ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ಸೃಜನಶೀಲತೆಯ ಉದಾತ್ತ ನಾಯಕ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಶಿವರುದ್ರಪ್ಪನವರು ಹಲವು ಕಾಲ­ಗಳಿಗೆ ಒಂದು ಕೊಂಡಿಯಂತಿದ್ದರು. ಅವರು ಕುವೆಂಪು ಮತ್ತು ಬೇಂದ್ರೆಯ­ವರಿಗೆ ಶಿಷ್ಯ. ನಮಗೆ ಗುರುಗಳು. ಕುವೆಂಪು ಹಾಗೂ ಬೇಂದ್ರೆಯವರ ಪರಂಪರೆ ನಮಗೆ ಹರಿದುಬಂದದ್ದು ಶಿವರುದ್ರಪ್ಪ­ನವರ ಮೂಲಕ. ಅವರೊಬ್ಬ ಅತ್ಯುತ್ತಮ ನಾಯಕ. ಬೆಂಗಳೂರು ವಿಶ್ವವಿದ್ಯಾಲ­ಯದ ಕನ್ನಡ ಅಧ್ಯಯನ ಕೇಂದ್ರವನ್ನು ಅವರು ಕಟ್ಟಿದ ಬಗೆಯಲ್ಲೇ ಇದು ಕಾಣಿಸುತ್ತದೆ. ಎಲ್ಲಾ ಬಗೆಯ ಭಿನ್ನಮತ­ಗಳಿಗೆ ಅವಕಾಶವಿರುವಂತೆ ಅವರು ಅಧ್ಯಯನ ಕೇಂದ್ರವನ್ನು ಕಟ್ಟಿದರು.

ಈ ಪ್ರಕ್ರಿಯೆಯಲ್ಲಿ ತಮ್ಮನ್ನೂ ವಿಮರ್ಶೆಗೆ ಒಡ್ಡಿಕೊಂಡ ಉದಾತ್ತ ನಾಯಕತ್ವ ಅವರದ್ದು. ತಮ್ಮ ಗುರುಗಳಾದ ಕುವೆಂಪು ಅವರಂತೆಯೇ ಶಿವರುದ್ರಪ್ಪನವರೂ ಕೂಡಾ ಹಳೆಗನ್ನಡದಿಂದ ಪಡೆದಷ್ಟನ್ನೇ ಪಾಶ್ಚಾತ್ಯ ಸಾಹಿತ್ಯದಿಂದಲೂ ಪಡೆದ­ವರು. ಬಹುಶಃ ಈ ಕಾರಣದಿಂದಲೇ ಅವರು ಪರಂಪರೆಯಲ್ಲಿ ಕಾಲೂರಿ ಸಮ­ಕಾಲೀನವಾದುದನ್ನು ಗ್ರಹಿಸಿ ಅಭಿವ್ಯಕ್ತಿ­ಸುವ ಮಾದರಿಯನ್ನು ಉಳಿದೆಲ್ಲರಿಗಿಂತ ಹೆಚ್ಚು ಚೆನ್ನಾಗಿ ಗ್ರಹಿಸಿದರು.

ಮೈಸೂರು ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಳೆಗನ್ನಡಕ್ಕೆ ಸೀಮಿತವಾದಂತೆ ಕಾಣಿಸುತ್ತಿದ್ದಾಗ, ಕರ್ನಾಟಕ ವಿಶ್ವ­ವಿದ್ಯಾಲಯ ವಚನ ಸಾಹಿತ್ಯ ನಿರ್ವಚನ­ದಲ್ಲಿ ಮುಳುಗಿದ್ದಾಗ ಬೆಂಗಳೂರು ವಿಶ್ವ­ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ವರ್ತಮಾನ ಕೇಂದ್ರಿತವಾಗಿ ಆಧು­ನಿಕತೆಯ ಕಿಟಕಿಗಳನ್ನು ತೆರೆಯಿತು. ಈ ಮಟ್ಟದ ವಿದ್ವತ್ ನಾಯಕತ್ವದ ಗುಣ­ವಿರುವ ಮತ್ತೊಬ್ಬರನ್ನು ನಮಗೀಗ ಕಾಣಲು ಸಾಧ್ಯವಿಲ್ಲ. ಶಿವರುದ್ರಪ್ಪನವರು ತಮ್ಮಷ್ಟೇ ದೊಡ್ಡ ಕವಿಗಳನ್ನು ಸಹೋ­ದ್ಯೋಗಿ­ಗಳನ್ನಾಗಿಯೂ ಇಟ್ಟುಕೊಂಡಿ­ದ್ದರು. ಬಹುಶಃ ಇಂಥದ್ದೊಂದು ಗುಣ ಆ ಕಾಲದಲ್ಲಿಯೂ ಈ ಕಾಲದಲ್ಲಿಯೂ ಬಹಳ ಅಪರೂಪ.

ಅವರು ಸ್ವತಃ ಯಾವ ರಾಜಕೀಯವನ್ನೂ ಮಾಡಲಿಲ್ಲ. ಅವರೇ ಇಂಥದ್ದೊಂದು ರಾಜಕಾರಣದ ಬಲಿ­ಪಶು­ವಾಗಿದ್ದರು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಲೇ ಇಲ್ಲ. ಕೊನೆಗೆ ಅವರು ಹೈದರಾಬಾದ್‌ಗೆ ಹೋಗಬೇಕಾಯಿತು. ಇಂಥ ಅನುಭವ­ಗಳು ಮನುಷ್ಯನಲ್ಲಿ ಒಂದು ಬಗೆಯ ಕಹಿಯನ್ನು ಬೆಳೆಸುತ್ತವೆ. ಆದರೆ ಶಿವ­ರುದ್ರಪ್ಪ­ನವರನ್ನು ಇಂಥ ಕಹಿ ಆವರಿಸ­ಲಿಲ್ಲ. ಬಹುಶಃ ಅದರಿಂದಾಗಿಯೇ ಅವರು ಅನುಕರಣೀಯ ನಾಯಕರಾದರು.

ಸಾಹಿತ್ಯವನ್ನು ಎಲ್ಲರೂ 'ಪ್ರತಿಬಿಂಬ' ಎನ್ನುತ್ತಿದ್ದ ಹೊತ್ತಿನಲ್ಲಿ ಅವರದನ್ನು ಅಲ್ಲ­ಗಳೆದು ಸಾಹಿತ್ಯ ಎಂಬುದು 'ಗತಿಬಿಂಬ' ಎಂದರು. ಸಾಹಿತ್ಯದ ಕುರಿತ ನಮ್ಮ ತಿಳಿ­ವಳಿಕೆಯನ್ನು ತಿದ್ದಿದ ಪರಿಕಲ್ಪನೆ ಇದು. ಸಾಹಿತ್ಯ ತನ್ನ ಕಾಲದ ಗತಿಯನ್ನು ಅಥವಾ ಬೆಳವಣಿಗೆಯನ್ನು ಬಿಂಬಿಸುತ್ತದೆ ಎಂಬುದು ಬಹಳ ಮುಖ್ಯವಾದ ವಿಚಾರ.

ಶಿವರುದ್ರಪ್ಪನವರನ್ನು ಸಮನ್ವಯ ಕವಿ ಎಂದು ಕರೆಯುವುದು ಅವರ ಪ್ರತಿಭೆಗೆ ಮಾಡಿದ ಅನ್ಯಾಯ ಅನ್ನಿಸುತ್ತದೆ. ಅವರು ಅವರದ್ದೇ ಮಾದರಿಯ ಕವಿ. ಅವರು ತಮ್ಮ ಪೂರ್ವಸೂರಿಗಳಿಂದಲೂ ತಮ್ಮ ನಂತರದವರಿಂದಲೂ ಏಕಕಾಲದಲ್ಲಿ ಕಲಿತು ತಮ್ಮದೇ ಆದ ಹೊಸ ದಾರಿಯಲ್ಲಿ ಅವರು ನಡೆದವರು.

ಕೃಷ್ಣನ ಅವಸಾನದ ಕುರಿತಂತೆ ಅವರು ಬರೆದ ಪದ್ಯ ಅವರ ವಿಶಿಷ್ಟ ಸೃಜನಶೀಲತೆಯನ್ನು ತೋರಿಸಿ­ಕೊಡು­ತ್ತದೆ. ಕೃಷ್ಣನನ್ನು ಎಲ್ಲರಂತೆ ಸೌಂದರ್ಯದ ಅನುಭೂತಿಯಾಗಿ ಕಾಣುತ್ತಿದ್ದ ಅವರಿಗೆ ಕೃಷ್ಣನ ಅವಸಾನ­ವನ್ನು ದಾಖಲಿಸುವ ಶಕ್ತಿಯೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT