಿದು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ನೇರವಾಗಿ ಭಾಗವಹಿಸದೇ ಇದ್ದರೂ, ಸ್ವಾತಂತ್ರ್ಯದ ಹಕ್ಕನ್ನು ನೇರವಾಗಿ ಪ್ರಶ್ನಿಸಿ ಪಡೆದುಕೊಳ್ಳುವ ಧೈರ್ಯವನ್ನು ತುಂಬಿದ್ದು ವಿವೇಕಾನಂದರೇ. ಹಾಗಾಗಿ ಇವರನ್ನು ಅಪ್ಪಟ ದೇಶಪ್ರೇಮಿ ಎನ್ನಲು ಸಾಧ್ಯವಾಗಿದೆ. ಈಗ ದೇಶಕ್ಕೆ ಬೇಕಿರುವುದು ವಿವೇಕರ ಸಂದೇಶ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಬಳ್ಕೂರು ಕೃಷ್ಣಯಾಜಿ ಹಾಗೂ ಕೊಂಡದಕುಳಿ ರಾಮಕೃಷ್ಣ ಹೆಗಡೆ ಅವರಿಗೆ ಯಕ್ಷಸನ್ಮಾನ ನೀಡಲಾಯಿತು.

ಕಾರ್ಪೊರೇಷನ್ ಬ್ಯಾಂಕ್‌ನ ಉಪ ಮಹಾ ವ್ಯವಸ್ಥಾಪಕ ಕೊರಿಯನ್ ಅಬ್ರಹಾಂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ವ್ಯವಸ್ಥಾಪಕ ಪಿ.ಆರ್. ಆಚಾರ್ಯ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಅನಿಲ್ ಅತಿಥಿಗಳಾಗಿ ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT