ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ತಹಸೀಲ್ದಾರ್ ಮೇಲೆ ಹಲ್ಲೆ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಯಲಹಂಕ: ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಉತ್ತರ (ಹೆಚ್ಚುವರಿ) ವಿಶೇಷ ತಹಸೀಲ್ದಾರ್ ಅವರು ನೀಡಿದ ಆದೇಶವನ್ನು ಪ್ರಶ್ನಿಸಿದ ದಂಪತಿ, ವಿಶೇಷ ತಹಸೀಲ್ದಾರ್ ಅವರ ಮೇಲೆ ಕಚೇರಿಯಲ್ಲೇ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಘಟನೆ ಹಿನ್ನೆಲೆಯಲ್ಲಿ ಯಲಹಂಕ ಉಪನಗರ ಪೊಲೀಸರು ಹಲ್ಲೆ ನಡೆಸಿದ ವಿಶ್ವನಾಥ್ ಹಾಗೂ ವರಲಕ್ಷ್ಮಿ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅದ್ದೆ ವಿಶ್ವನಾಥಪುರದ ಸರ್ವೆ ನಂ. 206/4ರಲ್ಲಿನ 30 ಗುಂಟೆ ಜಮೀನಿನ ಸ್ವಾಧೀನಕ್ಕೆ ಸಂಬಂಧಿಪಟ್ಟಂತೆ ಅದ್ದೆ ವಿಶ್ವನಾಥಪುರ ಗ್ರಾಮದ ನಿವಾಸಿ ವಿಶ್ವನಾಥ್ ಮತ್ತು ಸೋಮಶೇಖರ್ ಅವರ ನಡುವೆ ಆರು ತಿಂಗಳಿಂದ ವ್ಯಾಜ್ಯ ನಡೆದಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉಪ ವಿಭಾಗಾಧಿಕಾರಿಗಳ ಆದೇಶದನ್ವಯ ತಹಸೀಲ್ದಾರ್ ಅವರು ಮರುಪರಿಶೀಲನೆ ನಡೆಸಿ, ಸೋಮಶೇಖರ್ ಅವರ ಹೆಸರಿಗೆ ಖಾತೆ ಮಾಡಲು ಮೂರು ದಿನಗಳ ಹಿಂದೆ ಆದೇಶ ನೀಡಿದ್ದರು.

ಮಂಗಳವಾರ ಬೆಳಿಗ್ಗೆ 12 ಗಂಟೆ ಸುಮಾರಿಗೆ ತಹಸೀಲ್ದಾರ್ ಕಚೇರಿಗೆ ತಮ್ಮ ಪತ್ನಿ ವರಲಕ್ಮಿ ಅವರೊಂದಿಗೆ ಆಗಮಿಸಿದ ವಿಶ್ವನಾಥ್ ಅವರು, ಆದೇಶದ ಪ್ರತಿ ಕಂಡು ಆಕ್ರೋಶ ವ್ಯಕ್ತಪಡಿಸಿದರು.

`ಉದ್ದೇಶಪೂರ್ವಕವಾಗಿ ಸೋಮಶೇಖರ್ ಪರವಾಗಿ ಆದೇಶ ನೀಡಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ~ ಎಂದು ತಹಸೀಲ್ದಾರ್ ರಂಗನಾಥ್ ವಿರುದ್ಧ ಆರೋಪಿಸಿದರು.

ಈ ಸಂದರ್ಭದಲ್ಲಿ  ದಂಪತಿ ಮತ್ತು ರಂಗನಾಥ್ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ವಿಶ್ವನಾಥ್, ಕಚೇರಿಯಲ್ಲಿದ್ದ ಕುರ್ಚಿಗಳನ್ನು ಬಿಸಾಡಿದರು. ಕೈಯಿಂದ ಬಾಗಿಲಿನ ಎರಡು ಗಾಜುಗಳನ್ನು ಒಡೆದು ಕಡತಗಳನ್ನು ಎಸೆದು ಚೆಲ್ಲಾಪಿಲ್ಲಿ ಮಾಡಿದರು. ಅವರ ಮೇಲೆ ಹಲ್ಲೆ ಕೂಡ ನಡೆಸಿದರು ಎನ್ನಲಾಗಿದೆ.
 ಬಳಿಕ ಸ್ಥಳಕ್ಕೆ ಆಗಮಿಸಿದ ಉಪನಗರ ಪೊಲೀಸರು, ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ವರಲಕ್ಷ್ಮಿ ಮತ್ತು ವಿಶ್ವನಾಥ್ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

`ವಿಶೇಷ ತಹಸೀಲ್ದಾರ್ ನೀಡಿದ ಆದೇಶ ಸರಿಯಿಲ್ಲ ಎಂಬ ಅನುಮಾನವಿದ್ದರೆ ಅದನ್ನು ಪ್ರಶ್ನಿಸಿ ಉಪ ವಿಭಾಗಾಧಿಕಾರಿಗಳಿಗೆ ಅಪೀಲು ಸಲ್ಲಿಸಲು ವಿಶ್ವನಾಥ್ ಅವರಿಗೆ ಅವಕಾಶವಿದೆ. ಆದರೆ ದಂಪತಿ ನಿಯಮ ಪ್ರಕಾರ ಮೇಲ್ಮನವಿ   ಸಲ್ಲಿಸುವ ಬದಲಿಗೆ ಕರ್ತವ್ಯನಿರತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ~ ಎಂದು ಬೆಂಗಳೂರು ಉತ್ತರ (ಹೆಚ್ಚುವರಿ) ತಹಸೀಲ್ದಾರ್ ಬಿ.ವೆಂಕಟೇಶ್ ಅಭಿಪ್ರಾಯಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT