ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ಐತಿಹ್ಯದ ಆಗರ ದೇವರನರಸೀಪುರ

Last Updated 22 ಸೆಪ್ಟೆಂಬರ್ 2011, 8:45 IST
ಅಕ್ಷರ ಗಾತ್ರ

ಶತಮಾನಗಳ ಇತಿಹಾಸ ಹೊತ್ತಿರುವ ಗ್ರಾಮ ಮೂರು ಬಾರಿ ಬದಲಾಗಿದ್ದರೂ ತನ್ನ ಹೆಸರಿನ ಮಹಿಮೆ ಮಾತ್ರದಿಂದಲೇ ಬೆಳೆದಿರುವ ಭದ್ರಾವತಿ ತಾಲ್ಲೂಕು `ದೇವ ನರಸೀಪುರ~ ವಿಶಿಷ್ಟ ಐತಿಹ್ಯ ತೆರೆದಿಡುತ್ತದೆ.
ನಗರದಿಂದ ಸುಮಾರು ಐದು ಕಿ.ಮೀ. ತರೀಕೆರೆ ರಸ್ತೆಯಲ್ಲಿನ ಒಳದಾರಿಯಲ್ಲಿ ಹಾದು ಹೋದರೆ ಸಿಗುವ `ದೇವರನರಸೀಪುರ~ ಅಂತರಗಂಗೆ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ.

ಹೆಸರಿನ ಜತೆಗಿನ ಇತಿಹಾಸ
ಭದ್ರಾವತಿ ಹಳೇನಗರ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದ ಜನರು ಈ ಗ್ರಾಮದಲ್ಲಿ ನೆಲೆಸಿ ಕೆರೆ, ಕಟ್ಟೆ, ದೇವಾಲಯವನ್ನು ಇಲ್ಲಿ ನಿರ್ಮಿಸಿಕೊಂಡು ಬದುಕು ನಡೆಸಿದ್ದರು. ಹೀಗಾಗಿ,  ಊರಿಗೆ `ದೇವರು~ ನಿರ್ಮಿಸಿದ ಮಂದಿ ವಾಸವಿದ್ದ ಕಾರಣ ಅದರೊಂದಿಗೆ `ನರಸೀಪುರ~ ಸೇರ್ಪಡೆಯಾಯಿತು ಎನ್ನುತ್ತಾರೆ ಗ್ರಾಮದ ಹಿರಿಯ ಟಿ. ದಾಸಪ್ಪ.

ಮೂರು ಬಾರಿ ಬದಲಾವಣೆ ಕಂಡಿರುವ ಊರು ಈಗಲೂ ಹಲವು ಮಹತ್ವ ವಿಷಯವನ್ನು ತನ್ನ ಒಡಲಲ್ಲಿ ಹೊತ್ತಿದೆ. ಹಿಂದೆ ನಾವು ಚಿಕ್ಕವರಿದ್ದಾಗ ಬಾಳ್ವೆ, ಬದುಕು ನಡೆಸಿದ ಊರು ಈಗ ಸಮೃದ್ಧ ತೋಟ, ಜಮೀನು ಆಗಿದೆ ಎನ್ನುತ್ತಾರೆ ಗುರುಸಿದ್ದಪ್ಪ.

ಊರು ಬೆಳೆದ ಪರಿ
ಒಂದು ಬಾರಿ ರೋಗ-ರುಜಿನಗಳ ಕಾಟ ಹೆಚ್ಚಾದ ಕಾರಣ, ಮತ್ತೊಂದು ಬಾರಿ ಭದ್ರಾ ನಾಲೆ ತಿರುವು ಪಡೆದು ಹಾದು ಹೋದ ಸಂದರ್ಭದಲ್ಲಿ ಗ್ರಾಮದ  ಸ್ಥಳಾಂತರ ನಡೆಯಿತು.

ದೊಡ್ಡಮನೆ ಹನುಮಣ್ಣ, ಪಟೇಲ್ ಚಂದಪ್ಪ, ಚಿಕ್ಕಪ್ಪರ ನಂಜುಂಡಪ್ಪ, ವೀರಭದ್ರಪ್ಪ ಹೀಗೆ ಹತ್ತು ಹಲವು ಮಂದಿಯ ಕುಟುಂಬದಿಂದ ಬೆಳೆದ ಊರಿಗೆ ಮೂಲ ನೆಲೆ ನೀಡಿದವರು ಲಿಂಗಾಯತರು, ಭೋವಿಗಳು ಹಾಗೂ ಇನ್ನಿತರ ಸಣ್ಣ ಪುಟ್ಟ ಸಮುದಾಯ ಜನರು.

ಕಾರ್ಖಾನೆ, ಜಮೀನು ಸಾಗುವಳಿ ಪ್ರಮಾಣ ಹೆಚ್ಚಾದಂತೆ ಒಕ್ಕಲಿಗರು, ಕುರುಬರು, ಲಂಬಾಣಿ... ಹೀಗೆ ಹತ್ತು ಹಲವು ಸಮುದಾಯ ಮಂದಿ ಸೇರಿ ಬೆಳೆಸಿದ ಊರಿನಲ್ಲಿ ಈಗ ಬರೋಬರಿ 1,000 ಮನೆಯಿದ್ದು, ನರಸೀಪುರ ಕ್ಯಾಂಪ್ ಎಂಬ ಸಣ್ಣ ಊರು ಸಹ ನೆಲೆ ನಿಂತಿದೆ.

ಎಡಗೈ ಆಶೀರ್ವಾದದ ರಂಗನಾಥಸ್ವಾಮಿ
ಮುಜರಾಯಿ ಇಲಾಖೆಗೆ ಸೇರಿದ ಪುರಾಣ ಪ್ರಸಿದ್ಧ ರಂಗನಾಥ ಸ್ವಾಮಿ ದೇವಾಲಯ ಗ್ರಾಮದ ಮುಖ್ಯ ದೇವಾಲಯದಲ್ಲಿ ಒಂದಾಗಿದೆ. ಇದು ಸೇರಿದಂತೆ ಈಶ್ವರ ದೇವಾಲಯ, ಅಂತಗಘಟ್ಟಮ್ಮ, ಹುಚ್ಚುರಾಯಸ್ವಾಮಿ, ಕರಿಯಮ್ಮ, ದಾನವಾಸ್ತಮ್ಮ, ಕೃಷ್ಣ, ಎಲ್ಲಮ್ಮ ದೇವಾಲಯಗಳು ಗ್ರಾಮದಲ್ಲಿ ನೆಲೆಯೂರಿವೆ.

ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ನಿರ್ಮಿಸಲು ಬಂದ ಶಿಲ್ಪಿಗಳು ದೇವರ ಪೂಜೆಗಾಗಿ ಪ್ರತಿಷ್ಠಾಪಿಸಿದ್ದ ರಂಗನಾಥಸ್ವಾಮಿ. ಇದು ಮೊದಲು ಊರ ಹೊರಗೆ ನೆಲೆ ನಿಂತಿತ್ತು. ಕಾಲಾನಂತರ ಊರು ಬದಲಾದಂತೆ ಈಗ ಊರಿನ ಮುಖ್ಯಭಾಗದಲ್ಲಿ ಇದನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಲಾಗಿದೆ.

ಈ ದೇವರ ವೈಶಿಷ್ಟ್ಯ ಎಡಗೈಯಲ್ಲಿ ಆಶೀರ್ವಾದ ಮಾಡುತ್ತಿರುವುದು, ಬಲಗೈ ಭೂಮಿ ಕಡೆಗೆ ಇಳೆ ಬಿಟ್ಟಿರುವುದು. ಇದನ್ನು ಅಭಿವೃದ್ಧಿ ಮಾಡುವಲ್ಲಿ ವೀರಭದ್ರಪ್ಪ ಅವರ ಶ್ರಮವಿದೆ ಎಂಬುದು ಜನರ ಅಭಿಪ್ರಾಯ.

ಇಲ್ಲಿ ದಸರಾ ಸಂದರ್ಭದಲ್ಲಿ ಅದ್ದೂರಿ ಜಾತ್ರೆ ನಡೆಯಲಿದೆ. ದೇವಾಲಯ ಮುಂಭಾಗದಲ್ಲಿ `ಅಂಬು~ ಒಡೆಯುವ ಕಾರ್ಯಕ್ರಮ ಸಹ ನಡೆಯಲಿದ್ದು, ಸುತ್ತಲೂರಿನ ಸಹಸ್ರಾರು ಮಂದಿ ಭಾಗವಹಿಸುತ್ತಾರೆ ಎನ್ನುತ್ತಾರೆ ಅಪ್ಪಾಜಿ. 

 ಶಾಲೆಯ ಭಾಗ್ಯ
ಈ ಗ್ರಾಮಕ್ಕೆ 1960ರಲ್ಲಿ ಪ್ರಾಥಮಿಕ ಶಾಲೆ ಭಾಗ್ಯ ದೊರೆಯಿತು. 1962ರಲ್ಲಿ ಕಟ್ಟಡ ನಿರ್ಮಿಸಲಾಯಿತು. ತದನಂತರ ವರ್ಷದಲ್ಲಿ ಮಾಧ್ಯಮಿಕ ಶಾಲೆ ತೀರಾ ಇತ್ತೀಚೆಗೆ ಪ್ರೌಢಶಾಲೆ ಆರಂಭವಾಗಿದೆ.

ಶಾಲಾ ಕಟ್ಟಡ ಹಾಳಾಗಿದ್ದು ಅದಕ್ಕೆ ಹೊಸತನ ತುಂಬುವ ಕೆಲಸ ನಡೆಯಬೇಕಿದೆ ಎನ್ನುತ್ತಾರೆ ಗ್ರಾಮದ ಯುವಕ ಕುಮಾರ್. ಪ್ರೌಢಶಾಲೆ ಕಟ್ಟಡ ನಿರ್ಮಾಣವಾಗಿಲ್ಲ. ಕೂಡಲೇ ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎನ್ನುತ್ತಾರೆ.

ಹಲವು ವೈಶಿಷ್ಟ್ಯಗಳ ಆಗರ
ಗ್ರಾಮದಲ್ಲಿ ವಾಸವಿರುವ 111ವರ್ಷದ ಕಾಳಮ್ಮ ಇಲ್ಲಿನ ಜನರ ಪಾಲಿಗೆ ಕಾಳಜ್ಜಿ. 80ಹರೆಯದ ಮಗನ ಜತೆ ವಾಸವಿರುವ ಈ ಅಜ್ಜಿ ದಿನ ಬೆಳಗಾದರೆ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಗುಡಿಸಲು ಸೇರುತ್ತಾಳೆ. ಈಕೆ ಗ್ರಾಮದ  ಹಿರಿಯ ಜೀವ.

ಯುವಕರಾದ ಕೆ. ರಮೇಶ್, ದೇವರಾಜ್, ಹರೀಶ್, ಪ್ರವೀಣ್‌ಕುಮಾರ್ ಯೋಧರಾಗಿ ದೇಶ ಸೇವೆಯಲ್ಲಿ ತೊಡಗಿದ್ದರೆ, ಯಲ್ಲಮ್ಮ, ಉಲಗಜ್ಜಿ, ಲಕ್ಷ್ಮಮ್ಮ ಸೋಬಾನೆ ಪದಗಳನ್ನು ಹಾಡುವಲ್ಲಿ ಪ್ರಾವೀಣ್ಯ ಪಡೆದಿದ್ದಾರೆ.

ಇಲ್ಲಿ ಗಣಿಗಾರಿಕೆ ಸದ್ದು ಸಹ ನಡೆದಿದೆ. 1975-76ರ ಭಾಗದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಅದಿರುಮಿಶ್ರಿತ ಮಣ್ಣು ಇರುವುದನ್ನು ಪತ್ತೆ ಮಾಡಿದ್ದಾರೆ. ಇತ್ತೀಚಿನ ದಿನದಲ್ಲಿ ನೆಲ ಸಮತಟ್ಟು ಮಾಡುವ ಸಲುವಾಗಿ ಅವುಗಳ ಸಾಗಣೆ ನಡೆದಿದೆ.

ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ರಂಗನಾಥಸ್ವಾಮಿ ದೇವಾಲಯ ಪಕ್ಕದಲ್ಲಿ ನಿಂತಿರುವ ಸಣ್ಣ ಗುಡ್ಡ ಅದಿರು ಅಂಶವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡುವ ಹಾಗೆ ತಲೆ ಎತ್ತಿ ನಿಂತಿದೆ.

ಐತಿಹ್ಯದ ಕುರುಹು
ಇಲ್ಲಿನ ಕೆಲವರ ಜಮೀನು, ತೋಟದಲ್ಲಿ ಇತಿಹಾಸ ಸಾರುವ ಕೆಲವು ಕಲ್ಲುಗಳು ಸಿಕ್ಕಿದ್ದು, ಅದರ ಮೇಲಿರುವ ಗೆರೆ ಗಾತ್ರದ ಚಿತ್ರಗಳು ಶಿವಲಿಂಗ, ಈಶ್ವರ ಆಕೃತಿ ಸೃಷ್ಟಿಸಿಕೊಂಡಿವೆ.

ಈಶ್ವರ ದೇವಾಲಯ ಪಕ್ಕದ ಮರದ ಬುಡದಲ್ಲಿ ಹಿಂದಿನ ಕಾಲದ ಶಿಲೆಗಳು ಇದ್ದು ಅವುಗಳನ್ನು ಸಹ ಇಲ್ಲಿನ ಜನರು ಭಕ್ತಿ ಭಾವದಿಂದ ಪೂಜೆ ಮಾಡುತ್ತಾ ಬಂದಿದ್ದಾರೆ.

ಗ್ರಾಮದಲ್ಲಿ ನೆಲೆಯೂರಿದ್ದ ಶಿಲ್ಪಿಗಳು ನಿರ್ಮಿಸಿದ ಹಿರೇಕೆರೆ, ಗಿರಿಯಣ್ಣನ ಕೆರೆ, ಒಡ್ಡಿನ ಕೆರೆ, ಬಿಳನೀರು ಕಟ್ಟೆ ಕೆರೆಗಳು ಜನ, ಜಾನವಾರುಗಳ ಪಾಲಿಗೆ ನೀರು ಒದಗಿಸುವಲ್ಲಿ ಸಹಕಾರಿಯಾಗಿವೆ.

ಸಾವಯವ ಕೃಷಿ
ಗ್ರಾಮದ ವೇದಮೂರ್ತಿ, ಜಯಣ್ಣ ಎರೇಹುಳು ಗೊಬ್ಬರ ಹಾಗೂ ಜೈವಿಕ ಗೊಬ್ಬರ ತಯಾರಿಸುವಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಸಾವಯವ ಕೃಷಿಗೂ ಸಹ ಒತ್ತು ನೀಡುವ ಯತ್ನ ನಡೆಸಿದ್ದಾರೆ.

ಇವರು ತಯಾರಿಸಿದ ಗೊಬ್ಬರವನ್ನು ಮಾರಾಟ ಮಾಡಿ ಒಂದಿಷ್ಟು ಸಂಪಾದನೆ ಮೂಲವನ್ನು ಕಂಡುಕೊಂಡಿರುವ ಇವರು ಇದರಿಂದ ಒಂದಿಷ್ಟು ಸಾಧನೆ ಮಾಡಿದ್ದೇವೆ ಎಂಬ ಸಂತೃಪ್ತಿ ವ್ಯಕ್ತ ಮಾಡುತ್ತಾರೆ.

ಒಟ್ಟಿನಲ್ಲಿ ಮೂರು ಬಾರಿ ಊರು ಬದಲಾದರೂ ಸಹ ಕೆಚ್ಚದೆಯಿಂದ ತಮ್ಮ ಐತಿಹ್ಯವನ್ನು ಒಡಲಲ್ಲಿ ಇಟ್ಟುಕೊಂಡು ಬದುಕು ನಡೆಸಿರುವ `ದೇವರನರಸೀಪುರ~ ಗ್ರಾಮ ಮಾದರಿ ಗ್ರಾಮಗಳ ಹಾದಿಯಲ್ಲಿ ಬೆಳೆಯುತ್ತಾ ಸಾಗಿದೆ.

ಇದನ್ನು ಮುನ್ನಡೆಸುವ ನಿಟ್ಟಿನಲ್ಲಿ ಸರ್ಕಾರ ಒಂದಿಷ್ಟು ಕಾರ್ಯಯೋಜನೆ ರೂಪಿಸಿದರೆ ಪ್ರೇಕ್ಷಣೀಯ ಸ್ಥಳಗಳ ಸಾಲಿನಲ್ಲಿ ಇದನ್ನು ಬೆಳೆಸಬಹುದು ಎಂಬುದು ಮಾತ್ರ ಸತ್ಯ.                                                                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT